varthabharthi


ಅನುಗಾಲ

ನಿರ್ಮಾಣ-ನಿರ್ನಾಮಗಳ ನಡುವೆ

ವಾರ್ತಾ ಭಾರತಿ : 12 Jan, 2023
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈ ದೇಶದಲ್ಲಿ ನಿರ್ಮಾಣ ಮತ್ತು ನಿರ್ನಾಮದ ಕಾಯಕ ಅತ್ಯಂತ ಸರಳ. ಆರೋಪಕ್ಕೆ ಗುರಿಯಾದರೂ ಆರೋಪಿಯ ಮನೆ ನೆಲಸಮ; ಗುಂಪು ಘರ್ಷಣೆಯಾದರೂ ಅವರವರ ಮನೆಗಳು ನೆಲಸಮ: ಭೂಮಿ ಬಿರುಕು ಬಿಟ್ಟರೂ ಕಟ್ಟಡಗಳು ನೆಲಸಮ. ನಿರ್ಮಾಣಗೊಳ್ಳುತ್ತಿರುವುದು ಅಯೋಧ್ಯೆಯ ಶ್ರೀರಾಮಮಂದಿರ ಮಾತ್ರ. ಇದಕ್ಕೆ ಮುಹೂರ್ತ ನಿಗದಿಯಾಗಿದೆ. ಏಕೆಂದರೆ ಅನಂತರ ಚುನಾವಣೆ ನಡೆಯಬೇಕಲ್ಲ! ಅದರ ಫಲ-ಪ್ರಸಾದ ಸಿಗಬೇಕಲ್ಲ!


ಅಯೋಧ್ಯೆ ಈಗ ಮುಗಿದ ಅಧ್ಯಾಯ. ಶ್ರೀರಾಮಮಂದಿರಕ್ಕಾಗಿ ಹೂಡಿದ ಚಳವಳಿ ತನ್ನ ಉದ್ದೇಶವನ್ನು ಪೂರೈಸಿ ಭಾರತೀಯ ಜನತಾ ಪಾರ್ಟಿಯು ಕೇಂದ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಗದ್ದುಗೆಯನ್ನೇರಿದ ಮೇಲೆ ಅದರ ಕಾವು ತಣಿದಿದೆ. ಈಗ ಏನಿದ್ದರೂ ಹೊಂದಿದ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕಸರತ್ತು. ಕಳೆದ ಕೆಲವು ಸಮಯಗಳಿಂದ ಈ ದೇಶದಲ್ಲಿ ಹೊಸದೊಂದು ತಲೆನೋವು ತಲೆದೋರಿದೆ. ನಿರ್ಮಾಣವಾಗಿರುವ, ನಿರ್ಮಾಣ ಹಂತದಲ್ಲಿರುವ ಸೇತುವೆಗಳು, ರಸ್ತೆಗಳು, ಕಟ್ಟಡಗಳು ಬಿರುಕುಬಿಡುತ್ತಿವೆ. ಶಿಥಿಲಗೊಳ್ಳುತ್ತಿವೆ, ಕುಸಿಯುತ್ತಿವೆ. 'ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್' ಎಂಬ ಕವಿತೆಯ ಸಾಲುಗಳು ಭಾರತದಲ್ಲಿ ವಾಸ್ತವವಾಗುತ್ತಿವೆ. ಈಚೆಗೆ ಗುಜರಾತಿನ ಮೊರ್ಬಿಯಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿದ ಒಂದು ಸಮುದ್ರಸೇತುವೆ ಕಡಿದು ಬಿದ್ದು ಸುಮಾರು ನೂರಾರು ಜನರು ಮತ್ತು ಈ ವಾರವಷ್ಟೇ ಬೆಂಗಳೂರಿನಲ್ಲಿ ಮೆಟ್ರೊ ಕಂಬವೊಂದು ಬಿದ್ದು ತಾಯಿ-ಮಗಳು ಕೊಲ್ಲಲ್ಪಟ್ಟರು. ಇನ್ನುಳಿದ ದುರ್ಘಟನೆಗಳು ದೇಶದೆಲ್ಲೆಡೆಯಿಂದ ವರದಿಯಾಗುತ್ತಿವೆ. ಆದರೆ ಜನರು ಇವ್ಯಾವುದೂ ನಮಗೆ ಸಂಬಂಧಿಸಿದ್ದಲ್ಲವೆಂದು ಮತ್ತು ಇದು ಆಡಳಿತದ ವೈಫಲ್ಯವಲ್ಲವೆಂದು, ತಮ್ಮ ಪಾಡಿಗೆ ತಾವು ಕೊಂಬು-ಕಹಳೆಯನ್ನೂದುತ್ತ ರಾಜನಿಷ್ಠರಾಗಿದ್ದಾರೆ. ನಮ್ಮ ರಸ್ತೆಗಳ ಗುಂಡಿಗಳಲ್ಲಿ ಸಿಕ್ಕಿ ವಾಹನ ಸವಾರರು ಸಾಯುವುದು ಈಗ ಸಹಜಸಾವುಗಳಂತೆ ವರದಿಯಾಗುತ್ತಿವೆ.

