varthabharthi


ಈ ಹೊತ್ತಿನ ಹೊತ್ತಿಗೆ

ಮಣಿಬಾಲೆ; ಶೂದ್ರ ದರ್ಶನ ಮತ್ತು ಹೆಂಗರುಳ ಪ್ರಮೇಯಗಳ ಮಹತ್ವದ ಕೃತಿ

ವಾರ್ತಾ ಭಾರತಿ : 13 Jan, 2023
ನೆಲ್ಲುಕುಂಟೆ ವೆಂಕಟೇಶ್

ಊರೊಂದಿತ್ತು. ಅಲ್ಲಿ ಹೆಣ್ಣಿನ ಮಾತಿಗೆ ಗೌರವವಿತ್ತು. ಜನರ ತಪ್ಪುಗಳಿದ್ದರೆ ಊರ ಪಂಚಾಯಿತಿಯಲ್ಲೇ ತುಸು ಮಾನವೀಯತೆಯಿಂದ ಬಗೆಹರಿಸುವ ಪದ್ಧತಿ ಇತ್ತು. ದಲಿತರಿಗೆ ಭೂಮಿ ಇತ್ತು. ದಲಿತ ಹೆಣ್ಣು ಮಕ್ಕಳು ಒಕ್ಕಲಿಗರ ಹೆಣ್ಣುಮಕ್ಕಳೆಂಬ ಭಿನ್ನತೆಯಿಲ್ಲದೆ ಊರಿಗೆ ಊರೇ ನಿಂತು ಮದುವೆ ಕಾರ್ಯ ನಡೆಸುವಷ್ಟು ಹೊಂದಾಣಿಕೆ ಇತ್ತು. ಊರಲ್ಲಿ ಹಸಿವು ಇತ್ತು. ಆದರೆ ಹಸಿದವರಿಗೆ ಅನ್ನವಿಕ್ಕುವ ಕೈಗಳಿದ್ದವು. ಊರೊಳಿತಿಗಾಗಿ ತನ್ನ ಆಸ್ತಿಯನ್ನು ಮಾರುವ ಒಳ್ಳೆಯ ಮನಸ್ಸಿನ ಗ್ರಾಮದ ಮುಖಂಡನಿದ್ದ. 

ಕುಡಿತವನ್ನು ಕೆಟ್ಟದ್ದು ಎಂದು ಊರಿಗೆ ಊರೇ ಭಾವಿಸಿತ್ತು. ದುಡಿಮೆಯನ್ನು ದೇವರೆಂದು ಭಾವಿಸುವ ಮನೋಭಾವವಿತ್ತು. ಊರೊಳಗೆ ಒಗ್ಗಟ್ಟಿತ್ತು. ಸಣ್ಣತನಗಳಿದ್ದರೂ ಅದನ್ನು ತಪ್ಪು ಎಂದು ಹೇಳುವ ಜನರೂ ಇದ್ದರು. ಇದು ಮಲೆನಾಡು ಮತ್ತು ಅರೆಮಲೆನಾಡಿನ ಸಂಗಮ ಸ್ವರೂಪಿ ಪ್ರದೇಶದ ಲೇಖಕಿ ಎಚ್.ಆರ್. ಸುಜಾತ ಅವರು ತಮ್ಮ ಹೊಸಹಳ್ಳಿಯ ಜನರ ಜೀವನದ ನೆನಪುಗಳನ್ನು ಆಧರಿಸಿ ಬರೆದಿರುವ 488 ಪುಟಗಳ ಬೃಹತ್ ಕೃತಿ ‘ಮಣಿಬಾಲೆ’ ಯಲ್ಲಿನ ಚಿತ್ರಣ. ಅರೆ ಇದೇನು ಕಲ್ಪನೆಯ ಹಳ್ಳಿಯೆ? ಗಾಂಧೀಜಿ ದೇಶದ ಮುಂದೆ ಮಂಡಿಸಿದ ಆದರ್ಶ ಗ್ರಾಮವು ಹೀಗೆ ಇರಬಹುದಾ? ಆದರೆ ಈ ಊರಿಗೆ ನಗರಗಳ ಬಗ್ಗೆ ಕನಸುಗಳಿವೆ. 

ಗೌಡ-ಪಟೇಲರ ಮಕ್ಕಳು ನಗರಗಳಲ್ಲಿ ಕಲಿತು ಸರಕಾರಿ ಉದ್ಯೋಗ ಹಿಡಿಯುವುದನ್ನು ಹೆಮ್ಮೆಯ ಸಂಗತಿ ಎಂದು ಭಾವಿಸಲಾಗುತ್ತದೆ. ದಲಿತ ಸಮುದಾಯದ ಯುವಕರು ಆಧುನಿಕ ಕಸುಬುಗಳನ್ನು ಕಂಡುಕೊಳ್ಳುತ್ತಿದ್ದಾರೆ. ಶಿಕ್ಷಣದಿಂದ ಹೊರಗುಳಿಯುವ ದಲಿತ ಸಮುದಾಯಗಳ ಮಕ್ಕಳು ಊರಲ್ಲೇ ಉಳಿಯುವ, ಕೂಲಿ, ಜೀತ ಮಾಡುವ ಚಿತ್ರಣವಿದೆ. ಕೆಲವು ಯುವಕರು ಆಟೊ, ಟೆಂಪೊ ಇಟ್ಟುಕೊಂಡು ಪ್ಲಾಂಟೇಷನ್‌ಗಳಿಗೆ ಕಾರ್ಮಿಕರನ್ನು ಸಾಗಿಸುವ ಕೆಲಸ ಮಾಡುತ್ತಾರೆ. ಅನಾದಿ ಕಾಲದಿಂದ ನಡೆದುಬಂದ ಹಳ್ಳಿಯೊಂದು ಹೊಸ ಮಗ್ಗುಲ ಕಡೆಗೆ ಮೈ ಹೊರಳಿಸುತ್ತಿರುವ ಹಲವು ಚಿತ್ರಣಗಳಿವೆ ಇಲ್ಲಿ. ಈ ರೀತಿಯ ಅಪರೂಪದ ಚಿತ್ರಣಗಳನ್ನು ‘ಮಣಿಬಾಲೆ’ ಕೃತಿಯು ಕಟ್ಟಿ ಕೊಡುತ್ತಿದೆ.

ಎಚ್.ಆರ್. ಸುಜಾತ ಅವರ ಮಣಿಬಾಲೆ ಹಲವು ಕಾರಣಗಳಿಗಾಗಿ ಮುಖ್ಯವೆನ್ನಿಸುವ ಕೃತಿ. ಈ ಕೃತಿಯನ್ನು ಅನೇಕರು ಕಾದಂಬರಿ ಎನ್ನುತ್ತಾರೆ. ಜೀವನಗಾಥೆ ಎಂಬಂತೆಯೂ ಕೆಲವರು ನೋಡುತ್ತಾರೆ. ಆದರೆ ಲೇಖಕಿ ಮಾತ್ರ ಇದನ್ನು ಯಾವ ಪ್ರಕಾರಕ್ಕೂ ಸೇರಿಸದೆ ಓದುಗರ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಕೃತಿಯ ಸ್ವರೂಪ, ಬಂಧ ಇತ್ಯಾದಿಗಳನ್ನು ಗಮನಿಸಿ ವಿಮರ್ಶಕಿ ಆಶಾದೇವಿಯವರು ‘ಮಣಿಬಾಲೆ’ಯನ್ನು ಕಾದಂಬರಿ ಎಂದಿದ್ದಾರೆ. 

ದಟ್ಟ ವಿವರಗಳನ್ನು ಸಾದ್ಯಂತವಾಗಿ ಚಿತ್ರಿಸುವ ಕ್ರಮ, ಪಾತ್ರಗಳು ಹಾಗೂ ಸನ್ನಿವೇಶಗಳು ಸಾವಯವ ಮಾದರಿಯಲ್ಲಿ ಬೆಳೆಯುವ ವಿಧಾನಗಳಿಂದಾಗಿ ‘ಮಣಿಬಾಲೆ’ಯನ್ನು ಕಾದಂಬರಿ ಎಂದು ಕರೆಯಬಹುದು. ಕೃತಿಯಲ್ಲಿ ಸಾಮಾಜಿಕ ವಿವರಗಳು ಮಾತ್ರ ಇದ್ದಿದ್ದರೆ ಈ ಕೃತಿ ಇನ್ನೊಂದು ‘ರಿಮೆಂಬರ್ಡ್ ವಿಲೇಜ್’ ಆಗುತ್ತಿತ್ತು. ಸಾಮಾಜಿಕ ವಿವರಗಳು ಕಾಲಾನುಕ್ರಮಣಿಕೆಯ ಹಂಗು ಮೀರಿ, ವಾಸ್ತವ- ಕಲ್ಪಕತೆಗಳು ಹದವಾಗಿ ಬೆರೆತು ಅದ್ಭುತ ಕಥನವಾಗಿ ನಿರೂಪಿತಗೊಳ್ಳುತ್ತವೆ. 

ಜಿ.ಎನ್. ರಂಗನಾಥರಾವ್ ಅವರು ಮಣಿಬಾಲೆಯಲ್ಲಿ ‘ಮ್ಯಾಜಿಕಲ್ ರಿಯಲಿಸಂ’ ತಂತ್ರ ಬಳಸಲಾಗಿದೆ ಎಂದಿದ್ದಾರೆ. ಕೃತಿ ಓದಿದವರಿಗೆ ಈ ಗ್ರಹಿಕೆ ಸಮರ್ಪಕವೆನ್ನಿಸುತ್ತದೆ. ಇಂತಹ ಶಕ್ತಿಗೆ ಬೇಕೆಂತಲೇ ಬೆನ್ನು ಹಾಕಿ ನಿಂತಿರುವ ಶ್ರೀನಿವಾಸರ ‘ರಿಮೆಂಬರ್ಡ್ ವಿಲೇಜ್’ ಕೃತಿ ಸಮಾಜ ಶಾಸ್ತ್ರೀಯ ಅಧ್ಯಯನ ಮಾತ್ರವಾಗುತ್ತದೆ.

‘ಮಣಿ’ ಎಂಬ ಬಾಲೆ ತನ್ನ ಬಾಲ್ಯದ ನಿಷ್ಕಲ್ಮಶ ಕಣ್ಣುಗಳ ಮೂಲಕ ಲೋಕವನ್ನು ಗ್ರಹಿಸಿ ಹೇಳುವ ತಂತ್ರವನ್ನು ಅಳವಡಿಸಿಕೊಂಡಿದೆ. 13-14 ವರ್ಷಗಳ ಮಗುವಿಗೆ ಒಳಿತು ಮತ್ತು ಸಂತೋಷದ ಹೊರತಾಗಿ ಅನ್ಯ ಸಂಗತಿಗಳ ಪರಿಚಯ ಕಡಿಮೆ. ಯಾಕೆಂದರೆ ಲೋಕವು ಉದ್ದೇಶಪೂರ್ವಕವಾಗಿ ಕಂಬನಿಯನ್ನು ಸಣ್ಣ ಮಕ್ಕಳಿಂದ ದೂರವಿಡಲು ಪ್ರಯತ್ನಿಸುತ್ತದೆ. 

ಆದರೂ ಮಕ್ಕಳಿಗೆ ಎಟುಕುವಷ್ಟು ದುರಂತ ಮತ್ತು ವಿಷಾದಗೀತೆಗಳು ಈ ಕೃತಿಯಲ್ಲಿ ಹರಿದು ಸಾಗುತ್ತವೆ. ಹಾಗಾಗಿ ವಾಸ್ತವಿಕತೆಯ ಹೆಜ್ಜೆಗೆ ದೂರ ಎನ್ನಲಾಗದಷ್ಟು ಸಹಜ ವಿನ್ಯಾಸ ಈ ಕೃತಿಗೆ ಇದೆ. ನೋಡಿದ್ದನ್ನು, ಕೇಳಿದ್ದನ್ನು ಸೇರಿಸಿ ಕತೆಯನ್ನು ಕಟ್ಟುತ್ತಾ ಹೋಗುವ ಕ್ರಮ ಒಂದು ರೀತಿಯ ಸವಾಲಿನದು. ಕೃತಿಯ ನಿರೂಪಕಿಯಾದ ಪುಟ್ಟ ಹುಡುಗಿಗೆ ಮುಗ್ಧತೆ ಮತ್ತು ಕುತೂಹಲಗಳು ಹೂ ಬಿಟ್ಟ ಮುತ್ತುಗದಂತೆ ಒಡೆದೆದ್ದು ಕಾಣುತ್ತವೆ. ಆದರೆ ಆಲನಹಳ್ಳಿಯವರ ‘ಕಾಡು’ ಕಾದಂಬರಿಯ ಪುಟ್ಟ ಹುಡುಗ ಕಿಟ್ಟಿಯು ದೊಡ್ಡವರ ಕ್ರೌರ್ಯ ಮತ್ತು ದುಷ್ಟತನಗಳನ್ನು ಕಂಡು ಭೀತಿಗೊಳಗಾಗುತ್ತಾನೆ. ಗಂಡಿನ ಲೋಕ ಸೃಷ್ಟಿಸಿಕೊಂಡ ಊಳಿಗಮಾನ್ಯ ಸಂಸ್ಕೃತಿಯ ಪ್ರಮೇಯಗಳ ಬಲಿಪಶುಗಳು ಹೆಣ್ಣುಗಳು ಮತ್ತು ಮಕ್ಕಳು ಎಂಬುದನ್ನು ಆಲನಹಳ್ಳಿಯವರ ಕಿಟ್ಟಿ, ಕುವೆಂಪು ಅವರ ವಾಸು ಮುಂತಾದ ಪಾತ್ರಗಳು ಕನ್ನಡ ಮಾನಸದಲ್ಲಿ ಅಚ್ಚಳಿಸದೆ ಉಳಿಸಿವೆ. 

ಕ್ರೋಧ, ಅಸಹನೆ, ದ್ವೇಷಗಳು ಇಂತಹ ಸಮಾಜದಲ್ಲಿ ಬುಸುಗುಡುವ ಲಾವಾದಂತೆ ಹುದುಗಿಕೊಂಡಿರುತ್ತವೆ. ‘ಕಾಡು’ ಕೃತಿಯಲ್ಲಿ ಓದುಗರು ಕ್ಷಣ ಕ್ಷಣಕ್ಕೂ ದಿಗಿಲು ಬೀಳುವ ಸನ್ನಿವೇಶ ಸೃಷ್ಟಿಯಾಗುತ್ತದೆ. ‘ಮಣಿಬಾಲೆ’ ಹಾಗಲ್ಲ. ಬದುಕಿನ ದುರಂತಗಳಿಗಿಂತ ಪ್ರೇಮ-ಮಾಧುರ್ಯದ ಭಾವನೆಗಳೇ ಅಧಿಕ ಎಂಬ ನಿಲುವು ಈ ಕೃತಿಯಲ್ಲಿ ತುಂಬಿ ಹರಿಯುತ್ತದೆ. ಮಣಿಬಾಲೆಯನ್ನು ಓದಿದ ಮೇಲೆ ಮಹಾಭಾರತವನ್ನು ಹೆಣ್ಣೊಬ್ಬಳು ರಚಿಸಿದ್ದರೆ ಹೇಗಿರಬಹುದು ಎಂಬ ಕುತೂಹಲ ಹುಟ್ಟುತ್ತದೆ. 

ನಿರರ್ಥಕ ಸಂಗತಿಗಳಿಗೆ ಲಕ್ಷಾವಧಿ ಸಾವು-ನೋವುಗಳ್ಯಾಕೆ ಎಂಬ ಪ್ರಶ್ನೆಯು ಹೆಣ್ಣಿನೊಳಗೆ ಮಾತ್ರ ಹುಟ್ಟಿ ಬರಲು ಸಾಧ್ಯವೆ? ಇದೇ ಪ್ರಮೇಯವನ್ನು ಕುವೆಂಪು ‘ಸ್ಮಶಾನ ಕುರುಕ್ಷೇತ್ರ’ದಲ್ಲಿ ಈ ಕುತೂಹಲದ ಮೂಲಕ ಸಾವಿಗಿಂತ ಬದುಕಿನ ಸಾಂಗತ್ಯವೇ ಮುಖ್ಯ ಎಂದು ಪ್ರತಿಪಾದಿಸುತ್ತಾರೆ. ಜೊತೆಗೆ ಮನುಷ್ಯನ ಆದಿಮ ಪ್ರವೃತ್ತಿಗಳಾದ ಹಿಂಸೆ, ದಮನ, ಕ್ರೌರ್ಯ, ಕಬಳಿಸುವ ಗುಣ, ದುರಾಸೆ ಮುಂತಾದವುಗಳನ್ನು ಮುಟ್ಟದೆ ಹೋದರೆ ಯಾವುದೇ ಕಲಾಕೃತಿಗಳು ಅಪೂರ್ಣವಾಗಿ ಬಿಡಬಹುದು.

ಈ ಕೃತಿಯೊಳಗೆ ಅಂಥದೊಂದು ಕೊರತೆಯನ್ನು ಢಾಳಾಗಿ ಗುರುತಿಸಬಹುದು ಎಂಬ ನಿಲುವಿಗೆ ಬರುವ ಹೊತ್ತಿಗೆ ಗೌಡತಿಯೊಂದಿಗೆ ಹೊಲೆಯರ ಆಳು ಕೂಡಿದನೆಂದು ಮಂಡ್ಯ ಸೀಮೆಯಲ್ಲಿ ಹಬ್ಬದ ನೆಪದಲ್ಲಿ ಊರ ಹೊಲೆಯರನ್ನು ಕರೆದು ಒಬ್ಬೊಬ್ಬರ ತಲೆ ಕಡಿದು ಹಾಕುವ ಭೀಭತ್ಸ ನೆನಪು ಧಿಮ್ಮನೆ ಎದುರು ಕೂರುತ್ತದೆ. ದಲಿತರ ತಲೆ ಕಡಿದು ಹರಿದ ರಕ್ತದ ಕೋಡಿಯಿಂದಾಗಿಯೆ ಊರಿಗೆ ಹನಕೆರೆ ಎಂಬ ಹೆಸರು ಬಂದಿದೆಯೆಂಬ ವಿವರವನ್ನೂ ಹೇಳಿ ಕೃತಿ ಬೆಚ್ಚಿ ಬೀಳಿಸುತ್ತದೆ.

  ಆದರೆ ‘ಮಣಿಬಾಲೆ’ ಊರಿನಲ್ಲಿ ಜೀತ ಪದ್ಧತಿ ಇರುವ ಕುರಿತು ಕೃತಿಯಲ್ಲಿ ಉಲ್ಲೇಖಗಳಿವೆ. ಆದರೆ ಜೀತವು ಕುವೆಂಪು ಅವರ ಸಾಲದ ಮಗುವಿನಂತೆ ಅಮಾನುಷವೆಂಬಂತೆ ಚಿತ್ರಿಸುವುದಿಲ್ಲ. ಜೀತ ಇರಲಿಲ್ಲ ಎಂದು ಮರೆಮಾಚುವಷ್ಟು ನಾಜೂಕುತನವೂ ಇಲ್ಲ. ಜೀತವೇ ಅಮಾನುಷ ಪದ್ಧತಿ ಎಂದು ವಿವರಿಸುವ ನಿಲುವಿಗೆ ಕೃತಿ ತಲುಪುವುದೂ ಇಲ್ಲ. ಬಹುಶಃ ಈ ಕೃತಿಯಲ್ಲಿ ಕೆಲವು ಡೆಡ್ ಲಾಕ್ ಸಂಗತಿಗಳಲ್ಲಿ ಇದೂ ಒಂದು. ಮನೆಯ ಕೆಲಸಗಾರ ಶೇಖರನ ಮನೆ ಮಗನಂತೆ ಚಿತ್ರಿತಗೊಳ್ಳುತ್ತದೆ. ಕೃತಿಯಲ್ಲಿ ಜಗಲಿಯ ಲೋಕಕ್ಕಿಂತ ಹಿತ್ತಿಲ ಲೋಕದ ಪಾತ್ರಗಳೇ ಪ್ರಧಾನ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. 

