ಕಲಬುರಗಿ: ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ ಪ್ರಧಾನಿ ಮೋದಿ
ಕಲಬುರಗಿ, ಜ.19: ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ, ಹಟ್ಟಿ, ಹಾಡಿ ಮುಂತಾದ ಜನವಸತಿ ಪ್ರದೇಶಗಳನ್ನು ಸರಕಾರದ ಯೋಜನೆಗಳಡಿ ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ನಿರ್ಮಿಸಿ, ಇಲ್ಲಿನ ಜನರಿಗೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್, ನಲ್ಲಿ ನೀರು, ಅಡುಗೆ ಅನಿಲ ಸಂಪರ್ಕ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ನಾವು ತಯಾರಿಸಿದ ಅಡುಗೆಯನ್ನು ಬಿಜೆಪಿಯವರು ಬಡಿಸುತ್ತಿದ್ದಾರೆ: ಸಿದ್ದರಾಮಯ್ಯ
ಗುರುವಾರ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ, ಕಂದಾಯ ಇಲಾಖೆ ವತಿಯಿಂದ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಗಳ 342 ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ಗ್ರಾಮಗಳ 52,072 ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸುವ ನಿಟ್ಟಿನಲ್ಲಿ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲಂಬಾಣಿ ಭಾಷೆಯಲ್ಲಿಯೇ ತಮ್ಮ ಭಾಷಣ ಪ್ರಾರಂಭಿಸಿದ ಮೋದಿ, ‘ಕರ್ನಾಟಕ ತಾಂಡೇರ್ ಮಾರ್ ಗೋರ್ ಬಂಜಾರ ಭಾಯಿ-ಬಿಯಾ, ನಾಯ್ಕ, ಕಾರಬಾರಿ, ಹಾತ್ ಜೋಡೇನ್ ರಾಮ್ ರಾಮ್, ಜೈ ಸೇವಾ ಲಾಲ್ ಮಹಾರಾಜ್’ ಎನ್ನುತ್ತಿದ್ದಂತೆಯೇ ಸಮಾರಂಭದಲ್ಲಿ ನೆರೆದಿದ್ದ ಸಮುದಾಯದವರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಜನವರಿ ಮಾಸವು ನಮಗೆಲ್ಲ ಅತ್ಯಂತ ಮಹತ್ವದ್ದಾಗಿದ್ದು, ಇದೇ ತಿಂಗಳಿನಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂದಿತು. ಇಂತಹ ಪವಿತ್ರ ತಿಂಗಳಿನಲ್ಲಿಯೇ ಕರ್ನಾಟಕ ಸರಕಾರ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ, ಅಲೆಮಾರಿ ಜನಾಂಗದವರಿಗೆ ಹಕ್ಕು ಪತ್ರ ನೀಡುವ ಮೂಲಕ ಬಹುದೊಡ್ಡ ಹೆಜ್ಜೆ ಇರಿಸಿದೆ. ಇದು ಬಂಜಾರ ಸಮುದಾಯದ ಲಕ್ಷಾಂತರ ಜನಕ್ಕೆ ಅತಿದೊಡ್ಡ ದಿನವಾಗಿದೆ ಎಂದು ಅವರು ಹೇಳಿದರು.
ರಾಜ್ಯದ ತಾಂಡಾಗಳಲ್ಲಿನ ಸಾವಿರಾರು ಕುಟುಂಬಗಳ ಉಜ್ವಲ ಭವಿಷ್ಯವನ್ನು ಸುನಿಶ್ಚಿತಗೊಳಿಸಿದೆ. 1993ರಲ್ಲಿಯೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಸಾಕಾರಗೊಳಿಸಲು ನಮ್ಮ ಸರಕಾರವೇ ಬರಬೇಕಾಯಿತು ಎಂದು ಹೇಳಿದ ಅವರು, ಬಂಜಾರ ಸಮುದಾಯದ ಲಕ್ಷಾಂತರ ತಾಯಿ, ತಂದೆಯರು ತಮ್ಮ ಸಾಂಪ್ರಾದಾಯಿಕ ಉಡುಪಿನೊಂದಿಗೆ ಆಗಮಿಸಿ, ನನ್ನನ್ನು ಆಶೀರ್ವದಿಸಿರುವುದನ್ನು ನಾನೆಂದೂ ಮರೆಯುವುದಿಲ್ಲ ಎಂದರು.
ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಮಳೆ ಕಡಿಮೆ, ನೀರಿನ ಕೊರತೆ ಇದ್ದರೂ, ಇಂತಹ ಅನೇಕ ಕಡೆ ಅಲ್ಲಲ್ಲಿ ಸಿಗುವ ನೀರಿನ ತಾಣಗಳನ್ನು ಯಾರು ನಿರ್ಮಿಸಿದ್ದಾರೆ ಎಂದು ಪ್ರಶ್ನಿಸಿದರೆ, ಅಲ್ಲಿನ ಜನರಿಂದ ಬರುವ ಉತ್ತರ ‘ಲಾಖಾ ಬಂಜಾರ’ ಎಂದೇ ಆಗಿರುತ್ತದೆ. ಹೀಗೆ ಬಂಜಾರ ಸಮುದಾಯದ ಕಾಣಿಕೆ ಈ ನಾಡಿಗೆ ಬಹುದೊಡ್ಡದು ಎಂದು ಪ್ರಧಾನಿ ಬಣ್ಣಿಸಿದರು.
