ಯುವಕರ ಕೈಗೆ ಮದ್ಯದ ಬಾಟಲು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ಸರಕಾರವು 'ಮದ್ಯ ಖರೀದಿಸುವ ವಯಸ್ಸಿನ ನಿರ್ಬಂಧ'ವನ್ನು 21ರಿಂದ 18 ವರ್ಷಕ್ಕೆ ಇಳಿಸುವ ಕುರಿತು ಚಿಂತನೆ ನಡೆಸುತ್ತಿದೆ. ಅದಕ್ಕಾಗಿ ಅಬಕಾರಿ ನಿಯಮಗಳಲ್ಲಿ ತಿದ್ದು ಪಡಿ ಮಾಡುವುದಕ್ಕೆ ಮುಂದಾಗಿದೆ. ಮಂಗಳೂರಿನಲ್ಲಿ ಹಲವು ವೈದ್ಯರು, ವಿದ್ಯಾರ್ಥಿಗಳು ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವುದು ಪತ್ರಿಕೆಗಳ ಮುಖಪುಟ ಸುದ್ದಿಯಾಗುತ್ತಿರುವ ಸಂದರ್ಭದಲ್ಲೇ ಸರಕಾರ ಇಂತಹದೊಂದು ನಿರ್ಧಾರಕ್ಕೆ ಬಂದಿರುವುದು ಸಾರ್ವಜನಿಕರ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಬದುಕಿಗೆ ಅನಿವಾರ್ಯವಾಗಿರುವ ಸತ್ವಯುತ, ಪೌಷ್ಟಿಕ ಆಹಾರಗಳನ್ನು ಕಾನೂನುಗಳ ಮೂಲಕ ಸರಕಾರ ಕಿತ್ತುಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಪೌಷ್ಟಿಕ ಆಹಾರವನ್ನು ಅವರಿಂದ ಕಿತ್ತು, ಅವರ ಕೈಗೆ ಮದ್ಯದ ಬಾಟಲುಗಳನ್ನು ನೀಡಲು ಮುಂದಾಗಿದೆ. ಆಹಾರದ ವಿಷಯದಲ್ಲಿ 'ಸಾತ್ವಿಕ' 'ತಾಮಸ' ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವ ಮಠಾಧೀಶರು, ಯುವಕರಿಗೆ ಮದ್ಯ ಕುಡಿಸುವ ಸರಕಾರದ ನಿರ್ಧಾರದ ಬಗ್ಗೆ ಈವರೆಗೆ ತುಟಿ ಬಿಚ್ಚಿಲ್ಲ.
ಮಾಂಸದ ಮಾರ್ಕೆಟ್‌ನಲ್ಲಿ 'ಮಾಂಸ ತೂಗು ಹಾಕಲಾಗುತ್ತದೆ' ಎಂದು ಬೊಬ್ಬಿಡುತ್ತಿರುವ ಇವರಿಗೆ, ಯುವ ಸಮುದಾಯ ಮದ್ಯ ಮತ್ತು ಗಾಂಜಾದ ಬಲಿಪಶುಗಳಾಗುತ್ತಿರುವುದು ಆತಂಕದ ವಿಷಯವಾದಂತಿಲ್ಲ. ಶಾಲೆ ಕಾಲೇಜುಗಳಲ್ಲಿ ವೌಲ್ಯಯುತ ಶಿಕ್ಷಣಕ್ಕೆ ಮಠಾಧೀಶರು, ಧಾರ್ಮಿಕ ಮುಖಂಡರಿಂದ ಸಲಹೆ ತೆಗೆದುಕೊಳ್ಳುತ್ತಿರುವ ಸರಕಾರವೇ ಮತ್ತೊಂದೆಡೆ ಕಾಲೇಜು ವಿದ್ಯಾರ್ಥಿಗಳಿಗೆ ಮದ್ಯ ಖರೀದಿಗೆ ಅನುಕೂಲ ಮಾಡುತ್ತಿರುವುದು ಏನನ್ನು ಹೇಳುತ್ತದೆ? ಈ ಬಗ್ಗೆ ಮಠಾಧೀಶರು ಸರಕಾರಕ್ಕೆ ಯಾಕೆ ಸಲಹೆಗಳನ್ನು ನೀಡುತ್ತಿಲ್ಲ?
