ಅಬ್ದುಲ್ ರಹ್ಮಾನ್ ಮಕ್ಕಿ ‘ಜಾಗತಿಕ ಭಯೋತ್ಪಾದಕ’: ವಿಶ್ವಸಂಸ್ಥೆಯ ಘೋಷಣೆಗೆ ಭಾರತ ಸ್ವಾಗತ
ಹೊಸದಿಲ್ಲಿ,ಜ.17: ಲಷ್ಕರೆ ತಯ್ಯಿಬಾ ನಾಯಕ ಹಾಫೀಝ್ ಸಯೀದ್(Hafiz Saeed) ನ ಭಾವ ಹಾಗೂ ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಅಬ್ದುಲ್ ರಹಮಾನ್ ಮಕ್ಕಿ(Abdul Rehman Makki)ಯನ್ನು ಜಾಗತಿಕ ಭಯೋತ್ಪಾದಕನೆಂಬುದಾಗಿ ಘೋಷಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೋಮವಾರ ಸ್ವಾಗತಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐಎಸ್ಐಎಲ್ ಹಾಗೂ ಅಲ್ ಖಾಯ್ದ ಮೇಲಿನ ನಿರ್ಬಂಧಗಳ ಸಮಿತಿಯ ನಿರ್ಧಾರವನ್ನು ಸಚಿವಾಲಯವು ಸ್ವಾಗತಿಸುವುದಾಗಿ ವಿದೇಶಾಂಗ ಇಲಾಖೆಯ ವಕ್ತಾರ ಆರಿಂದಮ್ ಬಾಗ್ಚಿ ತಿಳಿಸಿದ್ದಾರೆ. ‘‘ಮಕ್ಕಿಯು ನಿಧಿಸಂಗ್ರಹ ಸೇರಿದಂತೆ ಲಷ್ಕರೆ ತಯ್ಯಬಾ ಸಂಘಟನೆಯಲ್ಲಿ ವಿವಿಧ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದನೆಂದು ಬಾಗ್ಚಿ ತಿಳಿಸಿದ್ದಾರೆ.
ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆಯು ಇನ್ನೂ ದೊಡ್ಡಮಟ್ಟದಲ್ಲಿ ಉಳಿದುಕೊಂಡಿದೆಯೆಂದು ಬಾಗ್ಚಿ ತಿಳಿಸಿದ್ದಾರೆ. ಪ್ರದೇಶದಲ್ಲಿ ಇಂತಹ ಬೆದರಿಕೆಗಳನ್ನು ಹತ್ತಿಕ್ಕಲು ಹಾಗೂ ಭಯೋತ್ಪಾದಕ ಮೂಲ ಸೌಕರ್ಯವನ್ನು ತೊಡೆದುಹಾಕಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳು ಅತ್ಯಂತ ಪರಿಣಾಮಕಾರಿ ಅಸ್ತ್ರವೆಂದು ಅವರು ಹೇಳಿದರು.
‘‘ಭಯೋತ್ಪಾದನೆಗೆ ಶೂನ್ಯ ಮಟ್ಟದ ಸಹಿಷ್ಣುತೆಯ ನಿಲುವನ್ನು ಅನುಸರಿಸುವ ತನ್ನ ಬದ್ಧತೆಯನ್ನು ಭಾರತವು ಉಳಿಸಿಕೊಂಡಿದೆ ಹಾಗೂ ವಿಶ್ವಸನೀಯ, ದೃಢ ಹಾಗೂ ಹಿಂದಕ್ಕೆ ತೆರಳದಂತಹ ಕ್ರಮವನ್ನು ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಒತ್ತಡ ಹೇರುವುದನ್ನು ಭಾರತವು ಮುಂದುವರಿಸಲಿದೆಯೆಂದು ವಿದೇಶಾಂಗ ವಕ್ತಾರರು ತಿಳಿಸಿದರು.