ಅನ್ನದ ಭಾಷೆಯಾಗಿ ಉಳಿದೀತೆ ಕನ್ನಡ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹತ್ತು ಹಲವು ವಿವಾದಗಳ ನಡುವೆಯೇ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರಕಿದೆ. ಕನ್ನಡದ ಹಿರಿಮೆಯನ್ನು ಎತ್ತಿಹಿಡಿದ ಸುದೀರ್ಘ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಸಂಘಟಿಸುತ್ತಿರುವ ಸಾಹಿತ್ಯ ಸಮ್ಮೇಳನ ಇದಾಗಿರುವುದರಿಂದ, ನಾಡಿನ ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಕನ್ನಡ ಜನ ಸಮೂಹ ಸಮ್ಮೇಳನದೊಂದಿಗೆ ಸಂಬಂಧ ಬೆಸೆದುಕೊಂಡಿರುವುದರಿಂದ, ಸರಕಾರದ ದೊಡ್ಡ ಮಟ್ಟದ ಅನುದಾನವನ್ನು ಬಳಸಿಕೊಂಡು ಈ ನುಡಿ ಜಾತ್ರೆ ನಡೆಸುತ್ತಿರುವುದರಿಂದ ಈ ಸಾಹಿತ್ಯ ಸಮ್ಮೇಳನವನ್ನು ವಿವಾದಗಳ ಹೆಸರಿನಿಂದ ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಈ ಸಾಹಿತ್ಯ ಸಮ್ಮೇಳನ ಹಲವು ದಶಕಗಳಿಂದ ಎಲ್ಲ ಜಾತಿ, ಧರ್ಮಗಳ ಜನರನ್ನು ಕನ್ನಡದ ಹೆಸರಲ್ಲಿ ಒಂದೇ ಚಪ್ಪರದಡಿಯಲ್ಲಿ ಸೇರಿಸುತ್ತಾ ಬಂದಿದೆ.
ದುರದೃಷ್ಟವಶಾತ್, ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನಗಳಿಗೂ ಧರ್ಮ, ಜಾತಿಯ ಕಳಂಕ ಅಂಟಿಕೊಳ್ಳುತ್ತಿದೆ. ಕನ್ನಡ ಸಾಹಿತ್ಯ ಪರಿಷತ್‌ನೊಳಗೆ ಒಂದು ನಿರ್ದಿಷ್ಟ ರಾಜಕೀಯ ಅಜೆಂಡಾಗಳುಳ್ಳ ವೈದಿಕ ಶಕ್ತಿಗಳು ಪ್ರಾಬಲ್ಯ ಪಡೆಯುತ್ತಿರುವುದು ಸಮ್ಮೇಳನದ ಉದ್ದೇಶವನ್ನೇ ಕೆಡಿಸಿ ಹಾಕುತ್ತಿದೆ ಎನ್ನುವುದು ಈಗ ಕೇಳಿ ಬರುತ್ತಿರುವ ಆರೋಪ. ಈ ಬಾರಿಯ ಸಮ್ಮೇಳನದಲ್ಲಿ ದಲಿತ ಮತ್ತು ಮುಸ್ಲಿಮ್ ಸಮುದಾಯವನ್ನು ಭಾಗಶಃ ಹೊರಗಿಡಲಾಗಿದೆ ಎಂದೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ವ ಕನ್ನಡಿಗರ ಹಬ್ಬವಾಗಬೇಕಾಗಿದ್ದ ಸಾಹಿತ್ಯ ಸಮ್ಮೇಳನ ವೈದಿಕ ಸಂಸ್ಕೃತಿಯ ತುತ್ತೂರಿಯಾಗುತ್ತಿದೆ ಎನ್ನುವ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ತನ್ನ ಸ್ವಾಯತ್ತೆಯನ್ನು ಸರಕಾರಕ್ಕೆ ಒತ್ತೆಯಿಡುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಕನ್ನಡ ನಾಡು ನುಡಿಗೆ ಧಕ್ಕೆ ಬಂದಾಗ ಸರಕಾರಕ್ಕೆ ಹಿರಿಯಣ್ಣನಂತೆ ಅಧಿಕಾರಯುತವಾಗಿ ಎಚ್ಚರಿಕೆ ನೀಡುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್, ಸರಕಾರದ ಸವಲತ್ತುಗಳಿಗಾಗಿ ತನ್ನನ್ನು ಜೀತಕ್ಕೊಡ್ಡಿಕೊಂಡಿದೆ ಎನ್ನುವುದು ಬರೇ ಆರೋಪವಾಗಿಯಷ್ಟೇ ಉಳಿದಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸವಲತ್ತುಗಳನ್ನು ನೀಡುವ ಮೂಲಕ ಸರಕಾರ ಕಸಾಪವನ್ನು ಬಹುತೇಕ ಕೊಂಡುಕೊಂಡಿದೆ. ಈ ಸವಲತ್ತನ್ನು ನಿರಾಕರಿಸಿ ಕಸಾಪದ ಸ್ವಂತಿಕೆಯನ್ನು ಎತ್ತಿ ಹಿಡಿಯಬೇಕಾಗಿದ್ದ ಅಧ್ಯಕ್ಷರು, ಆ ಸವಲತ್ತನ್ನು ತನ್ನ ಕಿರೀಟದ ಗರಿಯೆಂಬಂತೆ ಪ್ರದರ್ಶಿಸುತ್ತಿರುವುದು ಕನ್ನಡ ಸಾಹಿತ್ಯ ಸಮ್ಮೇಳನದ ವರ್ಚಸ್ಸಿಗೆ ಭಾರೀ ಕುಂದುಂಟು ಮಾಡಿದೆ.
ಈ ಬಾರಿಯ ಸಮ್ಮೇಳನಾಧ್ಯಕ್ಷರ ಬಗ್ಗೆಯೂ ಹಲವರಿಗೆ ಭಿನ್ನಾಭಿಪ್ರಾಯವಿತ್ತು. ದೊಡ್ಡ ರಂಗೇಗೌಡರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ 'ಭೋ ಪರಾಕ್' ಕವಿತೆಯನ್ನು ಬರೆದು ಪ್ರಭುತ್ವಕ್ಕೆ ತನ್ನ ನಿಷ್ಠೆಯನ್ನು ಪ್ರದರ್ಶಿಸಿದವರು. ತಮ್ಮ ಹೇಳಿಕೆಗಳ ಮೂಲಕ ಸರಕಾರದ ಜೊತೆಗೆ ಪದೇ ಪದೇ ಗುರುತಿಸಿಕೊಳ್ಳುತ್ತಾ ಬಂದವರು. ಇವರು ಸಮ್ಮೇಳನಾಧ್ಯಕ್ಷರಾಗಿ ಕನ್ನಡ ನಾಡು ನುಡಿಯ ಹಿತಾಸಕ್ತಿಯ ನ್ನು ಎತ್ತಿ ಹಿಡಿಯುತ್ತಾರೆ ಎನ್ನುವ ಬಗ್ಗೆ ಯಾರಿಗೂ ದೊಡ್ಡ ನಿರೀಕ್ಷೆಯಿರಲಿಲ್ಲ. ಸಾಧಾರಣವಾಗಿ ಇಂತಹ ಸಮ್ಮೇಳನಗಳ ಅಧ್ಯಕ್ಷರ ಮಾತುಗಳು ಪೂರ್ವ ನಿರ್ಧರಿತವಾಗಿರುತ್ತದೆ. ಪಂಪ, ರನ್ನ, ಪೊನ್ನರ ಜೊತೆಗೆ ಕಾಸರಗೋಡು, ಬೆಳಗಾವಿಯನ್ನು ಸೇರಿಸಿ ಕೆಲವು ವಚನಗಳನ್ನು ಉಲ್ಲೇಖಿಸಿದರೆ ಸಮ್ಮೇಳನಾಧ್ಯಕ್ಷರ ಭಾಷಣ ಪೂರ್ತಿಯಾಗಿ ಬಿಡುತ್ತದೆ. ಕೆಲವೇ ಕೆಲವು ಸಮ್ಮೇಳನಾಧ್ಯಕ್ಷರ ಭಾಷಣಗಳಷ್ಟೇ ವರ್ತಮಾನದ ಕನ್ನಡದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಚರ್ಚಿಸಿವೆ. ಹಾಗೆ ನೋಡಿದರೆ ದೊಡ್ಡರಂಗೇಗೌಡರ ರಾಜಕೀಯ ಹಿನ್ನೆಲೆ ಏನೇ ಇದ್ದರೂ, ಅವರ ಸಮ್ಮೇಳನಾಧ್ಯಕ್ಷ ಭಾಷಣ ನಿರ್ಲಕ್ಷಿಸುವಂತಹದ್ದಾಗಿರಲಿಲ್ಲ. ಕನ್ನಡವನ್ನು ವರ್ತಮಾನಕ್ಕೆ ಪೂರಕವಾಗಿ ಉಳಿಸಿ ಬೆಳೆಸುವ ಬಗ್ಗೆ ಹಲವು ಗಂಭೀರ ಸಲಹೆಗಳನ್ನು ಅವರು ನೀಡಿದ್ದಾರೆ. ಸಮ್ಮೇಳನಾಧ್ಯಕ್ಷರು ಮುಖ್ಯವಾಗಿ ಕನ್ನಡವನ್ನು 'ಅನ್ನದ ಭಾಷೆ'ಯಾಗಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಕನ್ನಡ ಮಾಧ್ಯಮವನ್ನು ಉಳಿಸಬೇಕು ನಿಜ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತವರ ಪಾಲಿಗೆ ಅದು ಅನ್ನದ ದಾರಿಯನ್ನು ತೋರಿಸದೇ ಇದ್ದರೆ ಆ ಮಾಧ್ಯಮ ಅಂತಿಮವಾಗಿ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲಾರದು ಎನ್ನುವುದನ್ನು ಅರ್ಥೈಸಿಕೊಂಡು, ಹೊಸ ತಲೆಮಾರಿಗೆ ಕನ್ನಡವನ್ನು ತಲುಪಿಸುವ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
''ಕನ್ನಡವೆಂದಾಕ್ಷಣ ಕೇವಲ ಸಾಹಿತಿಗಳು, ಕವಿಪುಂಗವರನ್ನು ನೆನೆಯುವ ಸೀಮಿತ ಕಲ್ಪನೆಯಿಂದ ನಾವು ಇಂದು ಹೊರಬಂದು ವಿಜ್ಞಾನ, ತಂತ್ರಜ್ಞಾನ, ಜೀವಶಾಸ್ತ್ರ, ವೈದ್ಯಕೀಯ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ಮಾನವಿಕ ಶಾಸ್ತ್ರಗಳಲ್ಲಿರುವ ಕನ್ನಡದ ಮಹಾನ್ ಸಾಧಕರನ್ನು ಮುನ್ನೆಲೆಗೆ ತರಬೇಕು'' ಎಂದಿದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ. ಇಂಗ್ಲಿಷ್ ಮಾಧ್ಯಮದ ಭ್ರಮೆಯನ್ನು ಹರಿಯಬೇಕಾದರೆ, ಮೊತ್ತ ಮೊದಲು ಇಂಗ್ಲಿಷ್ ಮಾಧ್ಯಮದ ಸಾಧ್ಯತೆಗಳನ್ನು ಕನ್ನಡ ಮಾಧ್ಯಮ ಒಳಗೊಳ್ಳುವಂತೆ ಮಾಡಬೇಕು. ಅದಕ್ಕೆ ಬೇಕಾದ ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳದೆ 'ಕನ್ನಡ ಮಾಧ್ಯಮದಲ್ಲಿ ಓದಿಸಿ' ಎಂದು ಕರೆ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಸಮ್ಮೇಳನಾಧ್ಯಕ್ಷರು ಉನ್ನತ ಶಿಕ್ಷಣದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಬರೇ ಕರೆಯನ್ನಷ್ಟೇ ನೀಡದೆ, ಹೇಗೆ ಅನುಷ್ಠಾನಗೊಳಿಸಬಹುದು ಎನ್ನುವ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ಸರಕಾರದ್ದಾಗಿದೆ.