ಆರ್ಥಿಕವಾಗಿ ದಿವಾಳಿಯಾಗಿರುವ ಸರಕಾರ, ಬೌದ್ಧಿಕವಾಗಿಯೂ ದಿವಾಳಿಯಾಗಿರುವ ಸೂಚನೆಯನ್ನು ಇದು ಕೊಟ್ಟಿದೆ. ನಮ್ಮ ಪಾಲಿನ ಜಿಎಸ್‌ಟಿ ಪರಿಹಾರ ನಿಧಿಯನ್ನು ಪಡೆದುಕೊಳ್ಳಲು ವಿಫಲಗೊಂಡಿರುವ ರಾಜ್ಯ ಸರಕಾರ, ಆಡಳಿತ ನಡೆಸುವುದಕ್ಕೆ ಕೈಯಲ್ಲಿ ಕಾಸೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದರಿಂದ, ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿ ತನ್ನ ಖಜಾನೆ ತುಂಬಿಕೊಳ್ಳಲು ಮುಂದಾಗಿದೆೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ, ಚುನಾವಣೆ ಹತ್ತಿರ ಬರುತ್ತಿರುವುದೇ ಸರಕಾರ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣ ಎಂದೂ ಹೇಳಲಾಗುತ್ತಿದೆ.
ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಣ, ಹೆಂಡವನ್ನು ಬೇಕಾ ಬಿಟ್ಟಿಯಾಗಿ ವಿತರಿಸಲಾಗುತ್ತದೆ. 18 ವರ್ಷದ ಯುವಕರಿಗೆ ಮತದಾನದ ಹಕ್ಕು ಇರುವಾಗ ಅವರು ಮದ್ಯ ಖರೀದಿಯ ಹಕ್ಕನ್ನು ಪಡೆದುಕೊಳ್ಳದಿದ್ದರೆ ಚು ನಾವಣೆ ಯಶಸ್ವಿಯಾಗುವುದು ಹೇಗೆ? ಆದುದರಿಂದ, 18 ವರ್ಷದ ಯುವಕರಿಗೆ ಮದ್ಯ ಕುಡಿಸಿ ಅವರ ಮತಗಳನ್ನು ಬುಟ್ಟಿಗೆ ಹಾಕಲು ಸರಕಾರ ಮುಂದಾಗಿದೆಯೆ ಎಂದು ಜನ ಸಾಮಾನ್ಯರು ಸರಕಾರವನ್ನು ಪ್ರಶ್ನಿಸುವಂತಾಗಿದೆ. ಕೊರೋನೋತ್ತರ ದಿನಗಳಲ್ಲಿ ಯುವಕರಿಗೆ ಬೇಕಾಗಿರುವುದು ಶಿಕ್ಷಣ ಮತ್ತು ಉದ್ಯೋಗ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊರೋನ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಆರ್ಥಿಕ ಕಾರಣದಿಂದ ಕಾಲೇಜು ವಿದ್ಯಾಭ್ಯಾಸದಿಂದ ತಪ್ಪಿಸಿಕೊಂಡಿದ್ದಾರೆ. ಅವರೆಲ್ಲ ಅನಿವಾರ್ಯವಾಗಿ ಉದ್ಯೋಗ ಹುಡುಕಬೇಕಾದ ಸ್ಥಿತಿಯಲ್ಲಿದ್ದಾರೆ. ಇದರ ಜೊತೆ ಜೊತೆಗೇ ಸರಕಾರವೇ ಪಠ್ಯ ಪುಸ್ತಕ ವಿರೂಪ, ಹಿಜಾಬ್ ಮೊದಲಾದ ವಿವಾದಗಳನ್ನು ಸೃಷ್ಟಿಸಿ ಶಾಲಾ ಕಾಲೇಜುಗಳ ಪರಿಸರವನ್ನ್ನು ಕೆಡಿಸಿ ಬಿಟ್ಟಿದೆ. ಯುವ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ಬಗ್ಗೆಯೇ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇವರೆಲ್ಲ 18 ದಾಟುತ್ತಿರುವ ಯುವಕರು. ಇವರಿಗೆ ಸೂಕ್ತ ಉದ್ಯೋಗಗಳನ್ನು ನೀಡುವಲ್ಲೂ ಸರಕಾರ ವಿಫಲವಾಗಿದೆ. ಬದಲಿಗೆ ಇವರ ಕೈಗೆ ಚಾಕು, ಚೂರಿಗಳನ್ನು ನೀಡುವ ಪ್ರಯತ್ನ ನಡೆಯುತ್ತಿದೆ.
ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಸಾರ್ವಜನಿಕ ಸಭೆಯಲ್ಲಿ, ಯುವಕರ ಕೈಗೆ ಚಾಕು ಚೂರಿಯನ್ನು ಕೊಡುವುದಕ್ಕೆ ಕರೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ಈಕೆಯ ವಿರುದ್ಧ ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈಕೆಯ ಹೇಳಿಕೆಯನ್ನು ರಾಜ್ಯ ಗೃಹ ಸಚಿವರು ವೌನವಾಗಿ ಸಮ್ಮತಿಸಿದ್ದಾರೆ. ಇದೇ ಸಂದರ್ಭದಲ್ಲಿ, ಯುವಕರ ತಲೆಗೆ ಧರ್ಮ ದ್ವೇಷದ ಅಮಲನ್ನ್ನು ತುಂಬಿಸುವ ಪ್ರಯತ್ನವೂ ವ್ಯಾಪಕವಾಗಿ ನಡೆಯುತ್ತಿದೆ. ಪರಿಣಾಮವಾಗಿ 18 ವರ್ಷದ ತರುಣರು ಕೋಮುಗಲಭೆ, ಹತ್ಯೆ, ಹಲ್ಲೆ ಮೊದಲಾದ ಪ್ರಕರಣಗಳಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಮದ್ಯದ ಅಮಲು ಮತ್ತು ದ್ವೇಷದ ಅಮಲು ಎರಡೂ ಜೊತೆಯಾದರೆ ಅದರ ಪರಿಣಾಮ ಏನಾಗಬಹುದು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಯುವಕರ ಕೈಯಿಂದ ಪೆನ್ನು ಪುಸ್ತಕಗಳನ್ನು ಕಿತ್ತು ಅವರ ಕೈಗೆ ಚಾಕು ಚೂರಿಗಳನ್ನು ನೀಡಿ, ಪೌಷ್ಟಿಕ ಆಹಾರದ ಬದಲಿಗೆ ಮದ್ಯವನ್ನು ಸೇವಿಸಲು ಪ್ರೋತ್ಸಾಹಿಸುವ ಮೂಲಕ ಸರಕಾರ ಯುವ ಸಮಾಜವನ್ನು ಯಾವ ದಿಕ್ಕಿಗೆ ಕೊಂಡೊಯ್ಯಲು ಯತ್ನಿಸುತ್ತಿದೆ ಎನ್ನುವುದನ್ನು ಊಹಿಸುವುದು ಕಷ್ಟವೇನಿಲ್ಲ ಮತ್ತು ಇದರ ನೇರ ಬಲಿಪಶುಗಳು ಶೋಷಿತ ಸಮುದಾಯದ ಬಡ ಯುವಕರು ಎನ್ನುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.
