ಅಧಿಕಾರ ಮತ್ತು ಸಹಾನುಭೂತಿಯ ಸಮನ್ವಯ ಜಸಿಂಡಾ ಆರ್ಡರ್ನ್
ವಿಶ್ವನಾಯಕರು ಗುರುತಿಸಿದಂತೆ ಅವರ ಪ್ರತಿಯೊಂದು ನಡೆಯ ಹಿಂದೆ ಇರುವುದು ಸಹಾನುಭೂತಿ, ಆದರೆ ನಿರ್ಣಾಯಕ ನಿಲುವು. ಹುದ್ದೆ ತ್ಯಜಿಸುವ ನಿರ್ಧಾರ ಪ್ರಕಟಿಸಿದಾಗಲೂ ಅವರು ಅದನ್ನೇ ಪುನರುಚ್ಚರಿಸಿದ್ದಾರೆ.
ಇನ್ನೂ 42ರ ಹರೆಯದ, ವಿಶ್ವವೇ ಮೆಚ್ಚಿರುವ ನಿಜವಾದ ನಾಯಕಿ, ಅಧಿಕಾರಾವಧಿ ಇನ್ನೂ ನಾಲ್ಕು ವರ್ಷ ಬಾಕಿಯಿರುವಾಗಲೇ, ತಾನಿನ್ನು ಈ ಹುದ್ದೆಯಲ್ಲಿ ಮುಂದುವರಿಯಲು ಸಮರ್ಥಳಲ್ಲ, ಸಮರ್ಥ ನಾಯಕರು ಈ ಹೊಣೆ ಹೊರಲಿ ಎಂದು ಮುಕ್ತ ಮನಸ್ಸಿನಿಂದ ಹೇಳಿ ಹುದ್ದೆ ತ್ಯಜಿಸುವ ನಿರ್ಧಾರ ಪ್ರಕಟಿಸುವುದಿದೆಯಲ್ಲ, ಅದು ಸಾಧಾರಣ ಸಂಗತಿಯಲ್ಲ. ನ್ಯೂಝಿಲೆಂಡ್ ಪ್ರಧಾನಿ ಜಸಿಂಡಾ ಆರ್ಡರ್ನ್ ತಮ್ಮ ದಿಢೀರ್ ರಾಜೀನಾಮೆ ಮೂಲಕ ಜಗತ್ತನ್ನೇ ಅಚ್ಚರಿಗೆ ತಳ್ಳಿದ್ದಾರೆ. ಅವರ ನಿರ್ಧಾರ ಒಂದೆಡೆ ಆಘಾತ ತಂದರೂ, ಆಕೆಯ ಮಹಾನಾಯಕತ್ವದ ಗುಣ ಮತ್ತೊಮ್ಮೆ ಜಗತ್ತಿಗೆ ಕಾಣಿಸಿದೆ ಎಂಬುದು ನಿಜ.
ಫೆಬ್ರವರಿ 7 ಪ್ರಧಾನಿ ಹುದ್ದೆಯಲ್ಲಿ ಅವರ ಕೊನೇ ದಿನವಾಗಲಿದೆ. 2017ರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಪ್ರಧಾನಿಯಾದ ಜಸಿಂಡಾ ಆರ್ಡರ್ನ್, ಮೂರು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ತಮ್ಮ ಆಡಳಿತಾರೂಢ ಲೇಬರ್ ಪಕ್ಷವನ್ನು ಭಾರೀ ಗೆಲುವಿನತ್ತ ಮುನ್ನಡೆಸಿದ್ದರು. ಆದರೆ, ಇತ್ತೀಚಿನ ಸಮೀಕ್ಷೆಗಳಲ್ಲಿ ಅವರ ಪಕ್ಷ ಮತ್ತು ಜಸಿಂಡಾ ಆರ್ಡರ್ನ್ ಅವರ ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದರೂ, ಅವರು ಪ್ರಧಾನಿಯಾಗಿ ತೋರಿದ್ದ ಅಸಾಧಾರಣ ದಕ್ಷತೆಯನ್ನು ಅಲ್ಲಗಳೆಯಲಿಕ್ಕಾಗದು ಎಂಬುದನ್ನು ವಿಶ್ವವೇ ಒಪ್ಪುತ್ತದೆ. ‘‘ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಹೊರಡುತ್ತಿಲ್ಲ. ಆದರೆ, ನಾವು ಗೆಲ್ಲಬಹುದು ಮತ್ತು ಗೆಲ್ಲುತ್ತೇವೆ ಎಂದು ನಾನು ನಂಬುತ್ತೇನೆ’’ ಎಂದೂ ಜಸಿಂಡಾ ಹೇಳಿದ್ದಾರೆ. ರಾಜಕೀಯದಲ್ಲಿ ಎದುರಿಸುತ್ತಿರುವ ಪ್ರತಿಕೂಲತೆಯೇ ನಿರ್ಗಮನದ ಕಾರಣ ಎಂಬ ಭಾವನೆ ಮೂಡುವುದು ಇಷ್ಟವಿಲ್ಲದಿದ್ದರೂ, ಹಾಗಾಗುತ್ತದೆ ಎಂಬುದು ಅವರಿಗೆ ಗೊತ್ತಿದೆ. ಆದರೆ ತಮ್ಮ ನಿರ್ಧಾರಕ್ಕೆ ಅದು ಕಾರಣವಲ್ಲ ಎಂಬುದಷ್ಟೇ ಅವರ ಸ್ಪಷ್ಟನೆ.
