varthabharthi


ನಿಮ್ಮ ಅಂಕಣ

ನೇತಾಜಿ ಎಂಬ ನಿಜ ನಾಯಕ

ವಾರ್ತಾ ಭಾರತಿ : 23 Jan, 2023
ಸುಜಾತ

ಈಗ ಬೋಸ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಆರೆಸ್ಸೆಸ್ ತಯಾರಾಗಿರುವುದು ಕೂಡ ಬೋಸರ ಪರಂಪರೆಯ ಲಾಭ ಪಡೆಯುವುದಕ್ಕೆ ಎಂಬ ಟೀಕೆಗಳೇ ವ್ಯಕ್ತವಾಗಿವೆ. ಸ್ವತಃ ಬೋಸರ ಮಗಳು ಅನಿತಾ ಜೋಸ್ ಫಾಫ್ ಈ ಬಗ್ಗೆ ನೀಡಿರುವ ಪ್ರತಿಕ್ರಿಯೆ ಗಮನಾರ್ಹ. ನೇತಾಜಿ ಆರೆಸ್ಸೆಸ್ ಸಿದ್ಧಾಂತಗಳ ಟೀಕಾಕಾರರಾಗಿದ್ದರು ಎಂದು ಹೇಳಿರುವ ಅವರು, ನೇತಾಜಿ ಧೋರಣೆಯನ್ನು ಆರ್‌ಸ್ಸೆಸ್‌ಮತ್ತು ಬಿಜೆಪಿ ಪ್ರತಿಬಿಂಬಿಸುವುದಿಲ್ಲ ಎಂದಿದ್ದಾರೆ. ನನ್ನ ತಂದೆ ಎಲ್ಲ ಧರ್ಮಗಳನ್ನೂ ಗೌರವಿಸುತ್ತಿದ್ದರು. ಪ್ರತಿಯೊಬ್ಬರೂ ಜತೆಯಾಗಿ ಬದುಕಬೇಕು ಎಂಬ ನೀತಿಯಲ್ಲಿ ನಂಬಿಕೆ ಇರಿಸಿದ್ದರು. ಆರ್‌ಸ್ಸೆಸ್ ಇದರಲ್ಲಿ ನಂಬಿಕೆ ಇದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಅನಿತಾ ಹೇಳಿದ್ದಾರೆ. ನೇತಾಜಿ ಅವರ ಸಿದ್ಧಾಂತವನ್ನು ಆರೆಸ್ಸೆಸ್ ಅನುಸರಿಸಲು ಆರಂಭಿಸಿದರೆ, ಅದು ಭಾರತಕ್ಕೆ ಬಹಳ ಒಳ್ಳೆಯ ಸಂಗತಿ. ಆ ಮಟ್ಟಕ್ಕೆ ಆರೆಸ್ಸೆಸ್ ಆಲೋಚಿಸುತ್ತದೆ ಎಂದು ನನಗೆ ಖಾತರಿ ಇಲ್ಲ.

ದೇಶದ ಸ್ವಾತಂತ್ರ್ಯಕ್ಕಾಗಿ ದಿಟ್ಟತನದಿಂದ ನಿಂತಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರು, ಆ ದಾರಿಯಲ್ಲಿ ಎಷ್ಟು ಖಚಿತತೆ ಹೊಂದಿದ್ದರೆಂಬುದಕ್ಕೆ, ಉನ್ನತ ಶ್ರೇಣಿಯಲ್ಲಿ ಐಸಿಎಸ್ ಪಾಸಾಗಿದ್ದ ತಮಗೆ ಬ್ರಿಟಿಷ್ ಸರಕಾರ ಕೊಡಬಯಸಿದ್ದ ಉನ್ನತ ಹುದ್ದೆಯನ್ನು ಧಿಕ್ಕರಿಸಿದ್ದರು. ಸ್ವಾತಂತ್ರ್ಯ ಕಳೆದುಕೊಂಡ ಜನರ ಜೊತೆ ನಿಲ್ಲುವುದು ಅವರಿಗೆ ಮುಖ್ಯವಾಗಿತ್ತು.

1897ರ ಜನವರಿ 23ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದ ಸುಭಾಷರು ತತ್ವಶಾಸ್ತ್ರದಲ್ಲಿ ಪದವಿ ಬಳಿಕ ತಂದೆಯ ಆಸೆಯಂತೆ ಐಸಿಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಹೋದರು. ಅದನ್ನು ಬ್ರಿಟಿಷರಿಗೆ ಸಮಾನವಾಗಿ ಸಾಧಿಸಿಯೂ ತೋರಿಸಿದರು. ಆದರೆ ಬದುಕಿನಲ್ಲಿ ತಮ್ಮ ದಿಕ್ಕು ಬೇರೆಯೇ ಇದೆಯೆಂಬುದು ಅವರಿಗೆ ಸ್ಪಷ್ಟವಾಗಿತ್ತು. ಐಸಿಎಸ್ ಪದವಿಯನ್ನು ಬ್ರಿಟಿಷ್ ಸರಕಾರಕ್ಕೆ ಮರಳಿಸಿ, ಮುಂದೆ ದೇಶದ ಕೆಲಸಕ್ಕೆ ತೊಡಗಿಸಿಕೊಂಡರು.

ಆನಂತರದ ಅವರ ಹೆಜ್ಜೆಗಳೆಲ್ಲವೂ ಕ್ರಾಂತಿಕಾರಿ. ಬ್ರಿಟಿಷರ ವಿರುದ್ಧ ದೇಶದ ಜನತೆಯನ್ನು ಸಂಘಟಿಸಲು ಅವರು ಅಷ್ಟೇ ತೀವ್ರತೆಯಿಂದ ಕೆಲಸ ಮಾಡಿದರು. ಬ್ರಿಟಿಷರ ಕೆಂಗಣ್ಣಿಗೆ ತುತ್ತಾಗಿ ಗೃಹಬಂಧನವನ್ನೂ ಅನುಭವಿಸಬೇಕಾಯಿತು. ಅಲ್ಲಿಂದ ತಪ್ಪಿಸಿಕೊಂಡು ಜರ್ಮನಿಗೆ ಹೋಗಿ, ನಂತರ ಇಂಡಿಯನ್ ನ್ಯಾಷನಲ್ ಆರ್ಮಿಯ ಹೊಣೆ ಹೊತ್ತುಕೊಳ್ಳಲು ಜಪಾನಿಗೆ ಪ್ರಯಾಣ ಬೆಳೆಸಿದರು. ಹಾಗೆ ಹೋಗುವಾಗ ಪತ್ನಿ ಜರ್ಮನಿಯ ಎಮಿಲಿ ಪಾವೆಲಿನ ಶಂಕೆಲ್ ಹಾಗೂ ಮಗಳನ್ನು ಅಲ್ಲಿಯೇ ಬಿಟ್ಟು ಹೊರಟಿದ್ದರು. ನೇತಾಜಿ ಸಂಘಟಿಸಿದ್ದ ಐಎನ್‌ಎ ನಿಜವಾದ ಜನಸೇನೆಯಾಗಿತ್ತು. ಮಹಿಳಾ ಯೋಧರ ಪಡೆಯನ್ನೂ ಅವರು ಆ ಕಾಲದಲ್ಲಿಯೇ ಕಟ್ಟಿದ್ದರು ಎಂಬುದು ವಿಶೇಷ.

