ದ.ಕ ಜಿಲ್ಲೆಗೆ ಹೆಚ್ಚುವರಿ ಮಹಿಳಾ ಪೊಲೀಸ್ ಠಾಣೆ ಅಗತ್ಯವಿದೆ: ಮಮತಾ ಗಟ್ಟಿ
ಮಂಗಳೂರು, ಜ.19: ದ.ಕ ಜಿಲ್ಲೆಯಲ್ಲಿ ಹೆಚ್ಚುವರಿ ಮಹಿಳಾ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೀ ಕಾರ್ಯಕ್ರಮದ ಮೂಲಕ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಮಾಸಿಕ ರೂ. 2,000 ಭತ್ತೆ ನೀಡಲಿದೆ ಮತ್ತು ಪ್ರತಿ ಕುಟುಂಬಕ್ಕೆ ವಾರ್ಷಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ವಿಶೇಷ ಯೋಜನೆಯನ್ನು ದಕ್ಷಿಣ ಕನ್ನಡದ ಮಹಿಳಾ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದರು.
ಭೇಟಿ ಬಚಾವೋ ಎಂದು ಪ್ರಧಾನಿ ಘೋಷಣೆ ಮಾತ್ರ ಮಾಡಿದ್ದಾರೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಸಾಗಿದೆ. ಮಹಿಳಾ ಸುರಕ್ಷೆಗಾಗಿ ಮೀಸಲಿಟ್ಟ ನಿರ್ಭಯಾ ಯೋಜನೆಯ ಹಣವನ್ನು ಸರಿಯಾಗಿ ಬಳಸದೆ ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ಮದ್ಯಪಾನದ ದುಷ್ಪರಿಣಾಮದ ಅರಿವಿದ್ದರೂ ಮದ್ಯ ಸೇವಿಸಲು 21 ವಯೋಮಾನದ ಮಿತಿಯನ್ನು 18ವರ್ಷಕ್ಕೆ ಇಳಿಸಿ ಮನೆಯ ಮಹಿಳೆಯರು ಇನ್ನಷ್ಟು ಸಂಕಷ್ಟಕ್ಕೆ ಈಡಾಗುವಂತೆ ಮಾಡಿದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿ ಜಾರಿ ಮಾಡಲಾದ ಯೋಜನೆಗಳನ್ನು ಬಿಜೆಪಿ ನೇತೃತ್ವದ ಸರಕಾರ ನಿರ್ಲಕ್ಷಿಸಿದೆ ಎಂದ ಅವರು, ಮಡಿಲು, ಮನಸ್ವಿನಿ,ಮಾತೃ ಪೂರ್ಣ ಯೋಜನೆ,ಸ್ತ್ರೀಶಕ್ತಿ ಯೋಜನೆ, ಸ್ವ ಸಹಾಯ ಸಂಘಗಳ ಬಡ್ಡಿ ಮನ್ನಾ ಯೋಜನೆಯ ಮೂಲಕ ಮಹಿಳೆಯರಿಗೆ ನೆರವು ನೀಡಿದೆ ಎಂದರು.
ಜ.22 ಪ್ರಜಾ ಧ್ವನಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕೆಂದು ಮಮತಾ ಗಟ್ಟಿ ಕೋರಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಸುರೇಖಾ ಚಂದ್ರ ಹಾಸ್, ಮಲ್ಲಿಕಾ ಪಕ್ಕಳ, ಚಂದ್ರ ಕಲಾ, ಚಂದ್ರಿಕಾ ರೈ, ಸಬೀತಾ ಮಿಸ್ಕಿತ್, ತನ್ವಿರ್ ಶಾ, ಶಾಂತಳಾ ಗಟ್ಟಿ ಉಪಸ್ಥಿತರಿದ್ದರು.