ಕತ್ತಲೆ ಓಡಿಸುವ ಬೆಳಕಿನ ಸಸ್ಯ!
ಸಸ್ಯಗಳು ಮತ್ತು ಬ್ಯಾಕ್ಟೀರಿಯಾಗಳು ಅನೇಕ ಡಿಎನ್‌ಎ ಹೋಲಿಕೆಗಳನ್ನು ಹೊಂದಿವೆ. ಆದರೆ ಅವುಗಳು ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿವೆ. ಕೆಲವು ಬ್ಯಾಕ್ಟೀರಿಯಾಗಳು ಕತ್ತಲೆಯಲ್ಲಿ ಹೊಳೆಯಬಹುದು. ಸಸ್ಯಗಳು ಹೊಳೆಯುವುದಿಲ್ಲ. ಆದರೆ ಸಸ್ಯಗಳು ಅದೇ ಡಿಎನ್‌ಎಯನ್ನು ಹಂಚಿಕೊಳ್ಳುತ್ತವೆಯೇ? ಡಿಎನ್‌ಎ ಹೊಂದಾಣಿಕೆಯು ಬ್ಯಾಕ್ಟೀರಿಯಾವನ್ನು ಹೊಳೆಯುವಂತೆ ಮಾಡುತ್ತದೆಯೇ? ಎಂಬಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ತಂಡವೊಂದು ಇದು ಸಾಧ್ಯ ಎಂದು ಮಾಡಿ ತೋರಿಸಿದೆ.
ಅವತಾರ್ ಸರಣಿಯ ಚಲನಚಿತ್ರಗಳಲ್ಲಿ ಅಸಾಮಾನ್ಯ ಎನಿಸುವ ಸಂಗತಿಗಳು ಹೆಚ್ಚು ಮುದ ನೀಡುತ್ತವೆ. ಹಾರುವ ಮಾನವ, ನಡೆದಾಡುವ ಹಾಗೂ ಮಾತನಾಡುವ ಸಸ್ಯಗಳು, ಸ್ವಯಂಪ್ರಭೆ ಬೀರುವ ಸಸ್ಯಗಳು ಹೀಗೆ ವಿವಿಧ ಸಂಗತಿಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತವೆ. ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ಅಸಾಮಾನ್ಯ ಎನಿಸುವಂತದ್ದೆಲ್ಲ ಸಾಮಾನ್ಯ ಎನಿಸುವಂತಾಗಿದೆ. ಏಕೆಂದರೆ ಎಲ್ಲವೂ ಕಂಪ್ಯೂಟರ್ ಗ್ರಾಫಿಕ್ಸ್ ಎಫೆಕ್ಟ್ ಎಂಬುದು ಬಹುತೇಕ ಪ್ರೇಕ್ಷಕರಿಗೆ ಅರ್ಥವಾಗಿದೆ. ಆದರೂ ಅಂತಹ ಅಸಾಮಾನ್ಯ ಘಟನೆಗಳು ಮನಸ್ಸಿಗೆ ಮುದ ನೀಡುತ್ತಲೇ ಇರುತ್ತವೆ. ಕತ್ತಲೆಯಲ್ಲಿ ಹೊಳೆಯುವ ಯಾವುದನ್ನಾದರೂ ಹೆಸರಿಸಲು ಕೇಳಿದಾಗ, ಜನರು ಕೃತಕವಾಗಿ ಹೊಳೆಯುವ ವಸ್ತುಗಳ ಬಗ್ಗೆ ಯೋಚಿಸಬಹುದು. ಆದರೆ ಮಿಂಚುಹುಳ, ಕೆಲವು ಜೆಲ್ಲಿ ಮೀನುಗಳು ಮತ್ತು ಬ್ಯಾಕ್ಟೀರಿಯಾಗಳಂತಹ ಕೆಲವು ಜೀವಿಗಳು ಕತ್ತಲೆಯಲ್ಲಿ ಹೊಳೆಯಬಹುದು. ಜೆಲ್ಲಿ ಮೀನು ಅಥವಾ ಹೊಳೆಯುವ ಬ್ಯಾಕ್ಟೀರಿಯಾಗಳು ಎಲ್ಲೆಡೆ ನೋಡಲು ಸಿಗುವುದಿಲ್ಲ. ಆದರೆ ಮಿಂಚುಹುಳ ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುತ್ತದೆ. ಕತ್ತಲಿನ ರಾತ್ರಿಯಲ್ಲಿ ಮಿಂಚಿ ಮಾಯವಾಗುವ ಮಿಂಚುಹುಳ ಎಲ್ಲರ ಪ್ರೀತಿಯ ಕಣ್ಮಣಿ.