ರಾಜೀನಾಮೆಯ ಹಿಂದೆ ಯಾವುದೇ ರಹಸ್ಯವಿಲ್ಲ ಎಂದೂ ಜಸಿಂಡಾ ಸ್ಪಷ್ಟಪಡಿಸಿದ್ದಾರೆ. ತನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು ಹೊರತುಪಡಿಸಿ ಯಾವುದೇ ಯೋಜನೆಗಳಿಲ್ಲ ಎಂದಿದ್ದಾರೆ. ‘‘ನಾನು ಮನುಷ್ಯಳು. ನಾವು ಎಲ್ಲಿಯವರೆಗೆ ಸಾಧ್ಯವೋ ಅಷ್ಟು ಮಾಡಬಹುದು. ನಾನು ಅಧಿಕಾರ ನಿರ್ವಹಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ರಾಜೀನಾಮೆ ನಿರ್ಧಾರ ನನ್ನದೇ ಆಗಿದೆ. ದೇಶವನ್ನು ಮುನ್ನಡೆಸುವುದು ಅತ್ಯಂತ ವಿಶೇಷವಾದ ಕೆಲಸ. ಹೀಗಾಗಿ ರಾಜೀನಾಮೆ ನೀಡಲು ಇದು ಸೂಕ್ತ ಸಮಯವಾಗಿದೆ’’ ಎಂಬ ಅವರ ಮಾತುಗಳು ಅವರ ವ್ಯಕ್ತಿತ್ವದ ಘನತೆಯನ್ನೇ ಬಿಂಬಿಸಿವೆ. ತನ್ನ ರಾಷ್ಟ್ರದ ಉನ್ನತ ಹುದ್ದೆಯೊಂದಕ್ಕೆ ತಾನು ಈಗ ಸಮರ್ಥಳಾಗಿಲ್ಲ ಅನ್ನಿಸಿದ ಕ್ಷಣದಲ್ಲಿ ಅದಕ್ಕೆ ಅಂಟಿಕೊಂಡಿರಕೂಡದು ಎಂದು ನಿರ್ಧರಿಸುವುದು ಕೂಡ ಆ ಹುದ್ದೆಯ ವಿಚಾರದಲ್ಲಿನ ಜವಾಬ್ದಾರಿಯ ಒಂದು ಭಾಗವೇ ಆಗಿದೆ ಎಂಬುದನ್ನು ಆಕೆ ಈ ಮೂಲಕ ಕಾಣಿಸಿದ್ದಾರೆ.
