ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ಬಗೆಹರಿಯದ ‘ಇ-ಸ್ವತ್ತು’ ಸಮಸ್ಯೆ
ಚಿಕ್ಕಮಗಳೂರು, ಜ.16: ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ, ವಿಶೇಷವಾಗಿ ಮಲೆನಾಡಿನ ಗ್ರಾಮೀಣ ಭಾಗದ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು (E-Swathu) ಯೋಜನೆ ಜಾರಿಗೆ ಬಂದ ನಂತರ ಜನರು ತಮ್ಮ ಜಮೀನು, ಮನೆಗಳಿಗೆ ಸಂಬಂಧಿಸಿದ ಹಕ್ಕುಪತ್ರ ಹೊಂದಿದ್ದರೂ ಅವುಗಳಿಗೆ ಅಧಿಕೃತವಾಗಿ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಇತ್ತೀಚಿಗೆ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ವಿಭಾಗದ ನಿರ್ದೇಶಕರು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಸಂಬಂಧಿಸಿದಂತೆ ದಿಶಾಂಕ್ ಆಪ್ ಮೂಲಕ 9, 11ಎ ಮತ್ತು 11ಬಿ ಖಾತೆಗಳನ್ನು ಸರಳವಾಗಿ ಸೃಷ್ಟಿಸಲು ಗ್ರಾಮ ಪಂಚಾಯತ್ ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕಾಧಿಕಾರಿಗೆ ಅಧಿಕಾರ ನೀಡಿ ಆದೇಶ ಮಾಡಿದ್ದಾರೆ. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಖಾತೆ ಮಾಡುವ ಅಧಿಕಾರ ಈ ಹಿಂದೆಯೂ ಗ್ರಾಮ ಪಂಚಾಯತ್‍ಗಳ ಪಿಡಿಒಗಳಿಗಿತ್ತಾದರೂ ಸದ್ಯ ಹೊಸದಾಗಿ ಗ್ರಾಮಠಾಣಾ ಜಾಗಗಳ ಸರ್ವೆ ಮಾಡಿ ಇ-ಸ್ವತ್ತು ನೀಡಲು ದಿಶಾಂಕ್ ಆಪ್ ಮೂಲಕ ಅವಕಾಶ ನೀಡಲಾಗಿದೆ. ಇದರಿಂದ ಇನ್ನು ಮುಂದೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಇ-ಸ್ವತ್ತು ಖಾತೆ ಮಾಡುವ ವಿಧಾನ ಸರಳವಾಗಲಿದೆ ಎನ್ನುವುದು ಸರಕಾರದ ಅಭಿಪ್ರಾಯವಾಗಿದೆ.
ಗ್ರಾಮ ಠಾಣ ಸರಹದ್ದಿನ ಇ-ಸ್ವತ್ತು ಒಂದು ಹಂತಕ್ಕೆ ಬಗೆಹರಿದರೂ ರೆವಿನ್ಯೂ ಭೂಮಿಯಲ್ಲಿ ಕಟ್ಟಿಕೊಂಡಿರುವ ಮನೆ ಮತ್ತು ಆಸ್ತಿಗಳಿಗೆ ಹಕ್ಕುಪತ್ರ ಇದ್ದರೂ 9 ಮತ್ತು11ಎ ಇ-ಸ್ವತ್ತು ಖಾತೆ ಮಾಡುವುದು ಅಸಾಧ್ಯವಾಗಿದೆ. ಎರಡು ಮೂರು ದಶಕಗಳ ಹಿಂದೆ ನೀಡಿರುವ ಜನತಾ ಮನೆ, ಆಶ್ರಯ ಮನೆಗಳಿಗೆ ಹಕ್ಕುಪತ್ರ ಇದ್ದರೂ ಹಕ್ಕುಪತ್ರದಲ್ಲಿ ಚಕ್ಕುಬಂಧಿ ನಮೂದು ಮಾಡದಿರುವುದರಿಂದ 9 ಮತ್ತು 11ಎ ಖಾತೆ ಮಾಡಲು ಸಾಧ್ಯವಾಗುತ್ತಿಲ್ಲ. ಚಕ್ಕುಬಂಧಿ ನಮೂದಿಸದ ಅಧಿಕಾರಿಗಳ ಈ ಹಿಂದಿನ ತಪ್ಪಿನಿಂದಾಗಿ ಈಗ ಜನಸಾಮಾನ್ಯರು ಕಷ್ಟ ಪಡುವಂತಾಗಿದೆ. ಸದ್ಯ ಈಗ ಗ್ರಾಮ ಪಂಚಾಯತ್ ಅಧಿಕಾರಿಗಳು ಚಕ್ಕುಬಂಧಿ ನಮೂದಿಸಲು ಸರ್ವೆ ಸ್ಕೆಚ್ ಕೇಳುತ್ತಿದ್ದು, ಚೆಕ್ಕುಬಂಧಿ ಇಲ್ಲದ ಜನರು ಇ-ಸ್ವತ್ತು ಮಾಡಿಸಿಕೊಳ್ಳಲು ಸಾಧ್ಯವಾಗದೇ ಪರದಾಡುವಂತಾಗಿದೆ.
