ನೀತಿ ನಿರೂಪಣೆಗೆ ಬೇಕಿರುವ ಅಂಕಿಅಂಶಗಳು ಮತ್ತು ರಾಜಕೀಯ ಹಸ್ತಕ್ಷೇಪ
'ಇಂಡಿಯಾ ಸ್ಪೆಂಡ್' ವಿಶ್ಲೇಷಿಸಿದ 20 ಸರಕಾರಿ ಡೇಟಾಸೆಟ್ಗಳಲ್ಲಿ 12ರ ಡೇಟಾ ಸಂಗ್ರಹಣೆ ಅಥವಾ ಅದರ ಸಾರ್ವಜನಿಕ ಬಿಡುಗಡೆ ವಿಳಂಬವಾಗಿದೆ. ಇತರ ಡೇಟಾ ಸೆಟ್ಗಳು ಮತ್ತು ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವ ಹಲವಾರು ನಿರ್ಣಾಯಕ ಅಂಕಿಅಂಶವು ಎರಡು ವರ್ಷಗಳಷ್ಟು ಹಳೆಯದಾಗಿದೆ.
ಡೇಟಾ ಬಿಡುಗಡೆಗಳಲ್ಲಿನ ರಾಜಕೀಯ ಮಧ್ಯಪ್ರವೇಶ ಮತ್ತು ದುರ್ಬಲ ಡೇಟಾ ಮೂಲಸೌಕರ್ಯ ಈ ವಿಳಂಬಗಳಿಗೆ ಪ್ರಾಥಮಿಕ ಕಾರಣಗಳಾಗಿವೆ ಎನ್ನುತ್ತಾರೆ ತಜ್ಞರು. ಭಾರತದಲ್ಲಿ ಡೇಟಾವನ್ನು ಯಾವಾಗಲೂ ಸ್ವಲ್ಪವಿಳಂಬವಾಗಿಯೇ ಬಿಡುಗಡೆ ಮಾಡಲಾಗುತ್ತದೆ, ಅದರಲ್ಲಿ ಹೆಚ್ಚಿನವು ಒಂದು ವರ್ಷದಷ್ಟು ವಿಳಂಬವಾಗುವುದಿದೆ. ಉದಾಹರಣೆಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಪರಾಧ ಅಂಕಿಅಂಶಗಳು, ಇತ್ತೀಚಿನ ವರ್ಷಗಳಲ್ಲಿ, ಒಂದು ವರ್ಷದವರೆಗಿನ ವಿಳಂಬದೊಂದಿಗೆ ಬಿಡುಗಡೆಯಾಗುತ್ತಿವೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಂತಹ ಆರೋಗ್ಯ ಮತ್ತು ಪೌಷ್ಟಿಕಾಂಶದ ಡೇಟಾವನ್ನು ಮೂರು ವರ್ಷಗಳ ಕಾಲಾವಧಿಯಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ತಿಂಗಳ ನಂತರ ಬಿಡುಗಡೆ ಮಾಡಲಾಗುತ್ತದೆ.
ಮುಂಬೈ ಮೂಲದ ಮಾನವ ಹಕ್ಕುಗಳ ಆಂದೋಲನದ ಸಿಟಿಜನ್ಸ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್ನ ಈ ವರದಿಯ ಪ್ರಕಾರ, ಭಾರತವು ಒಂದು ವರ್ಷದ ವಿಳಂಬದೊಂದಿಗೆ ಡೇಟಾವನ್ನು ಹೊರಹಾಕಲು ಒಂದು ಕಾರಣವೆಂದರೆ ನಮೂದುಗಳ ಸಂಪೂರ್ಣ ಸಂಖ್ಯೆ ಮತ್ತು ರಾಷ್ಟ್ರವ್ಯಾಪಿ ಡೇಟಾ ಸಂಗ್ರಹಣೆಗೆ ಹೆಚ್ಚು ಸಮಯ ತೆಗೆದುಕೊಳ್ಳುವುದು. ದೊಡ್ಡ ದತ್ತಾಂಶದ ಸಂಗ್ರಹಣೆ ಮತ್ತು ವಿಶ್ಲೇಷಣೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಭಾರತವು ಸಾಕಷ್ಟು ದತ್ತಾಂಶ ನಿರ್ವಹಣೆ ಮತ್ತು ದೊಡ್ಡ ದತ್ತಾಂಶದ ವಿಶ್ಲೇಷಣಾ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಭಿಮತ.