ಸಸ್ಯಗಳೂ ಹೀಗೆ ಸ್ವಯಂ ಪ್ರಕಾಶಿಸುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಎಂದು ಅನಿಸುವುದು ಸಹಜ. ಕತ್ತಲೆಯ ರಾತ್ರಿಯಲ್ಲಿ ಸಸ್ಯಗಳು ಬೆಳಕು ನೀಡಿ ಪತಂಗಗಳನ್ನು, ಚಿಟ್ಟೆಗಳನ್ನು ಆಕರ್ಷಿಸುವಂತಿದ್ದರೆ, ಆ ಸಸ್ಯದ ಸುತ್ತಲೂ ಅನೇಕ ಜೀವರಾಶಿಗಳ ದಂಡೇ ಅಲ್ಲಿ ನೆರೆಯುತ್ತಿತ್ತು ಎಂದೆನಿಸದಿರದು. ಹೀಗೆ ಅನಿಸಿದುದನ್ನು ವಾಸ್ತವಕ್ಕೆ ತರುವಲ್ಲಿ ವಿಜ್ಞಾನಿಗಳು ಮತ್ತು ತಂತ್ರಜ್ಞರ ಪಾತ್ರ ದೊಡ್ಡದು. ವಿಜ್ಞಾನಿಗಳು ಇತ್ತೀಚೆಗೆ ಕತ್ತಲಲ್ಲಿ ಹೊಳೆಯುವ ಸಾಮರ್ಥ್ಯವನ್ನು ಸಾಮಾನ್ಯವಾಗಿ ಹೊಳೆಯದ ಇತರ ಜೀವಿಗಳಿಗೆ ವರ್ಗಾಯಿಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಕೆಲವು ಸಸ್ಯಗಳು ಮತ್ತು ಪ್ರಾಣಿಗಳು ಬಯೋಲುಮಿನೆಸೆನ್ಸ್ ಎಂಬ ಬೆಳಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ನೈಸರ್ಗಿಕವಾಗಿ ಕೆಲವು ಜಾತಿಯ ಪ್ರಾಣಿಗಳಿಂದ ಪ್ರದರ್ಶಿಸಲ್ಪಡುವ ಆಕರ್ಷಕ ವಿದ್ಯಮಾನವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇಂಬ್ರಿಡ್ಜ್ (ಯುನೈಟೆಡ್ ಸ್ಟೇಟ್ಸ್)ನ ತಂಡವೊಂದು ಸಸ್ಯಗಳಲ್ಲಿ ಇಂತಹ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿತು. ಅದರ ಫಲವಾಗಿ ತಳಿಶಾಸ್ತ್ರದ ಮೂಲಕ ರಾತ್ರಿವೇಳೆಯೂ ಬೆಳಕನ್ನು ಸೂಸುವ ಸಸ್ಯಗಳನ್ನು ಅಭಿವೃದ್ಧಿಪಡಿಸಿದೆ. ಭೂಮಿಯ ಮೇಲಿನ ಎಲ್ಲಾ ಜೀವಿಗಳು ಆನುವಂಶಿಕತೆಗೆ ಸಂಬಂಧಿಸಿವೆ. ಅವುಗಳ ಆನುವಂಶಿಕತೆಯು ಡಿಎನ್‌ಎ ಎಂದು ಕರೆಯುವ ನ್ಯೂಕ್ಲಿಯೊಟೈಡ್ ಬಿಲ್ಡಿಂಗ್ ಬ್ಲಾಕ್‌ಗಳಿಂದ ಮಾಡಲ್ಪಟ್ಟಿದೆ. ಈ ನ್ಯೂಕ್ಲಿಯೋಟೈಡ್‌ಗಳ ವಿಭಿನ್ನ ಮಾದರಿಗಳು ನಾವು ಭೂಮಿಯ ಮೇಲೆ ಕಾಣುವ ಜೀವ ವೈವಿಧ್ಯಕ್ಕೆ ಕಾರಣವಾಗಿವೆ. ಸಸ್ಯಗಳು ಮತ್ತು ಬ್ಯಾಕ್ಟೀರಿಯಾಗಳು ಅನೇಕ ಡಿಎನ್‌ಎ ಹೋಲಿಕೆಗಳನ್ನು ಹೊಂದಿವೆ. ಆದರೆ ಅವುಗಳು ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿವೆ. ಕೆಲವು ಬ್ಯಾಕ್ಟೀರಿಯಾಗಳು ಕತ್ತಲೆಯಲ್ಲಿ ಹೊಳೆಯಬಹುದು. ಸಸ್ಯಗಳು ಹೊಳೆಯುವುದಿಲ್ಲ. ಆದರೆ ಸಸ್ಯಗಳು ಅದೇ ಡಿಎನ್‌ಎಯನ್ನು ಹಂಚಿಕೊಳ್ಳುತ್ತವೆಯೇ? ಡಿಎನ್‌ಎ ಹೊಂದಾಣಿಕೆಯು ಬ್ಯಾಕ್ಟೀರಿಯಾವನ್ನು ಹೊಳೆಯುವಂತೆ ಮಾಡುತ್ತದೆಯೇ? ಎಂಬಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ತಂಡವೊಂದು ಇದು ಸಾಧ್ಯ ಎಂದು ಮಾಡಿ ತೋರಿಸಿದೆ. ವಾಸ್ತವವಾಗಿ ಸಸ್ಯಗಳು ನಾವು ಯೋಚಿಸುವುದಕ್ಕಿಂತ ಹೆಚ್ಚು ಡಿಎನ್‌ಎಯನ್ನು ಹಂಚಿಕೊಳ್ಳುತ್ತವೆ. ಸಸ್ಯಗಳ ದ್ಯುತಿಸಂಶ್ಲೇಷಣೆಗೆ ಅನುವು ಮಾಡಿಕೊಡುವ ಸಸ್ಯ ಜೀವಕೋಶದ ಅಂಗವಾಗಿರುವ ಕ್ಲೋರೊಪ್ಲಾಸ್ಟ್‌ಗಳು ವಾಸ್ತವವಾಗಿ ಬ್ಯಾಕ್ಟೀರಿಯಾದಿಂದ ವಿಕಸನಗೊಂಡಿವೆ. ಕ್ಲೋರೊಪ್ಲಾಸ್ಟ್‌ಗಳು ತಮ್ಮದೇ ಆದ ಡಿಎನ್‌ಎಯನ್ನು ಹೊಂದಿರುತ್ತವೆ ಮತ್ತು ಉಳಿದ ಸಸ್ಯಗಳಿಂದ ಪ್ರತ್ಯೇಕವಾಗಿರುತ್ತವೆ. ಸಸ್ಯಗಳ ಡಿಎನ್‌ಎಗಳು ಕೆಲವು ಬ್ಯಾಕ್ಟೀರಿಯಾಗಳ ಡಿಎನ್‌ಎಗೆ ಹೋಲುತ್ತದೆ.
