ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಆಯ್ಕೆಯಾಗದ ಸರ್ಫ್ರಾಝ್ ಖಾನ್: ಸಾಮಾಜಿಕ ತಾಣದಲ್ಲಿ ನೋವು ತೋಡಿಕೊಂಡ ಯುವ ಆಟಗಾರ
ಹೊಸದಿಲ್ಲಿ: ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳ ಗಾವಸ್ಕರ್-ಬಾರ್ಡರ್ ಟ್ರೋಫಿ ಸರಣಿಗೆ ಭಾರತ ತಂಡದ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಮತ್ತೊಮ್ಮೆ ಅವಕಾಶ ವಂಚಿತರಾಗಿರುವ 25 ವರ್ಷದ ಯುವ ಪ್ರತಿಭಾನ್ವಿತ ಬ್ಯಾಟರ್ ಸರ್ಫ್ರಾಝ್ ಖಾನ್, 'ಡಾನ್ ಬ್ರಾಡ್ಮನ್' ಅವರನ್ನು ಉಲ್ಲೇಖಿಸಿ ಇನ್ಸ್ಟಾಗ್ರಾಮ್ನಲ್ಲಿ ನಿಗೂಢ ಪೋಸ್ಟ್ ಒಂದನ್ನು ಮಾಡಿದ್ದು, ಇದನ್ನು ಬಿಸಿಸಿಐ ಆಯ್ಕೆದಾರರಿಗೆ ನೀಡಿರುವ ತೀಕ್ಷ್ಣ ಪ್ರತಿಕ್ರಿಯೆ ಎಂದೇ ಕ್ರಿಕೆಟ್ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ ಎಂದು hindustantimes.com ವರದಿ ಮಾಡಿದೆ.
ಕಳೆದ ಮೂರು ದೇಶೀಯ ಋತುವಿನಲ್ಲಿ ರನ್ಗಳ ಸೂರೆ ಮಾಡಿರುವ ಸರ್ಫ್ರಾಝ್ ಖಾನ್ ಹೆಸರನ್ನು ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಗೂ ತಂಡದ ಆಯ್ಕೆದಾರರು ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಪ್ರತಿಭಾವಂತ ಯುವ ಆಟಗಾರನಿಗೆ ಭಾರತ ತಂಡದ ಆಯ್ಕೆಯಲ್ಲಿ ಪದೇ ಪದೇ ಅವಕಾಶ ನಿರಾಕರಿಸಲಾಗುತ್ತಿದ್ದು, ಇದು ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳ ಆಕ್ರೋಶ ಮತ್ತು ಜಿಜ್ಞಾಸೆಗೆ ಕಾರಣವಾಗಿದೆ. ಇದೇ ಪ್ರಶ್ನೆಯನ್ನು ತಂಡದ ಆಯ್ಕೆದಾರರ ಮುಂದಿರಿಸಿರುವ ಸರ್ಫ್ರಾಝ್ ಖಾನ್, ನಾನು ಇದಕ್ಕಿಂತ ಹೆಚ್ಚು ಮತ್ತೇನು ಮಾಡಬೇಕಿದೆ ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.
ಈ ಕುರಿತು ಶನಿವಾರ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮೊದಲ ಪೋಸ್ಟ್ ಮಾಡಿರುವ ಸರ್ಫ್ರಾಜ್ ಖಾನ್, ಮುಂಬೈ ತಂಡದ ಪರವಾಗಿ ತಾವು ಆಡಿರುವ 30 ಇನಿಂಗ್ಸ್ಗಳಲ್ಲಿ 110.73ರ ಸರಾಸರಿಯೊಂದಿಗೆ ಒಟ್ಟು 2436 ರನ್ ಪೇರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಎರಡನೆಯ ಪೋಸ್ಟ್ನಲ್ಲಿ, ನನ್ನ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿನ ಸರಾಸರಿ ರನ್ ಗಳಿಕೆ 80.47 ಇದ್ದು, ಇಡೀ ವಿಶ್ವದಲ್ಲಿ ಐವತ್ತು ಇನಿಂಗ್ಸ್ಗಳ ಪೈಕಿ ಅತಿ ಹೆಚ್ಚು ಸರಾಸರಿ ರನ್ ಗಳಿಕೆ ಹೊಂದಿರುವ ಎರಡನೆ ಬ್ಯಾಟರ್ ಆಗಿದ್ದೇನೆ. ಮೊದಲ ಕ್ರಮಾಂಕದಲ್ಲಿ ಡಾನ್ ಬ್ರಾಡ್ಮನ್ ಇದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ನಿಗೂಢ ಪೋಸ್ಟ್ ಮೂಲಕ ತಂಡದ ಆಯ್ಕೆದಾರರು ತನ್ನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.
2019-20ರ ರಣಜಿ ಋತುವಿನಲ್ಲಿ ಸರ್ಫ್ರಾಝ್ ಖಾನ್, ತಾವು ಆಡಿದ ಆರು ಪಂದ್ಯಗಳ ಪೈಕಿ ಮೂರು ಶತಕ ಮತ್ತು ಎರಡು ಅರ್ಧ ಶತಕ ಸಿಡಿಸಿ, 154.66 ರನ್ ಸರಾಸರಿಯೊಂದಿಗೆ ಒಟ್ಟು 928 ರನ್ ಗಳಿಸಿದ್ದರು. 2021-22ರಲ್ಲಿ ತಮ್ಮ ಸ್ಫೋಟಕ ಫಾರ್ಮ್ ಮುಂದುವರಿಸಿದ್ದ ಅವರು, ನಾಲ್ಕು ಶತಕ, ಎರಡು ಅರ್ಧ ಶತಕ ಗಳಿಸಿ, 122.75 ರನ್ ಸರಾಸರಿಯೊಂದಿಗೆ ಒಟ್ಟು 982 ರನ್ ಗಳಿಸಿದ್ದರು. ಈ ಋತುವಿನಲ್ಲೂ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರಿಸಿರುವ ಸರ್ಫ್ರಾಝ್, ಇಲ್ಲಿಯವರೆಗೆ ಎರಡು ಶತಕ, ಒಂದು ಅರ್ಧ ಶತಕ ಗಳಿಸಿ, 107.75 ರನ್ ಸರಾಸರಿಯೊಂದಿಗೆ ಒಟ್ಟು 431 ರನ್ ಗಳಿಸಿದ್ದಾರೆ. ಹೀಗಿದ್ದೂ ಕಳೆದ ಮೂರು ವರ್ಷದಿಂದ ಅವರಿಗೆ ಅವಕಾಶ ನಿರಾಕರಿಸುತ್ತಿರುವ ಕುರಿತು ಕ್ರಿಕೆಟ್ ಪಂಡಿತರು ವಿಸ್ಮಯಗೊಂಡಿದ್ದಾರೆ.