ರಾಷ್ಟ್ರದ ಪ್ರಗತಿಗೆ ಬಂಜಾರ ಹಾಗೂ ಅಲೆಮಾರಿ ಸಮುದಾಯ ಬಹುದೊಡ್ಡ ಕಾಣಿಕೆಯನ್ನು ನೀಡುತ್ತಾ ಬಂದಿದೆ. ಬಸವಾದಿ ಶರಣರು ಅನುಭವ ಮಂಟಪ ಮೂಲಕ ಬಹು ಹಿಂದೆಯೇ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ್ದರು, ಇದೇ ಸಿದ್ಧಾಂತದೊಂದಿಗೆ ನಾವು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹಾಗೂ ಸಬ್ ಕಾ ಪ್ರಯಾಸ್’ ತತ್ವವನ್ನು ಅನುಸರಿಸುತ್ತಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.
ಬಂಜಾರ ಸಮುದಾಯ ಬಹಳಷ್ಟು ವರ್ಷ ಖಾಯಂ ನೆಲೆ, ಸೂರು ಇಲ್ಲದೆ ಸಂಕಷ್ಟವನ್ನು ಎದುರಿಸಿದೆ, ತಮ್ಮ ಹಕ್ಕಿಗಾಗಿ ಬಹು ದೀರ್ಘಕಾಲ ಹೋರಾಡಿದ್ದಾರೆ. ಈಗ ಅವರು ಕೂಡ ಗೌರವ, ಅಭಿಮಾನದಿಂದ ಬದುಕುವ ಕಾಲ ಬಂದಿದೆ. ಸಮುದಾಯದ ಯುವ ಪ್ರತಿಭೆಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್, ಕೌಶಲ್ಯ ತರಬೇತಿ, ಉದ್ಯೋಗ ದೊರಕಿಸಲು ಶ್ರಮಿಸಲಾಗುವುದು. ಬಂಜಾರ ಸಮುದಾಯದವರು ಇನ್ನು ನಿಶ್ಚಿಂತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.
ತಾಂಡಾಗಳಿಗೆ ಗ್ರಾಮಗಳ ಸ್ಥಾನಮಾನ ನೀಡಿ, ಎಲ್ಲ ಬಗೆಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿ ತ್ವರಿತವಾಗಿ ಅಭಿವೃದ್ಧಿಪಡಿಸಲಾಗುವುದು. ಸ್ವಾಮಿತ್ವ ಯೋಜನೆ ಮೂಲಕ ಆಸ್ತಿ ದಾಖಲೆಗಳನ್ನು ನೀಡುತ್ತಿದ್ದೇವೆ. ಕೇಂದ್ರ ಸರಕಾರ 90ಕ್ಕೂ ಹೆಚ್ಚು ಬಗೆಯ ವನೋತ್ಪತ್ತಿಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುತ್ತಿದ್ದು, ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ ನಿವಾಸಿಗಳಿಗೂ ಈ ಸವಲತ್ತು ಸಿಗಲಿದೆ ಎಂದು ಪ್ರಧಾನಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ತಾಂಡಾ, ಹಾಡಿ, ಹಟ್ಟಿ ಮುಂತಾದ ಜನವಸತಿ ಪ್ರದೇಶಗಳ ಜನರ ಜಾಗ ನಿಮ್ಮದಾಗಿರಲಿಲ್ಲ. 50 ವರ್ಷಗಳ ಬೇಡಿಕೆಯನ್ನು ಪ್ರಧಾನಿ ಪ್ರೇರಣೆಯಿಂದಾಗಿ ನಾವು ಈಡೇರಿಸಿದ್ದೇವೆ. ನಮ್ಮ ಡಬಲ್ ಇಂಜಿನ್ ಸರಕಾರ ಸಾಮಾಜಿಕ ಭದ್ರತೆ ಕೊಡುವ ಮೂಲಕ ಇಂತಹ ಶೋಷಿತ ಸಮುದಾಯಕ್ಕೆ ಸಾಮಾಜಿಕ ಪರಿವರ್ತನೆ ಮಾಡುತ್ತಿದೆ ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮೂಲಕ ಕಂದಾಯ ಕ್ರಾಂತಿ ರಾಜ್ಯದಲ್ಲಿ ಆಗುತ್ತಿದೆ. ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿರುವ ಗ್ರಾಮಗಳಲ್ಲಿನ ಜನರಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದ್ದು, ಇವರಿಗೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಅವರ ಆಸ್ತಿಯನ್ನು ಉಚಿತವಾಗಿ ನೊಂದಣಿ ಮಾಡಿಸಿ, ಅವರಿಗೆ ದಾಖಲೆ ನೀಡುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಒಂದೇ ದಿನ, ಒಂದೇ ವೇದಿಕೆ ಸಮಾರಂಭದಲ್ಲಿ 52,072 ಹಕ್ಕು ಪತ್ರಗಳನ್ನು ಲಂಬಾಣಿ ತಾಂಡಾ ಫಲಾನುಭವಿಗಳಿಗೆ ವಿತರಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದಕ್ಕಾಗಿ, ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್‍ನ ಕರ್ನಾಟಕದ ಉಪಾಧ್ಯಕ್ಷೆ ವಸಂತ ಕವಿತಾ ಅವರು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ರೆಕಾರ್ಡ್‍ನ ಪ್ರಮಾಣಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಸಚಿವ ಭಗವಂತ ಖೂಬಾ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ್ ನಿರಾಣಿ. ಸಚಿವ ಪ್ರಭು ಚವ್ಹಾಣ, ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ, ಸಂಸದ ಡಾ. ಉಮೇಶ್ ಜಾಧವ್, ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಅವರಿಂದ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಇನ್ನಿತರ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಸಮಾರಂಭ.@narendramodi https://t.co/4M9O7qPi19
— Basavaraj S Bommai (@BSBommai) January 19, 2023