ಇ ತಂತ್ರಜ್ಞಾನವನ್ನು ಕನ್ನಡಕ್ಕೆ ಪೂರಕವಾಗಿ ಬಳಸಿಕೊಳ್ಳುವ ಅಗತ್ಯವನ್ನೂ ಅವರು ಎತ್ತಿ ಹಿಡಿದಿದ್ದಾರೆ. ಕನ್ನಡ ಅನುಷ್ಠಾನದಲ್ಲಿ ಸರಕಾರದ ಇಚ್ಛಾಶಕ್ತಿಯ ಕೊರತೆಯನ್ನೂ ಅವರು ಬೊಟ್ಟು ಮಾಡಿ ತೋರಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆಯಾದರೂ, ಸಿಗಬೇಕಾದ ಅನುದಾನವನ್ನು ಪಡೆದುಕೊಳ್ಳಲು ರಾಜ್ಯ ಸರಕಾರ ವಿಫಲವಾಗಿರುವ ಕುರಿತಂತೆ ಮೆದುವಾಗಿಯಾದರೂ ಮುಖ್ಯಮಂತ್ರಿಯನ್ನು ಅವರು ಎಚ್ಚರಿಸಿದ್ದಾರೆ. ಹಾಗೆಯೇ ಇತರ ರಾಜ್ಯಗಳನ್ನು ಮಾದರಿಯಾಗಿಸಿಕೊಂಡು, ಕನ್ನಡವನ್ನು ಉಳಿಸಿ ಬೆಳೆಸುವ ದಾರಿಯನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬ್ಯಾಂಕ್ ವಿಲೀನದಂತಹ ಆರ್ಥಿಕ ಸುಧಾರಣೆಗಳು ಕನ್ನಡದ ಮೇಲೆ ಬೀರಿದ ದುಷ್ಪರಿಣಾಮವನ್ನು ಪ್ರಸ್ತಾಪ ಮಾಡಲು ಅವರು ಹಿಂದೇಟು ಹಾಕಲಿಲ್ಲ. ಈ ವಿಲೀನಗಳ ದೆಸೆಯಿಂದಾಗಿ ಕನ್ನಡಿಗರು ತಮ್ಮದೇ ಬ್ಯಾಂಕ್‌ಗಳ ಮುಂದೆ ಅನ್ಯರಂತೆ ತಲೆಬಗ್ಗಿಸಿ ನಿಲ್ಲಬೇಕಾದ ಸ್ಥಿತಿಯ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡದ ಸೌಹಾರ್ದ ಪರಂಪರೆಗೆ ಧಕ್ಕೆ ತರುತ್ತಿರುವ ಶಕ್ತಿಗಳ ಕುರಿತಂತೆ ಅವರು ತುಟಿ ಬಿಚ್ಚಿಲ್ಲ. ಶರೀಫ, ಕನಕರ ಸಾಲುಗಳನ್ನು ಭಾಷಣದಲ್ಲಿ ಪದೇ ಪದೇ ಉಲ್ಲೇಖಿಸುತ್ತಾ ಬಂದಿದ್ದಾರಾದರೂ, ಕನ್ನಡದ ಸೌಹಾರ್ದ ಬದುಕಿನ ಮೇಲೆ ನಡೆಯುತ್ತಿರುವ ದಾಳಿ, ಕನ್ನಡದ ಮೇಲೆ ನಡೆಯುತ್ತಿರುವ ದಾಳಿಯಾಗಿದೆ ಎನ್ನುವುದನ್ನು ಸ್ಪಷ್ಟ ಮಾತಿನಲ್ಲಿ ಹೇಳಲಾಗದೇ ಇದ್ದುದು ಅವರ ಭಾಷಣದ ಬಹುದೊಡ್ಡ ಸೋಲಾಗಿದೆ.