ದೇಶದ ಪ್ರಧಾನಿ ಹುದ್ದೆ ವಹಿಸಿಕೊಂಡಾಗ ಅವರಿಗೆ ಕೇವಲ 37 ವರ್ಷ ವಯಸ್ಸು. ರಾಷ್ಟ್ರವೊಂದರ ಪ್ರಧಾನಿ ಹುದ್ದೆಗೇರಿದ ವಿಶ್ವದ ಅತ್ಯಂತ ಕಿರಿಯ ನಾಯಕಿ ಎಂಬ ಹೆಗ್ಗಳಿಕೆ. ಕಳೆದ ಐದೂವರೆ ವರ್ಷಗಳ ಹುದ್ದೆಯ ಅವಧಿಯಲ್ಲಿ ನಿರಂತರ ಬಿಕ್ಕಟ್ಟುಗಳನ್ನು ಒಂದರ ಬೆನ್ನಿಗೊಂದರಂತೆ ಎದುರಿಸಿ ನಿಂತದ್ದು ಸಾಧಾರಣ ವಿಚಾರವಲ್ಲ. ಕೋವಿಡ್ ಸಮಯದಲ್ಲಿ ಆಕೆ ತೋರಿಸಿದ ದಿಟ್ಟತನ, ಒಂದೆಡೆಯಿಂದ ತೀವ್ರ ಟೀಕೆಯನ್ನೆದುರಿಸಿಯೂ, ದೇಶವನ್ನು ಕಾಪಾಡಿತು. ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳ ಮೇಲಿನ ಭಯೋತ್ಪಾದಕ ದಾಳಿ, ವೈಟ್ ಐಲ್ಯಾಂಡ್ ಜ್ವಾಲಾಮುಖಿ ಆಸ್ಫೋಟದಂತಹ ನೈಸರ್ಗಿಕ ವಿಪತ್ತುಗಳು, ಆರ್ಥಿಕ ಬಿಕ್ಕಟ್ಟು ಇವೆಲ್ಲವೂ ಎದುರಾದವು ಮತ್ತು ಈ ಎಲ್ಲ ಸಂದರ್ಭಗಳಲ್ಲಿಯೂ ಅವರೊಳಗಿನ ಸಮರ್ಥ ನಾಯಕಿ ಕ್ರಿಯಾಶೀಲವಾಗಿದ್ದದ್ದನ್ನು ಜಗತ್ತೇ ನಿಬ್ಬೆರಗಿನಿಂದ ನೋಡಿತು.
ಅವರ ನಾಯಕತ್ವದ ಗುಣವನ್ನು ಸಾಬೀತುಪಡಿಸಿದ ಕೆಲವು ಸಂದರ್ಭಗಳನ್ನು ಉಲ್ಲೇಖಿಸಲೇಬೇಕು. ಮೊದಲನೆಯದಾಗಿ, ಮೇ 2022ರಲ್ಲಿ, ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ 30,000ಕ್ಕೂ ಹೆಚ್ಚು ಜನರೆದುರು ಮಾಡಿದ್ದ ಭಾಷಣದಲ್ಲಿ ಜಸಿಂಡಾ, ತಪ್ಪು ಮಾಹಿತಿಯ ಸವಾಲು ಮತ್ತು ಪ್ರಜಾಪ್ರಭುತ್ವ ಮತ್ತು ದಯೆಯ ಪ್ರಾಮುಖ್ಯತೆಯ ಬಗ್ಗೆ ಪ್ರತಿಪಾದಿಸಿದರು. ‘‘ಶ್ರೀಮಂತರು ಮತ್ತು ಬಡವರು ಎಂಬುದು ನಾವು ಮಾಡಿಕೊಂಡ ವ್ಯತ್ಯಾಸ ಮತ್ತು ವಿಭಜನೆ. ನಿಜವಾದ ಚರ್ಚೆ ಮತ್ತು ಸಂವಾದದ ಮೂಲಕ, ಮಾಹಿತಿ ಮತ್ತು ಪರಸ್ಪರರ ಮೇಲಿನ ನಂಬಿಕೆಯನ್ನು ಪುನರ್ನಿರ್ಮಿಸುವ ಮೂಲಕ, ಸಹಾನುಭೂತಿಯ ಮೂಲಕ ಈ ಅಂತರವನ್ನು ನಿವಾರಿಸಿಕೊಳ್ಳೋಣ. ಜಗತ್ತನ್ನು ಕೂಡಿಸುವ ಮತ್ತು ಕಿರಿದಾಗಿಸುವ ಅನೇಕ ಸಂಗತಿಗಳಲ್ಲಿ ದಯೆ ಕೂಡ ಒಂದಾಗಲಿ’’ ಎಂಬ ಅವರ ಮಾತುಗಳನ್ನು ಜಗತ್ತು ಬೆರಗಿನಿಂದ ಕೇಳಿಸಿಕೊಂಡಿತ್ತು.
