varthabharthi


ಪ್ರಚಲಿತ

ಮಹಾಚೇತನಗಳನ್ನು ಕಾಪಾಡಿಕೊಳ್ಳೋಣ

ವಾರ್ತಾ ಭಾರತಿ : 23 Jan, 2023
ಸನತ್ ಕುಮಾರ್ ಬೆಳಗಲಿ

ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಸಮಾನತೆಯ ಗೌರವದ ಬದುಕಿಗಾಗಿ ಜೀವ ಸವೆಸಿದ ಮಹಾಚೇತನಗಳನ್ನು ತಮ್ಮದಾಗಿಸಿಕೊಳ್ಳುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತ ಬಂದ ಸಂಘಟನೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ.
ಸಮಾನತೆಯ ಸಮಾಜ ನಿರ್ಮಾಣವನ್ನು ವಿರೋಧಿಸುತ್ತ ಬಂತು. ಗಾಂಧೀಜಿಯ ಹತ್ಯೆ ಮಾಡಿ ನಂತರ ಒಂದೆಡೆ ಅವರ ಆರಾಧನೆಯ ನಾಟಕವಾಡುತ್ತ, ಇನ್ನೊಂದೆಡೆ ಅವರ ತೇಜೋವಧೆ ಮಾಡುತ್ತ ಬಂದ ಸಂಗತಿ ತಿಳಿದವರಿಗೆಲ್ಲ ಗೊತ್ತಿದೆ.
ಭಾರತದ ಒಳಗೆ ನಾಥೂರಾಮ್ ಗೋಡ್ಸೆ, ಸಾವರ್ಕರ್‌ರನ್ನು ಆರಾಧಿಸುತ್ತ ವಿದೇಶಕ್ಕೆ ಹೋದಾಗ ಬುದ್ಧ, ಗಾಂಧೀಜಿ, ಬಾಬಾಸಾಹೇಬರ ದೇಶದಿಂದ ಬಂದಿದ್ದೇನೆ ಎಂದು ಹೇಳುವವರು ಯಾರೆಂದು ಎಲ್ಲರಿಗೂ ಗೊತ್ತಿದೆ.

ವೈದಿಕಶಾಹಿಯ ವಿರುದ್ಧ ಬಂಡೆದ್ದ ಬುದ್ಧ ನನ್ನು ವಿಷ್ಣುವಿನ ಹನ್ನೊಂದನೇ ಅವತಾರ ಮಾಡಿ ಮುಗಿಸಲು ನೋಡಿದರು. ಆದರೆ ಈ ಜೀವಪರ ಧರ್ಮಗಡಿಯಾಚೆ ಹೋಗಿ ಚೀನಾ, ಜಪಾನ್,ಮುಂತಾದ ದೇಶಗಳಲ್ಲಿ ನೆಲೆ ಕಂಡು ಕೊಂಡಿತು.ಭಾರತದಲ್ಲಿ ಬಾಬಾಸಾಹೇಬರು ಬೌದ್ಧ ಧರ್ಮ ಸೇರಿದ ನಂತರ ಅದು ಮತ್ತೆ ಚಿಗುರಿ ಬೆಳೆಯತೊಡಗಿದೆ.ಜೈನರು ಆಚಾರ, ವಿಚಾರಗಳಲ್ಲಿ ಒಂದಿಷ್ಟು ರಾಜಿ ಮಾಡಿಕೊಂಡಿದ್ದರೂ ಪೂರ್ತಿಯಾಗಿ ತಮ್ಮ ಸಿದ್ಧಾಂತ ಮತ್ತು ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಇನ್ನು ವೇದಕ್ಕೆ ಒರೆಯ ಕಟ್ಟುವೆ,ಆಗಮದ ಮೂಗ ಕೊಯ್ಯುವೆ ಎಂದು ಹೇಳಿದ ಬಸವಣ್ಣನವರನ್ನು ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ.

ಜೈಪುರದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಮಾತಾಡಿದ ಲೇಖಕರೊಬ್ಬರು ಅಂಬೇಡ್ಕರ್ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಆರೆಸ್ಸೆಸ್ ಶತಾಯ ಗತಾಯ ಯತ್ನ ನಡೆಸಿದೆ ಎಂದು ಹೇಳಿದರು. ಅಂಬೇಡ್ಕರ್ ಅವರನ್ನು ಗೌರವಿಸುವ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ದಲಿತ ಮತ್ತು ಸಮಸ್ತ ದಮನಿತ ಸಮುದಾಯಗಳು ಇಂದಿಗೂ ಮನುವಾದಿ, ಕೋಮುವಾದಿ ಶಕ್ತಿಗಳನ್ನು ಒಪ್ಪಿ ಕೊಳ್ಳುತ್ತಿಲ್ಲ. ಅವರ ಮನುವಾದಿ ಹಿಂದೂರಾಷ್ಟ್ರ ನಿರ್ಮಾಣದ ಮಸಲತ್ತಿಗೆ ಅಂಬೇಡ್ಕರ್ ಅವರು ದೊಡ್ಡ ಅಡ್ಡಿಯಾಗಿದ್ದಾರೆ. ಅದಕ್ಕಾಗಿ ಅವರನ್ನೇ ನುಂಗಿ ಜೀರ್ಣಿಸಿಕೊಳ್ಳಲು ಹುನ್ನಾರ ನಡೆಸುತ್ತಲೇ ಬರಲಾಗಿದೆ.

ಆದರೆ, ಶ್ರೇಣೀಕೃತ ಜಾತಿ ಪದ್ಧತಿಯ ಮೂಲವಾದ ಧರ್ಮ ಎಂದು ವ್ಯಾಪಕ ವಾಗಿ ಕರೆಯಲ್ಪಡುವ ಮತ ಮತ್ತು ಭಿನ್ನ ಭೇದದ ಸಿದ್ಧಾಂತಗಳನ್ನು ವಿರೋಧಿಸುತ್ತ ಬಂದ ಬಾಬಾಸಾಹೇಬರನ್ನು ನುಂಗಿ ಜೀರ್ಣಿಸಿಕೊಳ್ಳು ವುದು ಅಷ್ಟು ಸುಲಭವಲ್ಲ ಮಾತ್ರವಲ್ಲ ಸಾಧ್ಯವೇ ಇಲ್ಲ.ಕೋಮುವಾದಿ ಶಕ್ತಿಗಳು ಮೊದಲು ಅಂಬೇಡ್ಕರ್ ಅವರನ್ನು ತೇಜೋವಧೆ ಮಾಡಿಸಿ ಅರುಣ್ ಶೌರಿಯವರಿಂದ ಪುಸ್ತಕ ಬರೆಸಿದರು. ಆದರೆ, ಅದರ ವಿರುದ್ಧ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರತಿಭಟನೆ ವ್ಯಕ್ತವಾದಾಗ ತಮ್ಮ ರಾಗ ಬದಲಿಸಿದರು.ಅತ್ಯಂತ ಪ್ರಜ್ಞಾವಂತ ದಲಿತ ಸಮುದಾಯ ಮನುವಾದಿ ,ಕೋಮುವಾದಿ ಶಕ್ತಿಗಳ ಬಲೆಗೆ ಬೀಳಲಿಲ್ಲ.ಕೆಲವರು ಹೋದರೂ ಪ್ರಯೋಜನವಾಗಲಿಲ್ಲ.

ಈ ನಡುವೆ ಭಾರತದ ಸ್ವಾತಂತ್ರ್ಯಕ್ಕಾಗಿ ಆಝಾದ್ ಹಿಂದ್ ಸೇನೆ ಕಟ್ಟಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನುಂಗುವ ಮಸಲತ್ತೂ ನಡೆದಿದೆ. ಕೋಲ್ಕತಾದ ಶಹೀದ್ ಮಿನಾರ್ ಮೈದಾನದಲ್ಲಿ ಬೋಸ್ ಜನ್ಮದಿನದ ಪ್ರಯುಕ್ತ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆರೆಸ್ಸೆಸ್‌ಸರ ಸಂಘಚಾಲಕ ಮೋಹನ್ ಭಾಗವತರು ಮಾತನಾಡಲಿದ್ದಾರೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಗಳು ಅನಿತಾ ಬೋಸ್ ಆರೆಸ್ಸೆಸ್ ಸಿದ್ಧ್ದಾಂತಕ್ಕೂ ತಮ್ಮ ತಂದೆಗೂ ಸಂಬಂಧವಿಲ್ಲ. ಅವರದೊಂದು ಧ್ರುವವಾದರೆ ತಮ್ಮ ತಂದೆ ಇನ್ನೊಂದು ಧ್ರುವ ಅವೆರಡೂ ಹೇಗೆ ಒಂದಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