ದೇಶಕ್ಕೆ ಸ್ವಾತಂತ್ರ ಪಡೆಯುವ ದಾರಿಯಲ್ಲಿ ಅವರು ಮಂದ ನಿಲುವಿನವರಾಗಿರಲಿಲ್ಲ ಮತ್ತು ಆ ತೀವ್ರ ಧೋರಣೆಯೇ ಗಾಂಧಿಯವರೊಡನೆ ಭಿನ್ನಾಭಿಪ್ರಾಯ ಮೂಡಲು ಕಾರಣವಾದದ್ದು. ಗಾಂಧಿಯವರ ಬಗ್ಗೆ ಅಪಾರ ಗೌರವ ಹೊಂದಿದ್ದರೂ, ಈ ಭಿನ್ನಾಭಿಪ್ರಾಯವೊಂದು ಅವರನ್ನು ದೂರವೇ ಉಳಿಸಿತು. ಆದರೆ ವಾಸ್ತವದಲ್ಲಿ, ಗಾಂಧೀಜಿ ಪ್ರತಿಪಾದಿಸಿದ್ದ ಹಿಂದೂ- ಮುಸ್ಲಿಮ್‌ಸಾಮರಸ್ಯ, ಅಸ್ಪೃಶ್ಯತೆ ನಿರ್ಮೂಲನೆ, ಆರ್ಥಿಕ ಸ್ವಾವಲಂಬನೆ ತತ್ವಗಳ ಬಗ್ಗೆ ಅಪಾರ ಗೌರವವುಳ್ಳವರಾಗಿದ್ದ ಬೋಸರು, ಅಹಿಂಸೆ ತತ್ವದಲ್ಲಿ ಮಾತ್ರ ನಂಬಿಕೆಯಿಟ್ಟಿರಲಿಲ್ಲ. ಹಾಗಾಗಿಯೇ ಅವರು ನ್ಯಾಷನಲ್ ಇಂಡಿಯನ್ ಆರ್ಮಿ ಸ್ಥಾಪಿಸಿದ್ದು. ಅದಾದ ಬಳಿಕವೂ ಅವರು ಗಾಂಧಿಯ ಬಗ್ಗೆ ಅಸಾಧಾರಣ ಗೌರವವನ್ನೇ ಹೊಂದಿದ್ದರು.ಆದರೆ ಗಾಂಧಿ ಮತ್ತು ಬೋಸ್ ಮಧ್ಯೆ ಎಂದೂ ರಾಜಿಯಾಗಲಾರದಂಥ ಸ್ಪರ್ಧೆ ಮತ್ತು ದ್ವೇಷ ಇತ್ತೆಂಬುದನ್ನೇ ಬಿಂಬಿಸುವ ಯತ್ನ ನಡೆದೇ ಇದೆ. 2016ರಲ್ಲಿ ಬೋಸ್ ಜನ್ಮದಿನದಂದು ಮೋದಿ ಸರಕಾರ ಬೋಸರಿಗೆ ಸಂಬಂಧಿಸಿದ,ಕೇಂದ್ರ ಸರಕಾರದ ವಶದಲ್ಲಿರುವ ಕಡತಗಳನ್ನು ಬಹಿರಂಗಪಡಿಸುವ ಕೆಲಸ ಶುರುಮಾಡಿತು. ಅದರ ಹಿಂದೆ ಕೂಡ ನೆಹರೂ ಥರದ ನಾಯಕರು ಬೋಸರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸಬಹುದು ಎಂಬ ಇರಾದೆಯಿತ್ತು ಎಂಬುದನ್ನು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಬರೆದಿದ್ದಾರೆ. ಅಂಥ ಅನುಮಾನಗಳನ್ನೆಲ್ಲ ಕಡತಗಳು ತಳ್ಳಿಹಾಕಿದವು ಎಂದೂ ಅವರು ಹೇಳುತ್ತಾರೆ.

