ಯುವ ಬಜೆಟ್ ಕನಸು ನನಸಾಗುವುದೇ?
ಮಾನ್ಯರೇ,
ನಮ್ಮ ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಅಧಿಕವಾಗಿ ಯುವಜನರು ಇದ್ದಾರೆ. ಭಾರತವನ್ನು ಯುವ ಭಾರತವೆಂದೂ ಕರೆಯುತ್ತಾರೆ. ಆದರೆ ಭಾರತದಲ್ಲಿ ಹೆಚ್ಚು ಯುವಜನರು ಇರುವುದು ಎಷ್ಟು ಸತ್ಯವೋ ದೇಶದ ಯುವಜನತೆ ಸಾವಿರ ಸಮಸ್ಯೆಗಳ ಸುಳಿಗೆ ಬಿದ್ದು ಒದ್ದಾಡುತ್ತಿರುವುದೂ ಸತ್ಯವೇ!
ಶಿಕ್ಷಣ, ಉದ್ಯೋಗ, ಆರೋಗ್ಯ, ಸೇವಿಸುವ ಆಹಾರ, ಹಾಕಿಕೊಳ್ಳುವ ಬಟ್ಟೆ, ಇಷ್ಟಪಟ್ಟ ಸಂಗಾತಿಯ ಆಯ್ಕೆ... ಹೀಗೆ ಪ್ರತಿಯೊಂದರಲ್ಲೂ ಈಗ ಯುವ ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತೀ ಹಂತದಲ್ಲೂ ಯುವಜನರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾ ಬಳಲುತ್ತಿದ್ದಾರೆ.
ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಹಕ್ಕುಗಳನ್ನು ಸಂರಕ್ಷಿಸಲು, ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ಯಾವ ರೀತಿಯಾಗಿ ಮಹಿಳೆ ಮತ್ತು ಮಕ್ಕಳ ಆಯೋಗಗಳು ಇವೆಯೋ.. ಹಾಗೆಯೇ ಯುವಜನರ ಹಕ್ಕುಗಳನ್ನು ರಕ್ಷಿಸಲು ಯುವಜನ ಆಯೋಗ ಜಾರಿಗೊಳಿಸುವುದು ಅವಶ್ಯವಾಗಿದೆ. ಅದರ ಜೊತೆಗೆ ಯುವಜನರು ತಮ್ಮ ಸಮಸ್ಯೆಗಳನ್ನು ಹೇಳಲು ಮತ್ತು ಎಲ್ಲಾ ರೀತಿಯ ಸಬಲೀಕರಣಗೊಳ್ಳಲು ಯುವಜನ ಸಬಲೀಕರಣ ನಿಗಮದಂತಹ ಸಾಂಸ್ಥಿಕ ವ್ಯವಸ್ಥೆ ನಿರ್ಮಾಣವಾಗಬೇಕಿದೆ
ಸರಕಾರದ ವಿವಿಧ ಇಲಾಖೆಗಳಲ್ಲಿ ಯುವಜನರಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿವೆ. ಅವುಗಳಿಗೆ ಅಂದಾಜು 20 ಸಾವಿರ ಕೋಟಿ ರೂ. ಗಳಿಗೂ ಅಧಿಕ ಹಣ ಲಭ್ಯವಾಗುತ್ತದೆ ಎಂದು ಯುವಜನ ಸಬಲೀಕರಣ ಇಲಾಖೆ ತಿಳಿಸುತ್ತದೆಯಾದರೂ, ಅದರಲ್ಲಿ ಖರ್ಚಾಗುವುದೆಷ್ಟು ಎಂದು ದೇವರೇ ಬಲ್ಲ. ವರ್ಷಕ್ಕೊಂದು ಯುವಜನೋತ್ಸವ ಕಾರ್ಯಕ್ರಮ, ಕ್ರೀಡಾ ಟೂರ್ನಮೆಂಟ್ಗಳು, ಅಲ್ಲಲ್ಲಿ ಕ್ರೀಡಾ ಮೈದಾನಗಳ ತೇಪೆ... ಇಂತಹ ಕೆಲಸಗಳಲ್ಲೇ ಹಣ ವ್ಯರ್ಥವಾದರೆ ಯುವಜನರ ಸಬಲೀಕರಣವಾಗುವುದು ಹೇಗೆ? ಯುವಜನರು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬೇಕಾದರೆ ಪ್ರಸಕ್ತ ಸಮಯಕ್ಕೆ ಬೇಕಾದ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.
ಈ ಮೊದಲು ಯಡಿಯೂರಪ್ಪನವರ ಅಧಿಕಾರವಿದ್ದಾಗಲೇ ಯುವಜನರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವುದಾಗಿ ಹೇಳಿದ್ದರು. ಆದರೆ ಅದು ನೆರವೇರಲಿಲ್ಲ. ಈಗ ಬಸವರಾಜ ಬೊಮ್ಮಾಯಿಯವರು ಯುವಜನರ ಅಭಿವೃದ್ಧಿಗೆ ಸಾರ್ವಜನಿಕ ಹಣಕಾಸು ಪೂರೈಕೆ ವ್ಯವಸ್ಥಿತಗೊಳಿಸುವಂತೆ ನೆರವಾಗಲು ವಾರ್ಷಿಕ ಯುವ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಬಾರಿಯಾದರೂ ಯುವ ಬಜೆಟ್ ಕನಸು ನನಸಾದರೆ ಯುವಜನರ ಅಭಿವೃದ್ಧಿಗೆ ಬಲ ಬಂದೀತು.