ಓ ಮೆಣಸೇ...
ಒಬ್ಬ ವ್ಯಕ್ತಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇವರಂತೆ ಕಾಣುವುದರಿಂದ ಸರ್ವಾಧಿಕಾರ ಬರುತ್ತದೆ- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಭಾರತೀಯ ರಾಜಕೀಯದಲ್ಲಿ ವ್ಯಕ್ತಿಪೂಜೆಯ ದುಷ್ಟ ಸಂಪ್ರದಾಯವನ್ನು ಆರಂಭಿಸಿದವರು ಈ ಕುರಿತು ಮಾತನಾಡುತ್ತಿರುವುದು ವಿಪರ್ಯಾಸವೆನಿಸುತ್ತದೆ.
ದೇವರು ಆಯುಷ್ಯ ಕೊಟ್ಟರೆ ಇನ್ನೂ ಹತ್ತು ವರ್ಷ ರಾಜಕೀಯದಲ್ಲಿ ಸಕ್ರಿಯನಾಗಿರುವೆ- ಯಡಿಯೂರಪ್ಪ, ಮಾಜಿ ಸಿಎಂ
ದೊಡ್ಡ ದೊಡ್ಡ ದೇವರುಗಳನ್ನು ತಮ್ಮ ಇಚ್ಛಾನುಸಾರ ಕುಣಿಸುವ ಅಷ್ಟೆಲ್ಲಾ ದೊಡ್ಡ ಮಠಾಧೀಶರು ನಿಮ್ಮ ಜೊತೆಗಿರುವಾಗ ನಿಮ್ಮ ಆಯುಷ್ಯದ ಜೊತೆ ಚೆಲ್ಲಾಟವಾಡುವ ಧೈರ್ಯ ಆ ದೇವರಿಗಿದ್ದೀತೇ?
ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ರಾಜಕೀಯವಾಗಿ ಬಳಸುವುದು ವ್ಯರ್ಥ ಪ್ರಯತ್ನ- ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಪೌರೋಹಿತ್ಯಕ್ಕಾಗಿ ನಡೆದ ದುರ್ಬಳಕೆಯನ್ನು ಸುಮ್ಮಸುಮ್ಮನೆ ರಾಜಕೀಯದ ಮೇಲೆ ಯಾಕೆ ಹೊರಿಸುತ್ತೀರಿ?
ಬೇರೆ ದೇಶಗಳಲ್ಲಿ ಭೂಮಿ ಎಂದರೆ ಕೇವಲ ಮಣ್ಣು, ಭಾರತದಲ್ಲಿ ಭೂಮಿಯನ್ನು ಮಾತೆ ಎಂದು ಕರೆಯುತ್ತೇವೆ- ತೇಜಸ್ವಿನಿ ಗೌಡ, ವಿ.ಪ. ಸದಸ್ಯೆ
ಹಾಗಾದರೆ ಮದರ್ ಲ್ಯಾಂಡ್ ಎಂಬ ಪ್ರಾಚೀನ ಇಂಗ್ಲಿಷ್ ಪದವನ್ನು ಭಾರತದಿಂದ ರಫ್ತುಮಾಡಲಾಗಿತ್ತೇ?
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಗೆ ಏರಿಸಲು ತಳಮಟ್ಟದ ಕಾರ್ಯಕರ್ತರಿಂದ ಮಾತ್ರ ಸಾಧ್ಯ- ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಮಾತ್ರವಲ್ಲ ಆ ತಳ ಮಟ್ಟದವರನ್ನು ಕೋಮು ಧ್ರುವೀಕರಣದ ಕಲೆಯಲ್ಲಿ ಪಳಗಿಸಬೇಕಾದುದು ಕೂಡಾ ಅನಿವಾರ್ಯವಾಗಿದೆ.
ನಮ್ಮ ಸ್ವಯಂ ಸೇವಕರು ಸಮಾಜವನ್ನು ಮುನ್ನಡೆಸುವ ಶಕ್ತಿಯಾಗಿದ್ದಾರೆ ವಿನಹ ಒತ್ತಡ ಸೃಷ್ಟಿಸುವ ಘಾತುಕ ಗುಂಪುಗಳಾಗಿ ನಿರ್ಮಾಣವಾಗಿಲ್ಲ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಸಮಾಜವನ್ನು ವಿನಾಶದೆಡೆಗೆ ಮುನ್ನಡೆಸುವ ವಿಷಯದಲ್ಲಿ ಅವರ ಅಮೂಲ್ಯ ಕೊಡುಗೆಯನ್ನು ಯಾರೂ ಪ್ರಶ್ನಿಸಿಲ್ಲ.
