ಬೆಂಗಳೂರು: ರಾತ್ರಿ ಗಸ್ತು ಕರ್ತವ್ಯದಲ್ಲಿರುವ ಪೊಲೀಸರಿಗೆ ‘ಬಾಡಿ ವೋರ್ನ್’ ಕ್ಯಾಮರಾ ಕಡ್ಡಾಯ
ಬೆಂಗಳೂರು, ಜ.8: ರಾತ್ರಿ ಗಸ್ತು ಕರ್ತವ್ಯದಲ್ಲಿರುವ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಕ್ಯಾಮರಾ ಧರಿಸಿರಬೇಕೆಂಬ ಕಡ್ಡಾಯ ನಿಯಮವನ್ನು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಜಾರಿಗೊಳಿಸಿದ್ದಾರೆ.
ಈಗಾಗಲೇ ಸಂಚಾರ ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮರಾ ಕಡ್ಡಾಯವಿದೆ. ಅದರಂತೆ ದಿನನಿತ್ಯ ಕರ್ತವ್ಯ ನಿರ್ವಹಿಸುವಾಗ ಸಂಚಾರಿ ಪೊಲೀಸರು ಕ್ಯಾಮರಾಗಳನ್ನು ಧರಿಸುತ್ತಿದ್ದಾರೆ. ಆದರೆ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮರಾ ಧರಿಸುವುದು ಕಡ್ಡಾಯವಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಗಸ್ತು ತಿರುಗುವ ಪೊಲೀಸರು ಹಣ ಪಡೆಯುತ್ತಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಅಷ್ಟೇ ಅಲ್ಲದೆ, ಪೊಲೀಸರ ಬಳಿ ಜನರೇ ವಾಗ್ವಾದಕ್ಕಿಳಿದ ಪ್ರಸಂಗಗಳೂ ನಡೆಯುತ್ತಿವೆ. ಈ ಕಾರಣಕ್ಕಾಗಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ಇನ್ನು ಮುಂದೆ ರಾತ್ರಿ ಗಸ್ತಿನಲ್ಲಿರುವ ತಮ್ಮ ವಿಭಾಗದ ಸಿಬ್ಬಂದಿ ಕ್ಯಾಮರಾ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.
ಈ ಮೊದಲು, ಅಂದರೆ 2021ರಲ್ಲಿ ವಾಹನ ತಪಾಸಣೆ ನಡೆಸುವ ಸಂಚಾರಿ ಪೊಲೀಸರಿಗೆ ಬಾಡಿ ಕ್ಯಾಮರಾವನ್ನು ಒದಗಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ 2022ರ ಮಾರ್ಚ್ ತಿಂಗಳಲ್ಲಿ ಸಂಚಾರ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಅನುಚಿತ ವರ್ತನೆ ಹಾಗೂ ಘರ್ಷಣೆಗಳಿಗೆ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರಿಗೆಬಾಡಿ ವೋರ್ನ್ ಕ್ಯಾಮರಾವನ್ನು ಒದಗಿಸಲಾಗಿತ್ತು. ಇದೀಗ ರಾತ್ರಿ ಗಸ್ತು ತಿರುಗುವ ಪೊಲೀಸರ ಸುರಕ್ಷಿತ ದೃಷ್ಟಿಯಿಂದ ಅವರಿಗೂ ಬಾಡಿ ವೋರ್ನ್ ಕ್ಯಾಮರಾ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ.