varthabharthi


ಗಲ್ಫ್ ಸುದ್ದಿ

ವಿದೇಶಿ ಯಾತ್ರಿಗಳಿಗೆ ಹಜ್, ಉಮ್ರಾ ಹೆಲ್ತ್‌ ಇನ್ಶೂರೆನ್ಸ್ ಮೊತ್ತವನ್ನು ಕಡಿತಗೊಳಿಸಿದ ಸೌದಿ ಅರೇಬಿಯಾ

ವಾರ್ತಾ ಭಾರತಿ : 18 Jan, 2023

ಮಕ್ಕಾ: ಇತ್ತೀಚೆಗೆ ಮುಕ್ತಾಯಗೊಂಡ 2023ರ ಹಜ್ ಯಾತ್ರೆಯ ನಂತರ  ಉಮ್ರಾ  ನೆರವೇರಿಸುವ ವಿದೇಶಿಯರಿಗೆ ಸಮಗ್ರ ವಿಮೆ ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದು ಸೌದಿ ಅರೇಬಿಯಾ ಪ್ರಕಟಿಸಿದೆ. ಹಜ್ ಮತ್ತು ಉಮ್ರಾ ಸಚಿವಾಲಯವು ವಿಮೆ ಮೊತ್ತವನ್ನು 229.79 ದಿನಾರ್‌ಗಳಿಂದ 85 ದಿನಾರ್‌ಗಳಿಗೆ ಕಡಿತಗೊಳಿಸಿದ್ದು, ಜನವರಿ 10, 2023ರ ನಂತರ ಶೇ. 63ರಷ್ಟು ಕಡಿತ ಮಾಡಿದಂತಾಗಿದೆ ಎಂದು khaleejtimes.com ವರದಿ ಮಾಡಿದೆ.

ವಿದೇಶಗಳಿಂದ ಆಗಮಿಸುವ ಯಾತ್ರಿಗಳಿಗೆ ಹಜ್ ಮತ್ತು ಉಮ್ರಾ ಸಚಿವಾಲಯವು ಏಕೀಕೃತ ಹಾಗೂ ಸಮಗ್ರ ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಈ ವಿಮೆಯ ಅವಧಿಯು ಸೌದಿ ಅರೇಬಿಯಾ ಪ್ರವೇಶಿಸಿದಂದಿನಿಂದ 90 ದಿನಗಳ ಅವಧಿಯದ್ದಾಗಿದೆ ಮತ್ತು ದೇಶದೊಳಗೆ ಮಾತ್ರ ಸೇವೆ ಪಡೆಯಲು ಯೋಗ್ಯವಾಗಿದೆ ಎಂದು Saudi Gazette ವರದಿ ಮಾಡಿದೆ.

ಈ ಯೋಜನೆಯು ಸಾವಿಗೆ ಕಾರಣವಾಗುವ ವೈಯಕ್ತಿಕ ಅಪಘಾತ ಅಥವಾ ಶಾಶ್ವತ ಅಂಗವೈಕಲ್ಯ, ಸಂಚಾರ ಅಪಘಾತಗಳಲ್ಲಿನ ಗಾಯಗಳು, ಹಲವಾರು ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲು ಮತ್ತು ಶಿಶು ಜನನದಂಥ ಸಂದರ್ಭಗಳಲ್ಲಿ ವಿಮಾ ಸೌಲಭ್ಯವನ್ನು ಕಲ್ಪಿಸುತ್ತದೆ. ಇದಲ್ಲದೆ, ಒಂದು ವೇಳೆ ಸಂಬಂಧಿಕರು ಬಯಸಿದರೆ, ಮೃತ ವ್ಯಕ್ತಿಯ ಶರೀರವನ್ನು ಆತನ ಸ್ವದೇಶಕ್ಕೆ ರವಾನಿಸಲು ತಗಲುವ ವೆಚ್ಚವನ್ನೂ ಭರಿಸುತ್ತದೆ.

ತಾವುನಿಯಾ ವಿಮಾ ಕಂಪನಿಯ ನಿರ್ದೇಶನಾನುಸಾರ ದೇಶದಲ್ಲಿನ ಎಲ್ಲ ಸ್ಥಳೀಯ ವಿಮಾ ಕಂಪನಿಗಳು ಈ ಯೋಜನೆಯನ್ನು ಒದಗಿಸುತ್ತಿವೆ. ಹಜ್ ಯಾತ್ರಿಕರ ವಿಮಾ ಮೊತ್ತವನ್ನು ಶೇ. 73ರಷ್ಟು ತಗ್ಗಿಸುವ ಮೂಲಕ ಹಜ್ ಯಾತ್ರೆ ವೆಚ್ಚವನ್ನು ಕಡಿತಗೊಳಿಸಿ, ಯಾತ್ರೆಗೆ ಅನುವು ಮಾಡಿಕೊಟ್ಟಿರುವ ಸೌದಿ ಅರೇಬಿಯಾ ಸರ್ಕಾರ, ಅದರ ನಾಯಕರು ಹಾಗೂ ಜನರ ಔದಾರ್ಯಕ್ಕೆ ಇಸ್ಲಾಮಿಕ್ ಸಹಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹುಸೇನ್ ಇಬ್ರಾಹಿಂ ತಾಹಾ ಧನ್ಯವಾದ ಸಲ್ಲಿಸಿದ್ದಾರೆ ಎಂದು ಸೌದಿ ಅರೇಬಿಯಾ ಪತ್ರಿಕಾ ಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮುನ್ನ, ಪ್ರವಾಸಿ ಮತ್ತು ವಾಣಿಜ್ಯಾತ್ಮಕ ವೀಸಾ ಹೊಂದಿರುವ ಯಾತ್ರಿಗಳಿಗೆ ಸೌದಿ ಅರೇಬಿಯಾದಲ್ಲಿದ್ದಾಗ ಉಮ್ರಾ ಯಾತ್ರೆ ನೆರವೇರಿಸಲು ಅವಕಾಶ ನೀಡಲಾಗುವುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪ್ರಕಟಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)