varthabharthi


ತಿಳಿ ವಿಜ್ಞಾನ

ಜೋಶಿಮಠದ ಭೂಕುಸಿತದಿಂದ ನಾವು ಪಾಠ ಕಲಿಯಬಹುದೇ?

ವಾರ್ತಾ ಭಾರತಿ : 15 Jan, 2023
ಆರ್.ಬಿ.ಗುರುಬಸವರಾಜ

ಯಾವುದೇ ಪ್ರದೇಶಗಳಲ್ಲಿ ಅಣೆಕಟ್ಟು, ಬ್ಯಾರೇಜು ಮುಂತಾದ ಜಲಯೋಜನೆಗಳು ಅಥವಾ ಥರ್ಮಲ್ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನ ಅಲ್ಲಿನ ಜೀವವ್ಯವಸ್ಥೆಯ ಕುರಿತು ಅಧ್ಯಯನ ಮಾಡಿ ತೊಂದರೆಯಾಗದಂತೆ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಜನವಸತಿಗೆ ಅನುಕೂಲವಾಗುವಂತಹ ಕಟ್ಟಡ ಅಥವಾ ರಸ್ತೆ ನಿರ್ಮಾಣದಂತಹ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ಭೂತಜ್ಞರ ಅಥವಾ ಭೂವಿಜ್ಞಾನಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಬೇಕು. ಕೇವಲ ಪೇಪರ್ ಅನುಮತಿಯಲ್ಲದೆ ವಾಸ್ತವಾಂಶ ಕುರಿತ ಅಧ್ಯಯನ ಆಧಾರಿತ ಅನುಮೋದನೆ ಅಗತ್ಯ.


ಇಲ್ಲಿ ಮನೆಗಳಿವೆ. ಆದರೆ ಸದ್ಯ ಜನರು ಮನೆಯೊಳಗೆ ವಾಸಿಸಲು ಹೆದರುತ್ತಿದ್ದಾರೆ. ಅದೆಷ್ಟೋ ಕಂದಮ್ಮಗಳು ಕೊರೆಯುವ ಚಳಿಯಲ್ಲೂ ಮನೆಯಿಂದ ಹೊರಗೆ ಮಲಗುತ್ತಿದ್ದಾರೆ. ಮನೆಯಿಂದ ಹೊರಗೆ ಆಹಾರ ಬೇಯಿಸಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಮನೆಯೊಳಗಿರುವ ವಸ್ತುಗಳನ್ನು ಹೊರ ತಂದು ಗುಡ್ಡೆ ಹಾಕಿಕೊಳ್ಳಲೂ ಭಯ. ಜೀವ ಉಳಿದರೆ ಸಾಕು ಎಂಬ ಭಯದ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ. ಮನೆಗಳು ಬಿರುಕುಬಿಟ್ಟಿರುವ ಕಾರಣ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಅವರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದು ಸದ್ಯದ ಜೋಶಿಮಠದ ಪರಿಸ್ಥಿತಿ. ಜೋಶಿಮಠವು ಉತ್ತರಾಖಂಡ ರಾಜ್ಯದ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-7) ಯಲ್ಲಿ ನೆಲೆಗೊಂಡಿರುವ ಗುಡ್ಡಗಾಡು ಪಟ್ಟಣವಾಗಿದೆ. ಇತ್ತೀಚೆಗೆ ಇಲ್ಲ್ಲಿ ಭೂಕುಸಿತ ಉಂಟಾಗಿರುವುದರ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಲೇ ಇವೆ. ಈ ಹಿಂದೆ ನಮ್ಮ ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಭೂಕುಸಿತದ ಪ್ರಕರಣಗಳು ದಾಖಲಾಗಿರುವುದನ್ನು ಮಾಧ್ಯಮಗಳು ವರದಿ ಮಾಡಿದೆ. ಈಗ ಜೋಶಿಮಠದ ಸರದಿ.