ನಾನು ಸಿ.ಟಿ.ರವಿ, ಸ್ಯಾಂಟ್ರೊ ರವಿ ಯಾರೆಂದು ನನಗೆ ಗೊತ್ತಿಲ್ಲ- ಸಿ.ಟಿ.ರವಿ, ಶಾಸಕ
ಆದರೂ ಆತ ನಿಮಗಿಂತ ಉತ್ತಮ ಎಂಬ ಅಭಿಮತ ಸಮಾಜದಲ್ಲಿ ಮೂಡಲು ಕಾರಣವೇನು?
ಜನರು ಈಗ ಬುದ್ಧಿವಂತರಾಗಿದ್ದು, ಮತಬ್ಯಾಂಕ್ ರಾಜಕಾರಣ ನಡೆಯದು- ಬಸವರಾಜ ಬೊಮ್ಮಾಯಿ, ಸಿಎಂ
ಬ್ಯಾಂಕ್‌ಗಳನ್ನು ಕೊಳ್ಳೆ ಹೊಡೆಯುವವರ ಆಡಳಿತವೇ ಎಲ್ಲೆಲ್ಲೂ ಮೆರೆಯುತ್ತಿರುವಾಗ ಮತ ಬ್ಯಾಂಕ್‌ಗಳಿಗೆ ಬೆಲೆ ಎಲ್ಲಿದೆ?
ಶಿಕ್ಷಕ ಮತ್ತು ಪೋಷಕರಿಗೆ ನೈತಿಕ ಶಿಕ್ಷಣದ ಬೋಧನೆ ಆಗಬೇಕು - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಪುರೋಹಿತರು ಮತ್ತು ಪುಢಾರಿಗಳಿಗೆ ಅದರ ಅಗತ್ಯ ಇಲ್ಲವೇ ಇಲ್ಲ, ಅಲ್ಲವೇ ಸ್ವಾಮೀಜಿ?
ಇನ್ನು ಮೂರು ತಿಂಗಳಲ್ಲಿ ನಾನೇ ಕರ್ನಾಟಕದ ಮುಖ್ಯಮಂತ್ರಿ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ- ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಅಯ್ಯಯ್ಯೋ, ಆ ಪರಮ ಸೌಭಾಗ್ಯಕ್ಕಾಗಿ, ನಿಮ್ಮ ಪರಿಚಯವಿಲ್ಲದ ಕನ್ನಡಿಗರು ಅಷ್ಟು ದೀರ್ಘ ಕಾಲ ಕಾಯಬೇಕೇ?
ಉನ್ನತ ಶಿಕ್ಷಣ ವಿಕೇಂದ್ರೀಕರಣಗೊಳ್ಳುವುದಕ್ಕೆ ವಿದೇಶಿ ವಿಶ್ವವಿದ್ಯಾನಿಲಯಗಳ ಜೊತೆ ಒಪ್ಪಂದ ಅಗತ್ಯ - ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವ
ಈ ಹಿಂದೆ ನೀವು ಸ್ವದೇಶಿ ಸ್ವದೇಶಿ ಎಂದು ಪದೇ ಪದೇ ಮಂತ್ರ ಜಪಿಸುತ್ತಿದ್ದಿರಲ್ಲ? ಅದು ಅಕ್ಷರ ದೋಷವಾಗಿತ್ತೇ?
ಕುಟುಂಬಕ್ಕೆ ಒಂದು ಮಗು ಸಾಕು ಎಂಬ ತೀರ್ಮಾನದಿಂದಾಗಿ ನಮ್ಮ (ಬ್ರಾಹ್ಮಣ) ಜನಾಂಗದ ಸಂಖ್ಯೆ ಕಡಿಮೆಯಾಗಿದೆ - ವೇ.ಮೂ.ವಿಶ್ವೇಶ್ವರ ಭಟ್, ಬ್ರಾಹ್ಮಣ ಅರ್ಚಕರ ಪರಿಷತ್ ಅಧ್ಯಕ್ಷ
'ನಾವೆಲ್ಲಾ ಒಂದು' ಅಂದ ಮೇಲೆ, ಶೂದ್ರರು ಮತ್ತು ದಲಿತರ ಜನಸಂಖ್ಯೆಯನ್ನು ನಮ್ಮದೆಂದು ಪರಿಗಣಿಸಿ ನೆಮ್ಮದಿ ಪಡೆಯಬಹುದಲ್ಲವೇ?