‘ಆರೆಸ್ಸೆಸ್ ತನ್ನ ಹಿತಾಸಕ್ತಿಗಾಗಿ ತನ್ನ ತಂದೆ ಸುಭಾಷರ ಜನ್ಮದಿನ ಆಚರಿಸಲು ಹೊರಟಿದೆ. ಆದರೆ, ಭಾರತದ ಯಾವುದೇ ಪಕ್ಷದ ಸಿದ್ಧಾಂತಗಳಿಗಿಂತ ಕಾಂಗ್ರೆಸ್ ಪಕ್ಷದಲ್ಲಿ ನೇತಾಜಿ ಅವರ ಸಿದ್ಧ್ದಾಂತದ ಹಲವಾರು ಅಂಶಗಳಿವೆ’ ಎಂದು ಅನಿತಾ ಬೋಸ್ ಹೇಳಿದ್ದಾರೆ.

ಎಲ್ಲ ಧರ್ಮಗಳನ್ನು ಗೌರವಿಸಬೇಕೆಂದು ನೇತಾಜಿ ಸುಭಾಷರು ಹೇಳಿದ ಈ ಅಂಶ ಆರೆಸ್ಸೆಸ್ ಬಿಜೆಪಿ ಸಿದ್ಧಾಂತದಲ್ಲಿ ಇಲ್ಲ ಎಂದು ಅನಿತಾ ಹೇಳಿದ್ದಾರೆ. ಧರ್ಮಗಳ ಸಹಬಾಳ್ವೆ ಸುಭಾಷರ ಧ್ಯೇಯವಾಗಿತ್ತು. ಆದರೆ ಆರೆಸ್ಸೆಸ್ ಏಕ ಧರ್ಮದ ಯಜಮಾನಿಕೆಯನ್ನು ದೇಶದ ಮೇಲೆ ಹೇರಲು ಹೊರಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

‘ತಮ್ಮ ತಂದೆಯ ಹೆಸರನ್ನು ಕೋಮುವಾದಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಅನಿತಾ ಬೋಸ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು ಮಾತ್ರವಲ್ಲ ಅತ್ಯಂತ ಸರಳವಾಗಿ ಹೇಳುವುದಾದರೆ ಆರೆಸ್ಸೆಸ್ ಬಲಪಂಥೀಯ ವಾದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಎಡಪಂಥೀಯರಾಗಿದ್ದರು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಈ ಮಾತನ್ನು ಹೇಳಿದ ಅನಿತಾ ಬೋಸ್ ಜರ್ಮನಿಯಲ್ಲಿದ್ದಾರೆ .ಭಾರತದಲ್ಲಿದ್ದು ಈ ಮಾತನ್ನು ಹೇಳಿದ್ದರೆ ಅವರೂ ಅಂಬೇಡ್ಕರ್ ಸಂಬಂಧಿ ಚಿಂತಕ ಆನಂದ್ ತೇಲ್ತುಂಬ್ಡೆೆ ಅವರಂತೆ ಸೆರೆಮನೆ ವಾಸ ಅನುಭವಿಸಬೇಕಾಗುತ್ತಿತ್ತೇನೊ.

