ಹಗರಣಗಳನ್ನು ಮುಚ್ಚಿಕೊಳ್ಳಲು ವಿಭಜಕ ರಾಜಕಾರಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸೂತ್ರ ಹಿಡಿಯಲು ಮೂರು ಪ್ರಮುಖ ಪಕ್ಷಗಳಲ್ಲಿ ಪೈಪೋಟಿ ನಡೆದಿರುವುದು ಸಹಜ. ಈಗ ಅಧಿಕಾರದಲ್ಲಿರುವ ಪಕ್ಷಕ್ಕೆ ಜನಾದೇಶವಿರಲಿಲ್ಲ. ಜನಾದೇಶವಿಲ್ಲದಿದ್ದರೂ ಚುನಾವಣೆಯ ನಂತರ ಹೇಗೆ ಅಧಿಕಾರವನ್ನು ಹೈಜಾಕ್ ಮಾಡಬೇಕೆಂಬುದನ್ನು ಕರಗತ ಮಾಡಿಕೊಂಡಿರುವ ಈ ಪಕ್ಷ ಈ ಬಾರಿ ರಾಜ್ಯ ಸರಕಾರದ ಸೂತ್ರವನ್ನು ಹೇಗೆ ಹಿಡಿಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಏನೋ ಗೋಲ್‌ಮಾಲ್ ಮಾಡಿ ಅಧಿಕಾರಕ್ಕೆ ಬಂದರೂ ಉತ್ತಮ, ದಕ್ಷ ಆಡಳಿತವನ್ನಾದರೂ ನೀಡಬೇಕಾಗಿತ್ತು. ಆದರೆ ಹಗರಣಗಳ ಮೇಲೆ ಹಗರಣಗಳ ಅಪಖ್ಯಾತಿ ಪಡೆದ ಬಿಜೆಪಿ ಈ ಬಾರಿ ಹೇಗಾದರೂ ಮಾಡಿ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಭಾವನಾತ್ಮಕ ವಿಷಯಗಳನ್ನು ಕೆರಳಿಸಲು ಮುಂದಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಗೃಹ ಸಚಿವ ಅಮಿತ್‌ಶಾ ಕರ್ನಾಟಕವನ್ನು ಗೆಲ್ಲಬೇಕಾದರೆ ಮೊದಲು ಹಳೆಯ ಮೈಸೂರಿನ ಒಕ್ಕಲಿಗರ ವೋಟುಗಳಿಗೆ ಲಗ್ಗೆ ಹಾಕಬೇಕೆಂದು ತಮ್ಮ ಪಕ್ಷದ ಇಲ್ಲಿನ ನಾಯಕರಿಗೆ ಸೂಚನೆ ನೀಡಿ ಹೋಗಿದ್ದಾರೆ. ಈ ಗುರಿ ಸಾಧನೆಗೆ ಹೇಳಲು ಯಾವ ಅಭಿವೃದ್ಧಿ ಸಾಧನೆಗಳಿಲ್ಲದ ಬಿಜೆಪಿ ಜನರನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸಿ ಚುನಾವಣೆಯನ್ನು ಗೆಲ್ಲಲು ಹೊರಟಿದೆ.
ಉತ್ತರ ಕರ್ನಾಟಕವನ್ನು ಬುಟ್ಟಿಗೆ ಹಾಕಿಕೊಳ್ಳಲು ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದವನ್ನು ಕೆರಳಿಸಿ ರಾಜಕೀಯ ಲಾಭ ಮಾಡಿಕೊಂಡ ಬಿಜೆಪಿ ಮಲೆನಾಡಿನಲ್ಲಿ ಜಯ ಸಾಧಿಸಲು ಚಿಕ್ಕಮಗಳೂರಿನ ಬಾಬಾ ಬುಡಾನ್‌ಗಿರಿ ವಿವಾದವನ್ನು ಸೃಷ್ಟಿಸಿತು. ಕರಾವಳಿ ಭಾಗವನ್ನು ಗೆಲ್ಲಲು ಲವ್ ಜಿಹಾದ್, ಗೋ ಹತ್ಯೆಯಂತಹ ಕಟ್ಟುಕತೆಗಳನ್ನು ಕಟ್ಟಿ ಲಾಭ ಮಾಡಿಕೊಂಡಿತು. ಈಗ ಹಳೆಯ ಮೈಸೂರು ಭಾಗದ ಮಂಡ್ಯ, ಹಾಸನ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜ ನಗರ ಮುಂತಾದ ಜಿಲ್ಲೆಗಳನ್ನು ತನ್ನದಾಗಿಸಿಕೊಳ್ಳಲು ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಒಕ್ಕಲಿಗರನ್ನು ಎತ್ತಿ ಕಟ್ಟಲು ಅತ್ಯಂತ ಕೀಳು ರಾಜಕೀಯಕ್ಕೆ ಕೈ ಹಾಕಿದೆ. ಇನ್ನೂರು ವರ್ಷಗಳ ಹಿಂದಿನ ಟಿಪ್ಪುಸುಲ್ತಾನ್ ಇತಿಹಾಸವನ್ನು ತಿರುಚಿ ಈ ಮೈಸೂರು ಹುಲಿಯನ್ನು ಖಳ ನಾಯಕನಂತೆ ಬಿಂಬಿಸತೊಡಗಿದೆ.ಇಂಥ ಕೀಳು ಮಟ್ಟದ ರಾಜಕೀಯಕ್ಕೆ ಮೈಸೂರಿನ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ರಂಗಾಯಣವನ್ನು ಬಳಸಿಕೊಳ್ಳುತ್ತಿದೆ.
ಟಿಪ್ಪುಸುಲ್ತಾನ್ ಚರಿತ್ರೆಯನ್ನು ಹೇಗೆ ತಿರುಚಿ ವಿವಾದವನ್ನು ಸೃಷ್ಟಿಸಲಾಗಿದೆಯೆಂದರೆ ಶ್ರೀರಂಗ ಪಟ್ಟಣದಲ್ಲಿ ಇದ್ದ ಹನುಮಾನ್ ದೇವಾಲಯವನ್ನು ಕೆಡವಿ ಟಿಪ್ಪುಸುಲ್ತಾನ್ ಮಸೀದಿ ಕಟ್ಟಿದ ಎಂದು ಸುಳ್ಳುಕತೆಗಳನ್ನು ಕಟ್ಟಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಪ್ರತ್ಯಕ್ಷವಾಗುವ ‘ಹಿಂದೂ ಜಾಗರಣ ವೇದಿಕೆ’ ಟಿಪ್ಪುಕಟ್ಟಿಸಿದ ಮಸೀದಿ ಕೆಡವಿ ಮತ್ತೆ ಅದೇ ಸ್ಥಳದಲ್ಲಿ ಹನುಮಾನ್ ಮಂದಿರವನ್ನು ಕಟ್ಟಿಸುವುದಾಗಿ ಘೋಷಣೆ ಮಾಡಿದೆ. ಇದರ ಭಾಗವಾಗಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸಂಕೀರ್ತನಾ ಯಾತ್ರೆಯನ್ನು ನಡೆಸಿದೆ. ಅಲ್ಲಿ ನಡೆಸಿದ ಹನುಮಮಾಲಾಧಾರಿಗಳ ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೇಲ್ನೋಟಕ್ಕೆ ಇದು ಹಿಂದೂ ಪರ ಸಂಘಟನೆಗಳ ಹೋರಾಟ ಎಂದು ಕಾಣಿಸಿಕೊಂಡರೂ ಇದರ ರಾಜಕೀಯ ಲಾಭವಾಗುವುದು ಬಿಜೆಪಿಗೆ. ಇತ್ತೀಚೆಗೆ ಮೈಸೂರಿನಲ್ಲಿ ನಿರ್ಮಿಸಲಾದ ಜೆ.ಎಸ್.ಎಸ್. ಕಾಲೇಜು ಬಸ್ ನಿಲ್ದಾಣದ ವಿನ್ಯಾಸ ಗುಂಬಜ್ ಮಾದರಿಯಲ್ಲಿದೆ ಎಂದು ಅಲ್ಲಿನ ಬಿಜೆಪಿ ಸಂಸದ ಪ್ರತಾಪ ಸಿಂಹ ವಿವಾದ ಸೃಷ್ಟಿಸಿದರು. ಅದನ್ನು ರಾತ್ರೋರಾತ್ರಿ ನೆಲಸಮಗೊಳಿಸಿ ಬದಲಿ ವಿನ್ಯಾಸದ ನಿಲ್ದಾಣವನ್ನು ನಿರ್ಮಿಸಲಾಯಿತು.