ಜೋಶಿಮಠವು ವಿಶಿಷ್ಟ ಭೌಗೋಳಿಕ ಸನ್ನಿವೇಶಗಳನ್ನು ಹೊಂದಿದೆ. ಸಮುದ್ರಮಟ್ಟದಿಂದ ಸುಮಾರು 1,890 ಮೀಟರ್ ಎತ್ತರದಲ್ಲಿರುವ ಜೋಶಿಮಠವು ಹಿಮಾಲಯದ ಒಂದು ಪಟ್ಟಣವಾಗಿದೆ. ನಾಲ್ಕು ನದಿಗಳಿಂದ ಸುತ್ತುವರಿದ ಬೆಟ್ಟದ ಮಧ್ಯದ ಇಳಿಜಾರುಗಳಲ್ಲಿ ನೆಲೆಗೊಂಡಿದೆ. ಪಶ್ಚಿಮ ಮತ್ತು ಪೂರ್ವದಲ್ಲಿ ಕರ್ಮನಾಸ ಮತ್ತು ಧಕನಾಳ ನದಿಗಳು ಮತ್ತು ದಕ್ಷಿಣ ಮತ್ತು ಉತ್ತರದಲ್ಲಿ ಧೌಲಿಗಂಗಾ ಮತ್ತು ಅಲಕಾನಂದಾ ನದಿಗಳು ಜೋಶಿಮಠವನ್ನು ಸುತ್ತುವರಿದಿವೆ. ಫೆಬ್ರವರಿ 2021ರಲ್ಲಿ ಜೋಶಿಮಠ ಸಮೀಪದ ತಪೋವನ ವಿಷ್ಣುಗಡದಲ್ಲಿನ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಮೇಘಸ್ಫೋಟದಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಹತ್ತಾರು ಮಂದಿ ಕಣ್ಮರೆಯಾಗಿದ್ದರು. ಮೇಘಸ್ಫೋಟ, ಭೂಕುಸಿತ, ಭೂಕಂಪಗಳಂತಹ ಅವಘಡಗಳು ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಆಗಾಗ ವರದಿಯಾಗುತ್ತಿರುತ್ತವೆ. ಪ್ರಸಕ್ತ ಜೋಶಿಮಠದಲ್ಲಿ 600ಕ್ಕೂ ಹೆಚ್ಚು ಕುಟುಂಬಗಳಿವೆ. ಭೂಕುಸಿತದ ಪರಿಣಾಮವಾಗಿ ಇಲ್ಲಿನ ಬಹುತೇಕ ಮನೆಗಳು ಹಾಗೂ ಇನ್ನಿತರ ಕಟ್ಟಡಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ನೆಲವೂ ಅಲ್ಲಲ್ಲಿ ಬಿರುಕು ಬಿಟ್ಟಿರುವುದನ್ನು ಮಾಧ್ಯಮಗಳು ಭಿತ್ತರಿಸಿವೆ. ಇಲ್ಲಿ ವಾಸಿಸುವ ಕುಟುಂಬಗಳು ಭೂಕುಸಿತದ ಘೋರ ಪರಿಣಾಮಗಳನ್ನು ಎದುರಿಸುತ್ತಿವೆ ಮತ್ತು ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿವೆೆ. ಭೂಕುಸಿತದಿಂದಾಗಿ ಜೋಶಿಮಠದ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಬಿರುಕುಗಳು ಉಂಟಾಗಿವೆ. ಪರಿಣಾಮವಾಗಿ ಸಂಚಾರ ಕಷ್ಟಸಾಧ್ಯವಾಗಿದೆ.

ಜೋಶಿಮಠದಲ್ಲಿನ ಭೂಕುಸಿತಕ್ಕೆ ಹಲವಾರು ಕಾರಣಗಳನ್ನು ತಜ್ಞರು ಮುಂದಿಟ್ಟಿದ್ದಾರೆ. ನಗರವು ಭೌಗೋಳಿಕ ಭದ್ರತೆ ಇಲ್ಲದ ಸ್ಥಳದಲ್ಲಿ ನಿರ್ಮಾಣಗೊಂಡಿರುವುದು ಕುಸಿತದ ಪ್ರಮುಖ ಕಾರಣ ಎನ್ನಲಾಗಿದೆ. ಶತಮಾನಗಳ ಹಿಂದೆ ಸಂಭವಿಸಿದ್ದ ಭೂಕಂಪದಿಂದ ಉಂಟಾದ ಭೂಕುಸಿತದ ಅವಶೇಷಗಳ ಮೇಲೆಯೇ ಊರು ನಿರ್ಮಾಣಗೊಂಡಿದೆ ಎನ್ನಲಾಗಿದ್ದು, ಇದು ಹೆಚ್ಚು ಪ್ರಾಕೃತಿಕ ವಿಕೋಪಗಳಿಗೆ ತೆರೆದುಕೊಳ್ಳುವಂಥ ಪ್ರದೇಶವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅಂದರೆ ಇಲ್ಲಿನ ಮಣ್ಣು ತುಂಬಾ ಸಡಿಲವಾಗಿದ್ದು ಹೆಚ್ಚು ಭಾರವನ್ನು ಹೊರುವ ಸಾಮರ್ಥ್ಯವನ್ನು ಕಳೆದುಕೊಂಡಿದೆ.

ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿರುವುದು ಕೂಡ ಜೋಶಿಮಠ ಹಾಗೂ ಉತ್ತರಾಖಂಡದ ಇತರ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿವೆ ಎನ್ನಲಾಗುತ್ತಿದೆ. ಹಿಮಕರಗಿ ಬರುವ ಹೆಚ್ಚುವರಿ ನೀರನ್ನು ಇಲ್ಲಿನ ಮಣ್ಣು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಪರಿಣಾಮವಾಗಿ ಭೂಕುಸಿತದಂಥ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.

 ಇತ್ತೀಚಿನ ವರ್ಷಗಳಲ್ಲಿ ಜೋಶಿಮಠವು ಜನಸಂಖ್ಯೆ ಮತ್ತು ಕಟ್ಟಡ ಚಟುವಟಿಕೆಗಳಲ್ಲಿ ಉತ್ಕರ್ಷವನ್ನು ಅನುಭವಿಸಿದೆ. ಇದು ಬದರಿನಾಥ್, ಹೇಮಕುಂಡ್ ಸಾಹಿಬ್‌ಗೆ ಗೇಟ್‌ವೇ ಆಗಿದೆ ಮತ್ತು ಚೀನಾ-ಭಾರತದ ಗಡಿಯಲ್ಲಿ ನೆಲೆಗೊಂಡಿರುವ ಸೈನಿಕರ ವೇದಿಕೆಯಾಗಿದೆ. ಹಿಮಾಲಯದ ಚಾರಣಕ್ಕಾಗಿ ಒಂದು ರೀತಿಯ ಬೇಸ್ ಕ್ಯಾಂಪ್ ಆಗಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಹೆಚ್ಚು ಜನವಾಸದಿಂದಾಗಿ ಕಟ್ಟಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಎಲ್ಲೆಡೆ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಜನಸಂಖ್ಯೆಯ ಒತ್ತಡ ಮತ್ತು ಪ್ರವಾಸಿಗರ ಗುಂಪಿನ ಗಾತ್ರವು ಹಲವಾರು ಪಟ್ಟು ಹೆಚ್ಚಾಗಿದೆ. ಹೆಚ್ಚಿದ ಕಟ್ಟಡ, ಜಲವಿದ್ಯುತ್ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯಿಂದಾಗಿ ಇಳಿಜಾರುಗಳು ಹಿಂದಿನ ಕೆಲವು ದಶಕಗಳಿಗಿಂತಲೂ ಅತ್ಯಂತ ಅಸ್ಥಿರವಾಗಿವೆ.

ತನಿಖೆಯ ವೇಳೆ ಇಲ್ಲಿನ ಒಳಚರಂಡಿ ಯೋಜನೆಯೂ ಭೂಕುಸಿತಕ್ಕೆ ಕಾರಣ ಎಂಬುದಂತೂ ಸೋಜಿಗ ಎನಿಸುತ್ತದೆ. ಮಣ್ಣಿನೊಂದಿಗೆ ಬೆರೆತ ಹೆಚ್ಚು ಕಸವು ಚರಂಡಿ ಸೇರುವುದರಿಂದ, ಚರಂಡಿಯು ಒಳಗಿನಿಂದ ಸಡಿಲಗೊಳ್ಳುತ್ತದೆ. ಕಳಪೆ ಒಳಚರಂಡಿ ಮತ್ತು ಕಳಪೆ ಚರಂಡಿ ನಿರ್ವಹಣೆಯು ಭೂಕುಸಿತಕ್ಕೆ ಕಾರಣ ಎನ್ನುವ ಅಂಶ ಗಂಭೀರತೆ ಪಡೆದುಕೊಳ್ಳುತ್ತಿದೆ. ಒಟ್ಟಾರೆ ಮಾನವಜನ್ಯ ಮತ್ತು ನೈಸರ್ಗಿಕ ಎರಡೂ ಅಂಶಗಳು ಜೋಶಿಮಠದ ಅವನತಿಗೆ ಕಾರಣವಾಗಿವೆ ಎಂದು ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ನಿರ್ದೇಶಕ ಕಲಾಚಂದ್ ಸೇನ್ ಹೇಳಿದ್ದಾರೆ.