ಕೋವಿಡ್ ಸಂದರ್ಭದಲ್ಲಂತೂ ಜಸಿಂಡಾ ನಾಯಕತ್ವವು ಜಾಗತಿಕವಾಗಿ ಗುರುತಿಸಲ್ಪಟ್ಟಿತು. ರಾಷ್ಟ್ರದ ಆರೋಗ್ಯವನ್ನು ರಕ್ಷಿಸಲು ಅವರು ತೆಗೆದುಕೊಂಡ ಕಠಿಣ ನಿಲುವುಗಳು ಸಂಭಾವ್ಯ ವಿನಾಶವನ್ನು ತಪ್ಪಿಸಿದವು ಮಾತ್ರವಲ್ಲ, ಪ್ರಪಂಚದ ಯಾವುದೇ ಇತರ ದೇಶಗಳಿಗಿಂತ ವೇಗವಾಗಿ ಚೇತರಿಸಿಕೊಳ್ಳಲು ನೆರವಾದವು. ಕೊರೋನ ಹಿಮ್ಮೆಟ್ಟಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ನ್ಯೂಝಿಲ್ಯಾಂಡ್ ಪಾತ್ರವಾಯಿತು.
2019ರ ಮಾರ್ಚ್ 15ರಂದು, ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳ ಮೇಲೆ ಬಂದೂಕುಧಾರಿ ಗುಂಡು ಹಾರಿಸಿ 51 ಜನರನ್ನು ಹತ್ಯೆ ಮಾಡಿದ ಕರಾಳ ಘಟನೆಗೆ ಅವರೆಷ್ಟು ತ್ವರಿತವಾಗಿ ಸ್ಪಂದಿಸಿದರೆಂದರೆ, ಬಂದೂಕು ಕಾನೂನುಗಳನ್ನು ಬಿಗಿಗೊಳಿಸಿದರು. ದಾಳಿಯ ಆರು ದಿನಗಳ ನಂತರ ಮಿಲಿಟರಿ-ಶೈಲಿಯ ಅರೆ-ಸ್ವಯಂಚಾಲಿತ ಬಂದೂಕುಗಳನ್ನು ನಿಷೇಧಿಸಿದರು. ಗನ್ ಬೈ-ಬ್ಯಾಕ್ ಯೋಜನೆಯ ಮೂಲಕ ಚಲಾವಣೆಯಲ್ಲಿರುವ 62,000 ನಿಷೇಧಿತ ಬಂದೂಕುಗಳನ್ನು ತೆಗೆದುಹಾಕಿದರು. ಅದಕ್ಕಿಂತ ಹೆಚ್ಚಾಗಿ ಅಲ್ಲಿನ ಮುಸ್ಲಿಮ್ ಸಮುದಾಯದವರನ್ನು ತಬ್ಬಿಕೊಂಡು ಆಕೆ ಸಂತೈಸಿದ್ದು ವಿಶ್ವದ ಕಣ್ಣಲ್ಲಿ ಅಚ್ಚಳಿಯದೆ ಉಳಿದಿದೆ.
2019ರ ಡಿಸೆಂಬರ್ 9ರಂದು ವೈಟ್ ಐಲ್ಯಾಂಡ್ ಸ್ಫೋಟಗೊಂಡು 21 ಜನರ ಜೀವವನ್ನು ಬಲಿತೆಗೆದು ಕೊಂಡಾಗಲೂ ಅವರು ಅಷ್ಟೇ ವೇಗದಲ್ಲಿ ಅಲ್ಲಿನವರನ್ನು ಕಂಡು ಸಾಂತ್ವನ ಹೇಳಿದ್ದರು. ತುರ್ತು ಸೇವೆಗೆ ವ್ಯವಸ್ಥೆ ಮಾಡಿದರು. ಎಲ್ಲ ಅಗತ್ಯ ನೆರವಿಗೆ ಸರಕಾರ ನಿಂತಿತು.
ಮಗಳು ಜನಿಸಿದ ಕೆಲವೇ ತಿಂಗಳುಗಳಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನಕ್ಕೆ ಮಗುವಿನೊಂದಿಗೇ ಹಾಜರಾದ ಮೊದಲ ವಿಶ್ವನಾಯಕಿಯಾದರು.
ಪ್ರಧಾನಿಯಾಗಿ ಜಸಿಂಡಾ ಅವರು ಮಕ್ಕಳು ಮತ್ತು ಕುಟುಂಬ ಕಲ್ಯಾಣಕ್ಕೆ ವಿಶೇಷ ಒತ್ತುಕೊಟ್ಟರು. ಐತಿಹಾಸಿಕ ಮಕ್ಕಳ ಬಡತನ ಕಡಿತ ಶಾಸನ, ಚಳಿಗಾಲದ ಶಕ್ತಿ ಪಾವತಿ, ಶಾಲೆಗಳಲ್ಲಿ ಉಚಿತ, ಆರೋಗ್ಯಕರ ಉಪಾಹಾರ ಮತ್ತು ಮಕ್ಕಳನ್ನು ಬೆಂಬಲಿಸುವ ಇತರ ಕ್ರಮಗಳ ಮೂಲಕ ಈವರೆಗೆ ಸುಮಾರು 66,500 ಮಕ್ಕಳನ್ನು ಬಡತನದಿಂದ ಮೇಲಕ್ಕೆತ್ತಿದ್ದು ಅವರ ಘನ ಸಾಧನೆ.
