ಭಾರತ-ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯಕ್ಕೆ ಮುನ್ನ ಈಡನ್ ಗಾರ್ಡನ್ಸ್ ಬೆಲ್ ಬಾರಿಸಿದ ಕುಮಾರ ಸಂಗಕ್ಕರ
ಹೊಸದಿಲ್ಲಿ: ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್‌ನಲ್ಲಿ ಗುರುವಾರ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೂ ಮೊದಲು ಸರಣಿಯಲ್ಲಿ ವೀಕ್ಷಕವಿವರಣೆ ತಂಡದ ಸದಸ್ಯರಾಗಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ(Kumar Sangakkara) ಅವರು ಈಡನ್ ಗಾರ್ಡನ್ಸ್ ಗಂಟೆಯನ್ನು ಬಾರಿಸಿ ಪಂದ್ಯಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಈ ವೇಳೆ ಮಾಜಿ ಕ್ರಿಕೆಟಿಗ ಸೌರವ್ ಗಂಗುಲಿಯವರ ಸಹೋದರ, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ನೇಹಶೀಶ್ ಗಂಗುಲಿ ಉಪಸ್ಥಿತರಿದ್ದರು.
ಶ್ರೀಲಂಕಾ ನಾಯಕ ದಸುನ್ ಶನಕ ಭಾರತ ವಿರುದ್ಧ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಶ್ರೀಲಂಕಾ ತನ್ನ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿದರೆ, ಬಲ ಭುಜದ ನೋವಿನಿಂದಾಗಿ ಆಯ್ಕೆಗೆ ಅಲಭ್ಯರಾಗಿದ್ದ ಯಜುವೇಂದ್ರ ಚಹಾಲ್ ಬದಲಿಗೆ ಭಾರತವು ಕುಲ್ ದೀಪ್ ಯಾದವ್ ಗೆ ಅವಕಾಶ ನೀಡಿದೆ.
ಗಾಯಗೊಂಡಿರುವ ಆರಂಭಿಕ ಬ್ಯಾಟರ್ ಪಾಥುಮ್ ನಿಶಾಂಕ ಹಾಗೂ ವೇಗಿ ದಿಲ್ಶಾನ್ ಮಧುಶಂಕ ಬದಲಿಗೆ ಶ್ರೀಲಂಕಾ ಪರ ಬ್ಯಾಟರ್ ನುವಾನಿಡು ಫೆರ್ನಾಂಡೊ ಹಾಗೂ ವೇಗದ ಬೌಲರ್ ಲಹಿರು ಕುಮಾರ ಅವಕಾಶ ಪಡೆದರು. ಫೆರ್ನಾಂಡೊಗೆ ಇದು ಮೊದಲ ಪಂದ್ಯ.
ಭಾರತ 1-0 ಮುನ್ನಡೆಯಲ್ಲಿದ್ದು ರವಿವಾರ ನಡೆಯಲಿರುವ ಅಂತಿಮ ಪಂದ್ಯಕ್ಕೂ ಮುನ್ನ ಸರಣಿಯನ್ನು ತನ್ನದಾಗಿಸಿಕೊಳ್ಳಲು ಬಯಸಿದೆ. ಮೂರನೇ ಏಕದಿನ ಪಂದ್ಯ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿದೆ.