ಗ್ರಾಹಕಿಯ ನಾಯಿಗೆ ಹೆದರಿ ಮೂರನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್!
ಹೈದರಾಬಾದ್: ಗ್ರಾಹಕಿಯ ಮನೆಯ ನಾಯಿಗೆ ಹೆದರಿ ಆಹಾರ ವಿತರಣೆ ಎಕ್ಸಿಕ್ಯೂಟಿವ್ ಒಬ್ಬರು ಮೂರನೇ ಮಹಡಿಯಿಂದ ಜಿಗಿದು ತೀವ್ರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಆಹಾರ ಪೊಟ್ಟಣದ ಪಾರ್ಸೆಲ್ನೊಂದಿಗೆ ಮನೆಯ ಬಾಗಿಲ ಬಳಿ ಕಾಯುತ್ತಿದ್ದಾಗ ಮನೆಯ ನಾಯಿ ಕಾಣಿಸಿಕೊಂಡಿದ್ದರಿಂದ ಹೆದರಿದ ಈತ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ. ತಕ್ಷಣವೇ ಗ್ರಾಹಕಿ ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಗ್ರಾಹಕಿ ವಿರುದ್ಧ ಪೊಲೀಸರು ನಿರ್ಲಕ್ಷ್ಯ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ಡೆಲಿವರಿ ಬಾಯ್ ಅಪಾಯದಿಂದ ಪಾರಾಗಿದ್ದರೂ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೊಹ್ಮದ್ ರಿಜ್ವಾನ್ (23) ಎಂಬುವವರು ಗ್ರಾಹಕಿ ಕೆ.ಶೋಭನಾ ಎಂಬುವವರಿಗೆ ಬಂಜಾರಾ ಹಿಲ್ನ ಮನೆಗೆ ಆಹಾರ ಪೊಟ್ಟಣ ವಿತರಿಸಲು ಆಗಮಿಸಿದ ವೇಳೆ ಈ ಘಟನೆ ನಡೆದಿದೆ.
11 ವರ್ಷ ವಯಸ್ಸಿನ ಜರ್ಮನ್ ಶೆಫರ್ಡ್ ನಾಯಿ ಬೊಗಳುತ್ತಾ ಬಾಗಿಲ ಬಳಿ ಬಂದಾಗ ಬಾಗಿಲು ತೆರೆಯಲಾಯಿತು. ಇದರಿಂದ ಭೀತಿಯಿಂದ ಓಡಲು ಆರಂಭಿಸಿದಾಗ ನಾಯಿ ಅಟ್ಟಿಸಿಕೊಂಡು ಬಂತು. ಇದರಿಂದಾಗಿ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾಗಿ ರಿಜ್ವಾನ್ ಪೊಲೀಸರಿಗೆ ತಿಳಿಸಿದ್ದಾರೆ.
ತೀವ್ರ ಗಾಯಗೊಂಡಿದ್ದ ರಿಜ್ವಾನ್ನನ್ನು ಶೋಭನಾ ತಕ್ಷಣವೇ ಎನ್ಐಎಂಎಸ್ಗೆ ದಾಖಲಿಸಿದ್ದಾರೆ. ರಿಜ್ವಾನ್ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಸಹೋದರ ನೀಡಿದ ದೂರಿನ ಮೇಲೆ ಶೋಭಾ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 336 ಮತ್ತು 289ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.