 ಈಗ ಬೋಸ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಆರೆಸ್ಸೆಸ್ ತಯಾರಾಗಿರುವುದು ಕೂಡ ಬೋಸರ ಪರಂಪರೆಯ ಲಾಭ ಪಡೆಯುವುದಕ್ಕೆ ಎಂಬ ಟೀಕೆಗಳೇ ವ್ಯಕ್ತವಾಗಿವೆ. ಸ್ವತಃ ಬೋಸರ ಮಗಳು ಅನಿತಾ ಜೋಸ್ ಫಾಫ್ ಈ ಬಗ್ಗೆ ನೀಡಿರುವ ಪ್ರತಿಕ್ರಿಯೆ ಗಮನಾರ್ಹ. ನೇತಾಜಿ ಆರೆಸ್ಸೆಸ್ ಸಿದ್ಧಾಂತಗಳ ಟೀಕಾಕಾರರಾಗಿದ್ದರು ಎಂದು ಹೇಳಿರುವ ಅವರು, ನೇತಾಜಿ ಧೋರಣೆಯನ್ನು ಆರ್‌ಸ್ಸೆಸ್‌ಮತ್ತು ಬಿಜೆಪಿ ಪ್ರತಿಬಿಂಬಿಸುವುದಿಲ್ಲ ಎಂದಿದ್ದಾರೆ.

ನನ್ನ ತಂದೆ ಎಲ್ಲ ಧರ್ಮಗಳನ್ನೂ ಗೌರವಿಸುತ್ತಿದ್ದರು. ಪ್ರತಿಯೊಬ್ಬರೂ ಜತೆಯಾಗಿ ಬದುಕಬೇಕು ಎಂಬ ನೀತಿಯಲ್ಲಿ ನಂಬಿಕೆ ಇರಿಸಿದ್ದರು. ಆರ್‌ಸ್ಸೆಸ್ ಇದರಲ್ಲಿ ನಂಬಿಕೆ ಇದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಅನಿತಾ ಹೇಳಿದ್ದಾರೆ. ನೇತಾಜಿ ಅವರ ಸಿದ್ಧಾಂತವನ್ನು ಆರೆಸ್ಸೆಸ್ ಅನುಸರಿಸಲು ಆರಂಭಿಸಿದರೆ, ಅದು ಭಾರತಕ್ಕೆ ಬಹಳ ಒಳ್ಳೆಯ ಸಂಗತಿ. ಆ ಮಟ್ಟಕ್ಕೆ ಆರೆಸ್ಸೆಸ್ ಆಲೋಚಿಸುತ್ತದೆ ಎಂದು ನನಗೆ ಖಾತರಿ ಇಲ್ಲ. ಆರೆಸ್ಸೆಸ್ ಹಿಂದೂ ರಾಷ್ಟ್ರೀಯವಾದಿ ಆಲೋಚನೆಗಳನ್ನು ಪ್ರತಿಪಾದಿಸಲು ಬಯಸಿದ್ದರೆ, ಅದು ನೇತಾಜಿ ಅವರ ಸಿದ್ಧಾಂತದ ಜತೆ ತಾಳೆಯಾಗುವುದಿಲ್ಲ. ನೇತಾಜಿ ಅವರನ್ನು ಅದಕ್ಕೆ ಬಳಸಿಕೊಳ್ಳುವುದಾದರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಅನಿತಾ ಅವರು ಹೇಳಿದ್ದಾರೆ.

 ಅಂದಹಾಗೆ ಇದು ನೇತಾಜಿಯವರ 126ನೇ ಜಯಂತಿ. ಈ ದೇಶಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡ ಆ ಮಹಾನ್ ನಾಯಕನ ಚಿಂತನೆಗಳು, ಸಿದ್ಧಾಂತಗಳು ಎಂದಿಗಿಂತಲೂ ಇಂದು ಹೆಚ್ಚು ಪ್ರಸಕ್ತ. ಅವರ ಆದರ್ಶವು ನಮಗೆ ಮಾರ್ಗದರ್ಶಕವಾಗಬೇಕು. ಅವರ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ನಡೆಯುವ ಯಾವುದೇ ರಾಜಕಾರಣದ ಬಗೆಗಿನ ಎಚ್ಚರವೂ ಅಗತ್ಯವಾಗಿ ಇರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)