varthabharthi


ಈ ಹೊತ್ತಿನ ಹೊತ್ತಿಗೆ

‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಆಧ್ಯಾತ್ಮಿಕ ನಿಜಗಳ ಬೆನ್ನು ಹತ್ತಿ

ವಾರ್ತಾ ಭಾರತಿ : 8 Jan, 2023
ಡಾ. ಆರ್.ಚಲಪತಿ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ, ಮೈಸೂರು

‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಬರೆದಿರುವ ಮುಕುಂದರಾವ್ ಅವರು ಹುಸಿ ಆಧ್ಯಾತ್ಮಿಕತೆಯನ್ನು ಕುರಿತು ಸನ್ಯಾಸಿ ಪುಸ್ಸನು ಹೇಳಿದ ಮಾತೊಂದನ್ನು ಇಂದಿಗೂ ಅನ್ವಯಿಸುತ್ತದೆಯೆಂದು ಹೇಳಿದ್ದಾರೆ.

ಅಧ್ಯಾತ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಚಟುವಟಿಕೆಗಳಲ್ಲಿ ಅನೇಕವು ಕಪಟತನದಿಂದ ಕೂಡಿರುವಂತಹವು. ಆಧ್ಯಾತ್ಮಿಕತೆಯ ವ್ಯವಹಾರವು ಇಂದು ಅತ್ಯಂತ ಲಾಭದಾಯಕವಾದ ಉದ್ದಿಮೆಯಾಗಿದೆ. ಕೆಲ ಶಮನಕಾರಿ ಅನುಭವಗಳನ್ನು ಕೊಡುವ ಮೂಲಕ ಈಗಿನ ಗುರುಗಳನೇಕರು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದಾರೆ. ಜನರಲ್ಲಿರುವ ಹೆಡ್ಡತನ ಮತ್ತು ಭಯವನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಅಗತ್ಯವೇ ಇಲ್ಲದ ವಸ್ತುಗಳನ್ನು ‘ಧಾರ್ಮಿಕ ಗುರು’ಗಳ ಹೆಸರಿನಲ್ಲಿ ಅತ್ಯಂತ ಲಾಭಕ್ಕೆ ಮಾರುವವರಾಗಿದ್ದಾರೆ. ಇಂತಹ ಆಧ್ಯಾತ್ಮಿಕ ಅಧಃಪತನ ಮತ್ತು ಭ್ರಷ್ಟ ಗುರುಗಳನ್ನು ಕುರಿತ ಹೇಳಿಕೆಯೆಂದು ಪುಸ್ಸನ ಮಾತುಗಳನ್ನು ಲೇಖಕರು ಉದಾಹರಿಸಿದ್ದಾರೆ. ಇವತ್ತಿನ ನಮ್ಮ ಸುತ್ತಲ ಸಮಾಜದಲ್ಲಿ ಕಾಣಬರುವ ಅನೇಕ ಆಶ್ರಮಗಳು, ಅವತಾರಗಳು, ಸಂಪ್ರದಾಯಗಳು, ಜ್ಞಾನಿಗಳು ಮತ್ತು ಕಪಟಿಗಳನ್ನು ಕುರಿತ ಈ ಪುಸ್ತಕದಲ್ಲಿನ ಬರಹಗಳು ಶುರುವಾಗಿರುವುದು ಇಂತಹ ವಿವರಣೆಗಳ ಮೂಲಕ. ಈ ವಿಚಾರದಲ್ಲಿ ಪುರಾಣ-ಇತಿಹಾಸಗಳನ್ನು, ಅವುಗಳ ಪ್ರಾಚೀನ ಮತ್ತು ಆಧುನಿಕತೆಯನ್ನು ಇಂದಿನ ದಿನಗಳಲ್ಲಿ ಹೇಗೆ ಉದ್ದಿಮೆಯಾಗಿಸಿಕೊಳ್ಳಲಾಗುತ್ತದೆ ಎನ್ನುವುದನ್ನು ಇಲ್ಲಿನ ಹನ್ನೊಂದು ಸೊಗಸಾದ ನಿರೂಪಣೆಗಳಲ್ಲಿ ಬಿಡಿಸಿ ಹೇಳಲಾಗಿದೆ.