ಈ ರೀತಿ ಮಹಾಚೇತನಗಳನ್ನು ಅಪಹರಿಸಿ ತಮ್ಮ ಕಬ್ಜಾ ಮಾಡಿಕೊಳ್ಳುವ ಮಸಲತ್ತು ನಡೆಯುತ್ತಲೇ ಇದೆ. ನಾವು ಶಿವಾಜಿ ಮಹಾರಾಜರನ್ನು ಕೈ ಬಿಟ್ಟೆವು, ಅವರು ಹೈಜಾಕ್ ಮಾಡಿದರು. ಶಹೀದ್ ಭಗತ್ ಸಿಂಗರನ್ನು ಅಪಹರಿಸಲು ಯತ್ನಿಸಿದರು,ಅಷ್ಟರಲ್ಲಿ ನಾವು ಎಚ್ಚೆತ್ತೆವು. ಬಾಬಾಸಾಹೇಬರನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿದರು,ಆದರೆ ಬಾಬಾ ಉರಿವ ಜ್ವ್ವಾಲೆ ಮುಟ್ಟಲು ಹೋಗಿ ಅವರೇ ಸುಟ್ಟುಕೊಂಡರು. ಎಲ್ಲಕ್ಕಿಂತಲೂ ಮುಖ್ಯವಾಗಿ ಸುಭಾಷರಂತೆ ವಿವೇಕಾನಂದರನ್ನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಅವರ ಜಯಂತಿ ಆಚರಿಸಿ ಅವರ ಕ್ರಾಂತಿಕಾರಿ ವಿಚಾರಧಾರೆಯನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ. ರಾಮಕೃಷ್ಣ ಆಶ್ರಮದಲ್ಲೂ ನುಸುಳಿ ತಮ್ಮ ಮಸಲತ್ತು ನಡೆಸುತ್ತಿದ್ದಾರೆ. ಆದರೆ ವಿವೇಕಾನಂದ ಕೂಡ ಇವರಿಗೆ ದಕ್ಕುವುದಿಲ್ಲ. ವಿವೇಕಾನಂದ ಮುಸ್ಲಿಮ್ ದ್ವೇಷಿ ಅಲ್ಲ. ಅವರು ಮನುಷ್ಯ ಸಮಾನತೆಯ ಕನಸು ಕಂಡ ಕ್ರಾಂತಿಕಾರಿ. ಅವರ ಕ್ರಾಂತಿಕಾರಿ ವಿಚಾರಗಳನ್ನು ಮುಚ್ಚಿಟ್ಟು ಬೇರೆ ವಿವೇಕಾನಂದರನ್ನು ತೋರಿಸುವ ಮಸಲತ್ತನ್ನು ಮನುವಾದಿಗಳು, ಕೋಮುವಾದಿಗಳು ಮಾಡುತ್ತ ಬಂದಿದ್ದಾರೆ. ನೆನಪಿರಲಿ, ವಿವೇಕಾನಂದ ಕೋಮುವಾದಿಯಲ್ಲ. ಸಮಾನತೆಯಲ್ಲಿ ನಂಬಿಕೆ ಹೊಂದಿದವರು. ಅವರು ಪ್ರತಿಪಾದಿಸಿದ ಧರ್ಮ ಜನಾಂಗ ದ್ವೇಷದ ಧರ್ಮವಲ್ಲ, ಮಹಾಪುರುಷರನ್ನು ಹೈಜಾಕ್ ಮಾಡಿ ವಿರೂಪಗೊಳಿಸುವ ಕೋಮುವಾದಿಗಳ ಹುನ್ನಾರದಿಂದಾಗಿ ನಿಜ ವಿವೇಕಾನಂದರು ಕಳೆದು ಹೋಗುವುದಿಲ್ಲ.