ಅನೇಕ ಸಾರಿ ಹೆಣ್ಣಿನ ಜಗತ್ತು ಈ ಗ್ರಾಮದಲ್ಲಿ ಜಗಲಿಯ ಜಗತ್ತೂ ಆಗುತ್ತದೆ. ಕೃತಿಯಲ್ಲಿ ಸುಗ್ಗನಹಳ್ಳಿ ಶಿವಮ್ಮ ಎಂಬ ಲಿಂಗಾಯತರ ಹೆಣ್ಣು ಮಗಳೊಬ್ಬಳ ಚಿತ್ರ ಬರುತ್ತದೆ. ಪಾತ್ರವೊಂದು ಹೇಳುತ್ತದೆ: ‘‘ಅವ್ಳ ಕನಪ್ಪ ಹೆಣ್ಣು ಅಂದ್ರೆ, ನಾನು ಮದ್ವೆಯಾಗಿ ಬಂದಾಗ ನೋಡಿದ್ದೆ, ನೋಡಬೇಕಾಗಿತ್ತು! ನಮ್ಮೂರಿಗೆ ನ್ಯಾಯ ಪಂಚಾಯಿತಿಗೂ ಹಂಗೆ ಬರೋಳು, ಮಾತು ಅಂದ್ರೆ ಕಡ್ಡೆರಡು ತುಂಡು ಮಾಡದಂಗೆ ಗಂಡಸ್ರು ಜತೆಲಿ ಕುಕ್ಕರಗಾಲಲ್ಲಿ ಕುಂತ್ಗಂಡು ಆವಮ್ಮ ಪುಸ್ಸ ಪುಸ್ಸನೆ ಬೀಡಿ ಹೆಂಗೆ ಸೇದಳು ಗೊತ್ತಾ? ಅವ್ಳ ಮದ್ವೆನೆ ಆಗದೆ ಅವಳ ತಮ್ಮನ ಮಕ್ಳ ಸಾಕ್ಕಂಡು ಉದ್ಧಾರ ಮಾಡದ್ಲು’’ ಅರೆ ಹೊಡೆಯುವವರನ್ನು ನೋಡಿ ‘‘ಲೋ ಚಿಕ್ಕೇಗೋಡ, ದೊಡ್ಡೇಗೋಡ, ಕಳಸೇಗೌಡ ಹಿಂಗೆಯ ಅರೆ ಹೊಡ್ಯದು’ ಅಂತ ಆಚೆ ಬದಿನಲ್ಲಿ ನಿಂತು ನೋಡಿ ಕೆಳಕ್ಕಿಳಿದು ಬಂದಿದ್ದೆಯ.. ಮೇಣಿ ಮೇಲೆ ಅಂಗೈ ಊರುದ್ರೆ ಅಳ್ಳಾಡದಂಗೆ ಓರೆಕ್ವಾರೆ ಇಲ್ದೆ ಅರೆ ಹೊಡದು ತೋರಸಳಂತೆ’’. 