ಆಧ್ಯಾತ್ಮಿಕತೆಯ ಮೊದಲ ಪಾಠವೆಂದು ‘ಎಚ್ಚರಿಕೆ ಮತ್ತು ಪ್ರಾಮಾಣಿಕತೆ’ ಎನ್ನುವ ಅರಿವನ್ನು ಬೆನ್ನಿಗಿರಿಸಿಕೊಂಡು ನಡೆಸಿರುವಂತಹುದು ಇಲ್ಲಿನ ಚಿಂತನೆ. ‘ಆಧ್ಯಾತಿಕ ಹುಡುಕಾಟದಲ್ಲಿ ಪ್ರಾಮಾಣಿಕತೆಯಿಲ್ಲದೆ ಹೋದರೆ ನಾವು ಧಾರ್ಮಿಕ ವಂಚನೆ ಮತ್ತು ಮೋಸದ ಹಾದಿಗಳಲ್ಲಿ ಹಾಗೂ ಅಡ್ಡದಾರಿಗಳಲ್ಲಿ ಅತ್ತಿಂದಿತ್ತ ಗೊತ್ತುಗುರಿಯಿಲ್ಲದಂತೆ ಅಲೆಯುತ್ತಿರುತ್ತೇವೆ’ ಎನ್ನುವ ಎಚ್ಚರವನ್ನು ಇರಿಸಿಕೊಂಡಿದೆ. ಆ ಮೂಲಕ ಈ ಕುರಿತ ಸಾಮಾಜಿಕ ಬೆಳವಣಿಗೆಗಳನ್ನು ಮಂಡಿಸಲಾಗಿದೆ. ಇದು ತಮ್ಮ ‘ಪ್ರವಾಸದ ಪ್ರತಿಫಲ’ ಎಂದೇ ಆಗಿದ್ದರೂ ಸಾಮಾಜಿಕ ಬದುಕಿನ ನಿಜದ ಅರಿವುಳ್ಳ ಯಾರದೇ ಅನುಭವ ಅನಿಸಬಹುದಾದದ್ದು, ಆಗಿರಬಹುದಾದದ್ದು ಇಲ್ಲಿನ ಚಿತ್ರಣ.
ಈ ನಿಟ್ಟಿನಲ್ಲಿ ಪ್ರಾಚೀನತಮವಾದ ನಡೆಗಳನ್ನು-ಆದಿ ಶಂಕರ, ಬಸವಣ್ಣ, ಅಲ್ಲಮ ಅಕ್ಕಮಹಾದೇವಿ, ರಮಣ ಮಹರ್ಷಿ, ಅರವಿಂದರು ಮತ್ತು ಶ್ರೀಮಾತೆಯ ನೆಪದಲ್ಲಿ ‘ಗುರುಗಳ ಮರುಬೇಟಿ’ಯೆಂತಲೂ, ಸತ್ಯ ಸಾಯಿಬಾಬಾ, ಕಲ್ಕಿ ಭಗವಾನ್, ಶ್ರೀಶ್ರೀ ರವಿಶಂಕರ್, ಮಾತಾ ಅಮೃತಾನಂದಮಯೀ ಇವರ ಸುತ್ತಣ ಬೆಳವಣಿಗೆಗಳನ್ನು ‘ಅವತಾರಗಳ ಪುನರಾಗಮನ’ಎಂತಲೂ, ಜೆ.ಕೃಷ್ಣಮೂರ್ತಿ, ಯು.ಜಿ.ಕೃಷ್ಣಮೂರ್ತಿಯವರ ತಾತ್ವಿಕ ಗ್ರಹಿಕೆಗಳ ಸುತ್ತಣದನ್ನು ‘ಹಾದಿಯಿಲ್ಲದ ಹಾದಿ’ ಎಂತಲೂ ಕಟ್ಟಿ ವಿವರಿಸಿಕೊಳ್ಳಲಾಗಿದೆ ಇಲ್ಲಿ. ಆ ಮೂಲಕ ಜನಬದುಕುಗಳನ್ನು ಮಾಂತ್ರಿಕವೆಂಬಂತೆ ಆಕ್ರಮಿಸಿಕೊಂಡಿರುವ ಆಧ್ಯಾತ್ಮಿಕತೆಯ ಹಲವು ಮಾದರಿಗಳನ್ನು ಪರಿಶೀಲಿಸಿಕೊಂಡಂತೆಯೂ ಆಗಿದೆ.