ಸಸ್ಯಗಳು ಮತ್ತು ಬ್ಯಾಕ್ಟೀರಿಯಾಗಳ ನಡುವಿನ ಸಾಮ್ಯತೆಗಳ ಕಾರಣದಿಂದಾಗಿ, ಅವುಗಳ ಡಿಎನ್‌ಎಯ ಕೆಲವು ವಿಭಾಗಗಳನ್ನು ಕುಶಲತೆಯಿಂದ ವಿನಿಮಯ ಮಾಡಿಕೊಳ್ಳಬಹುದು ಎಂದು ವಿಜ್ಞಾನಿಗಳು ಕಲಿತಿದ್ದಾರೆ. ಎರಡೂ ಜೀವಿಗಳು ಪ್ರೊಟೀನ್ ತಯಾರಿಸುವ ಜೀನ್‌ಗಳನ್ನು ಹೊಂದಿದ್ದು ಅದು ಜೀವಿಗಳನ್ನು ಹೊಳೆಯುವಂತೆ ಮಾಡುತ್ತದೆ. ಆದರೆ ಸಸ್ಯಗಳು (ನಿರ್ದಿಷ್ಟವಾಗಿ, ಅವುಗಳ ಕ್ಲೋರೊಪ್ಲಾಸ್ಟ್‌ಗಳು) ಈ ಪ್ರೊಟೀನ್ ತಯಾರಿಕೆಯ ಪ್ರಕ್ರಿಯೆಯನ್ನು ಬದಲಾಯಿಸುವ ಜೀನ್ ಅನ್ನು ಹೊಂದಿರುವುದಿಲ್ಲ. ಬ್ಯಾಕ್ಟೀರಿಯಾದ ಹೊಳೆಯುವ ಪ್ರಕ್ರಿಯೆಯನ್ನು ಕಂಡುಹಿಡಿದ ನಂತರ, ವಿಜ್ಞಾನಿಗಳು ಅದನ್ನು ಇತರ ಜೀವಿಗಳಿಗೂ ಅನ್ವಯಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಒಂದು ಉದಾಹರಣೆಯೆಂದರೆ ಹಸಿರು ಪ್ರತಿದೀಪಕ ಪ್ರೊಟೀನ್ (ಜಿಎಫ್‌ಪಿ). ಜಿಎಫ್‌ಪಿಗಳನ್ನು ವಿಜ್ಞಾನಿಗಳು ಜೀನ್ ವಿನಿಮಯವನ್ನು ಒಳಗೊಂಡಿರುವ ಪ್ರಯೋಗಗಳು ಕೆಲಸ ಮಾಡಿದೆಯೇ ಎಂದು ಹೇಳಲು ಬಳಸುತ್ತಾರೆ. ವಿಜ್ಞಾನಿಗಳು ಇತರ ಜೀನ್‌ಗಳನ್ನು ಜೀವಿಗಳ ಡಿಎನ್‌ಎಗೆ ಸೇರಿಸಿದಾಗ ಜಿಎಫ್‌ಪಿಗಳ ಜೀನ್‌ಗಳನ್ನು ಸೇರಿಸಲಾಗುತ್ತದೆ. ಈ ಜೀನ್‌ಗಳನ್ನು ಸೇರಿಸಿದ ನಂತರ ಜೀವಿ ಹೊಳೆಯುತ್ತಿದ್ದರೆ, ಅಳವಡಿಕೆ ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳು ತಿಳಿದಿದ್ದಾರೆ.
ಅದೇ ರೀತಿಯಲ್ಲಿ, ಲೂಸಿಫೆರಿನ್‌ಗಳು ಮತ್ತು ಲೂಸಿಫೆರೇಸ್‌ಗಳ ಉತ್ಪಾದನೆಯನ್ನು ಪ್ರಾರಂಭ ಮಾಡಲು ಸಸ್ಯದ ನೀಲನಕ್ಷೆಯನ್ನು ಕೆಲವು ಬ್ಯಾಕ್ಟೀರಿಯಾಗಳಂತೆ ಮಾರ್ಪಡಿಸುವುದರಿಂದ ಸಸ್ಯವು ಹೊಳೆಯುವಂತೆ ಮಾಡುತ್ತದೆ. ವಿಜ್ಞಾನಿಗಳು ಲಕ್ಸ್ ಒಪೆರಾನ್‌ಗಾಗಿ (ಬ್ಯಾಕ್ಟೀರಿಯಾದಿಂದ) ಡಿಎನ್‌ಎಯನ್ನು ಸಸ್ಯಗಳ ಲೈಂಗಿಕ ಕೋಶಗಳ ಡಿಎನ್‌ಎಗೆ ಸೇರಿಸಲು ಪ್ರಯತ್ನಿಸಿದರು. ಲಕ್ಸ್ ಒಪೆರಾನ್‌ನ ಡಿಎನ್‌ಎಯನ್ನು ಸರಿಯಾಗಿ ಸೇರಿಸಿದರೆ, ಆ ಸಸ್ಯದಿಂದ ಕೆಲವು ಬೀಜಗಳು ಹೊಳೆಯುವ ಸಸ್ಯಗಳಾಗಿ ಬೆಳೆಯುತ್ತವೆ ಎಂದು ಸಂಶೋಧನಾ ತಂಡವು ಹೇಳಿದೆ. ಎಂಐಟಿ ಇಂಜಿನಿಯರ್‌ಗಳು ತಮ್ಮ ಅಂತರ್ ದೃಷ್ಟಿಯನ್ನು ವಾಸ್ತವಗೊಳಿಸುವ ನಿಟ್ಟಿನಲ್ಲಿ ಮೊದಲ ನಿರ್ಣಾಯಕ ಹೆಜ್ಜೆ ಇಟ್ಟಿದ್ದಾರೆ. ವಾಟರ್‌ಕ್ರೆಸ್ ಸಸ್ಯದ ಎಲೆಗಳಲ್ಲಿ ವಿಶೇಷ ನ್ಯಾನೊಪರ್ಟಿಕಲ್‌ಗಳನ್ನು ವರ್ಗಾವಣೆ ಮಾಡುವ ಮೂಲಕ, ಸುಮಾರು ನಾಲ್ಕು ಗಂಟೆಗಳ ಕಾಲ ಮಂದ ಬೆಳಕನ್ನು ನೀಡಲು ಸಸ್ಯಗಳನ್ನು ಪ್ರೇರೇಪಿಸಿದರು. ಮತ್ತಷ್ಟು ಆಪ್ಟಿಮೈಸೇಶನ್‌ನೊಂದಿಗೆ ಅಂತಹ ಸಸ್ಯಗಳು ಒಂದು ದಿನ ಕಾರ್ಯಸ್ಥಳವನ್ನು ಬೆಳಗಿಸುವಷ್ಟು ಪ್ರಕಾಶಮಾನವಾಗಿರುತ್ತವೆ ಎಂದು ಅವರು ನಂಬುತ್ತಾರೆ.
ಸಂಶೋಧಕರು ಲೂಸಿಫೆರೇಸ್ ಅನ್ನು ಸಾಗಿಸಲು ಸುಮಾರು 10 ನ್ಯಾನೊಮೀಟರ್ ವ್ಯಾಸದ ಸಿಲಿಕಾ ನ್ಯಾನೊಪರ್ಟಿಕಲ್‌ಗಳನ್ನು ಬಳಸಿದರು ಮತ್ತು ಅವರು ಕ್ರಮವಾಗಿ ಲೂಸಿಫೆರಿನ್ ಮತ್ತು ಕೋ ಎಂಜೈಮ್-ಎ ಅನ್ನು ಸಾಗಿಸಲು ಪಾಲಿಮರ್‌ಗಳಾದ ಪಿಎಲ್‌ಜಿಎ ಮತ್ತು ಚಿಟೋಸಾನ್‌ಗಳ ಸ್ವಲ್ಪ ದೊಡ್ಡ ಕಣಗಳನ್ನು ಬಳಸಿದರು. ಸಸ್ಯದ ಎಲೆಗಳಿಗೆ ಕಣಗಳನ್ನು ಪಡೆಯಲು, ಸಂಶೋಧಕರು ಮೊದಲು ಕಣಗಳನ್ನು ದ್ರಾವಣದಲ್ಲಿ ಅಮಾನತುಗೊಳಿಸಿದರು. ಸಸ್ಯಗಳನ್ನು ದ್ರಾವಣದಲ್ಲಿ ಮುಳುಗಿಸಲಾಗುತ್ತದೆ ಮತ್ತು ನಂತರ ಹೆಚ್ಚಿನ ಒತ್ತಡಕ್ಕೆ ಒಡ್ಡಲಾಗುತ್ತದೆ, ಕಣಗಳು ಸ್ಟೊಮಾಟಾ ಎಂಬ ಸಣ್ಣ ರಂಧ್ರಗಳ ಮೂಲಕ ಎಲೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಲೂಸಿಫೆರಿನ್ ಮತ್ತು ಕೋ ಎಂಜೈಮ್-ಎ ಅನ್ನು ಬಿಡುಗಡೆ ಮಾಡುವ ಕಣಗಳು ಎಲೆಯ ಒಳ ಪದರವಾದ ಮೆಸೊಫಿಲ್‌ನ ಬಾಹ್ಯಕೋಶೀಯ ಜಾಗದಲ್ಲಿ ಸಂಗ್ರಹಗೊಳ್ಳಲು ವಿನ್ಯಾಸಗೊಳಿಸಲಾಗಿದೆ. ಆದರೆ ಲೂಸಿಫೆರೇಸ್ ಅನ್ನು ಹೊತ್ತ ಸಣ್ಣ ಕಣಗಳು ಮೆಸೊಫಿಲ್ ಅನ್ನು ರೂಪಿಸುವ ಕೋಶಗಳನ್ನು ಪ್ರವೇಶಿಸುತ್ತವೆ. ಪಿಎಲ್‌ಜಿಎ ಕಣಗಳು ಕ್ರಮೇಣ ಲೂಸಿಫೆರಿನ್ ಅನ್ನು ಬಿಡುಗಡೆ ಮಾಡುತ್ತವೆ. ನಂತರ ಅದು ಸಸ್ಯ ಕೋಶಗಳನ್ನು ಪ್ರವೇಶಿಸುತ್ತದೆ. ಅಲ್ಲಿ ಲೂಸಿಫೆರೇಸ್ ರಾಸಾಯನಿಕ ಕ್ರಿಯೆಯನ್ನು ಮಾಡುತ್ತದೆ ಮತ್ತು ಅದು ಲೂಸಿಫೆರಿನ್ ಹೊಳೆಯುವಂತೆ ಮಾಡುತ್ತದೆ.
