ಹುಸಿ ಬಾಂಬ್ ಬೆದರಿಕೆ: 15 ಗಂಟೆಗಳ ಬಳಿಕ ಗೋವ ತಲುಪಿದ ವಿಮಾನ
ಜಾಮ್‌ನಗರ, ಜ. 10: ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸೋಮವಾರ ತರ್ತು ಭೂಸ್ಪರ್ಷ ಮಾಡಿದ್ದ ಅಝೂರ್ ಏರ್ ಅಂತರ್‌ರಾಷ್ಟ್ರೀಯ ವಿಮಾನವು ಕೊನೆಗೂ ಮಂಗಳವಾರ ಅಪರಾಹ್ನ ತನ್ನ ಗಮ್ಯ ಸ್ಥಳ ಗೋವವನ್ನು ತಲುಪಿದೆ. ವಿಮಾನದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನವು 236 ಪ್ರಯಾಣಿಕರು ಮತ್ತು 8 ಸಿಬ್ಬಂದಿಯನ್ನು ಹೊತ್ತು ಮಾಸ್ಕೋದಿಂದ ಗೋವಕ್ಕೆ ಪ್ರಯಾಣಿಸುತ್ತಿತ್ತು. ಬಾಂಬ್ ಬೆದರಿಕೆಯ ಬಳಿಕ, ಸೋಮವಾರ ರಾತ್ರಿ ವಿಮಾನವನ್ನು ಜಾಮ್‌ನಗರಕ್ಕೆ ತಿರುಗಿಸಲಾಗಿತ್ತು.
ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ವಿಮಾನದಿಂದ ತೆರವುಗೊಳಿಸಲಾಯಿತು. ಅವರು ರಾತ್ರಿಯನ್ನು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಕಳೆದರು.
ಭದ್ರತಾ ಸಿಬ್ಬಂದಿ ವಿಮಾನ ಮತ್ತು ಪ್ರಯಾಣಿಕರ ಚೀಲಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಆದರೆ, ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ವಿಮಾನವು, ತುರ್ತು ಭೂಸ್ಪರ್ಷ ಮಾಡಿದ 15 ಗಂಟೆಗಳಿಗೂ ಹೆಚ್ಚಿನ ಅವಧಿಯ ಬಳಿಕ, ಮಂಗಳವಾರ ಅಪರಾಹ್ನ 1:20ಕ್ಕೆ ಜಾಮ್‌ನಗರ ವಿಮಾನ ನಿಲ್ದಾಣದಿಂದ ಹೊರಟಿತು. ಅದು ಅಪರಾಹ್ನ 2:39ಕ್ಕೆ ಗೋವದ ದಾಬೊಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.