ಭಾರತದಲ್ಲಿ ಇಸ್ಲಾಮ್ ಧರ್ಮ ಬಲಪ್ರಯೋಗದಿಂದ ಬೆಳೆಯಿತು ಎಂಬ ವಾದವನ್ನು ತಳ್ಳಿ ಹಾಕಿದ ವಿವೇಕಾನಂದರು ಜಮೀನ್ದಾರರ ದೌರ್ಜನ್ಯ, ಪುರೋಹಿತರ ಕಾಟ,ಜಾತಿಯವಾದಿಗಳ ಹಿಂಸೆಯ ಪರಿಣಾಮವಾಗಿ ಈ ಯಾತನೆಯಿಂದ ಬಿಡುಗಡೆ ಹೊಂದಲು ಈ ನೆಲದ ಅನ್ಯಾಯಕ್ಕೊಳಗಾದ ಜನರು ಮಹ್ಮದಿಯರಾದರು ಎಂದು ಹೇಳುವ ಮೂಲಕ ಬಲವಂತದ ಮತಾಂತರ ಎಂಬುದನ್ನು ತಳ್ಳಿ ಹಾಕುತ್ತಾರೆ.ಭಾರತದ ಭವಿಷ್ಯ ಇರುವುದು ಹಿಂದೂ, ಮುಸ್ಲಿಮ್‌ಏಕತೆಯಿಂದ ಎಂದು ಸ್ಪಷ್ಟವಾಗಿ ನುಡಿಯುವ ವಿವೇಕಾನಂದರು ಇಸ್ಲಾಮ್‌ನ ದೇಹ, ವೇದಾಂತದ ವಿವೇಕದ ಸಮ್ಮಿಲನವೇ ಭಾರತದ ಬೆಳಕಿನ ದಾರಿ ಎಂದು ಒಂದೆಡೆ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದ ಅಂದರೆ ಯಾರು,ಅವರು ಯಾವ ಸಂದೇಶ ನೀಡಿದರು ಎಂಬುದನ್ನು ಅರಿತುಕೊಳ್ಳಲು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿಲ್ಲ.ರಾಮಕೃಷ್ಣ ಆಶ್ರಮದ ಪ್ರಕಾಶನ ಸಂಸ್ಥೆ ಪ್ರಕಟಿಸಿದ ವಿವೇಕಾನಂದರ ಕೃತಿ ಶ್ರೇಣಿಗಳಲ್ಲಿ ಅವರ ನಿಲುವು ಸ್ಪಷ್ಟವಾಗಿದೆ. ನವ ಭಾರತವು ಎಲ್ಲಿದೆ ಎಂಬ ಪ್ರಶ್ನೆ ಗೆ ವಿವೇಕಾನಂದರ ಉತ್ತರ ಕೈಯಲ್ಲಿ ನೇಗಿಲು ಹಿಡಿದ ರೈತರ ಗುಡಿಸಿಲಿನಿಂದ,ಮೀನುಗಾರರ ಹಟ್ಟಿಗಳೊಳಗಿನಿಂದ ,ಚಮ್ಮಾರನ ,ಜಾಡಮಾಲಿಯ ಮನೆಗಳಿಂದ ನವ ಭಾರತ ಹೊರ ಹೊಮ್ಮುತ್ತದೆ.ಕಿರಾಣಿ ಅಂಗಡಿಯಿಂದ, ಪಿಂಗಾಣಿ ಕೆಲಸಗಾರರ ಕುಲುಮೆಯಿಂದ ,ಕಾರ್ಖಾನೆಗಳ ಕಾರ್ಮಿಕರ ಬೆವರಿನಿಂದ ನವ ಭಾರತ ಹುಟ್ಟುತ್ತದೆ ಎಂದು ವಿವೇಕಾನಂದ ಹೇಳಿದರು.

ಜಗತ್ತಿನ ಧರ್ಮಗಳೆಲ್ಲ ನಿಸ್ತೇಜವಾಗಿ ಬಿದ್ದಿವೆ, ಮನುಷ್ಯ ಪ್ರೀತಿ, ಅಂತಃಕರಣ ,ಶುದ್ಧ್ಧ ಚಾರಿತ್ರ ಇವುಗಳು ವಿಶ್ವದ ತುರ್ತು ಅಗತ್ಯಗಳಾಗಿವೆ ಎಂದು ಲಂಡನ್ ನ ಒಂದು ಸಭೆಯಲ್ಲಿ ಹೇಳಿದ ವಿವೇಕಾನಂದರು ಇಹದಲ್ಲಿ ಹೊಟ್ಟೆಗೆ ಅನ್ನವನ್ನು ನೀಡದ, ವಿಧವೆಯ ಕಣ್ಣೀರನ್ನು ಒರೆಸದ ಧರ್ಮದಲ್ಲಾಗಲಿ ದೇವರಲ್ಲಾಗಲಿ ನನಗೆ ನಂಬಿಕೆಯಿಲ್ಲ ಎಂದು ಸ್ಪಷ್ಟವಾಗಿ ನುಡಿದರು. ವಿವೇಕಾನಂದರ ಈ ಮಾತುಗಳನ್ನು ಮರೆ ಮಾಡಿ ಪುರೋಹಿತಶಾಹಿಯ ವಿರುದ್ಧ ಮೂಢ ನಂಬಿಕೆಗಳ ವಿರುದ್ಧ, ಅರ್ಥಹೀನ ಧಾರ್ಮಿಕ ಆಚರಣೆಗಳನ್ನು ಕಟುವಾಗಿ ಟೀಕಿಸುತ್ತ ಬಂದ ವಿವೇಕಾನಂದರು ಪುರೋಹಿತ ಶಾಹಿಯನ್ನು ಒದ್ದೋಡಿಸಲು ಕರೆ ನೀಡಿದರು.ಹಿಂದೂ ಧರ್ಮದ ಬಗ್ಗೆ ಒಂದೆಡೆ ಜಗತ್ತಿನ ಯಾವುದೇ ಧರ್ಮವೂ ಹಿಂದೂ ಧರ್ಮದಂತೆ ಮಾನವನ ಘನತೆಯನ್ನು ಎತ್ತಿ ಹಿಡಿಯುವುದಿಲ್ಲ, ಜಗತ್ತಿನಲ್ಲಿ ಯಾವುದೇ ಧರ್ಮವೂ ಹಿಂದೂ ಧರ್ಮದಂತೆ ದಲಿತರ ಕತ್ತಿನ ಮೇಲೆ ಸವಾರಿ ಮಾಡುವುದಿಲ್ಲ ಎಂದು ಹೇಳಿದ್ದು ಮತ ಧರ್ಮಗಳ ಬಗೆಗಿನ ಕಟು ವಿಮರ್ಶೆಗೆ ಉದಾಹರಣೆಯಾಗಿದೆ. ಅವರು ಎಲ್ಲೋ ಹೇಳಿದ ಧಾರ್ಮಿಕ ವಿಷಯಗಳನ್ನು ದೊಡ್ಡದು ಮಾಡಿ ತಮ್ಮ ವಿಭಜನಕಾರಿ ರಾಜಕೀಯಕ್ಕೆ ಬಳಸಿಕೊಳ್ಳುವುದು ಕೋಮುವಾದಿಗಳ ಚಾಳಿಯಾಗಿದೆ.

ಪುರೋಹಿತಶಾಹಿಯ ವಂಚನೆಯ ಬಗ್ಗೆ ವಿವೇಕಾನಂದರಿಗೆ ತೀವ್ರ ಅಸಮಾ ಧಾನವಿತ್ತು. ಮೂಢ ಕಂದಾಚಾರಗಳನ್ನು ನೂರಾರು ವರ್ಷಗಳಿಂದ ತಲೆಯಲ್ಲಿ ತುಂಬಿಕೊಂಡ ಈ ದೇಶದಲ್ಲಿ ಯಾವುದನ್ನು ತಿಂದರೆ ಶ್ರೇಷ್ಠ, ಯಾವುದನ್ನು ತಿಂದರೆ ಅಶುದ್ಧ ಎಂದು ಒಣ ಚರ್ಚೆಯಲ್ಲಿ ಕಾಲ ಹರಣ ಮಾಡಲಾಗಿದೆ. ಪುರೋಹಿತ ಶಾಹಿಯನ್ನು ಒದ್ದೋಡಿಸಿ ಯಾಕೆಂದರೆ ಅವರೆಂದೂ ಬದಲಾಗು ವುದಿಲ್ಲ. ಅವರು ಶತಮಾನಗಳ ಮೂಢ ನಂಬಿಕೆ, ಕಂದಾಚಾರಗಳ ಸಂತಾನವಾಗಿ ದ್ದಾರೆ ಎಂದು ಕರೆ ನೀಡಿದ ವಿವೇಕಾನಂದರು ಹಿಂದೂ ಧರ್ಮದಲ್ಲಿ ನವ ವೇದಾಂತ ಚಳವಳಿಯನ್ನು ಹುಟ್ಟು ಹಾಕಿದ ಕಟು ವಿಮರ್ಶಕರಾಗಿದ್ದರು.

ವಿವೇಕಾನಂದರು ಜಾತಿ ಮತಗಳ ಆಚೆ ಮನುಷ್ಯರನ್ನು ಪ್ರೀತಿಸಿದರು. ಎಲ್ಲೆಡೆ ಪ್ರೀತಿಯನ್ನು ಹಂಚಲು ಕರೆ ನೀಡಿದರು. ವೇದ, ಶಾಸ್ತ್ರ, ಪುರಾಣ, ಕುರ್‌ಆನ್, ಬೈಬಲ್ ಗಳಿಗೆ ಕೆಲ ಕಾಲ ವಿಶ್ರಾಂತಿ ನೀಡಿ ಮನುಷ್ಯರು ಪ್ರೀತಿ, ಪ್ರೇಮದ ಸಂತಸದ ಸಾಗರದಲ್ಲಿ ಸಂಭ್ರಮಿಸಬೇಕಾಗಿದೆ ಎಂದು ಕರೆ ನೀಡಿದರು. ಇಂಥ ಜೀವಪರ ಕಾಳಜಿಯ ಮಹಾನ್ ವೇದಾಂತಿಯನ್ನು ತಮ್ಮ ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಳ್ಳುವ ಸಂಘ ಪರಿವಾರದ ಮೂಲ ಭಾರತವಲ್ಲ. ಅವರದು ಇಟಲಿ,ಜರ್ಮನಿಯಿಂದ ಮುಸ್ಸೋಲಿನಿ ,ಹಿಟ್ಲರ್ ಗಳಿಂದ ಎರವಲು ತಂದ ಜನಾಂಗ ದ್ವೇಷಿ ಸಿದ್ಧಾಂತ.

ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬುದು ವಿವೇಕಾನಂದರಿಗೆ ಮುಖ್ಯವಾಗಿರಲಿಲ್ಲ. ಅವರು ಸ್ವತ ಮಾಂಸಾಹಾರಿಯಾಗಿ ದ್ದರು.ಆದರೆ ಕರ್ನಾಟಕದಲ್ಲಿ ಓಟಿನ ರಾಜಕೀಯಕ್ಕೆ ಅವರನ್ನು ಬಳಸಿಕೊಳ್ಳುವ ಪಕ್ಷದ ಸರಕಾರ ಮಠಾಧೀಶರ ಸಭೆ ಕರೆದು ಅವರಿಂದ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರವಾದ ಮೊಟ್ಟೆಯನ್ನು ಸರಕಾರಿ ಶಾಲೆಗಳಲ್ಲಿ ಕೊಡಬಾರದು ಎಂದು ಹೇಳಿಸಿ ಅವರು ಹೇಳಿದ್ದನ್ನು ಸಾತ್ವಿಕ ಆಹಾರದ ಹೆಸರಿನಲ್ಲಿ ಜಾರಿಗೆ ತರಲು ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ. ನಮ್ಮ ಯುವಕರಿಗೆ ಈಗ ವಿವೇಕಾನಂದ ಬೇಕು. ಕೋಮುವಾದಿಗಳು ವಿರೂಪಗೊಳಿಸಿದ ವಿವೇಕಾನಂದ ರಲ್ಲ. ಹಸಿದವರ ಹೊಟ್ಟೆಗೆ ಅನ್ನ ನೀಡಬೇಕೆಂದು , ವಿಧವೆಯರ ಕಣ್ಣೀರು ಒರೆಸಬೇಕೆಂದು ಹೇಳುವ ನಮ್ಮ ವಿವೇಕಾನಂದರು ನಮಗೆ ಬೇಕು.

ಹೀಗೆ ಮಹಾಚೇತನಗಳನ್ನು ಹೈಜಾಕ್ ಮಾಡಿ ತಮ್ಮ ಫ್ಯಾಶಿಸ್ಟ್ ಸಿದ್ಧ್ದಾಂತ ಗಳ ಜಾರಿಗೆ ಬಳಸಿಕೊಳ್ಳುವ ಹುನ್ನಾರದ ಬಗ್ಗೆ ಜನರಲ್ಲಿ ಅದರಲ್ಲೂ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜೀವ ಪರ, ಜನಪರ ಶಕ್ತಿಗಳು ಸಮರೋ ಪಾದಿಯಲ್ಲಿ ನಡೆಸಬೇಕಾಗಿದೆ.ಈ ನಿಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಮುಂತಾದಜಾತ್ಯತೀತ ಪಕ್ಷಗಳು ಮಾತ್ರವಲ್ಲ ಎಡಪಂಥೀಯ ಪಕ್ಷಗಳು ಮತ್ತು ಸಂಘಟನೆಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ.ಬಹುತ್ವ ಭಾರತವನ್ನು ಕಾಪಾಡಿಕೊಳ್ಳಲು ಮತ್ತು ಇದು ಎಲ್ಲರ ಭಾರತವನ್ನಾಗಿ ಉಳಿಸಿಕೊಳ್ಳಲು ಕಾರ್ಯೋನ್ಮುಖವಾಗದಿದ್ದರೆ ಬಹುದೊಡ್ಡ ಅಪಾಯವನ್ನು ಎದುರಿಸಬೇಕಾ ಗುತ್ತಾದೆ. ಮನಸು ಒಡೆಯುವವರ ವಿರುದ್ಧ ಮನಸ್ಸು ಕಟ್ಟುವ ಮತ್ತು ಕನಸು ಕಟ್ಟುವ ಜನ ಒಂದಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)