ಯುಎಇಗೆ ಶೀಘ್ರದಲ್ಲೇ ನೆತನ್ಯಾಹು ಭೇಟಿ ಸಾಧ್ಯತೆ: ಪೂರ್ವಭಾವಿಯಾಗಿ ಅಬುದಾಭಿಗೆ ಇಸ್ರೇಲಿ ಸಚಿವರ ರಹಸ್ಯ ಭೇಟಿ
ಟೆಲ್ಅವೀವ್, ಜ.24: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಶೀಘ್ರದಲ್ಲೇ ಯುಎಇಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇಸ್ರೇಲಿ ಸಚಿವರೊಬ್ಬರು ಈ ಗಲ್ಫ್ ರಾಷ್ಟ್ರಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದಾರೆಂದು ವರದಿಯಾಗಿದೆ.
ಇಸ್ರೇಲ್ನ ವ್ಯೆಹಾತ್ಮಕ ವ್ಯವಹಾರಗಳ ಸಚಿವ ರೊನ್ ಡೆರ್ಮರ್ ಅವರು ರವಿವಾರ ಅಬುದಾಭಿಗೆ ಪ್ರಯಾಣಿಸಿದ್ದು, ಅವರು ಅಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆಂದು ಇಸ್ರೇಲಿ ಸುದ್ದಿಜಾಲತಾಣ ವಾಲ್ಲಾ ಸೋಮವಾರ ವರದಿ ಮಾಡಿದೆ.
ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ನೂತನ ಇಸ್ರೇಲಿ ಸರಕಾರವು ಅಧಿಕಾರಕ್ಕೇರಿಕ್ಕೇರಿದ ಬಳಿಕ ಇಸ್ರೇಲಿ ಸಚಿವರೊಬ್ಬರು ಯುಎಇಗೆ ಭೇಟಿ ನೀಡಲಿರುವುದು ಇದೇ ಮೊದಲ ಸಲವಾಗಿದೆ.
ಇಸ್ರೇಲ್ ಪ್ರಧಾನಿಯಾಗಿ ನೆತನ್ಯಾಹು ಮರಳಿ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಅವರು ಯಎಇಗೆ ಭೇಟಿ ನೀಡುವ ನಿರೀಕ್ಷೆಯಿತ್ತು. ಆದರೆ ಅವರ ಸಂಪುಟದ ರಾಷ್ಟ್ರೀಯ ಭದ್ರತಾಸಚಿವ ಇಟಾಮರ್ ಅವರು ಜನವರಿ ತಿಂಗಳ ಆರಂಭದಲ್ಲಿ ಅಲ್ ಅಕ್ಸಾ ಮಸೀದಿ ಆವರಣಕ್ಕೆ ಪ್ರಚೋದನಕಾರಿಯಾಗಿ ಭೇಟಿ ನೀಡಿದ ಘಟನೆಯ ಬಳಿಕ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ನೆತನ್ಯಾಹು ಅವರ ಯುಎಇ ಪ್ರವಾಸ ರದ್ದುಗೊಂಡಿತ್ತು. ಬೆನ್ ಗ್ವಿರ್ ಅವರ ಅಲ್ ಅಕ್ಸಾ ಮಸೀದಿ ಭೇಟಿಯನ್ನು ಖಂಡಿಸಿ ಯುಎಇ ಬಹಿರಂಗ ಹೇಳಿಕೆಯೊಂದನ್ನು ಹೊರಡಿಸಿತ್ತು.
ಸಚಿವ ಡೆರ್ಮರ್ ಅವರು ತನ್ನ ಯುಎಇ ಭೇಟಿಯ ಸಂದರ್ಭ ಬೆನ್ ಗ್ವಿರ್ ಹಾಗೂ ಇಸ್ರೇಲ್ ಸರಕಾರದ ಇತರ ಕಟ್ಟರ್ ಪಂಥೀಯ ಸದಸ್ಯರ ಕುರಿತಾಗಿ ಯುಎಇ ಹೊಂದಿರುವ ಆತಂಕಗಳನ್ನು ನಿವಾರಿಸಲು ಯತ್ನಿಸಲಿದ್ದಾರೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ 2020ರಲ್ಲಿ ಏರ್ಪಟ್ಟ ಅಬ್ರಹಾಂ ಒಡಂಬಡಿಕೆಯ ಬಳಿಕ ಇಸ್ರೇಲ್ ಹಾಗೂ ಯುಎಇ ಬಾಂಧವ್ಯಗಳು ಸಹಜಸ್ಥಿತಿಗೆ ಬಂದಿದ್ದವು ಹಾಗೂ ಆನಂತರ ಉಭಯ ದೇಶಗಳ ನಂಟು ಬಲಗೊಳ್ಳುತ್ತಲೇ ಬಂದಿವ ಕಳೆದ ವರ್ಷದ ಮೇನಲ್ಲಿ ಯುಎಇ- ಇಸ್ರೇಲ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿತ್ತು.
ಈ ಒಪ್ಪಂದ ಏರ್ಪಟ್ಟ ಸಮಯದಲ್ಲಿ ಡೆರ್ಮರ್ ಅವರು ಅಮೆರಿಕದಲ್ಲಿ ಇಸ್ರೇಲ್ನ ರಾಯಬಾರಿಯಾಗಿ ಕಾರ್ಯನಿರ್ವಹಿಸಿದ್ದರು.