ಸರ್ವೆ ಸ್ಕೆಚ್‍ಗಾಗಿ ಸರ್ವೇ ಅಧಿಕಾರಿಗಳ ಬಳಿ ಜನರು ಹೋದಲ್ಲಿ, ಸಂಬಂಧಿಸಿದ ಜಾಗ ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಡುತ್ತದೆಯೇ, ಇಲ್ಲವೋ ಎಂದು ತಿಳಿಸುತ್ತಾರೆಯೇ ಹೊರತು ಯಾವುದೇ ಸ್ಕೆಚ್ ನೀಡುವುದಿಲ್ಲ. ಸ್ಕೆಚ್ ಇಲ್ಲದೇ ಗ್ರಾಮ ಪಂಚಾಯತ್‍ಗಳ ಪಿಡಿಒ ಇ ಸ್ವತ್ತು ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದು, ಇದರಿಂದ ಜನರು ಸುಖಾಸುಮ್ಮನೆ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರೆವಿನ್ಯೂ ಭೂಮಿಯಲ್ಲಿ ರಚಿಸಿರುವ ಆಶ್ರಯ ಲೇ ಔಟ್ ಪ್ಲಾನ್ ತಾಲೂಕು ಕಚೇರಿ, ತಾಲೂಕು ಪಂಚಾಯತ ಅಥವಾ ಗ್ರಾಮ ಪಂಚಾಯತ್‍ಗಳ ಬಳಿ ಇರುತ್ತದೆಯೇ ಹೊರತು ಸಾಮಾನ್ಯ ನಾಗರಿಕರ ಬಳಿ ಇರುವುದಿಲ್ಲ. ಇದರಿಂದ ರಾಜ್ಯದ ನಾಗರಿಕರು ಕಳೆದ 10 ವರ್ಷಗಳಿಂಧ ಖಾತೆ ಮಾಡಿಸುವ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕಾದ ಗ್ರಾಮ ಪಂಚಾಯತ್ ಮತ್ತು ಸರಕಾರ ಜನರ ಸಮಸ್ಯೆ ಪರಿಹರಿಸುವ ಕೆಲಸ ಮಾಡದೇ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಸಮಸ್ಯೆ ಸಂಬಂಧ ಗ್ರಾಮ ಪಂಚಾಯತ್ ಅಧಿಕಾರಿಗಳು ಜನರನ್ನು ತಾಲೂಕು ಕಚೇರಿ, ತಾಲೂಕು ಪಂಚಾಯತ್ ಮತ್ತು ಸರ್ವೆ ಇಲಾಖೆಗಳಿಗೆ ಅಲೆದಾಡಿಸುತ್ತಿದ್ದು, ಯಾವುದೇ ದಾಖಲೆ ಇಲ್ಲದೆ ತಾಲೂಕು ಕಚೇರಿಯ ರೆಕಾರ್ಡ್ ರೂಂನಿಂದ ಸರ್ವೆ ಇಲಾಖೆಗೆ ಅರ್ಜಿ ಕಳಿಸುತ್ತಾರೆ. ದಾಖಲೆ ಇಲ್ಲದಿರುವ ಅರ್ಜಿಯನ್ನು ಇಲಾಖೆ ಸಿಬ್ಬಂದಿ ತಿರಸ್ಕರಿಸಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಪರಿಣಾಮ ಜನರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.
ಮನೆ ಮಾರಾಟ ಮಾಡುವವರು, ಬ್ಯಾಂಕ್ ಸಾಲ, ಜಾಮೀನಿಗೆ 9 ಮತ್ತು 11ಎ ದಾಖಲೆ ಇಲ್ಲದೆ ಯಾವುದೇ ವ್ಯವಹಾರ ನಡೆಯುವುದಿಲ್ಲ. ಅಧಿಕೃತ ಹಕ್ಕುಪತ್ರ ಹೊಂದಿದ್ದರೂ ಚಕ್ಕುಬಂಧಿ ಇಲ್ಲದಿರುವ ಕಾರಣಕ್ಕೆ ಜನ ತಾವು ದಶಕಗಳಿಂದ ಬಾಳಿದ ಮನೆ ತಮ್ಮದಲ್ಲ ಎಂಬ ಭಾವನೆ ಹೊಂದುವಂತಾಗಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸದಿದ್ದಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುವುದು ನಿಶ್ಚಿತ ಎಂದು ಗ್ರಾಮೀಣ ಭಾಗದ ಜನರು ಎಚ್ಚರಿಸುತ್ತಿದ್ದಾರೆ.