ಇಲ್ಲಿನ ನಿರೂಪಣೆಗಳ ಶಕ್ತಿಯಿರುವುದು ಬರಹಗಾರ ತನ್ನನ್ನೂ ಒಳಗುಮಾಡಿಕೊಂಡಿರುವ ಎಚ್ಚರದಿಂದಾಗಿ. ತನ್ನನ್ನು ಪರಿಶೀಲಿಸಿಕೊಳ್ಳುತ್ತಿರುವುದರಿಂದಾಗಿ. ಆ ಮೂಲಕ ಅಂತಹ ಬೆಳವಣಿಗೆಗಳಲ್ಲಿ ತಾನು ಏನು, ಹೇಗೆ ಎಂದು ಕೇಳಿಕೊಳ್ಳುತ್ತಿರುವ ಮಾನಸಿಕ ಪ್ರಬುದ್ಧತೆಯಿಂದಾಗಿ. ಹೀಗಾಗಿ ಇಲ್ಲಿನ ಬರಹಗಳಲ್ಲಿ ಒಂದು ಅತೆಂಟಿಸಿಟಿ ಇದೆ. ಇಂತಹ ಅತೆಂಟಿಸಿಟಿಯು ಇಲ್ಲಿನ ವಿವರಗಳಿಗೆ ಜೀವಂತಿಕೆಯನ್ನು ತಂದುಕೊಟ್ಟಿದೆ. ವ್ಯಕ್ತಿಯ ಹೊರಗಿನ ಪ್ರವಾಸ ಮತ್ತು ಒಳಗಿನ ಪ್ರವಾಸಗಳೆರಡೂ ಒಂದನ್ನೊಂದು ಮೇಳೈಸುವ ನಡೆಯಲ್ಲಿ ಈ ಹುಡುಕಾಟವು ಚಿತ್ರಣಗೊಳ್ಳುತ್ತಾ ಸಾಗಿದೆ. ಕಾಲಡಿಯ ಟ್ರಾವೆಲ್ ಏಜೆಂಟನೊಂದಿಗೆ ನಡೆದ ಮಾತಿನ ವಿವರಣೆ ಮತ್ತು, ರಮಣರ ಆಧ್ಯಾತ್ಮಿಕ ಸನ್ನಿವೇಶದ ಒಂದು ನಿರೂಪಣೆಯನ್ನು ಗಮನಿಸಿ:
1. ‘ಹಾಗೆಯೇ ಮಾತಿನ ಮಧ್ಯೆ, ಕಾಲಡಿಯ ಜನರ ಮೇಲೆ, ಅಧ್ಯಾತ್ಮದ-ಮುಖ್ಯವಾಗಿ ಶಂಕರನ ಪ್ರಭಾವವೇನು ಎಂದು ಕೇಳಿದೆ. ಆತ ಜೋರಾಗಿ ನಕ್ಕ, ನಿಜ ಹೇಳಬೇಕೆಂದರೆ ಇದೊಂದು ಅಸಂಬದ್ಧ ಪ್ರಶ್ನೆಯಾಗಿದ್ದು, ಮೂರ್ಖತನದ್ದೂ ಆಗಿತ್ತು. ಮತ್ತೆ ನಾನು ಇದನ್ನೇ ಬೇರೆ ರೀತಿಯಲ್ಲಿ ಕೇಳಿದಾಗ ‘‘ಯಾರಿಗೆ ಗೊತ್ತು? ಬಹುಶಃ ಶಂಕರನ ಕೃಪೆಯಿಂದಲೇ ಈ ಊರಿನ ಜನ ಇಷ್ಟೊಂದು ಶ್ರೀಮಂತರಾಗಿರಬಹುದು’’ ಎಂದ... ಅಧ್ಯಾತ್ಮ ಗುರುವೊಬ್ಬ ಜಗತ್ತಿನ ಜನರಿಗೆ ಲೌಕಿಕ ಲಾಭಗಳನ್ನು ಕರುಣಿಸಿರುವುದು! ದುರದೃಷ್ಟವೆಂದರೆ ಪಾಪ ನಮ್ಮ ಟ್ರಾವೆಲ್ ಏಜೆಂಟನ ಮೇಲೆ ಶಂಕರನ ಕೃಪೆ ಇರಲಿಲ್ಲ’.
2. ‘ನಾನು’ ಯಾರು? ನಾನೊಬ್ಬ ಅನ್ವೇಷಕನೋ, ಪುರುಷನೋ, ಸ್ತ್ರೀಯೋ, ಶಿಕ್ಷಕನೋ, ಚಾಲಕನೋ, ಬ್ಯಾಂಕ್ ಉದ್ಯೋಗಿಯೋ ಆಗಿರಬಹುದು. ಆದರೆ ಶೀಘ್ರದಲ್ಲಿಯೇ ನಾವು ಉತ್ತರರಹಿತ ಸ್ಥಿತಿ ತಲುಪುತ್ತೇವೆ ಅಥವಾ ಯಾವ ಉತ್ತರವೂ ನಿಜವಾದ ಉತ್ತರವಲ್ಲ ಎಂಬುದನ್ನು ಅರಿತುಕೊಳ್ಳುತ್ತೇವೆ. ನಾವು ಕೊಡುವ ಉತ್ತರಗಳು ಸಾಪೇಕ್ಷವಾದದ್ದು, ಮಿತಿಗಳಿಗೆ ಒಳಪಟ್ಟ ಉತ್ತರಗಳು ಎಂಬುದನ್ನು ಕಂಡುಕೊಳ್ಳುತ್ತೇವೆ. ರಮಣರು ನಿಜವಾಗಿ, ಪ್ರಶ್ನಿಸುವವನನ್ನು ಪ್ರಶ್ನೆಗಳಿಂದ ಪಾರುಮಾಡಲು ಪ್ರಯತ್ನಿಸುತ್ತಿದ್ದರೆಂದು ನನಗೀಗ ಅನಿಸುತ್ತದೆ. ಪ್ರಶ್ನಿಸುವವನನ್ನು ಮುಂದಕ್ಕೆ ಹೋಗಲಾಗದ ಒಂದು ಬಿಂದುವಿನಲ್ಲಿ ನಿಲ್ಲಿಸಿ, ಪ್ರಶ್ನಿಸಿಯೂ ಇಲ್ಲದ, ಪ್ರಶ್ನಿಸುವವನೂ ಇಲ್ಲದ ಹಾಗೆ ಮಾಡಲು ಅವರು ಯತ್ನಿಸಿರಬಹುದು’.