ಅನೇಕ ಡೇಟಾ ಸೆಟ್ಗಳು ಒಂದು ವರ್ಷಕ್ಕೂ ಹೆಚ್ಚು ವಿಳಂಬವಾಗುತ್ತಿವೆ. ಉದಾಹರಣೆಗೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಸಿದ್ಧಪಡಿಸಿದ 'ಮೂಲ ರಸ್ತೆ ಅಂಕಿಅಂಶಗಳ' ವರದಿ ಕೊನೆಯದಾಗಿ ಬಿಡುಗಡೆಯಾಗಿರುವುದು 2018-19ರಲ್ಲಿ.
ಜನಗಣತಿ ಅಂಕಿಅಂಶವು ಮತದಾನಕ್ಕೆ, ಹಣಕಾಸು ಆಯೋಗದ ವರ್ಗಾವಣೆಗೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮುಖ್ಯ. ಏಕೆಂದರೆ ಇವುಗಳನ್ನು ಜನಸಂಖ್ಯೆ ಆಧಾರಿತ ಮಾನದಂಡಗಳ ಮೇಲೆ ನಿರ್ಧರಿಸಲಾಗುತ್ತದೆ. ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ನಿರ್ಧರಿಸುವುದರಿಂದ ಹಿಡಿದು ಮತದಾನ ಕ್ಷೇತ್ರಗಳವರೆಗೆ, ಸಾರ್ವಜನಿಕ ನೀತಿಗೆ ಈ ಡೇಟಾ ನಿರ್ಣಾಯಕ. ವಿಶ್ಲೇಷಿಸಲಾದ 20 ಡೇಟಾ ಸೆಟ್ಗಳಲ್ಲಿ, ಭಾರತದ ಜನಗಣತಿ, ಗೃಹಬಳಕೆಯ ಗ್ರಾಹಕ ವೆಚ್ಚ ಸಮೀಕ್ಷೆ ಮತ್ತು ಬಡತನದ ಅಂದಾಜುಗಳು ಅತ್ಯಂತ ನಿರ್ಣಾಯಕ. ಡೇಟಾ ಬಿಡುಗಡೆಗಳಲ್ಲಿನ ವಿಳಂಬವು ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ನೀತಿ ಮತ್ತು ಕಲ್ಯಾಣ ಕ್ರಮಗಳನ್ನು ನಿರ್ಧರಿಸಲು ಜನಗಣತಿ ಡೇಟಾವನ್ನು ಅವಲಂಬಿಸಿರುವ ಬಳಕೆ, ಆರೋಗ್ಯ ಮತ್ತು ಉದ್ಯೋಗದ ಮೇಲಿನ ಇತರ ಸಮೀಕ್ಷೆಗಳಿಂದ ವಿಶ್ವಾಸಾರ್ಹವಲ್ಲದ ಅಂದಾಜುಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಜನಗಣತಿಯು ದಶವಾರ್ಷಿಕ ಸಮೀಕ್ಷೆಯಾಗಿದ್ದು, ಇದು ಗ್ರಾಮ ಮಟ್ಟದವರೆಗೆ, ಭಾರತದ ಜನಸಂಖ್ಯೆಯ ಇತರ ಅಂಶಗಳ ಜೊತೆಗೆ ಜನಸಂಖ್ಯೆ, ಸಾಕ್ಷರತೆ ಮತ್ತು ವಲಸೆಯನ್ನು ನಿರ್ಧರಿಸುತ್ತದೆ. ರಾಷ್ಟ್ರವ್ಯಾಪಿ ಕೋವಿಡ್ ಕಾರಣದ ಲಾಕ್ಡೌನ್ಗಳಿಂದಾಗಿ 2021ರ ಜನಗಣತಿ ವಿಳಂಬವಾಗಿದೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಬಂಧಗಳನ್ನು ತೆಗೆದುಹಾಕಿದ್ದರೂ ಸಹ, ಮುಂದಿನ ಜನಗಣತಿ ಯಾವಾಗ ಎಂಬುದು ಅಸ್ಪಷ್ಟವಾಗಿಯೇ ಇದೆ.