ಮಳೆಗಾಲ ಅಂತಲ್ಲ, ಮಳೆ ಬಂದರೆ ಸಾಕು, ರಸ್ತೆಗಳೆಲ್ಲ ಜನ/ವಾಹನ-ಸಾಗರವಾಗುತ್ತಿವೆ. ಎಡ-ಬಲವೆನ್ನದೆ ರಸ್ತೆಗಳಲ್ಲಿ ಎಲ್ಲರೂ ಹೇಗಾದರೂ ಸಾಗುವ ಅನಿವಾರ್ಯದ ಕುರುಕ್ಷೇತ್ರದಲ್ಲಿ ಯಾರು ಉಳಿಯುವರೋ, ಯಾರು ಅಳಿಯುವರೋ, ಗೊತ್ತಿಲ್ಲ. ಮಾಧ್ಯಮಗಳಿಗಂತೂ ಸುಗ್ರಾಸ. ಇಂತಹ ದುಸ್ಥಿತಿ, ದುರವಸ್ಥೆಗಳಿಗೆ ಯಾರು ಕಾರಣ? ಆಳುವವರು ಅಧಿಕಾರಿಗಳನ್ನು, ಅಧಿಕಾರಿಗಳು ಗುತ್ತಿಗೆದಾರರನ್ನು, ಗುತ್ತಿಗೆದಾರರು ಆಡಳಿತದ ಭ್ರಷ್ಟತೆಯನ್ನು ದೂಷಿಸುತ್ತಾರೆ. ಅಲ್ಲಿಗೆ ವಿಷ/ವಿಷುವ ವೃತ್ತ ಪೂರ್ಣವಾಗುತ್ತೆ. ಇವುಗಳಿಗೆ ಬಲಿಯಾಗುವುದು ಮಾತ್ರ ಈ ಎಲ್ಲ ವ್ಯವಸ್ಥೆಯ ಸಾಮಾನ್ಯ ಬಳಕೆದಾರರು. ಆದರೆ ಅವರು ತಮ್ಮ ಕರ್ಮವನ್ನಲ್ಲದೆ ಯಾರನ್ನೂ ದೂಷಿಸುವಂತಿಲ್ಲ. ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳನ್ನು, ಈ ಜನ ಪ್ರತಿನಿಧಿಗಳು ರೂಪಿಸಿದ ಸರಕಾರವನ್ನು, ಸರಕಾರ ನೇಮಿಸಿದ ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ದೂಷಿಸಿದರೆ ಅದು ನೇರ ಆಕಾಶವನ್ನು ನೋಡಿ ಉಗುಳಿದ ಹಾಗೆ. ಭೂಮಿಯ ಗುರುತ್ವಾಕರ್ಷಣ ಶಕ್ತಿ ಎಷ್ಟಿದೆಯೆಂದರೆ ಈ ಉಗುಳು ನೇರ ನಿಮ್ಮ ಮುಖದ ಮೇಲೆಯೇ ಬಿಳುತ್ತದೆ. ಅಲ್ಲಿಗೂ ಒಂದು ಪೂರ್ಣತೆಯ ಭಾಗ್ಯ. ಏಕೆಂದರೆ ಈ ವ್ಯವಸ್ಥೆಯನ್ನು ಪ್ರಜಾಪ್ರಭುತ್ವವೆಂದು ಕರೆದವರು ಅದರೊಂದಿಗೆ ಮಸಾಲೆಯಂತೆ ಚುನಾವಣೆಗಳನ್ನು ಏರ್ಪಡಿಸಿದರು. ಅಲ್ಲಿ ಹಣದ ಪ್ರಾಬಲ್ಯವನ್ನು ಹೊಂದಿಸಿದರು. ಇದನ್ನು ಎಲ್ಲರೂ ಬಳಸಬಹುದು. ಬಳಸಿದವರು ಬದುಕನ್ನು ಹಳಸಿಕೊಂಡೂ ಅದನ್ನೇ ಆಹಾರವೆಂದು ಸ್ವೀಕರಿಸಿದರು.