ರಾಷ್ಟ್ರದ ಕಷ್ಟಕಾಲದಲ್ಲಿ ಆದಾಯವನ್ನು ಹೆಚ್ಚಿಸಲು ಮತ್ತು ಕುಟುಂಬಗಳನ್ನು ಬೆಂಬಲಿಸಲು ಶ್ರಮಿಸಿದರು. 20 ಲಕ್ಷಕ್ಕೂ ಹೆಚ್ಚು ಜನರಿಗೆ ಜೀವನವೆಚ್ಚ ಪಾವತಿ, ಇಂಧನ ತೆರಿಗೆ ಕಡಿತ ಮತ್ತು ಅರ್ಧ ಬೆಲೆಯಲ್ಲಿ ಸಾರ್ವಜನಿಕ ಸಾರಿಗೆ, ನಿವೃತ್ತಿ ವೇತನ, ವಿದ್ಯಾರ್ಥಿ ಭತ್ತೆ ಮತ್ತು ಕನಿಷ್ಠ ವೇತನ ಹೆಚ್ಚಳದಂಥ ಕ್ರಮಗಳ ಮೂಲಕ ನೆರವಿಗೆ ನಿಂತರು.
ಹವಾಮಾನ ಬದಲಾವಣೆಯನ್ನು ಎದುರಿಸಲು ಜಸಿಂಡಾ ಸರಕಾರವು 2019ರಲ್ಲಿ ಮಹತ್ವದ ಶೂನ್ಯ ಇಂಗಾಲ ಮಸೂದೆಯನ್ನು ಅಂಗೀಕರಿಸಿತು. ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕೇಂದ್ರೀಕರಿಸುವ ಯೋಜನೆಗಳ ವಿಶ್ವದ ಮೊದಲ ಯೋಗಕ್ಷೇಮ ಬಜೆಟ್ ಅನ್ನು ಅವರು 2019ರಲ್ಲಿ ಕೊಟ್ಟದ್ದು ಗಮನಾರ್ಹ. ಸಲಿಂಗಕಾಮಿಗಳ ಪ್ರೈಡ್ ಪರೇಡ್‌ನಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿ ಜಸಿಂಡಾ.
ವಿಶ್ವನಾಯಕರು ಗುರುತಿಸಿದಂತೆ ಅವರ ಪ್ರತಿಯೊಂದು ನಡೆಯ ಹಿಂದೆ ಇರುವುದು ಸಹಾನುಭೂತಿ, ಆದರೆ ನಿರ್ಣಾಯಕ ನಿಲುವು. ಹುದ್ದೆ ತ್ಯಜಿಸುವ ನಿರ್ಧಾರ ಪ್ರಕಟಿಸಿದಾಗಲೂ ಅವರು ಅದನ್ನೇ ಪುನರುಚ್ಚರಿಸಿದ್ದಾರೆ. ‘‘ನ್ಯೂಝಿಲ್ಯಾಂಡ್ ಜನತೆ ದಯೆಯುಳ್ಳ ಆದರೆ ಬಲಿಷ್ಠ, ಸಹಾನುಭೂತಿಯ ಆದರೆ ನಿರ್ಣಾಯಕ, ಆಶಾವಾದಿ ಆದರೆ ನಿರ್ದಿಷ್ಟ ಗುರಿಯೆಡೆಗೆ ಗಮನವುಳ್ಳವರು. ಎಲ್ಲರೂ ಅವರದೇ ರೀತಿಯ ನಾಯಕರಾಗಬಹುದು ಮತ್ತು ಯಾವಾಗ ತಾವು ನಿರ್ಗಮಿಸಬೇಕೆಂಬುದನ್ನೂ ನಿರ್ಧರಿಸಬಲ್ಲರು ಎಂದು ಭಾವಿಸುವೆ’’ ಎಂದಿದ್ದಾರೆ ಜಸಿಂಡಾ.