ಪ್ರತೀ ಐದು ವರ್ಷಗಳಿಗೊಮ್ಮೆ ಗೃಹಬಳಕೆಯ ಗ್ರಾಹಕ ವೆಚ್ಚ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಅದು ಗೃಹಬಳಕೆಯ ಮಾದರಿಗಳು ಮತ್ತು ಮಟ್ಟಗಳ ಒಳನೋಟಗಳನ್ನು ಒದಗಿಸುತ್ತದೆ. ಈ ಸಮೀಕ್ಷೆಗಳು ಯೋಜನೆ ಮತ್ತು ನೀತಿ ನಿರೂಪಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೆರವಾಗುತ್ತವೆ. ಇಂತಹ ಇತ್ತೀಚಿನ ಸಮೀಕ್ಷೆಯ ಮಾಹಿತಿಯು 2011-12ರಿಂದ ಲಭ್ಯವಿದೆ. 2017-18ರ ಸಮೀಕ್ಷೆಯ ದತ್ತಾಂಶವನ್ನು ಬಿಡುಗಡೆ ಮಾಡದಿರಲು ಸರಕಾರ ನಿರ್ಧರಿಸಿದೆ, ಡೇಟಾ ಗುಣಮಟ್ಟದಲ್ಲಿ ಸಮಸ್ಯೆಗಳಿವೆ ಎಂಬ ಕಾರಣವನ್ನು ಕೊಟ್ಟಿದೆ.
ಇನ್ನು ಬಡತನದ ಅಂದಾಜುಗಳು. ಹಿಂದಿನ ಯೋಜನಾ ಆಯೋಗವು 1973-74ರಿಂದ ಪ್ರತೀ ಐದು-ಆರು ವರ್ಷಗಳಿಗೊಮ್ಮೆ ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆಯ ಡೇಟಾವನ್ನು ಬಿಡುಗಡೆ ಮಾಡುತ್ತಿತ್ತು. ಬಡತನ ರೇಖೆಯನ್ನು ಆಧರಿಸಿದ 2011-12ರ ಕೊನೆಯ ಅಂದಾಜುಗಳನ್ನು ಜುಲೈ 2013ರಲ್ಲಿ ಬಿಡುಗಡೆ ಮಾಡಲಾಯಿತು. ಇದರ ನಂತರ, ಭಾರತದಲ್ಲಿ ಯಾವುದೇ ಅಧಿಕೃತ ಬಡತನದ ಅಂದಾಜುಗಳನ್ನು ಬಿಡುಗಡೆ ಮಾಡಲಾಗಿಲ್ಲ ಎಂದಿದೆ, ಗ್ರಾಮೀಣಾಭಿವೃದ್ಧಿ ಸಚಿವಾಲಯದ 2020ರ ವರದಿ.
ದತ್ತಾಂಶ ಬಿಡುಗಡೆಯ ವಿಳಂಬಕ್ಕೆ ಸರಕಾರದ ರಾಜಕೀಯ ಮಧ್ಯಪ್ರವೇಶವೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ತಜ್ಞರು ಭಾವಿಸುತ್ತಾರೆ. ಡೇಟಾವು ಕಾಣಿಸುವ ವಾಸ್ತವವು ನೀತಿ ನಿರೂಪಣೆಯನ್ನು ಸಂಕೀರ್ಣಗೊಳಿಸುತ್ತದೆ. ವಿಶೇಷವಾಗಿ ಕಠಿಣ ಮತ್ತು ಅವಾಸ್ತವಿಕ ಭರವಸೆಗಳೊಂದಿಗೆ ಅಧಿಕಾರಕ್ಕೆ ಬರುವ ಪಕ್ಷಕ್ಕೆ ಇದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚು ಕಷ್ಟಕರವಾಗುತ್ತದೆ. ಡೇಟಾ ಬಿಡುಗಡೆಯ ವಿಳಂಬ ಅಥವಾ ತಿದ್ದುವ ಒತ್ತಡವನ್ನು ಸರಕಾರ ಎದುರಿಸುವ ಸಾಧ್ಯತೆಯಿರುತ್ತದೆ ಎಂಬುದು ಪರಿಣಿತರ ವಿವರಣೆ.