ರಸ್ತೆ ಅಪಘಾತಗಳಲ್ಲಿ, ಚಾಲಕ, ಮಾಲಕ, ವಿಮಾ ಕಂಪೆನಿಗಳನ್ನು ದೋಷಿಗಳಾಗಿಸುತ್ತೇವೆ. ಜೋರಾಗಿ ಮಳೆ ಬಂದು ನೀರು ತುಂಬಿದರೆ ಅದು ದೇವರ ಕೆಲಸವೆಂದು ಸುಮ್ಮನಾಗಬಹುದು. ಆದರೆ ರಸ್ತೆಗಳ ಸ್ವರೂಪ ಅಥವಾ ಕಾಮಗಾರಿಯೇ ಸರಿಯಿಲ್ಲದಿದ್ದರೆ ಅದರ ನಿರ್ಮಾತೃಗಳು ಹೊಣೆ ಹೊರಬೇಕಲ್ಲವೇ? ಈಗ ನಮ್ಮಲ್ಲಿರುವ ರಸ್ತೆಗಳಾಗಲೀ, ಸೇತುವೆಗಳಾಗಲೀ ಪರಿಣತರು ನಿರ್ಮಿಸಿದಂತಿಲ್ಲ. ಪರಿಣಾಮವಾಗಿ ಪ್ರಜೆಗಳು ಅನುಭವಿಸಬೇಕು. ಮತದಾರರು ಯಾಕೋ ಇದು ತಮಗೆ ಸಂಬಂಧಿಸಿದ್ದಲ್ಲವೆಂದು ತಿಳಿದಂತೆ ಕಾಣುತ್ತದೆ. ಆದ್ದರಿಂದ ಆಡಳಿತವು ನಿರಾತಂಕವಾಗಬಹುದು.

ಮೊರ್ಬಿಯ ದುರಂತ ಆನಂತರ ನಡೆದ ಚುನಾವಣೆಯ ಮೇಲೆ ಏನೂ ಪರಿಣಾಮ ಬೀರಿದಂತಿಲ್ಲ. ರಾಜ್ಯದೆಲ್ಲೆಡೆ ಬೇಕಾಗಿಲ್ಲ, ಆ ಕ್ಷೇತ್ರದಲ್ಲೇ ಅದು ಯಾವ ಸಂಚಲನವನ್ನೂ, ಪಶ್ಚಾತ್ತಾಪವನ್ನೂ ಮೂಡಿಸಿಲ್ಲ. ಬದಲಾಗಿ ಕರ್ಮಸಿದ್ಧಾಂತಕ್ಕೆ ಜಯವಾಯಿತು. ಉತ್ತರಾಖಂಡದ ಜೋಶಿಮಠದಲ್ಲಿ ನೆಲದಡಿ ನೀರು ಹರಿದೋ ಇನ್ನೇನೋ ಸಂಭವಿಸಿ ಸಾಲುಸಾಲು ಮನೆಗಳು ಮತ್ತಿತರ ಕಟ್ಟಡಗಳು ಬಿರುಕುಬಿಟ್ಟವು. ಬದರಿನಾಥನ ಚಳಿಗಾಲದ ಆಸನವೆನ್ನಿಸಿದ ಈ 'ಕ್ಷೇತ್ರ' ನೆಲದೊಳಗೆ ಅದೃಶ್ಯವಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಬಳಿಯ ಗ್ರಾಮಗಳೂ ಈ ವ್ಯತ್ಯಸ್ತತೆಗೆ ಬಲಿಯಾಗಿವೆ. ನೆರೆಯ ಉತ್ತರಪ್ರದೇಶದಲ್ಲೂ ಭೂಮಿ ಬಿರುಕು ಬಿಡುತ್ತಿದೆಯಂತೆ. ಇಲ್ಲಿ ರಾಷ್ಟ್ರೀಯ ಶಾಖೋತ್ಪಾದನಾ ಯೋಜನೆಯ ಕೈಗಾರಿಕೆಗಳು ಬರುತ್ತಿದ್ದು ಆ ಬಗ್ಗೆ ಪರಿಣತರು ಎಚ್ಚರಿಕೆ ನೀಡಿದ್ದರಂತೆ. ಆದರೆ ಯಾವ ಪರಿಣತರ ಮಾತೂ ನಡೆಯಲಿಲ್ಲ. ಆಳುವ ಸೇವಾಧುರಂಧರರು ಅವನ್ನೆಲ್ಲ ಗಣಿಸದೆ ಭಗವಂತನ ದಿವ್ಯ ಪಾದಾರವಿಂದವನ್ನೇ ನಂಬಿ ತಮ್ಮ ಶೇಕಡಾವಾರು ಯೋಜನೆಗಳನ್ನು ಮುಂದುವರಿಸಿದರೆಂದು ವರದಿಯಾಗಿದೆ. ಈಗ ಅಲ್ಲಿನ ಜನರನ್ನು ಬೇರೆಡೆ ಒಯ್ಯುವ ಮತ್ತು ಹಾನಿಗೊಳಗಾದ ಕಟ್ಟಡಗಳನ್ನು ನೆಲಸಮ ಮಾಡುವ ಯೋಜನೆ ಆರಂಭವಾಗಿದೆ.

