ಲಕ್ನೊ: ಪ್ರಾಣಿಗಳನ್ನು ವಿಪರೀತ ಚಳಿಯಿಂದ ಪಾರಾಗಿಸಲು ಹೀಟರ್, ಕಂಬಳಿ ಬಳಕೆ!
ಲಕ್ನೊ: ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ ಇಲ್ಲಿನ ನವಾಬ್ ವಾಜಿದ್ ಅಲಿ ಷಾ ಝೂಲಾಜಿಕಲ್ ಗಾರ್ಡನ್ ನಲ್ಲಿ ವಿಪರೀತ ಚಳಿಯಿಂದ ಪ್ರಾಣಿಗಳನ್ನು ರಕ್ಷಿಸಲು ಅಧಿಕಾರಿಗಳು ಹೀಟರ್ ಹಾಗೂ ಬೆಚ್ಚನೆಯ ಹೊದಿಕೆಗಳ ಮೊರೆ ಹೋಗಿದ್ದಾರೆ. ಇವುಗಳನ್ನು ಪ್ರಾಣಿಗಳ ಪಂಜರದೊಳಗೆ ಇರಿಸಲಾಗಿದೆ.
ಹೀಟರ್ಗಳು ಹಾಗೂ ಕಂಬಳಿಗಳ ಹೊರತಾಗಿ ಮೃಗಾಲಯದ ಆಡಳಿತವು ಹುಲಿಗಳು, ಸಿಂಹಗಳು ಹಾಗೂ ಕರಡಿಗಳ ಬೋನಿನೊಳಗೆ ಹುಲ್ಲನ್ನು ಇರಿಸಿದೆ.
ಸದ್ಯ ಶೀತ ಹವಾಮಾನವನ್ನು ನಿಭಾಯಿಸಲು ಪ್ರಾಣಿಗಳು ಹಾಗೂ ಪಕ್ಷಿಗಳ ಆಹಾರಕ್ರಮವನ್ನು ಬದಲಾಯಿಸಲಾಗಿದೆ. ನಾವು ಪ್ರಾಣಿಗಳ ಪಂಜರಗಳಲ್ಲಿ ಹೀಟರ್ಗಳು, ಹೊದಿಕೆಗಳು ಹಾಗೂ ಹುಲ್ಲುಗಳನ್ನು ಇರಿಸಿದ್ದೇವೆ. ಬೆಕ್ಕು ಜಾತಿಯ ಪ್ರಾಣಿಗಳಿಗೆ ಸ್ಲೀಪರ್ಗಳನ್ನು ಸಹ ವ್ಯವಸ್ಥೆ ಮಾಡಿದ್ದೇವೆ" ಎಂದು ಮೃಗಾಲಯದ ನಿರ್ದೇಶಕ ವಿಷ್ಣುಕಾಂತ್ ಮಿಶ್ರಾ ಹೇಳಿದರು.
ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ನಿರಂತರ ಶಾಖದ ಅಗತ್ಯವಿರುವುದರಿಂದ ಹೀಟರ್ಗಳನ್ನು ಸರೀಸೃಪಗಳ ಪಂಜರದಲ್ಲಿ ಇರಿಸಲಾಗಿದೆ. ಮಾಂಸಾಹಾರಿ ಪ್ರಾಣಿಗಳಿಗೆ ಮಾಂಸಾಹಾರಿ ಆಹಾರವನ್ನು ಹೆಚ್ಚು ನೀಡಲಾಗುತ್ತಿದ್ದು, ಗೋಧಿ ಹಾಗೂ ಕಡಲೆಕಾಯಿಯನ್ನು ಇತರ ಪ್ರಾಣಿಗಳಿಗೆ ನೀಡಲಾಗುತ್ತಿದೆ ಎಂದು ಮಿಶ್ರಾ ಹೇಳಿದರು.