ಸಮೀಕ್ಷೆಗಳು ಮತ್ತು ಅವುಗಳ ಫಲಿತಾಂಶಗಳಲ್ಲಿನ ರಾಜಕೀಯ ಹಸ್ತಕ್ಷೇಪ ಹೊಸದಲ್ಲ ಎನ್ನುವುದು ಪರಿಣಿತರ ಅಭಿಪ್ರಾಯ. ಸರಕಾರಗಳು ಇದನ್ನು ಮಾಡುತ್ತಲೇ ಬಂದಿವೆಯಾದರೂ, ಕಳೆದ ದಶಕದಲ್ಲಿ ಹಸ್ತಕ್ಷೇಪದ ಪ್ರಮಾಣ ಮತ್ತು ಪುನರಾವರ್ತನೆ ಎಂದಿಗಿಂತ ಹೆಚ್ಚಾಗಿದೆ. ಸಾರ್ವಜನಿಕ ಪರಿಶೀಲನೆ ಮತ್ತು ರಾಜಕೀಯ ಹಸ್ತಕ್ಷೇಪವನ್ನು ಸರಕಾರದ ಅಂಕಿಅಂಶಗಳ ವ್ಯವಸ್ಥೆಯು ಆಕ್ಷೇಪಿಸಿದಾಗ ಡೇಟಾ ಬಿಡುಗಡೆಯಲ್ಲಿ ವಿಳಂಬವಾಗುತ್ತದೆ. ರಾಜಕೀಯದ ಬೆಳೆಯುತ್ತಿರುವ ಕೋಮುವಾದವು ಗುರುತಿನ ಮೇಲಿನ ದತ್ತಾಂಶದ ಬಿಡುಗಡೆ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆಂದು ಪರಿಣಿತರು ಗ್ರಹಿಸುತ್ತಾರೆ.
1970ರ ದಶಕದಿಂದ ಸರಕಾರಿ ಅಂಕಿಅಂಶಗಳ ಏಜೆನ್ಸಿಗಳ ಮೂಲಸೌಕರ್ಯಗಳು ದುರ್ಬಲ ಸ್ಥಿತಿಯಲ್ಲಿವೆ. 1970ರ ದಶಕದಲ್ಲಿ ಪ್ರಾರಂಭವಾದ ಅಧಿಕಾರಶಾಹಿಯ ನಿರ್ವಹಣೆ ಮತ್ತು ರಾಜಕೀಕರಣವು 1990ರ ದಶಕದಲ್ಲಿ ಇನ್ನೂ ಹೆಚ್ಚಿತು. ಇದು ರಾಜಕೀಯವಾಗಿ ಪ್ರಮುಖವಲ್ಲದ ಅಂಕಿಅಂಶಗಳಂತಹ ಇಲಾಖೆಗಳಿಗೆ ಬಜೆಟ್ ಕಡಿತಕ್ಕೆ ಕಾರಣವಾಯಿತು, ಅಂದರೆ ನೇಮಕಾತಿ ಸ್ಥಗಿತಗೊಳಿಸುವಿಕೆ ಮತ್ತು ಉದಾರೀಕರಣದ ನಂತರ ರಾಜಕೀಯ ಆರ್ಥಿಕತೆಯ ಬದಲಾವಣೆಗಳನ್ನು ನಿಭಾಯಿಸಲು ಅಗತ್ಯ ಸುಧಾರಣೆಗಳಲ್ಲಿ ವಿಳಂಬವಾಯಿತು ಎಂಬುದನ್ನು ಪರಿಣಿತರು ಗುರುತಿಸುತ್ತಾರೆ.
ಸಾರ್ವಜನಿಕ ಡೊಮೇನ್ನಿಂದಲೂ ಡೇಟಾವನ್ನು ತೆಗೆದುಹಾಕುವ ವರದಿಗಳಿವೆ. ಎಷ್ಟೋ ಸಲ ಮಾಹಿತಿ ಸಂಗ್ರಹಿಸಿದರೂ ಬಿಡುಗಡೆ ಮಾಡದ ನಿದರ್ಶನಗಳಿವೆ. ಉದಾಹರಣೆಗೆ, ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯನ್ನು ಬಿಡುಗಡೆ ಮಾಡುವ ಯಾವುದೇ ಪ್ರಸ್ತಾವವಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಈಗಾಗಲೇ ಹೇಳಿದಂತೆ, ಅದಕ್ಕೆ ಸರಕಾರ ಕೊಟ್ಟಿರುವ ಕಾರಣ ಡೇಟಾ ಗುಣಮಟ್ಟದ ಸಮಸ್ಯೆಗಳು ಎಂದು. ಇಚ್ಛಾಶಕ್ತಿಯಿಲ್ಲದಿರುವಾಗ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ, ಅಗತ್ಯಕ್ಕೆ ತಕ್ಕಂತೆ.
(ಕೃಪೆ:IndiaSpend.com)