ಬೇರೊಂದು ಪಿರಮಿಡ್
ಬಿಂಬಗಳು
ಸಾವಿರಾರು ಜನರು ಸಮರೋಪಾದಿಯಲ್ಲಿ ಹಗಲಿರುಳು ದುಡಿದರು ಪಿರಮಿಡ್ ಕಟ್ಟುವುದಕ್ಕೆ ನೂರಾರು ವರ್ಷಗಳೇ ಹಿಡಿಯುತ್ತಿತ್ತು. ಬೃಹದಾಕಾರದ ಬಂಡೆಗಳನ್ನು ಕಡಿದು, ಎಲ್ಲಿಂದಲೋ ಕಲ್ಲುಗಳನ್ನು ಎಳೆದುತಂದು, ಒಂದೇ ಅಳತೆಗೆ ಕೆತ್ತಿ, ಒಂದೊಂದೇ ಜೋಡಿಸಬೇಕಿತ್ತು. ಈ ದೈತ್ಯ ಪಿರಮಿಡ್ ಈಜಿಪ್ಟಿನ ಫೆರೊವಿನ ಅಂತಿಮ ಮತ್ತು ಶಾಶ್ವತ ಶಯನ ಗೃಹವಾಗಿತ್ತು. ಅಂತ್ಯಕ್ರಿಯೆಗಾಗಿ ತಂದಿದ್ದ ಹೇರಳ ಸಂಪತ್ತಿನಿಂದ ಸುತ್ತುವರಿದಿದ್ದ ರಾಜ/ರಾಣಿಯ ಪಾರ್ಥಿವ ಶರೀರ ಇರಿಸಲಾಗುತ್ತಿದ್ದ ಸ್ಥಳ ಈ ಪಿರಮಿಡ್‌ಗಳಾಗಿದ್ದವು.
ಈಜಿಪ್ಟಿಯನ್ ಸಮಾಜ ಈ ಕಲ್ಲಿನ ಪಿರಮಿಡ್‌ಗಳನ್ನು ಮಾತ್ರ ಕಟ್ಟಲಿಲ್ಲ, ಅಲ್ಲಿನ ಸಮಾಜವೇ ಒಂದು ಪಿರಮಿಡ್ ಆಗಿತ್ತು. ಆ ಪಿರಮಿಡ್ ತಳದಲ್ಲಿ ಭೂರಹಿತ ಕೃಷಿಕರು, ಕೂಲಿಯಾಳುಗಳಿರುತ್ತಿದ್ದರು. ಆತ ನೈಲ್ ನದಿಯಲ್ಲಿ ಪ್ರವಾಹ ಬಂದಾಗ ಕಟ್ಟೆಗಳನ್ನು ಎತ್ತರಿಸುತ್ತಿದ್ದ, ಹೊಸ ಕಾಲುವೆಗಳನ್ನು ತೋಡುತ್ತಿದ್ದ, ಕೋಪಗೊಂಡ ದೇವತೆಗಳನ್ನು ಶಾಂತಗೊಳಿಸಲು ದೇವಾಲಯಗಳನ್ನೂ ಕಟ್ಟುತ್ತಿದ್ದ. ಮತ್ತೆ ಕಾಲುವೆಗಳಲ್ಲಿ ನೀರು ಹರಿದು ಬಂದಾಗ ಬೇರೆಯವರ ಜಮೀನಿನಲ್ಲಿ ದುಡಿಯುತ್ತಿದ್ದ.
ನಾಲ್ಕು ಸಾವಿರ ವರ್ಷಗಳ ಹಿಂದಿನ ಭೂರಹಿತ ಕೃಷಿಕರನ್ನು, ಬರಹಗಾರ ದುಹ ಖೆಟಿ ಹೀಗೆ ಚಿತ್ರಿಸುತ್ತಾನೆ-
ರೈತ ನೊಗ ಹೊರುತ್ತಾನೆ
ಆ ಹೆಣಭಾರಕ್ಕೆ ಹೆಗಲು ಕುಗ್ಗಿಹೋಗಿದೆ
ಕೊರಳಲಿ ಕೀವುಗಟ್ಟಿದ ಗಾಯಗಳಿವೆ
ಮುಂಜಾನೆ ಈರುಳ್ಳಿ ಬೆಳೆಗೆ ನೀರು ಹಾಯಿಸಿದರೆ
ಮುಸ್ಸಂಜೆ ಸೊಪ್ಪಿನ ಹೊಲಕ್ಕೆ ನೀರು ಹರಿಸುತ್ತಾನೆ
ಬಿರುಬಿಸಿಲಿನ ಮಧ್ಯಾಹ್ನ ತಾಳೆಮರಕ್ಕೆ ನೀರು ಕಟ್ಟುತ್ತಾನೆ
ಕೆಲವು ಬಾರಿ ಅಲ್ಲೇ ಕುಸಿದು ಬಿದ್ದು ಸಾಯುತ್ತಾನೆ ಕೂಡ.
ಅವನ ಅಂತ್ಯಕ್ರಿಯೆಯಲ್ಲಿ ಯಾವುದೊಂದು ಪುಟ್ಟ ಸ್ಮಾರಕವು ಏಳಲಿಲ್ಲ. ಬದುಕಿದ್ದಾಗ ಬೆತ್ತಲೆ, ಸತ್ತಾಗ ಬೆತ್ತಲೆ. ಧೂಳು, ಮಣ್ಣು ಅವನ ಮನೆ.
ಬದುಕಿದ್ದಾಗ ಅವನು ಮಲಗುತ್ತಿದ್ದ ಚಾಪೆಯನ್ನು ಮರುಭೂಮಿಯ ರಸ್ತೆ ಬದಿಯಲ್ಲಿ ಹಾಸಿ ಅವನ ದೇಹವನ್ನು ಮಲಗಿಸಿ, ಪಕ್ಕದಲ್ಲಿ ಆತ ನೀರು ಕುಡಿಯಲು ಬಳಸುತ್ತಿದ್ದ ಕೆಮ್ಮಣ್ಣಿನ ಹೂಜಿಯನ್ನ ಇಡಲಾಗುತ್ತಿತ್ತು. ಮಣ್ಣಿಗೆ ಮುಂಚೆ ಆತನ ಮುಷ್ಟಿಯೊಳಕ್ಕೆ ಒಂದು ಹಿಡಿ ಗೋಧಿಯನ್ನು ತುರುಕಲಾಗುತಿತ್ತು, ಹಸಿವಾದರೆ ತಿನ್ನಲಿಕ್ಕೆ!