21ನೇ ಶತಮಾನದಲ್ಲಿ ಅರ್ಧ ಪ್ಯಾಂಟ್ ತೊಟ್ಟ ಕೌರವರು ದೇಶ ಆಳುತ್ತಿದ್ದಾರೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಮೈ ಮುಚ್ಚಲು ಕೇವಲ ಆ ನಿಮ್ಮ ಪ್ರಖ್ಯಾತ ಟಿ ಶರ್ಟು ಸಾಕೆ? ಅರ್ಧ ಪ್ಯಾಂಟ್ ಆದ್ರೂ ಇದ್ದರೆ ಚೆನ್ನ ಅಲ್ವೇ?
ಕೌಶಲ ಆಧಾರಿತ ಮಾನವ ಸಂಪನ್ಮೂಲದಿಂದ ಭಾರತವು ವಿಶ್ವದ ಪ್ರಗತಿಯ ಇಂಜಿನ್ ಆಗಿ ಹೊರ ಹೊಮ್ಮುತ್ತಿದೆ- ನರೇಂದ್ರ ಮೋದಿ, ಪ್ರಧಾನಿ
ಸುಳ್ಳು ಹೇಳುವ ಕೌಶಲ್ಯದ ಕುರಿತು ಸಂಶೋಧಿಸುತ್ತಿರುವವರು ನಿಮ್ಮನ್ನು ಈಗಾಗಲೇ ಆ ಕೌಶಲ್ಯದ ವಿಶ್ವ ಗುರುವಾಗಿ ಗುರುತಿಸಿದ್ದಾರೆ.
ಕೋಲಾರದ ಪ್ರಬುದ್ಧ ಜನತೆ ಈ ಬಾರಿ ಯೋಚಿಸಿ ಮತ ಚಲಾಯಿಸಲಿದ್ದಾರೆ- ಸುನೀಲ್ ಕುಮಾರ್, ಸಚಿವ
ಯಾರಾದರೂ ಯೋಚಿಸಿ ಮತದಾನ ಮಾಡುತ್ತಾರೆಂದು ತಿಳಿದೊಡನೆ ನೀವು ಅಷ್ಟೊಂದು ಹತಾಶರಾಗುವುದು ಏಕೆ?
ಪುಸ್ತಕಗಳಲ್ಲಿ ತಮಿಳುನಾಡಿನ ಇತಿಹಾಸವನ್ನು ತಿರುಚಿ ಬರೆಯಲಾಗಿದ್ದು, ಅದನ್ನು ತಿದ್ದುಪಡಿ ಮಾಡುವ ಅಗತ್ಯವಿದೆ- ಆರ್.ಎನ್.ರವಿ, ತಮಿಳುನಾಡು ರಾಜ್ಯಪಾಲ
ರಾಜ್ಯಪಾಲರನ್ನು ನೇಮಿಸುವಾಗ ನಡೆಯುವ ಎಡವಟ್ಟುಗಳನ್ನು ಸರಿಪಡಿಸುವುದೇ ಹೇಗೆ?
ಮೇಕ್ ಇನ್ ಇಂಡಿಯಾ ಭಾರತಕ್ಕಷ್ಟೇ ಸೀಮಿತವಾಗಿಲ್ಲ- ರಾಜನಾಥ ಸಿಂಗ್, ಕೇಂದ್ರ ಸಚಿವ
ಚೀನಾದ ಸರಕುಗಳಿಗೂ ಭಾರತದ ಉತ್ಪಾದನೆ ಎಂಬ ಸ್ಥಾನಮಾನ ನೀಡುವ ಆಲೋಚನೆ ಇದೆಯೇ?
ಅಮೆರಿಕದಲ್ಲಿ ಒಂದು ವರ್ಷದಲ್ಲಿ 600 ಗುಂಡಿನ ದಾಳಿ ಪ್ರಕರಣಗಳು ನಡೆದಿವೆ. ಹೀಗಾಗಿ ಜಗತ್ತಿನಾದ್ಯಂತ ನೈತಿಕ ಶಿಕ್ಷಣದ ಅಗತ್ಯವಿದೆ- ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಭಾರತದಲ್ಲಿ 2021ರಲ್ಲಿ ದಲಿತರ ವಿರುದ್ಧ ಸುಮಾರು ಐವತ್ತೊಂದು ಸಾವಿರ ಅಪರಾಧ ಕೃತ್ಯಗಳು ನಡೆದಿವೆ. ಈ ದೃಷ್ಟಿಯಿಂದ ಕನಿಷ್ಠ ಭಾರತದಲ್ಲಾದರೂ ಜಾತಿ ವ್ಯವಸ್ಥೆಯ ವಿರುದ್ಧ ಜಾಗೃತಿ ಬೆಳೆಸುವ ಅಗತ್ಯವಿಲ್ಲವೇ?