ಈ ಪ್ರದೇಶದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳು ದಶಕಗಳಿಂದ ಎಚ್ಚರಿಕೆಯನ್ನು ಧ್ವನಿಸುತ್ತಲೇ ಇದ್ದಾರೆ. ಜೀವ ಮತ್ತು ಆಸ್ತಿಗೆ ಅಪಾಯವನ್ನುಂಟುಮಾಡುವ ಗಂಭೀರ ಸಮಸ್ಯೆಯನ್ನು ಸೂಚಿಸುವ ಅಂತಹ ಮೊದಲ ವರದಿಯು 1976ರಲ್ಲಿ ಬಂದಿತು. ಸರಕಾರದಿಂದ ನೇಮಿಸಲ್ಪಟ್ಟ ಮಿಶ್ರಾ ಆಯೋಗವು ವರದಿಯನ್ನು ತಯಾರಿಸಿ ಜೋಶಿಮಠದ ಪ್ರದೇಶವು ಅಪಾಯದಲ್ಲಿವೆ ಎಂಬುದನ್ನು ತಿಳಿಸಿತ್ತು. ಹಾಗಿದ್ದರೂ ಅಲ್ಲಿ ಯಾವುದೇ ರಕ್ಷಣಾತ್ಮಕ ಕಾರ್ಯಗಳು ನಡೆಯಲೇ ಇಲ್ಲ. 2006ರಲ್ಲಿ ವಾಡಿಯಾ ಇನ್‌ಸ್ಟ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳ ತಂಡವು ಸಿದ್ಧಪಡಿಸಿದ ವರದಿಯಲ್ಲಿ ದೈನಂದಿನ ಬಳಕೆಯಿಂದ ತ್ಯಾಜ್ಯ ನೀರು ಅಸಮರ್ಪಕವಾಗಿ ಚರಂಡಿಗಳ ಮೂಲಕ ಹರಿಯುತ್ತದೆ. ನಿರ್ವಹಣೆ ಇಲ್ಲದೆ ಚರಂಡಿಗಳ ನೀರು ಭೂಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಡಾ. ಸ್ವಪ್ನಮಿತಾ ವೈದೇಶ್ವರನ್ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದು ಕೇವಲ ಜೋಶಿಮಠದ ಕತೆಯಲ್ಲ. ನಮ್ಮಲ್ಲೂ ಇಂತಹ ಅನೇಕ ಪ್ರದೇಶಗಳು ಭೂಕುಸಿತವನ್ನು ಅನುಭವಿಸುತ್ತಲೇ ಇವೆ. ಇಂತಹ ಸನ್ನಿವೇಶಗಳಿಂದ ನಾವು ಕಲಿಕಯಬೇಕಾದುದು ಬಹಳ ಇದೆ.