ಕೆಲವು ನಿವಾಸಿಗಳು ಮತ್ತು ಹೊಟೇಲುಗಳು ಈ ಕುರಿತು ಪ್ರತಿರೋಧ ಒಡ್ಡಿವೆಯಾದರೂ ಕೊನೆಗೂ ಎಲ್ಲರು ವಲಸೆ ಹೋಗಲೇಬೇಕಾದೀತು; ಎಲ್ಲ ಕಟ್ಟಡಗಳೂ ಧರಾಶಾಯಿಯಾಗಬೇಕಾದೀತು. ಕರಾವಳಿಯ ಯಕ್ಷಗಾನ ತಾಳಮದ್ದಳೆ ಪ್ರಿಯರಿಗೆ ಮಹಾಭಾರತದ ಪ್ರಕ್ಷಿಪ್ತ ಕಥೆಯೊಂದು 'ಶರಸೇತು' ಎಂಬ ಹೆಸರಿನಲ್ಲಿ ಬಹು ಜನಪ್ರಿಯವಾಗಿದೆ. ಅರ್ಜುನನ ತೀರ್ಥಯಾತ್ರೆಯ ಸಂದರ್ಭದಲ್ಲಿ ರಾಮೇಶ್ವರದ ಕಡಲ ಸಂಧಿಯಲ್ಲಿ ಅವನಿಗೆ ರಾಮಧ್ಯಾನದಲ್ಲಿ ಮಗ್ನನಾಗಿದ್ದ, ಚಿರಂಜೀವಿಯಾದರೂ ಈಗ ಬಡಕಲಾಗಿದ್ದ, ಹನುಮ ಆಕಸ್ಮಿಕವಾಗಿ ಭೇಟಿಯಾಗುತ್ತಾನೆ. ತ್ರೇತಾಯುಗದ ಹನುಮ ಈಗಲೂ ಇದ್ದಾನೆಂದು ಅರ್ಜುನ ನಂಬುವುದಿಲ್ಲ. ದೊಡ್ಡವರ ಹೆಸರು ಹೇಳಿಕೊಂಡು ಬದುಕುವ ಬಡಕಲು ಮಂಗ ಎಂದೇ ಜರಿಯುತ್ತಾನೆ. ಮಾತು ಬೆಳೆದು ಅರ್ಜುನ ತಾನು ಸಮುದ್ರಕ್ಕೆ ಶರಸೇತುವೆ ಕಟ್ಟುವುದಾಗಿ ಪಣತೊಟ್ಟರೆ ಹನುಮ ಅದನ್ನು ತನ್ನ ಪದಾಘಾತದಿಂದ ಕುಟ್ಟಿ ಮುರಿಯುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅರ್ಜುನ ಮೂರು ಬಾರಿ ಸೇತುವೆ ಕಟ್ಟುತ್ತಾನೆ; ಹನುಮ ಅದನ್ನು ಮುರಿಯುತ್ತಾನೆ.