ಮುಂದೆ ನಾವು ನೀಡುವ ಭರವಸೆಗಳಿಗೆ ಗ್ಯಾರಂಟಿ ನೀಡಲು ಗ್ಯಾರಂಟಿ ಯಾತ್ರೆ ಮಾಡಲಾಗುವುದು- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆ ಬಳಿಕ ಭರವಸೆಗಳು ಯಾಕೆ ಈಡೇರಲಿಲ್ಲ ಎಂದು ಸಮಜಾಯಿಸಲು ಒಂದು ಸಮಜಾಯಿಷಿ ಯಾತ್ರೆ ನಡೆಸಿದರಾಯಿತು.
ಬಿಜೆಪಿ ದಲಿತರನ್ನು ಸಿಎಂ ಮಾಡುವ ದಿನಗಳು ದೂರವಿಲ್ಲ- ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ
ಬಿಜೆಪಿಯವರಿಂದ, ನಿಮ್ಮನ್ನು ಮುಖ್ಯಮಂತ್ರಿಯಾಗಿಸುತ್ತೇವೆ ಎಂಬ ಆಶ್ವಾಸನೆ ಪಡೆದ ಎಲ್ಲರೂ ತೃಪ್ತರಾಗಬೇಕಾದರೆ ಒಂದೇ ರಾಜ್ಯದಲ್ಲಿ ಕೆಲವು ಸಾವಿರ ಮುಖ್ಯಮಂತ್ರಿ ಪದಗಳನ್ನು ಸೃಷ್ಟಿಸಬೇಕಾದೀತು.
ಗಟ್ಟಿ ಇದ್ದವರು ಬಿಜೆಪಿ ಜೊತೆ ಇರುತ್ತಾರೆ. ಜೊಳ್ಳು ಇದ್ದವರು ಜನಾರ್ದನ ರೆಡ್ಡಿ ಪಕ್ಷಕ್ಕೆ ಹೋಗುತ್ತಾರೆ- ಶ್ರೀರಾಮುಲು, ಸಚಿವ
ಜನಾರ್ದನ ರೆಡ್ಡಿ ಪಕ್ಷಕ್ಕೆ ಹೋದವರು ಅಲ್ಲಿಂದ ನೇರವಾಗಿ ಜೈಲಿಗೆ ರವಾನೆಯಾಗುವ ಸಾಧ್ಯತೆ ಇದೆ.
ಸ್ಯಾಂಟ್ರೊ ರವಿಯಂತಹ ವ್ಯಕ್ತಿಗಳನ್ನು ಬೇರು ಸಮೇತ ಕಿತ್ತೆಸೆಯಲಾಗುವುದು- ಆರಗ ಜ್ಞಾನೇಂದ್ರ, ಸಚಿವ
ಬೇರು ಮುಖ್ಯಮಂತ್ರಿಯವರ ಕುರ್ಚಿಯ ತಳದಲ್ಲಿ ಇರಬಹುದು. ಎಚ್ಚರ ಇರಲಿ.
ಬಿಜೆಪಿಯವರು ಬ್ರಿಟಿಷರಂತೆ ವ್ಯವಹಾರ ಮಾಡಿ ಅಧಿಕಾರಕ್ಕೆ ಬಂದವರು- ಮಧು ಬಂಗಾರಪ್ಪ, ಕಾಂಗ್ರೆಸ್ ಯುವ ನಾಯಕ
ಇಷ್ಟು ಕೆಟ್ಟ ವ್ಯವಹಾರ ಮಾಡಿರಲಿಲ್ಲ ಎಂದರಂತೆ ಬ್ರಿಟಿಷರು.
ಹಿಂದೂ ಸಮುದಾಯದ ಮೇಲೆ ಮತ್ತೊಂದು ಯುದ್ಧ ಸಾರಲಾಗಿದ್ದು ಅದು ಹೊರಗಿನ ವೈರಿಗಳಿಂದಲ್ಲ, ಒಳಗಿನವರಿಂದಲೇ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಆರೆಸ್ಸೆಸ್ ಸಾರಿರುವ ಈ ಯುದ್ಧವನ್ನು ಗೆಲ್ಲುವ ಶಕ್ತಿ ಹಿಂದೂ ಧರ್ಮಕ್ಕಿದೆ.
ವಲ್ಲಭಬಾಯಿ ಪಟೇಲರೇ ಗಡಿ ಸಮಸ್ಯೆಗೆ ಮೂಲ ಕಾರಣ- ದೊಡ್ಡರಂಗೇಗೌಡ, ಹಿರಿಯ ಸಾಹಿತಿ
ನೆಹರೂ ಬಚಾವಾದೆ ಎಂದು ಹಣೆ ಒರೆಸಿಕೊಂಡರಂತೆ.