ಇದು ಇಲ್ಲಿನ ನಿರೂಪಣೆಯಲ್ಲಿನ ಎರಡು ಉದಾಹರಣೆ ಮಾತ್ರ. ದೈವ, ದೇವಮಾನವ, ಅಧ್ಯಾತ್ಮ, ಹುಡುಕಾಟಗಳ ತನ್ನತನ ಮತ್ತು ದಿನದಿನದ ಬದುಕಿನಲ್ಲಿ ವ್ಯಕ್ತಿಗಳು ಇವುಗಳನ್ನು ಎದುರುಗೊಳ್ಳುವ ನಡೆ ಹಾಗೂ ಇವುಗಳೊಂದಿಗೆ ವ್ಯಾಪಾರ-ವ್ಯವಹಾರಗಳು ಮೇಳೈಸಿಕೊಂಡಿರುವ ಬಗೆ, ಇದರೊಂದಿಗೆ ಸೀಗೆಮೆಳೆಯಂತೆ ಬೆಳೆದುಕೊಂಡಿರುವ ನಂಬಿಕೆ-ಭಕ್ತಿಯ ಹುಸಿ ಚಹರೆಗಳು ಎಷ್ಟೊಂದು ಬದುಕುಗಳನ್ನು ಬೆಸೆದಿವೆ ಎನ್ನುವುದನ್ನು ವಾಸ್ತವದ ಬೆರಗಿನಿಂದ ಗ್ರಹಿಸಿರುವ ದೊಡ್ಡ ಚಿತ್ರಣ ಇಲ್ಲಿನದು. ಇದು ಮೂಲದಲ್ಲಿ ಇಂಗ್ಲಿಷ್‌ನ ಬರವಣಿಗೆಯಾಗಿದ್ದರೂ ಅದರ ಕನ್ನಡತನವನ್ನು ಹೊತ್ತ, ಕನ್ನಡದ್ದೇ ಎನಿಸುವಂತಹ ನಿರೂಪಣೆಯ ನಡೆಗಳಿಂದಾಗಿ ನಮ್ಮನ್ನು ಓದಿಸಿಕೊಳ್ಳುವ ಪುಸ್ತಕ ಇದು. ಚಂದಗಾಣುವ ಓದಿಗೆ ಸಿಗುವಂತೆ ಸಮಾಜಶಾಸ್ತ್ರದ ಮೇಸ್ಟರಾಗಿರುವ ಸಂತೋಷ್ ನಾಯಕ್ ಅವರು ಇದನ್ನು ಅನುವಾದಿಸಿದ್ದಾರೆ. ಅತ್ಯಂತ ಆಪ್ತ ಎನ್ನಿಸುವಂತಹ ಕನ್ನಡವನ್ನು ಈ ಅನುವಾದದಲ್ಲಿ ಸಂತೋಷ್ ನಾಯಕ್ ಬಳಸಿದ್ದಾರೆ. ಆ ಮೂಲಕ ದೈವ, ಅಧ್ಯಾತ್ಮ, ಸಂತರು ಇವುಗಳ ನಡುವಿನ ಜನಮಾನಸದ ಒಡನಾಟದಲ್ಲಿರುವ ತೊಡಕುಗಳನ್ನು ಬಯಲಿಗಿಟ್ಟು ಓದುಗರಿಗೆ ತಲುಪಿಸಲು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಇದು ಮುಕುಂದರಾವ್ ಅವರ ಹುಡುಕಾಟದ ಒಳ್ಳೆಯ ಬರವಣಿಗೆಯೂ ಆಗಿರುವ ಹಾಗೆ ಇತ್ತೀಚೆಗೆ ಕನ್ನಡದಲ್ಲಿ ನಡೆದಿರುವ ಒಂದು ಒಳ್ಳೆಯ ಅನುವಾದವೂ ಕೂಡ.

ಕೃತಿ: ಭ್ರಮೆ ಮತ್ತು ವಾಸ್ತವಗಳ ನಡುವೆ
ಲೇಖಕ: ಮುಕುಂದರಾವ್
ಅನುವಾದ: ಸಂತೋಷ್ ನಾಯಕ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)