ಮೊದಲನೆಯದಾಗಿ ಕಟ್ಟಡ ನಿರ್ಮಾಣಕ್ಕೂ ಮುನ್ನ ಅಲ್ಲಿನ ಭೂಪ್ರದೇಶದ ಮಣ್ಣಿನ ಸಾಮರ್ಥ್ಯವನ್ನು ಪರೀಕ್ಷಿಸುವುದು. ಮೇಲ್ಮೈ ಮಣ್ಣಿನಡಿ ಇರುವ ಭೂಪ್ರದೇಶವು ಗಟ್ಟಿಯಾಗಿಲ್ಲದಿದ್ದರೆ ಇಂತಹ ಅವಘಡಗಳು ಸಾಮಾನ್ಯ. ಯಾವುದೇ ಜನವಸತಿ ಪ್ರದೇಶವನ್ನು ನಿರ್ಮಿಸುವ ಮುನ್ನ ಚರಂಡಿ ವ್ಯವಸ್ಥೆಯನ್ನು ನಿರ್ವಹಿಸಲು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಹಣದ ಆಮಿಷಕ್ಕಾಗಿ ಕಳಪೆ ಮೇಲ್ಮೈ ಮಣ್ಣನ್ನು ಮರೆಮಾಚಿ, ಬೇರೆ ಪ್ರದೇಶಗಳಿಂದ ಮೇಲ್ಮಣ್ಣು ಹಾಕಿ, ವೈಜ್ಞಾನಿಕ ಹಿನ್ನೆಲೆಯಿಲ್ಲದ ಚರಂಡಿಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾಡಿ ಗ್ರಾಹಕರ ಕಣ್ಣಿಗೆ ಮಣ್ಣು ಎರಚುವ ವಂಚನೆಯ ಜಾಲ ಹೆಚ್ಚುತ್ತಲೇ ಇವೆ. ಕಟ್ಟಡ ನಿರ್ಮಾಣಕ್ಕೂ ಮುನ್ನ ಇಂತಹ ಕುಕೃತ್ಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಇನ್ನು ರಸ್ತೆಯ ಅಕ್ಕಪಕ್ಕಗಳಲ್ಲಿ ವಿವಿಧ ಪೈಪ್‌ಲೆೈನ್ ಯೋಜನೆಯ ಭಾಗವಾಗಿ ಭೂಅಗೆತ ಮಾಡಲಾಗುತ್ತದೆ. ಸರಿಯಾದ ಭೂತಜ್ಞರ ಮಾರ್ಗದರ್ಶನ ಇಲ್ಲದೆ ಇಂತಹ ಅಗೆತಗಳು ಭೂಕುಸಿತಕ್ಕೆ ಕಾರಣವಾಗುತ್ತವೆ. ಯಾವುದೇ ರೀತಿಯ ಭೂಅಗೆತದಂತಹ ಯೋಜನೆಗಳನ್ನು ಕಾರ್ಯಗತಗೊಳಿಸುವ ಮುನ್ನ ಅಲ್ಲಿನ ಮಣ್ಣಿನ ಸಾಮರ್ಥ್ಯ ಮತ್ತು ಜನ ಹಾಗೂ ಇತರ ಜೀವ ವ್ಯವಸ್ಥೆಯ ಮೇಲೆ ಆಗುವ ಮುಂದಾಲೋಚನೆಗಳನ್ನು ತೆಗೆದುಕೊಂಡು ಯೋಜನೆ ಕೈಗೆತ್ತಿಕೊಳ್ಳಬೇಕು. ಇದರಿಂದ ಮಾನವ ಸೇರಿದಂತೆ ಯಾವುದೇ ಜೀವ ಹಾನಿಯನ್ನು ತಪ್ಪಿಸಬಹುದು. ಯಾವುದೇ ಪ್ರದೇಶಗಳಲ್ಲಿ ಅಣೆಕಟ್ಟು, ಬ್ಯಾರೇಜು ಮುಂತಾದ ಜಲಯೋಜನೆಗಳು ಅಥವಾ ಥರ್ಮಲ್ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನ ಅಲ್ಲಿನ ಜೀವವ್ಯವಸ್ಥೆಯ ಕುರಿತು ಅಧ್ಯಯನ ಮಾಡಿ ತೊಂದರೆಯಾಗದಂತೆ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಜನವಸತಿಗೆ ಅನುಕೂಲವಾಗುವಂತಹ ಕಟ್ಟಡ ಅಥವಾ ರಸ್ತೆ ನಿರ್ಮಾಣದಂತಹ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ಭೂತಜ್ಞರ ಅಥವಾ ಭೂವಿಜ್ಞಾನಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಬೇಕು. ಕೇವಲ ಪೇಪರ್ ಅನುಮತಿಯಲ್ಲದೆ ವಾಸ್ತವಾಂಶ ಕುರಿತ ಅಧ್ಯಯನ ಆಧಾರಿತ ಅನುಮೋದನೆ ಅಗತ್ಯ.
ಇಂತಹ ಪ್ರದೇಶಗಳಲ್ಲಿನ ಮಣ್ಣಿನಲ್ಲಿ ಗಟ್ಟಿತನದ ಸಾಮರ್ಥ್ಯವನ್ನು ಹೆಚ್ಚಿಸಲು ಗಿಡಮರಗಳನ್ನು ನೆಡುವುದು ಮತ್ತು ಅವುಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಪ್ರಥಮ ಆದ್ಯತೆ ದೊರೆಯುವಂತಾಗಬೇಕು. ಪ್ರಸಕ್ತ ಜೋಶಿಮಠದ ಭೂಕುಸಿತವು ಬಹುಮುಖ್ಯವಾದ ಭವಿಷ್ಯದ ಪಾಠವಾಗಿದೆ. ಅದರಿಂದ ಕಲಿತ ಪಾಠವನ್ನು ಭವಿಷ್ಯದ ಉನ್ನತಿಗೆ ಬಳಸಿಕೊಂಡರೆ ಒಳಿತಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)