ಈ ಥರದ ಪಾತ್ರಗಳು ಕೃತಿಯಲ್ಲಿ ಅಲ್ಲಲ್ಲಿ ಹಾದು ಹೋಗುತ್ತವೆ. ಈ ಹಳ್ಳಿಯ ಗಂಡಸರಿಗೂ ಹೆಂಗರುಳಿದೆ. ಅವರ ಕಣ್ಣಲ್ಲೂ ನೀರು ಬರುತ್ತದೆ ಎಂಬ ನಿಲುವಿನಿಂದಲೇ ಕೃತಿಯು ಸಾಗುತ್ತದೆ. ಹಾಗಾಗಿ ‘ಮಣಿಬಾಲೆ’ ಅಪ್ಪಟ ಹೆಂಗರುಳಿನ ಪ್ರಮೇಯವನ್ನು ಪ್ರತಿಪಾದಿಸುವ ಕೃತಿ. ಮಣಿಬಾಲೆಯ ತಂದೆ, ತಂದೆಯ ಸಂಪರ್ಕದ ಗಂಡಸರಲ್ಲಿ ರಾಕ್ಷಸೀಯ ಗುಣ ಕಾಣದೆ ಶುದ್ಧ ಮನುಷ್ಯರ ರೀತಿ ಕಾಣುತ್ತಾರೆ. ಸಾಮಾನ್ಯವಾಗಿ ಗಂಡಿನ ಆಕ್ರಮಣಕಾರಿ ಸ್ವಭಾವದ ಬಗ್ಗೆ ಎರಡು ಅತಿಗಳಲ್ಲಿ ನಿಂತು ನೋಡಿ ಬರೆದ ಕೃತಿಗಳೇ ಹೆಚ್ಚು. 

‘ಮಣಿಬಾಲೆ’ ಅತಿಗೆ ಹೋಗದೆ ಸಾವಧಾನದ ನಡಿಗೆಯ ಮೂಲಕ ಬದುಕನ್ನು ದರ್ಶಿಸುವ ಕೃತಿ. ಈ ರೀತಿಯ ನಡಿಗೆ ಹೆಣ್ಣಿಗೆ ಯಾಕೆ ಸಾಧ್ಯವಾಗುತ್ತದೆ ಎಂದು ಬ್ರಿಟನ್‌ನ ಮಹತ್ವದ ಲೇಖಕಿ ವರ್ಜಿನಿಯಾ ವೂಲ್ಫ್ ತನ್ನ ‘ಎ ರೂಮ್ ಆಫ್ ಒನ್ಸ್ ಓನ್’ (1929) ಪ್ರಬಂಧದಲ್ಲಿ ಚರ್ಚಿಸಿದ್ದಾಳೆ. ವೂಲ್ಫ್ 1920 ರಲ್ಲಿ ‘ವುಮೆನ್ ಆ್ಯಂಡ್ ಫಿಕ್ಷನ್’ ಹೆಸರಿನಲ್ಲಿ ಮಾಡಿದ್ದ ಎರಡು ಭಾಷಣಗಳನ್ನು ಸೇರಿಸಿ ಈ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ "Fiction here is likely to contain more truth than fact'' ಎಂದು ದಾಖಲಿಸಿದ್ದಾಳೆ. ಇದನ್ನು ಹೆಣ್ಣೊಬ್ಬಳು ಮಾತ್ರ ದಾಖಲಿಸಲು ಸಾಧ್ಯವೇನೊ. ಅಭಿವ್ಯಕ್ತಿಯೆ ಸಾಧ್ಯವಾಗದ ಸ್ಥಿತಿಯಲ್ಲಿ ಬರೆದ ವೂಲ್ಫ್ ‘ಹೆಣ್ಣೊಬ್ಬಳು ಬರೆದ ಸೃಜನಶೀಲ ಕೃತಿಯು ವಾಸ್ತವಕ್ಕಿಂತ ಹೆಚ್ಚು ಸತ್ಯವಾಗಿರುತ್ತದೆ’ ಎನ್ನುತ್ತಾಳೆ. ಈ ಮಾತುಗಳನ್ನು ದೃಢೀಕರಿಸುವಂತೆ ‘ಮಣಿಬಾಲೆ’ ಚಿತ್ರಿತಗೊಳ್ಳುತ್ತದೆ.

(ವಿಮರ್ಶೆಯ ಆಯ್ದ ಭಾಗ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)