ಯೋಜನೆಯ ಪ್ರಾರಂಭದಲ್ಲಿ ಸಂಶೋಧಕರ ಆರಂಭಿಕ ಪ್ರಯತ್ನಗಳು ಸುಮಾರು 45 ನಿಮಿಷಗಳ ಕಾಲ ಹೊಳೆಯುವ ಸಸ್ಯಗಳನ್ನು ನೀಡಿತು. ನಂತರ ಅವರು 3.5 ಗಂಟೆಗಳವರೆಗೆ ಸುಧಾರಿಸಿದ್ದಾರೆ. ಸಾಂದ್ರತೆ ಮತ್ತು ಪ್ರಮಾಣವನ್ನು ಮತ್ತಷ್ಟು ಉತ್ತಮಗೊಳಿಸುವ ಮೂಲಕ ಹೊರಸೂಸುವ ಬೆಳಕನ್ನು ಮತ್ತು ಬೆಳಕಿನ ಅವಧಿಯನ್ನು ಹೆಚ್ಚಿಸಬಹುದು ಎಂದು ಸಂಶೋಧಕರು ನಂಬಿದ್ದಾರೆ.
ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಕತ್ತಲಲ್ಲಿ ದೀಪ ಉರಿಸುವ ಬದಲು ಇಂತಹ ಸಸ್ಯಗಳನ್ನು ಮನೆಗಳಲ್ಲಿ ಇಟ್ಟುಕೊಳ್ಳುವುದರಿಂದ ಬೆಳಕು ದೊರೆಯುತ್ತದೆ ಮತ್ತು ಮನಸ್ಸಿಗೆ ಉಲ್ಲಾಸವೂ ಇರುತ್ತದೆ. ಇದನ್ನು ಮೇಜಿನ ದೀಪವಾಗಿ ಬಳಸಬಹುದು. ರಸ್ತೆಗಳಲ್ಲಿ ಬೀದಿ ದೀಪಗಳಂತೆ ಬಳಸಬಹುದು. ಈ ತಂತ್ರಜ್ಞಾನವನ್ನು ಕಡಿಮೆ ತೀವ್ರತೆಯ ಒಳಾಂಗಣ ಬೆಳಕನ್ನು ಒದಗಿಸಲು ಅಥವಾ ಮರಗಳನ್ನು ಸ್ವಯಂ ಚಾಲಿತ ಬೀದಿದೀಪಗಳಾಗಿ ಪರಿವರ್ತಿಸಲು ಸಹ ಬಳಸಬಹುದು ಎಂದು ಎಂಐಟಿಯ ಕೆಮಿಕಲ್ ಇಂಜಿನಿಯರಿಂಗ್ ಪ್ರೊಫೆಸರ್ ಕಾರ್ಬನ್.ಪಿ. ಮೈಕೆಲ್ ಸ್ಟ್ರಾನೊ ಹೇಳುತ್ತಾರೆ. ಇಂತಹ ಬೆಳಕಿನ ಗಿಡಮರಗಳು ಬೇಗನೆ ಬೀದಿಗಿಳಿದು ಆ ಮೂಲಕ ಭವಿಷ್ಯದ ಬೆಳಕಿನ ಮೂಲಗಳಾಗಲಿ.