ಕರ್ನಾಟಕ ಹಿಜಾಬ್ ವಿವಾದದ ವಿಚಾರಣೆ ನಡೆಸಲು ತ್ರಿಸದಸ್ಯ ಪೀಠ ರಚಿಸುವ ಕುರಿತು ಸುಪ್ರೀಂಕೋರ್ಟ್ ಚಿಂತನೆ
ಹೊಸದಿಲ್ಲಿ: ಕರ್ನಾಟಕದಲ್ಲಿನ ಶಾಲಾ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸುವ ಪ್ರಕರಣದ ಕುರಿತು ಭಿನ್ನ ತೀರ್ಪುಗಳು ಬಂದಿರುವುದರಿಂದ, ಪ್ರಕರಣವನ್ನು ಇತ್ಯರ್ಥಗೊಳಿಸಲು ತ್ರಿಸದಸ್ಯ ಪೀಠ ರಚಿಸುವ ಕುರಿತು ತಾನು ಪರಿಗಣಿಸುವುದಾಗಿ ಸೋಮವಾರ ಸುಪ್ರೀಂಕೋರ್ಟ್ ತಿಳಿಸಿದೆ.
ಕರ್ನಾಟಕ ರಾಜ್ಯದಲ್ಲಿ ಫೆಬ್ರವರಿ 6ರಿಂದ ನಡೆಯಲಿರುವ ಪ್ರಾಯೋಗಿಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಹಿಜಾಬ್ ಧರಿಸುವ ಕುರಿತು ಮಧ್ಯಂತರ ಆದೇಶವೊಂದನ್ನು ಹೊರಡಿಸಬೇಕು ಎಂದು ಕೋರಿ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾ. ವಿ.ರಾಮಸುಬ್ರಮಣಿಯನ್ ಹಾಗೂ ನ್ಯಾ. ಜೆ.ಬಿ.ಪರ್ದೀವಾಲಾ ಅವರನ್ನೊಳಗೊಂಡಿರುವ ನ್ಯಾಯಪೀಠವು ನಡೆಸುತ್ತಿದೆ.
"ಇದು ಶಿರವಸ್ತ್ರದ ವಿಚಾರವಾಗಿದೆ. ವಿದ್ಯಾರ್ಥಿನಿಯರಿಗೆ ಫೆಬ್ರವರಿ 6, 2023ರಿಂದ ಪ್ರಾಯೋಗಿಕ ಪರೀಕ್ಷೆಗಳಿದ್ದು, ಅವರು ಅವುಗಳಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಮಧ್ಯಂತರ ಸೂಚನೆಗಾಗಿ ಪಟ್ಟಿ ಮಾಡಬೇಕಾಗಿದೆ. ಈ ಪ್ರಾಯೋಗಿಕ ಪರೀಕ್ಷೆಗಳು ಸರ್ಕಾರಿ ಶಾಲೆಗಳಲ್ಲಿ ನಡೆಯಲಿವೆ" ಎಂದು ಕೆಲವು ವಿದ್ಯಾರ್ಥಿಗಳ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಮನವಿ ಮಾಡಿದರು.
ಅದಕ್ಕೆ ಪ್ರತಿಯಾಗಿ, "ನಾನು ಈ ಕುರಿತು ಪರಿಶೀಲಿಸುತ್ತೇನೆ. ಇದು ತ್ರಿಸದಸ್ಯ ಪೀಠ ವಿಚಾರಣೆ ನಡೆಸಬೇಕಾದ ವಿಚಾರವಾಗಿದೆ. ನಾವು ದಿನಾಂಕವನ್ನು ನಿಗದಿಗೊಳಿಸುತ್ತೇವೆ" ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಭರವಸೆ ನೀಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 13ರಂದು ಹಿಜಾಬ್ ವಿವಾದದ ಕುರಿತು ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠವು ವಿಭಿನ್ನ ತೀರ್ಪು ಪ್ರಕಟಿಸಿ, ಕರ್ನಾಟಕ ಶಾಲೆಗಳಲ್ಲಿ ಹಿಜಾಬ್ ಧರಿಸಲು ನಿಷೇಧ ಹೇರಿರುವುದರಿಂದ ಉದ್ಭವಿಸಿರುವ ಈ ಪ್ರಕರಣವನ್ನು ಇತ್ಯರ್ಥ ಪಡಿಸಲು ಸೂಕ್ತ ನ್ಯಾಯಪೀಠವನ್ನು ರಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿತ್ತು.
ಇದನ್ನೂ ಓದಿ: ಕರ್ನಾಟಕ ಹಿಜಾಬ್ ವಿವಾದದ ವಿಚಾರಣೆ ನಡೆಸಲು ತ್ರಿಸದಸ್ಯ ಪೀಠ ರಚಿಸುವ ಕುರಿತು ಸುಪ್ರೀಂಕೋರ್ಟ್ ಚಿಂತನೆ