''ಗ್ರಾಮ ಪಂಚಾಯತ್‍ಗಳಿಗೆ ಅವಕಾಶ ನೀಡಬೇಕು''
ರಾಜ್ಯಾದ್ಯಂತರ ಇರುವ ಎಲ್ಲಾ ಆಶ್ರಯ ಲೇ ಔಟ್‍ಗಳಿಗೆ ಪಂಚಾಯತ್‍ಗಳಲ್ಲಿ ಲಭ್ಯವಿರುವ ದಾಖಲೆ ಪ್ರಕಾರ ಮೂಲ ಹಕ್ಕುಪತ್ರದ ಸತ್ಯಾಸತ್ಯತೆ ಪರಿಶೀಲಿಸಿ ಇ-ಸ್ವತ್ತು ಮೂಲಕ 9 ಮತ್ತು 11ಎ ದಾಖಲಿಸಲು ಗ್ರಾಮ ಪಂಚಾಯತ್‍ಗಳಿಗೆ ಅವಕಾಶ ನೀಡಬೇಕು. ಗ್ರಾಮ ಠಾಣ ವ್ಯಾಪ್ತಿಗೆ ಎಲ್ಲಾ ಆಶ್ರಯ ಲೇಔಟ್‍ಗಳನ್ನು ಡೀಮ್ಡ್ ಗ್ರಾಮ ಠಾಣಾ ಎಂದು ಸೇರಿಸಬೇಕು, ಗ್ರಾಮ ಠಾಣಾ ವ್ಯಾಪ್ತಿ ಮೀರಿ ಬೆಳೆದಿರುವ ಗ್ರಾಮ ಪಂಚಾಯತಿಗಳ ಕಂದಾಯ ಭೂಮಿಯನ್ನು ಅಳತೆ ಮಾಡಿ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಬೇಕು, ಎಲ್ಲಾ ಜನತಾ ಮತ್ತು ಆಶ್ರಯ ಲೇ ಔಟ್‍ಗಳ ನಕ್ಷೆಯನ್ನು ಗ್ರಾಮ ಪಂಚಾಯತ್‍ಗಳಿಗೆ ಕೂಡಲೇ ಒದಗಿಸಿ ಲೇಔಟ್ ನಿವೇಶನ ಸಂಖ್ಯೆಯಂತೆ ಅಧಿಕೃತ ಇ-ಸ್ವತ್ತು ರಚಿಸಬೇಕು. ಇದರಿಂದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಜನರು ತಮ್ಮ ಸ್ವತ್ತುಗಳ ಇ ಸ್ವತ್ತು ಹೊಂದಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.
ಗ್ರಾಮಠಾಣಾ ವ್ಯಾಪ್ತಿಯಲ್ಲಿನ ಆಸ್ತಿ, ಆಶ್ರಯ ಮನೆಯಂತಹ ಸ್ವತ್ತುಗಳಿಗೆ ಇ ಸ್ವತ್ತು ಮಾಡಲು ದಿಶಾಂಕ್ ಆಪ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆದರೆ ತಾಂತ್ರಿಕ ಕಾರಣದಿಂದಾಗಿ ಸಕಾಲದಲ್ಲಿ ಇಸ್ವತ್ತು ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮಠಾಣಾ ಜಾಗ ಹಾಗೂ ಕಂದಾಯ ಜಾಗದ ಸರ್ವೆ ನಂಬರ್ ಗಳ ಬದಲಾವಣೆಯಿಂದಾಗಿ ಅರ್ಜಿ ದಾರರ ಜಾಗ ಗ್ರಾಮಠಾಣ ಜಾಗದಲ್ಲಿದೆಯೋ ಅಥವಾ ಕಂದಾಯ ಜಾಗದಲ್ಲಿದೆಯೋ ಎಂಬ ಗೊಂದಲ ಇದೆ. ಇಂತಹ ಗೊಂದಲದ ಸತ್ತುಗಳ ಅರ್ಜಿಗಳನ್ನು ಸರ್ವೆ ಇಲಾಖೆಗೆ ವರ್ಗಾಯಿಸುತ್ತಿದ್ದೇವೆ. ಸರ್ವೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಗ್ರಾಮ ಠಾಣಾ ಜಾಗ ಆಗಿದ್ದಲ್ಲಿ ಇಸ್ವತ್ತು ಮಾಡಲಾಗುತ್ತಿದೆ.
- ರಾಘವೇಂದ್ರ, ಪಿಡಿಒ, ಅಗಳಗಂಡಿ ಗ್ರಾಮ ಪಂಚಾಯತ್