ಇದು ಶ್ರೀರಂಗಪಟ್ಟಣದ ಕತೆಯಾದರೆ ರಾಮನಗರದ್ದು ಇನ್ನೊಂದು ರೀತಿಯದು. ಅಲ್ಲಿನ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯ ರಾಮ ಮಂದಿರ ನಿರ್ಮಿಸಿ ದಕ್ಷಿಣದ ಅಯೋಧ್ಯೆಯನ್ನಾಗಿ ಮಾಡುವುದಾಗಿ ಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ. ಅದಕ್ಕಾಗಿ ಅಯೋಧ್ಯೆಗೆ ಹೋಗಿ ಬೆಳ್ಳಿ ಇಟ್ಟಿಗೆ ನೀಡಿ ಬಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾರ ಬಾಯಿಯಲ್ಲೂ ಅದೇ ಮಾತು. ಇತ್ತೀಚೆಗೆ ಕರ್ನಾಟಕಕ್ಕೆ ಬಂದಾಗಲೂ ಅವರು ಮುಂದಿನ ವರ್ಷ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಪೂರ್ಣವಾಗುವುದು ಎಂದು ಘೋಷಿಸಿದರು. ಅವರ ಹೇಳಿಕೆಯನ್ನು ಲೇವಡಿ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಮಿತ್ ಶಾ ಅವರು ಗೃಹ ಮಂತ್ರಿಯೋ ಅಥವಾ ಗುಡಿಯ ಪುರೋಹಿತರೋ ಅಥವಾ ಕಟ್ಟಡ ಕಟ್ಟುವ ಮೇಸ್ತ್ರಿಯೋ ಎಂದು ಪ್ರಶ್ನಿಸಿದರು.
ಇದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಕಟೀಲು ಅವರು ‘‘ರಸ್ತೆ, ಚರಂಡಿ, ಅಭಿವೃದ್ಧಿ ಯಂತಹ ವಿಷಯಗಳ ಬಗ್ಗೆ ಮಾತಾಡಬೇಡಿ ಲವ್ ಜಿಹಾದ್ ಬಗ್ಗೆ ಮಾತಾಡಿ’’ ಎಂದು ಜನತೆಗೆ ಹೇಳುತ್ತಿದ್ದಾರೆ. ಬಿಜೆಪಿ ಇಂತಹ ಬೆಂಕಿ ಹಚ್ಚುವ ಭಾವನಾತ್ಮಕ ವಿಷಯಗಳನ್ನು ಪದೇ ಪದೇ ಪ್ರಸ್ತಾಪಿಸಲು ಕಾರಣ ಅದರ ಆಡಳಿತ ವೈಫಲ್ಯ ಮತ್ತು ಹಗರಣಗಳು. ಜನತೆ ಅದರ ಬಗ್ಗೆ ಮಾತಾಡದೆ ಮುಸ್ಲಿಮರ ಮೇಲಿನ ದ್ವೇಷದಿಂದ ತಮಗೆ ಮತ ಹಾಕಲಿ ಎಂಬುದು ಸಂಘಪರಿವಾರದ ರಣ ತಂತ್ರವಾಗಿದೆ.
ರಾಜ್ಯ ಬಿಜೆಪಿ ಸರಕಾರದ ಆಡಳಿತ ವೈಫಲ್ಯಗಳ ಜೊತೆಗೆ ಬಟಾಬಯಲಾದ ಶೇ.40ರ ಲಂಚದ ಪ್ರಕರಣ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರವರೆಗೂ ಹೋಗಿದೆ.ಅದಕ್ಕೂ ಉತ್ತರ ಸಿಕ್ಕಿಲ್ಲ. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಲಂಚ ತಿಂದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕಾದ ರಾಜ್ಯ ಬಿಜೆಪಿ ಸರಕಾರ ದೂರು ನೀಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದೆ. ತೋಟಗಾರಿಕೆ ಮಂತ್ರಿ ಮುನಿರತ್ನ ಅವರು ತಮ್ಮ ಮಾನನಷ್ಟವಾಗಿದೆ ಎಂದು ಖಟ್ಲೆ ಹಾಕಿದ ಕಾರಣ ನ್ಯಾಯಾಲಯ ನೀಡಿದ ಆದೇಶದ ಅನ್ವಯ ಕೆಂಪಣ್ಣ ಮತ್ತು ಇತರ ಕೆಲವು ಅವರ ಬೆಂಬಲಿಗರನ್ನು ಬಂಧಿಸಲಾಯಿತು. ಲಂಚ ತಿಂದವರ ಮೇಲೆ ಕ್ರಮವನ್ನು ಕೈಗೊಳ್ಳುವ ಬದಲಾಗಿ ದೂರು ನೀಡಿದವರ ಮೇಲೆ ಕ್ರಮವನ್ನು ಕೈಗೊಳ್ಳುವುದು ಯಾವ ನ್ಯಾಯ?
