70 ವರ್ಷದ ವೃದ್ಧನಿಗೆ ಕಾರನ್ನು ಢಿಕ್ಕಿ ಹೊಡೆಸಿ 8 ಕಿ.ಮೀ.ವರೆಗೆ ಎಳೆದೊಯ್ದು ಕೊಂದ ಚಾಲಕ!
ಬಿಹಾರದಲ್ಲಿ ಆಘಾತಕಾರಿ ಘಟನೆ
ಪಾಟ್ನಾ: ವಾಹನವನ್ನು ಢಿಕ್ಕಿ ಹೊಡೆಸಿ ಎಳೆದುಕೊಂಡು ಹೋಗಿರುವ ಮತ್ತೊಂದು ಆಘಾತಕಾರಿ ಘಟನೆ ಈ ಬಾರಿ ಬಿಹಾರದಿಂದ ವರದಿಯಾಗಿದೆ. ಕಾರೊಂದು ವಯೋವೃದ್ಧರಿಗೆ ಡಿಕ್ಕಿ ಹೊಡೆದಿದ್ದಲ್ಲದೆ , ಕಾರಿನ ಬಾನೆಟ್‌ಗೆ ಸಿಕ್ಕಿಹಾಕಿಕೊಂಡ ವೃದ್ದನನ್ನು ಎಂಟು ಕಿಲೋಮೀಟರ್ ದೂರ ಎಳೆದೊಯ್ಯಲಾಗಿದೆ. ಚಾಲಕ ಹಠಾತ್ ಬ್ರೇಕ್‌ಗಳನ್ನು ಹೊಡೆದ ನಂತರ ವೃದ್ದ ರಸ್ತೆಯ ಮೇಲೆ ಬಿದ್ದಿದ್ದು, ಬಳಿಕ ವೃದ್ದನ ಮೇಲೆ ಕಾರನ್ನು ಓಡಿಸಿ ಕೊಂದಿರುವ ಅಮಾನವೀಯ ಘಟನೆ ನಡೆದಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಈ ಘಟನೆ ವರದಿಯಾಗಿದೆ. ಬಲಿಯಾದವರನ್ನು ಜಿಲ್ಲೆಯ ಕೋಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಗ್ರಾ ಗ್ರಾಮದ ನಿವಾಸಿ 70 ವರ್ಷದ ಶಂಕರ್ ಚೌಧೂರ್ ಎಂದು ಗುರುತಿಸಲಾಗಿದೆ.
ಸೈಕಲ್ ಸವಾರ ಶಂಕರ್ ಚೌಧೂರ್ ಅವರು ಬಾಂಗ್ರಾ ಚೌಕ್ ಬಳಿ ಎನ್ಎಚ್ 27 ಅನ್ನು ದಾಟುತ್ತಿದ್ದಾಗ ಗೋಪಾಲ್ ಗಂಜ್ ಪಟ್ಟಣದಿಂದ ವೇಗವಾಗಿ ಬಂದ ಕಾರು, ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಚೌಧೂರ್ ಅವರು ಕಾರಿನ ಬಾನೆಟ್ ಮೇಲೆ ಎಸೆಯಲ್ಪಟ್ಟರು. ಚೌಧೂರಿ ಅವರು ನಂತರ ವೈಪರ್ ಅನ್ನು ಹಿಡಿದು ಕಾರನ್ನು ನಿಲ್ಲಿಸುವಂತೆ ಕೂಗುತ್ತಾ ಮನವಿ ಮಾಡಿದರು ಎಂದು ವರದಿಯಾಗಿದೆ.
ದಾರಿಹೋಕರು ಕೂಡ ಚಾಲಕನಿಗೆ ಕಾರು ನಿಲ್ಲಿಸುವಂತೆ ಕೇಳಿಕೊಂಡರು. ಬಳಿಕ ಆತನನ್ನು ಬೆನ್ನಟ್ಟಿದರು. ಆದರೆ ಕಾರು ನಿಲ್ಲಿಸದ ಚಾಲಕ ಅದೇ ವೇಗದಲ್ಲಿ ಕಾರನ್ನು ಚಾಲನೆ ಮಾಡಿದ್ದ. ಜನರು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಆತ ಕೊತ್ವಾದ ಕದಮ್ ಚೌಕ್ ಬಳಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ. ಶಂಕರ್ ಚೌಧರ್ ಕಾರಿನ ಮುಂದೆ ಕೆಳಗೆ ಬಿದ್ದರು. ಕಾರು ಚಾಲಕ ವೃದ್ದಮ ಮೇಲೆ ಕಾರು ಚಲಾಯಿಸಿ ಪರಾರಿಯಾಗಿದ್ದಾನೆ. ಪರಿಣಾಮ ಚೌಧೂರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.