ಸ್ವಾಮಿ ವಿವೇಕಾನಂದರ ಜನ್ಮದಿನದಂದು ಕರ್ನಾಟಕದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲೇ ಸರಕಾರ ಯುವಜನತೆಯ ಕೈಗೆ ಮದ್ಯದ ಬಾಟಲುಗಳನ್ನು ನೀಡಲು ಯೋಜನೆ ರೂಪಿಸುತ್ತಿರುವುದು ಸ್ವಾಮಿ ವಿವೇಕಾನಂದರ ಚಿಂತನೆಗಳಿಗೆ ಮಾಡುವ ಅವಮಾನವಾಗಿದೆ. ಬಲಿಷ್ಠ ಯುವಕರು ದೇಶದ ಆಸ್ತಿ ಎಂದು ವಿವೇಕಾನಂದರು ತಮ್ಮ ಭಾಷಣದಲ್ಲಿ ಕರೆ ನೀಡಿದ್ದರು. ಅವರು ಮಾಂಸಾಹಾರ ಸೇವನೆಗೆ ಎಂದೂ ವಿರೋಧವಾಗಿರಲಿಲ್ಲ. ಆರೋಗ್ಯಯುತವಾದ ದೇಹವನ್ನು ಬೆಳೆಸಿಕೊಳ್ಳಲು ಮಾಂಸಾಹಾರ ಅಗತ್ಯ ಎಂದಿದ್ದರು. ಮದ್ಯ ಸೇವನೆಯನ್ನು ಅವರು ವಿರೋಧಿಸಿದ್ದರು. ಆದರೆ ಸರಕಾರ ಯುವಕರ ಆಹಾರದಲ್ಲಿ ಹಸ್ತಕ್ಷೇಪ ಮಾಡಿ, ಅವರಿಗೆ ಮದ್ಯವನ್ನು ಸೇವಿಸಲು ಪ್ರೋತ್ಸಾಹ ನೀಡುತ್ತಿದೆ. ಯುವಕರನ್ನು ಇನ್ನಷ್ಟು ದುರ್ಬಲರನ್ನಾಗಿಸುವ ಹುನ್ನಾರ ಇದರ ಹಿಂದಿದೆ. ಇಂದು ಹಲವು ರಾಜ್ಯಗಳು ಸಂಪೂರ್ಣ ಮದ್ಯ ನಿಷೇಧವನ್ನು ಮಾಡುವ ಮೂಲಕ ಸುದ್ದಿಯಲ್ಲಿವೆ.
ಬಿಹಾರದಂತಹ ರಾಜ್ಯವೇ ಮದ್ಯವನ್ನು ಸಂಪೂರ್ಣ ನಿಷೇಧಿಸುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಪರಿಣಾಮವಾಗಿ ಇಂದು ಬಿಹಾರದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಗಮನಾರ್ಹವಾಗಿ ಇಳಿಕೆಯಾಗಿದೆ. ಜೊತೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಸ್ವಾಮಿ ವಿವೇಕಾನಂದರ ಬಗ್ಗೆ ಸರಕಾರಕ್ಕೆ ಎಳ್ಳಷ್ಟು ಗೌರವವಿದ್ದರೂ ಅದು ತಕ್ಷಣ ಯುವಕರಿಗೆ ಮದ್ಯ ಕುಡಿಸುವ ತನ್ನ ಯೋಜನೆಯಿಂದ ಹಿಂದೆ ಸರಿಯಬೇಕು. ಅಷ್ಟೇ ಅಲ್ಲ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವನ್ನು ಸಾಧ್ಯವಾಗಿಸಬೇಕು. ಮದ್ಯ ಮಾರಾಟದಿಂದ ಬಂದ ಹಣದಿಂದ ಸರಕಾರ ನಡೆಸುತ್ತೇವೆ ಎನ್ನುವುದು ದೊಡ್ಡ ಸುಳ್ಳು. ಈ ನಾಡಿನ ಜನತೆಯ ಆರೋಗ್ಯ, ಆರ್ಥಿಕತೆಯ ಮೇಲೆ ಈ ಮದ್ಯ ಮಾಡುವ ಅನಾಹುತಕ್ಕೆ ಹೋಲಿಸಿದರೆ ಅದರಿಂದ ಸರಕಾರಕ್ಕೆ ಬರುವ ಹಣ ಏನೇನೂ ಅಲ್ಲ. ಬಂದ ಹಣದ ದುಪ್ಪಟ್ಟನ್ನು ಸರಕಾರ ಕಳೆದುಕೊಳ್ಳಬೇಕಾಗುತ್ತದೆ. ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ, ನೈತಿಕವಾಗಿಯೂ ಪತನದಂಚಿಗೆ ತ ಳ್ಳುವ ಮದ್ಯದಿಂದ ಬಂದ ಹಣ ಈ ನಾಡನ್ನು ವಿನಾಶದೆಡೆಗೆ ಕೊಂಡೊಯ್ಯುತ್ತದೆ ಎನ್ನುವ ಎಚ್ಚರ ನಮ್ಮನ್ನಾಳುವವರಿಗೆ ಇರಬೇಕು