ಇದರಿಂದ ಅವಮಾನಿತನಾದ ಅರ್ಜುನ ಅಗ್ನಿಪ್ರವೇಶ ಮಾಡಲುದ್ಯುಕ್ತನಾಗುತ್ತಾನೆ. ಆಗ 'ಮಮ ಪ್ರಾಣಾಹಿ ಪಾಂಡವ'ನಾದ ಕೃಷ್ಣನು ಅರ್ಜುನನ್ನು ಕಳೆದುಕೊಳ್ಳಲು ಸಿದ್ಧನಿಲ್ಲದ್ದರಿಂದ ಮುದಿ ಬ್ರಾಹ್ಮಣನಾಗಿ ಬಂದು ಹೀಗೆ ಮುರಿದಿದ್ದಕ್ಕೆ ಸಾಕ್ಷಿಯಿಲ್ಲದ್ದರಿಂದ ಮತ್ತೊಮ್ಮೆ ಪ್ರತ್ಯಕ್ಷೀಕರಿಸಿ ಪ್ರಮಾಣಿಸುವುದು ಒಳ್ಳೆಯದೆಂಬ ಮಧ್ಯಸ್ಥಿಕೆಯನ್ನು ಮಾಡುತ್ತಾನೆ. ಈ ಬಾರಿ ಸೇತುವೆ ಹನುಮನ ಪಾದದ ಭಾರಕ್ಕೂ ಮುರಿಯುವುದಿಲ್ಲ. ಇದರಿಂದ ನೊಂದ ಹನುಮನಿಗೆ ಆ ಬ್ರಾಹ್ಮಣ ಕೃಷ್ಣನೇ ಶ್ರೀರಾಮನಾಗಿ ಬಂದು ''ಇದು ದ್ವಾಪರ ಯುಗ, ಇಲ್ಲಿ ಅರ್ಜುನನೇ ಪ್ರಮುಖ, ಆದ್ದರಿಂದ ಅವನನ್ನು ಉಳಿಸಿಕೊಳ್ಳಬೇಕಾಯಿತು'' ಎಂದೆಲ್ಲ ಸಬೂಬು ಹೇಳಿ ತಾನೇ ಕೂರ್ಮನಾಗಿ ಸೇತುವೆಯ ಅಡಿಯಿಂದ ಅದನ್ನು ಶಕ್ತಗೊಳಿಸಿದ್ದಾಗಿ ವಿವರಿಸಿ ಅವರಿಬ್ಬರಲ್ಲಿ ಸಂಧಿ ಮೂಡಿಸಿ ಹನುಮನು ಅರ್ಜುನನ ರಥದ ಧ್ವಜದಲ್ಲಿ ರಾರಾಜಿಸುವಂತೆ ಮಾಡಿ ಮಂಗಳ ಹಾಡುವಲ್ಲಿಗೆ ಪ್ರಸಂಗವು ಮುಗಿಯುತ್ತದೆ. ಇದು ಬಹಳ ಆಕರ್ಷಕ ಕಥೆ. ಇಂತಹ ಕಥೆಗಳು ಭಾರತೀಯ ಪುರಾಣಗಳಲ್ಲಿ ಅಲ್ಲಲ್ಲಿ ಬರುತ್ತವೆ. ಇಲ್ಲೆಲ್ಲ ದೇವರು ಹೀಗೇಕೆ ಮಾಡುತ್ತಾನೆಂಬ ಪ್ರಶ್ನೆ ಪ್ರಜ್ಞಾವಂತ ಆಸ್ತಿಕರಿಗೆ ಉದ್ಭವಿಸಿದರೆ ತಪ್ಪಿಲ್ಲ. ರಾಮಾಯಣದ ವಾಲಿವಧೆ, ಮಹಾಭಾರತದ ಪಾಶುಪತ ಪ್ರಸಂಗ ಮುಂತಾದವು ಕೆಲವು ಉದಾಹರಣೆಗಳು. ಸೇತುವೆ ನಿರ್ಮಾಣವೇ ಆದರೂ ರಾಮಾಯಣದಲ್ಲೂ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುವ ಕಥೆಯಿದೆ. ಇವೆಲ್ಲ ಯಾಕೆ ರಚನೆಯಾಗಿವೆಯೆಂದರೆ ಪ್ರಾಯಃ ದೇರಾಜೆ ಸೀತಾರಾಮಯ್ಯನವರು ಲಘುವಾಗಿ ಹೇಳಿದಂತೆ ''ರಾಮಾಯಣ, ಮಹಾಭಾರತಗಳು ಯಕ್ಷಗಾನ ಪ್ರಸಂಗಗಳಿಗಾಗಿ ರಚನೆಯಾಗಿವೆ!'' (ಡಿವಿಜಿಯವರ 'ಮಂಕುತಿಮ್ಮನ ಕಗ್ಗ'ವು ಹಲವು ಉಪನ್ಯಾಸಕರಿಗೆ, ಸಂಪಾದಕರಿಗೆ, ಲೇಖಕರಿಗೆ ಕಟ್ಟಿಕೊಟ್ಟ ಬುತ್ತಿಯಂತಿರುವುದನ್ನು ನೆನಪಿಸಬಹುದು!)

ಮುಖ್ಯವಾಗಿ ಶರಸೇತು ಬಂಧದ ಕತೆಯು ಆಧುನಿಕ ಕಾಲಕ್ಕೆ ಹೊಂದುವಂತಿದೆ. ರಾಮಾಯಣದ ಸೇತುವೆಯು ಮುರಿದ ಐತಿಹ್ಯವನ್ನು ಹೊಂದಿಲ್ಲ. ಅದು ಇದೆಯೆಂದು ನಂಬುವ ಜನರು ಕಡಿಮೆ. ಹೀಗೆ ನಿರ್ಮಾಣಗೊಂಡು ನಿರ್ನಾಮವಾಗದ ಸೇತುವೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ವರೆಗೂ ಹೋಗುವ ಜನರು ಈಗಲೂ ಇದ್ದಾರೆಂದರೆ ಅವರೆಲ್ಲ ಹನುಮನ ಸಂತತಿಯರೇ ಆಗಿರಬೇಕು. ಈ ಕುರಿತು ನಿರ್ಮಾಣಗೊಂಡ ಸಿನೆಮಾವನ್ನು 'ಗಾಂಧಿ' ಚಿತ್ರಕ್ಕಿಂತಲೂ ಹೆಚ್ಚು ಐತಿಹಾಸಿಕವೆಂದು ನಂಬಿದವರೂ ಈ ದೇಶದಲ್ಲಿದ್ದಾರೆ. ಈಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಮಸೇತುವಿನ ಕುರಿತು ವಿಚಾರಣೆಯಾಗುತ್ತಿರುವಾಗ ಕೇಂದ್ರ ಸರಕಾರವೇ ಆ ಬಗ್ಗೆ ಯಾವುದೇ ಆಧಾರಗಳಿಲ್ಲವೆಂದು ಸ್ಪಷ್ಟೀಕರಿಸಿದರೂ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅರ್ಜಿದಾರರಿರಲಿಲ್ಲ. ಹಳೆ ಬೇರು ಹೊಸ ಚಿಗುರು ಸಮಾಜದ, ಸಂಸ್ಕೃತಿಯ ಅಭ್ಯುದಯಕ್ಕೆ ಬೇಕಾದರೂ ಒಣಗಿದ, ಸತ್ತ ಬೇರು ಮತ್ತೆ ಗರಿಕೆಯಂತೆ ಚಿಗುರುತ್ತದೆಯೆಂದು ಆಸೆಯಿಟ್ಟುಕೊಂಡರೆ ಅದು ಮೂರ್ಖತನವಾದೀತೇ ಹೊರತು ಪ್ರಜ್ಞಾವಂತಿಕೆಯಾಗಲಾರದು. ಇರಲಿ: ಇದು ನಿರ್ಮಾಣ-ನಿರ್ನಾಮದ (ಕು)ತರ್ಕವನ್ನು ಉದ್ದೇಶಿಸಿದ ಕಥೆ. ಆಟ ಮುಗಿದ ಮೇಲೆ ನಿಯಮಗಳನ್ನು ಬದಲಿಸಿದ ಚೋದ್ಯ.