ಇದೊಂದೇ ಪ್ರಕರಣವಲ್ಲ. ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿ ಏಳಲು ಪ್ರಯತ್ನಿಸುತ್ತಿದೆ ಎಂಬುದು ಜನಜನಿತ. ಬೆಂಗಳೂರು ನಗರದ ರಸ್ತೆಗಳ ದುರಸ್ತಿಗಾಗಿ 25,000 ಕೋಟಿ ರೂಪಾಯಿ ವ್ಯಯಿಸಲಾಗಿದ್ದು ಅದರಲ್ಲಿ ಭಾರೀ ಹಗರಣ ನಡೆದಿದೆ ಎಂದು ದೂರು ಬಂದಾಗ ತನಿಖೆಯನ್ನು ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಧಾನ ಸಭೆಯಲ್ಲಿ ಘೋಷಿಸಿದ್ದರು. ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಪ್ರತಿಪಕ್ಷಗಳು ಮಾತ್ರವಲ್ಲ, ಬಿಜೆಪಿ ಶಾಸಕರೇ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರು ಬಹಿರಂಗವಾಗಿ ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ತಾವು ನಡೆಸಿದ ಕಾಮಗಾರಿಗಳ ಹಣ ಬಿಡುಗಡೆಗಾಗಿ ಶೇ. 40 ಕಮಿಷನ್ ಹಣಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಬೆಳಗಾವಿಯ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಂತಹ ಭಾರೀ ಹಗರಣಗಳ ಮೇಲೆ ತಿಪ್ಪೆ ಸಾರಿಸಿ ಮತ್ತೆ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಬಿಜೆಪಿ ತನ್ನ ಹಳೆಯ ಅಸ್ತ್ರವಾದ ಕೋಮುವಾದವನ್ನು ಬಳಸ ತೊಡಗಿದೆ. ದೇವರು ಮತ್ತು ಧರ್ಮಗಳನ್ನು ದುರುಪಯೋಗ ಮಾಡಿಕೊಂಡು ಜನರಲ್ಲಿ ವೈಷಮ್ಯದ ವಿಷಬೀಜವನ್ನು ಬಿತ್ತಿ ಜನಾಂಗ ದ್ವೇಷದ ದಳ್ಳುರಿಯಲ್ಲಿ ವೋಟಿನ ಬೆಳೆ ತೆಗೆಯಲು ಹೊರಟಿದೆ. ತಾನೂ ತಿನ್ನುವುದಿಲ್ಲ, ಬೇರೆಯವರನ್ನೂ ತಿನ್ನಲು ಬಿಡುವುದಿಲ್ಲ ಎಂದು ಮಹಾ ಸಂಪನ್ನನಂತೆ ಬಿಂಬಿಸಿಕೊಂಡ ಮೋದಿಯವರು ಕರ್ನಾಟಕದ ತಮ್ಮ ಪಕ್ಷದ ಸರಕಾರದ ಹಗರಣಗಳ ಬಗ್ಗೆ ಜಾಣ ಮೌನವನ್ನು ತಾಳಿದ್ದಾರೆ. ಇದನ್ನೆಲ್ಲ ಮುಚ್ಚಿ ಹಾಕಿ ಹದಿನೆಂಟನೇ ಶತಮಾನದ ಟಿಪ್ಪುಸುಲ್ತಾನ್ ಚರಿತ್ರೆಯನ್ನು ವಿರೂಪಗೊಳಿಸಿ ಕಲಹದ ಕಿಡಿ ಹೊತ್ತಿಸಲು ಹೊರಟಿರುವವರನ್ನು ಜನತೆ ಕ್ಷಮಿಸಲಾರರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇನ್ನಾದರೂ ಇಂತಹ ಹೊಲಸು ರಾಜಕಾರಣಕ್ಕೆ ಅವಕಾಶ ನೀಡದೆ ತಮ್ಮ ಹೆಸರು ಮತ್ತು ವರ್ಚಸ್ಸನ್ನು ಉಳಿಸಿಕೊಳ್ಳಲಿ