ಉತ್ತರಿಸಲಾಗದ ಪ್ರಶ್ನೆ
ಮಂಜರ ಹುಸೇನ್ ಸೈಯದ್, ಅಂಕೋಲಾ
''ಕನ್ನಡಕ್ಕೆ ಹೋರಾಡು ಕನ್ನಡದ ಕಂದ''
ಸೌಮ್ಯವಾಗಿ ಕವಿಯೊಬ್ಬ ಬರೆದಿರುವ ಪದ್ಯದ ಈ ಸಾಲು ಕನ್ನಡಪರ ಹೋರಾಟಗಾರರಿಗೆ ಮಹಾನ್ ಪ್ರೇರಣೆಯನ್ನು ನೀಡುತ್ತದೆ. ಆದರೆ ನಾನು ಮಾತ್ರ ಈ ಹೋರಾಡು ಶಬ್ದವು ಹೊಡೆದಾಡು ಶಬ್ದದ ಅಪಭ್ರಂಶವೇ ಎನ್ನುವ ಮಟ್ಟಿಗೆ ವಿಚಲಿತನಾಗಿದ್ದೇನೆ. ಈ ಹೋರಾಡು ಶಬ್ದವು ಕತ್ತಿ, ಚೂರಿ, ಖಡ್ಗ, ತ್ರಿಶೂಲಗಳನ್ನು ಒಳಗೊಂಡಿದೆಯೇ ಅಥವಾ ಕರ್ನಾಟಕದ ಬಸ್ಸುಗಳನ್ನು ಸುಡುತ್ತಿರುವ ಮಹಾರಾಷ್ಟ್ರ, ಗೋವಾ ಮತ್ತು ಕೇರಳದಂತಹ ರಾಜ್ಯಗಳಿಗೆ ಮಹಾತ್ಮಾಗಾಂಧಿಯವರ ಅಹಿಂಸೆಯ ಹೋರಾಟದ ದಾರಿ ಇದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಕೆಳಗೆ ಬರೆದಿರುವಂತಹ ಒಂದು ಘಟನೆ ಈ ಪ್ರಶ್ನೆಗೆ ಉತ್ತರವನ್ನು ನೀಡುತ್ತದೆಯೇ ಎಂದು ಕೊಳ್ಳುತ್ತೇನೆ.
ಕನ್ನಡದ ಬಹುತೇಕ ಸಾಹಿತ್ಯ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದೇನೆ. ಹುಬ್ಬಳ್ಳಿಯಲ್ಲಿ ನಡೆದ ಇಂತಹ ಒಂದು ಸಮಾರಂಭದಲ್ಲಿ ಸ್ನೇಹಿತನೊಂದಿಗೆ ಭಾಗವಹಿಸಿದ್ದೆ. ಹಿರಿಯ ಸಾಹಿತಿಯೊಬ್ಬರು ಕನ್ನಡದ ಬಗ್ಗೆ ನಿರರ್ಗಳವಾಗಿ ತುಂಬಾ ಆವೇಶಭರಿತರಾಗಿ ಮಾತನಾಡುತ್ತಿದ್ದರು. ನಾವು ತುಂಬಾ ಕುತೂಹಲದಿಂದ ಕೇಳುತ್ತಿದ್ದೆವು. ಅವರು ಮಾತನಾಡುತ್ತಿರುವಾಗಲೇ ಸಭಿಕರಿಂದ ವ್ಯಕ್ತಿಯೊಬ್ಬ ಎದ್ದು ನಿಂತು ಒಂದು ಪ್ರಶ್ನೆ ಕೇಳಬೇಕಾಗಿದೆಯೆಂದು ಕೈ ಮೇಲೆತ್ತಿದ, ಸಾಹಿತಿಗಳು ತುಂಬ ಮರ್ಯಾದೆಯಿಂದ ಅವನಿಗೆ ಪ್ರಶ್ನೆ ಕೇಳಲು ಅವಕಾಶವನ್ನು ಒದಗಿಸಿಕೊಟ್ಟರು. ಎದ್ದು ನಿಂತ ವ್ಯಕ್ತಿ ತುಂಬ ದೃಢವಾದ ಧ್ವನಿಯಲ್ಲಿ ''ಮಾನ್ಯರೇ ನಿಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರೂ ಹುಬ್ಬಳ್ಳಿಯಲ್ಲಿ ತುಂಬಾ ಪ್ರತಿಷ್ಠಿತವಾದ ಕಾನ್ವೆಂಟ್ನಲ್ಲಿ ಓದಿದವರು ಮತ್ತು ಓದುತ್ತಿದ್ದಾರೆ. ನೀವೇಕೆ ಅವರನ್ನು ಕನ್ನಡದ ಸರಕಾರಿ ಶಾಲೆಯಲ್ಲಿ ಓದಿಸಲಿಲ್ಲ?'' ಎಂದು ಪಶ್ನಿಸಿದ. ಹಿರಿಯ ಸಾಹಿತಿಗಳು ತಡಬಡಾಯಿಸಿ ''ಅವರು ನನ್ನ ಮಾತು ಕೇಳಿಲ್ಲ'' ಎಂದು ಉತ್ತರಿಸಿದರು. ''ನಿಮ್ಮ ಕುಟುಂಬವೇ ನಿಮ್ಮ ಮಾತನ್ನು ಕೇಳದಿರುವಾಗ ನಾವೇಕೆ ನಿಮ್ಮ ಮಾತನ್ನು ಕೇಳಬೇಕು'' ಎಂಬ ಮರುಉತ್ತರ ಸಭೆಯಲ್ಲಿ ಕೋಲಾಹಲವನ್ನು ಉಂಟುಮಾಡಿತು. ಸಾಹಿತಿಗಳ ಪರವಾಗಿ ದೊಡ್ಡದಾದ ಒಂದು ಗುಂಪು, ಪ್ರಶ್ನೆ ಕೇಳಿದ ವ್ಯಕ್ತಿಯ ಪರವಾಗಿ ಮತ್ತೊಂದು ಗುಂಪು ಎದ್ದು ನಿಂತಿತು. ಸಾಹಿತಿಗಳು ಸಭೆಯಿಂದ ನಿರ್ಗಮಿಸಿದರು. ಮಾತುಗಳು ಕೈ ಕೈ ಮಿಲಾಯಿಸುವಷ್ಟು ಬೆಳೆದವು, ಪ್ರಶ್ನೆ ಕೇಳಿದ ವ್ಯಕ್ತಿಯ ಮೇಲೆ ಅವನ ಸ್ನೇಹಿತರ ಮೇಲೆ ಹಲ್ಲೆಯೂ ನಡೆಯಿತು. ಸಭೆಯ ನಂತರ ಪರಿಸ್ಥಿತಿ ಶಾಂತವಾದ ಮೇಲೆ ನಾನು ನನ್ನ ಸ್ನೇಹಿತ ಆ ವ್ಯಕ್ತಿ ಮತ್ತು ಅವನ ಸ್ನೇಹಿತರನ್ನು ಭೇಟಿಯಾದೆವು. ಅವರದೊಂದು ಕನ್ನಡ ಅಭಿಮಾನಿಗಳ ಸಂಘ. ಈ ಸಂಘಟನೆಯ ಎಲ್ಲ ಸದಸ್ಯರೂ ಕನ್ನಡ ಸರಕಾರಿ ಶಾಲೆಗಳಲ್ಲಿ ಓದಿದವರು ಮತ್ತು ತಮ್ಮ ಮಕ್ಕಳನ್ನು ಕನ್ನಡ ಸರಕಾರಿ ಶಾಲೆಗಳಲ್ಲಿ ಓದಿಸುತ್ತಿರುವವರು. ಎಲ್ಲ ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಸರಕಾರಿ ಕನ್ನಡ ಶಾಲೆಯ ಶಿಕ್ಷಕರು ಮತ್ತು ಇತರ ಸರಕಾರಿ ನೌಕರರು ತಮ್ಮ ಮಕ್ಕಳನ್ನು ಕನ್ನಡ ಸರಕಾರಿ ಶಾಲೆಗಳಲ್ಲಿ ಓದಿಸಿದರೆ ಇಂತಹ ಸಾಹಿತ್ಯ ಸಮ್ಮೇಳನಗಳ ಅವಶ್ಯಕತೆ ಇದೆಯೇ? ಎಂದು ಆ ಗುಂಪು ಪ್ರಶ್ನಿಸುತ್ತಿತ್ತು. ಈ ನಿಟ್ಟಿನಲ್ಲಿ ನನ್ನ ಮಾತೃಭಾಷೆಯಾದ ಉರ್ದುವಿನ ಉಳಿವಿಗಾಗಿ ನಾನು ನನ್ನ ಮಕ್ಕಳನ್ನು ಸರಕಾರಿ ಉರ್ದು ಶಾಲೆಗಳಲ್ಲಿ ಓದಿಸಿ ಈ ಲೇಖನವನ್ನು ಬರೆಯುವ ನೈತಿಕತೆಯನ್ನು ಕಳೆದುಕೊಳ್ಳುತ್ತೇನೆ. ಇದರ ಹೊರತಾಗಿಯೂ 'ಸರಕಾರಿ ಶಾಲೆಗಳೆಂಬ ದೇಗುಲಗಳು' ಎಂಬ ಲೇಖನವನ್ನು ಪತ್ರಿಕೆಯೊಂದರಲ್ಲಿ ಬರೆದಿದ್ದೆ. ಆಗಿನ ಸರಕಾರ ಕನ್ನಡ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ನೀಡುತ್ತಿದ್ದ ಅನುದಾನ ಮತ್ತು ಮಕ್ಕಳಿಗಾಗಿ ನೀಡುತ್ತಿದ್ದ ಸೌಲಭ್ಯಗಳಿಗಾಗಿ ಆ ಲೇಖನ ಬರೆದಿದ್ದೆ. ಇಂದು ಈ ದೇಗುಲಗಳು ಪಾಳುಬಿದ್ದಿವೆ. ಶಾಲೆಯ ಪಾಲಕರಿಂದಲೇ ನೂರು ರೂಪಾಯಿ ಭಿಕ್ಷೆ ಕೇಳುವಷ್ಟು ದಯನೀಯ ಪರಿಸ್ಥಿತಿಯಲ್ಲಿ ಸರಕಾರವಿದೆ. ಕನ್ನಡ ಸರಕಾರಿ ಶಾಲೆಗಳೇ ನಿರ್ನಾಮಗೊಂಡರೆ, ಕನ್ನಡವನ್ನು ರಕ್ಷಿಸುವವರಾರು. ಕನ್ನಡ ಸಾಹಿತ್ಯ ಪರಿಷತ್ಗಳಿಗೆ ನೀಡುವ ಅನುದಾನವನ್ನು ಸರಕಾರ ಕನ್ನಡ ಸರಕಾರಿ ಶಾಲೆಗಳ ಉನ್ನತಿಗಾಗಿ ಬಳಸಿದರೆ, ಎಲ್ಲ ಕನ್ನಡಪರ ಹೋರಾಟಗಾರರು ತಮ್ಮ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗಳಲ್ಲಿ ಓದಿಸಿದರೆ ಏನಾಗಬಹುದೆಂಬ ಆ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯವನ್ನು ಹೊತ್ತುಕೊಂಡು ಭಾರವಾದ ಮನಸ್ಸಿನಿಂದ ಮನೆಗೆ ಮರಳಿದೆವು. ಆ ವ್ಯಕ್ತಿಯ ಅಂಗಿ ಹರಿದಿತ್ತು. ಮೂಗಿನಿಂದ ರಕ್ತ ಒಸರಿಸುತ್ತಿತ್ತು. ಆದರೆ ತನ್ನ ಅಭಿಪ್ರಾಯವನ್ನು ಹೇಳಿಕೊಂಡ ಆತ್ಮತೃಪ್ತಿ ಅವನ ಮುಖದಲ್ಲಿತ್ತು.
ಜೀವನವಿಡೀ ಉರ್ದು ಭಾಷೆಯ ಉನ್ನತೀಕರಣಕ್ಕಾಗಿ ಶ್ರಮಿಸಿದ ದಿಗ್ಗಜ ಉರ್ದು ಸಾಹಿತಿ ಡಾ. ಅಲ್ಲ್ಲಾಮಾ ಇಕ್ಬಾಲ್ ತನ್ನ ಜೀವನದ ಕೊನೆಯ ಕಾಲದಲ್ಲಿ ಹೇಳಿದ ಒಂದು ಮಾತು ಎಲ್ಲ ಭಾಷೆಯ ಸಾಹಿತಿಗಳು, ಭಾಷಾ ಪರ ಹೋರಾಟಗಾರರು ನೆನಪಿಡಲೇಬೇಕು,
ಇಕ್ಬಾಲ ಬಡಾ ಉಪದೇಶಿಕ ಥಾ, ಮನ ಬಾತೋಂಮೆ ಮೊಹಲೇತಾ
ಗುಫ್ತಾರ ಕಾ ವೊ ಗಾಝಿತೊಬನಾ, ಕಿರದಾರ ಕಾ ಗಾಝಿ ಬನ ನ ಸಕಾ
(ಇಕ್ಬಾಲ ದೊಡ್ಡ ಉಪದೇಶಿಕನಾಗಿದ್ದ. ಮನಸ್ಸನ್ನು ಮಾತುಗಳಿಂದ ಮೋಹಗೊಳಿಸುತ್ತಿದ್ದ. ಅವನು ಮಾತಿನ ಮಲ್ಲನೇನೂ ಆದ, ಆದರೆ ಕರ್ಮದ ಮಲ್ಲನಾಗಲೇ ಇಲ್ಲ)