ಯಾವುದೇ ವಿವಾದದಲ್ಲಿ ಮೂರನೆಯವರ ಪ್ರವೇಶವು ಹೇಗೆ ಅಸಾಧ್ಯಗಳನ್ನು ಸಾಧ್ಯಗೊಳಿಸಬಲ್ಲುದೆಂಬುದಕ್ಕೆ ಒಂದು ನಿದರ್ಶನ. ಕಟ್ಟುವುದು ಕಷ್ಟ; ಕುಟ್ಟುವುದು, ಕೆಡಹುವುದು ಸುಲಭ! ಕುಂಬಾರಗೆ ನಿಮಿಷ; ದೊಣ್ಣೆಗೆ ನಿಮಿಷ! ಕೆಲವು ಬಾರಿ ಕಥೆಯ ಒಳಹೊಕ್ಕು ಅದನ್ನು ಹೊರತರುವವರೂ ಇದ್ದಾರೆ. ಉತ್ತರ ರಾಮಾಯಣದ ನಾಟಕವೊಂದರ ಪ್ರದರ್ಶನದ ಕಾಲದಲ್ಲಿ ಸೀತೆಯನ್ನು ಕಾಡಿಗಟ್ಟುವ ಕರುಣಾಜನಕ ದೃಶ್ಯವನ್ನು ಕಂಡ ಪ್ರೇಕ್ಷಕನೊಬ್ಬ ನಾಟಕದ ವೇದಿಕೆಗೆ ಹೋಗಿ ವಾದಿಸಿದ್ದನಂತೆ. ಪ್ರಸಂಗ/ಪ್ರಕರಣದ ವಾಸ್ತವತೆಯನ್ನು ಮರೆತು ಅದರ ಮನರಂಜನೆಯನ್ನಷ್ಟೇ ಅನುಭವಿಸಬೇಕಾದ ಪ್ರಜ್ಞಾವಂತಿಕೆಯನ್ನು ಜನಸಾಮಾನ್ಯರು ಪ್ರದರ್ಶಿಸಿದರೂ ಧೂರ್ತರು ಮರೆಯಲಾರರು. ಸಮಷ್ಟಿಯ ನಡುವೆ ವ್ಯಷ್ಟಿಯ ಅನುಕೂಲತೆ, ಲಾಭ ಇವೆಲ್ಲ ಇರುತ್ತವೆ. ಜನ ಮರುಳಾಗುವುದು ಇಂತಹ (ಕು)ತಂತ್ರಗಳಿಗೆ. ಜಾತ್ರೆಯಲ್ಲೋ, ಸಂತೆಯಲ್ಲೋ ವೇದಿಕೆಯಲ್ಲಿ ಕತ್ತೆಯನ್ನು ಅರಚಿಸಿದರೆ ಯಾರೂ ನೆರೆದು ಹಣಕೊಡಲಾರರು. ಬದಲಾಗಿ ಮನುಷ್ಯನೊಬ್ಬ ಕತ್ತೆಯಂತೆ ಕಿರುಚುವ ಅಣಕವನ್ನು ಪ್ರದರ್ಶಿಸುತ್ತಾನೆಂದು ಗೊತ್ತಾದರೆ ದುಡ್ಡುಕೊಟ್ಟು ನೆರೆಯುತ್ತಾರೆ. ಮೊಹೆಂಜೋದಾರೋ ಸಂಸ್ಕೃತಿ ನಾಶವಾದ ಬಗ್ಗೆ ಹಿಂದಿ ಸಿನಡಮಾವೊಂದು ಅತ್ಯಂತ ಉತ್ಪ್ರೇಕ್ಷಿತ ರೀತಿಯಲ್ಲಿ ಪ್ರವಾಹವನ್ನು ಕಾಣಿಸಿ ಊರಿಗೆ ಊರೇ ನಾಶವಾದ ರೂಪಕದ ಮೂಲಕ ಕಟ್ಟಿಕೊಟ್ಟಿತು. ಅದೀಗ ವಾಸ್ತವವಾಗತೊಡಗಿದೆ. ನಿರ್ಮಾಣ-ನಿರ್ನಾಮದ ರೂಪಕವು ಮೂಲ ಮತ್ತು ಅನುಕರಣೆಯ ಕಲಾಭಿವ್ಯಕ್ತಿಯೂ ಹೌದು; ಬದುಕಿನ, ಕಾಲಚಕ್ರದ ಉರುಳೂ ಹೌದು.

ಈ ದೇಶದಲ್ಲಿ ನಿರ್ಮಾಣ ಮತ್ತು ನಿರ್ನಾಮದ ಕಾಯಕ ಅತ್ಯಂತ ಸರಳ. ಆರೋಪಕ್ಕೆ ಗುರಿಯಾದರೂ ಆರೋಪಿಯ ಮನೆ ನೆಲಸಮ; ಗುಂಪು ಘರ್ಷಣೆಯಾದರೂ ಅವರವರ ಮನೆಗಳು ನೆಲಸಮ: ಭೂಮಿ ಬಿರುಕು ಬಿಟ್ಟರೂ ಕಟ್ಟಡಗಳು ನೆಲಸಮ. ನಿರ್ಮಾಣಗೊಳ್ಳುತ್ತಿರುವುದು ಅಯೋಧ್ಯೆಯ ಶ್ರೀರಾಮಮಂದಿರ ಮಾತ್ರ. ಇದಕ್ಕೆ ಮುಹೂರ್ತ ನಿಗದಿಯಾಗಿದೆ. ಏಕೆಂದರೆ ಆನಂತರ ಚುನಾವಣೆ ನಡೆಯಬೇಕಲ್ಲ! ಅದರ ಫಲ-ಪ್ರಸಾದ ಸಿಗಬೇಕಲ್ಲ! ಉತ್ತರ ರಾಮಾಯಣವೆಂಬ ಪ್ರಕ್ಷಿಪ್ತ ಕಥೆಯಲ್ಲಿ ''ಕಡೆಗು ಕರುಣಾಳು ರಾಘವನಲಿ ತಪ್ಪಿಲ್ಲ'' ಎಂದ ಸೀತೆಗೆ ಭೂಮಿಯಲ್ಲಿ ಬಿರುಕು ಮೂಡಿ ಅವಳು ಭೂಮಿಪಾಲಾದಳು. ಭೂಮಿ ಎಲ್ಲರಿಗೂ ತಾಯಿ; ಸೀತೆಗಂತೂ ಖಾಸಾ ತಾಯಿ. ಆದ್ದರಿಂದ ಅವಳು ತವರುಮನೆಗೆ ವಾಪಸಾದಳು ಎಂದು ಕಥೆಗೆ ಮಂಗಳ ಹಾಡಬಹುದು. ಮುಂದೆ ಶ್ರೀರಾಮನು ಸರಯೂ ನದಿಯ ಮೂಲಕ ವೈಕುಂಠಕ್ಕೆ ವಾಪಸಾದನಂತೆ. ನೀರಿನಲ್ಲಿ ಮುಳುಗಿದ್ದನ್ನು ನೋಡಿದವರಿದ್ದಾರೆಂದು ಕಥೆ ಹೇಳುತ್ತದೆ; ಮುಂದಿನದು? ಕಲ್ಪನೆ. ಆಧುನಿಕತೆಗೂ ಪುರಾಣ ಪರಂಪರೆಗೂ ಕೊಂಡಿ ಬೆಸೆದರೆ ತ್ರೇತಾಯುಗದಲ್ಲೂ ಉತ್ತರಾಖಂಡದಲ್ಲಿ ನಡೆದಂತಹದ್ದೇ ಭೂಬಿರುಕು ಮೂಡಿದ್ದೆಂದು ಏಕೆ ಭಾವಿಸಬಾರದು? ಅಥವಾ ಇನ್ನೂ ಭಾವುಕವಾಗುವುದಾದರೆ ರಾಮಮಂದಿರದ ಹಿನ್ನೆಲೆಗೆ ಸೀತೆಯ ದುರಂತ ಕಥೆ ನಿರ್ಮಾಣವಾಗುವುದಾದರೆ ಜೋಶಿಮಠ ನಿರ್ನಾಮವಾಗುವ ಘಟನೆಯೊಂದಿಗೆ ಹೊಸ ಪುರಾಣ ಸೃಷ್ಟಿಯಾಗುತ್ತದೆಯೇನೋ? ಬುಲ್‌ಡೋಜರ್ ಸಂಸ್ಕೃತಿ ಹೇಗೂ ಇಲ್ಲಿ ಶಾಶ್ವತವಾಗಿ ಉಳಿದಿದೆ. ಇನ್ನೇನಿದ್ದರೂ ಬಾಬರಿ ಮಸೀದಿಯ ಬಿರುಕುಗಳ ನಡುವೆ, ಮೊರ್ಬಿಯ ಸೇತುವೆಯ ಅಪಘಾತದಲ್ಲಿ ಜೀವ ಕಳೆದುಕೊಂಡವರ ನಡುವೆ, ಜೋಶಿಮಠದಲ್ಲಿ ನೆಲಸಮಗೊಂಡ ಮನೆಗಳ, ಕಟ್ಟಡಗಳ ನಡುವೆ, ನಿರ್ಮಿಸಬೇಕಾದ್ದು ಸೀತಾದೇವಿಯ ಅರಮನೆ. ಹಾಡಬೇಕಾದದ್ದು ಭೂಮಿಗೀತ. ಅದಕ್ಕೆ ದಿನ ನಿಗದಿಯಾಗಿಲ್ಲ. ಅದನ್ನು ಗುಪ್ತಗಾಮಿನಿಯಾಗಿ ಹರಿಯುವ ಕಾಲಪ್ರವಾಹವು ಹೇಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)