ಹೇಡಿತನ ಶೌರ್ಯವಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಗುಜರಾತ್ ಹತ್ಯಾಕಾಂಡದ ಹಿಂದಿರುವ ಸರಕಾರದ ವೈಫಲ್ಯಗಳನ್ನು ಗುರುತಿಸುವ ಬಿಬಿಸಿ ಸಾಕ್ಷಚಿತ್ರ ಇದೀಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ. 2002ರಲ್ಲಿ ಗಲಭೆ ನಡೆದ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಪಾತ್ರವನ್ನು ಈ ಸಾಕ್ಷ ಚಿತ್ರ ಮರು ಪರಿಶೀಲಿಸುತ್ತದೆ. ಈ ಚಿತ್ರವನ್ನು ಪ್ರಸಾರ ಮಾಡದಂತೆ ಸರಕಾರ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ. ಈ ಸಾಕ್ಷ ಚಿತ್ರದ ಬಗ್ಗೆ ಮಾತನಾಡುವುದನ್ನು, ಚರ್ಚಿಸುವುದನ್ನು ಕೂಡ ನಿಷೇಧಿಸಲು ಮುಂದಾಗಿದೆ. ಸರಕಾರದ ಎಲ್ಲ ಪ್ರಯತ್ನಗಳಾಚೆಗೆ ಈ ಸಾಕ್ಷ ಚಿತ್ರ ದೇಶ, ವಿದೇಶಗಳಲ್ಲಿ ಜನರನ್ನು ತಲುಪಿದೆ. ಗುಜರಾತ್ ಗಲಭೆಗೆ ಬಲಿಯಾದ ಅಮಾಯಕರ ರಕ್ತದ ಕಳಂಕ ತೊಳೆದಷ್ಟು ಪ್ರಧಾನಿ ಮೋದಿಯವರನ್ನು ಅಂಟಿಕೊಳ್ಳುತ್ತಿದೆ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ನ್ಯಾಯಾಲಯದ ಮೂಲಕ ಮೋದಿಯವರು ಈಗಾಗಲೇ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮೋದಿಯವರ ಮೇಲೆ ಗುಜರಾತ್ ಕಳಂಕವನ್ನು ಅಂಟಿಸಲು ಯತ್ನಿಸಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಜೈಲಿಗೂ ಹೋಗಿ ಬಂದಿದ್ದಾರೆ.
ಜೊತೆ ಜೊತೆಗೇ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದ ಗುಜರಾತ್ ಹತ್ಯಾಕಾಂಡದ ಆರೋಪಿಗಳನ್ನು ಸರಕಾರವೇ ಮುಂದೆ ನಿಂತು ಬಿಡುಗಡೆಗೊಳಿಸಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಯಾರ ಪಾತ್ರವಿದೆ ಎನ್ನುವುದು ಭಾರತದ ಪಾಲಿಗೆ ಗುಟ್ಟಿನ ಸಂಗತಿಯೇನೂ ಅಲ್ಲ. ಗುಜರಾತ್ ಹತ್ಯಾಕಾಂಡದಲ್ಲಿ ವ್ಯವಸ್ಥೆಯ ಪಾತ್ರದ ಕುರಿತಂತೆ ಭಾರತದಲ್ಲೇ ಹಲವು ಸಾಕ್ಷಚಿತ್ರಗಳು ಹೊರಬಂದಿವೆ. ಹತ್ಯಾಕಾಂಡದ ಹಿಂದೆ ಯಾರಿದ್ದರು ಎನ್ನುವುದನ್ನು ತನಿಖಾ ವರದಿಗಳು, ಕುಟುಕು ಕಾರ್ಯಾಚರಣೆಗಳು ಈಗಾಗಲೇ ಬಹಿರಂಗಪಡಿಸಿವೆ. ಹತ್ಯಾಕಾಂಡದಲ್ಲಿ ಸರಕಾರದ ಪಾತ್ರವನ್ನು ಬಿಜೆಪಿಯೊಳಗಿರುವ ನಾಯಕರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮತ್ತು ಆ ಹತ್ಯಾಕಾಂಡದ ಬಲದಿಂದಲೇ ಮುಖ್ಯಮಂತ್ರಿ ಮೋದಿ ಈ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತು ಎನ್ನುವುದನ್ನು ಬಿಜೆಪಿಯೊಳಗಿರುವ ನಾಯಕರು ಬಲವಾಗಿ ನಂಬಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಗುಜರಾತ್ ಹತ್ಯಾಕಾಂಡವನ್ನು ಸರಕಾರವೇ ಬೇರೆ ಬೇರೆ ರೂಪಗಳಲ್ಲಿ ನೆನಪಿಸುತ್ತದೆ.
ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ದೇಶದ ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆ ಭಾಷಣವೊಂದರಲ್ಲಿ ''2002ರಲ್ಲಿ ಪಾತಕಿಗಳಿಗೆ ಪಾಠ ಕಲಿಸಿದೆವು'' ಎಂದು ಗುಜರಾತ್ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡರು. ಗುಜರಾತ್ ಹತ್ಯಾಕಾಂಡದ ಆರೋಪಿಗಳನ್ನು ಸರಕಾರದ ನೇತೃತ್ವದಲ್ಲಿ ಬಿಡುಗಡೆ ಮಾಡಿರುವುದು ಕೂಡ ಚುನಾವಣೆಯ ದೃಷ್ಟಿಯಿಂದಲೇ. ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರಸಭೆಗಳಲ್ಲಿ ಗುಜರಾತ್ ಹತ್ಯಾಕಾಂಡದ ಆರೋಪಿಗಳು ನೇರವಾಗಿ ಭಾಗವಹಿಸಿದರು. ಇಂದು ಭಾರತದಲ್ಲಿ 'ಗುಜರಾತ್ ಹತ್ಯಾಕಾಂಡ'ವನ್ನು ಸಂಭ್ರಮಿಸುವ, ಅದಕ್ಕಾಗಿ ಹೆಮ್ಮೆ ಪಡುವ ಒಂದು ಸಮುದಾಯ ಹುಟ್ಟಿಕೊಂಡಿದೆ. ಹೇಡಿತನವನ್ನೇ ಶೌರ್ಯವೆಂದು ಭಾವಿಸುವ ಸಮುದಾಯ ಅದು. ಅವರಿಗೆ ಗಾಂಧೀಜಿಯನ್ನು ಕೊಂದ ಗೋಡ್ಸೆ ನಾಯಕನಾಗಿ ಭಾಸವಾಗುತ್ತಾನೆ. ಒಬ್ಬ ಅಮಾಯಕ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗುವುದು ಶೌರ್ಯದ ಭಾಗವಾಗುತ್ತದೆ. ಆದುದರಿಂದ ಗುಜರಾತ್ ಹತ್ಯಾಕಾಂಡದ ಬಿಬಿಸಿ ಸಾಕ್ಷಚಿತ್ರದಿಂದ ಸರಕಾರಕ್ಕೆ ಅವಮಾನವಾಗಿದೆ ಎಂದು ನಾವು ಸಂಭ್ರಮಿಸುವಂತಿಲ್ಲ.
ಬಿಬಿಸಿ ಸಾಕ್ಷಚಿತ್ರ ಮೋದಿಯ ಪಾತ್ರ ಬಹಿರಂಗಪಡಿಸಿರುವುದು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಕೂಡ ಭಾರತದ ಮಟ್ಟಿಗೆ ನಿಜವಲ್ಲ. ಭಾರತ ನಿಜಕ್ಕೂ ಅವಮಾನ ಪಡಬೇಕಾದುದು ಈ ಕಾರಣಕ್ಕೆ. ಗುಜರಾತ್ ಹತ್ಯಾಕಾಂಡದ ಕಳಂಕದ ಕಾರಣಕ್ಕಾಗಿಯೇ ಮೋದಿಯವರಿಗೆ ಹಲವು ದೇಶಗಳು ಈ ಹಿಂದೆ ವೀಸಾ ನಿರಾಕರಿಸಿದ್ದವು. ಅದಾಗಲೇ ಹಲವು ದೇಶಗಳು 'ಮುಖ್ಯಮಂತ್ರಿ ಮೋದಿ'ಯವರ ವೈಫಲ್ಯಗಳನ್ನು ಟೀಕಿಸಿದ್ದವು. ಸರಕಾರದ ಪಾತ್ರವನ್ನು ಭಾರತದೊಳಗಿರುವ ಹಲವು ಮಾಧ್ಯಮಗಳು ಕುಟುಕು ಕಾರ್ಯಾಚರಣೆಯ ಮೂಲಕ ಬಹಿರಂಗಪಡಿಸಿದ್ದವು. ಈ ಹತ್ಯಾಕಾಂಡದ ಕಾರಣಕ್ಕಾಗಿ ಮೋದಿಯವರು ಒಂದೋ ಸ್ವಯಂ ಲಜ್ಜೆ ಪಟ್ಟುಕೊಂಡು ರಾಜೀನಾಮೆಯನ್ನು ನೀಡಬೇಕಾಗಿತ್ತು. ಅಟಲ್ ಬಿಹಾರಿ ವಾಜಪೇಯಿಯವರು ಗುಜರಾತ್ ಹತ್ಯಾಕಾಂಡಕ್ಕಾಗಿ ಮೋದಿಯವರ ರಾಜೀನಾಮೆಯನ್ನು ಬಯಸಿದ್ದರು. ಮೋದಿಯವರು ರಾಜಕೀಯ ನೆಲೆಯನ್ನೇ ಕಳೆದುಕೊಳ್ಳಬೇಕಾಗಿತ್ತು. ಆದರೆ ಭಾರತದಲ್ಲಿ ಅದು ತಿರುವು ಮುರುವಾಯಿತು. ಆ ಹತ್ಯಾಕಾಂಡದ ಬಳಿಕ ಮೋದಿಯವರು ಈ ದೇಶದ ಪ್ರಧಾನಿಯಾದರು. ಅದೂ ಅಭೂತಪೂರ್ವ ಬೆಂಬಲದ ಜೊತೆಗೆ. ಯಾವ ದೇಶಗಳು ಮೋದಿಯವರಿಗೆ ವೀಸಾ ನಿರಾಕರಿಸಿದ್ದವೋ ಆ ಎಲ್ಲ ದೇಶಗಳು ಮೋದಿಯನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಮೋದಿ ಪ್ರಧಾನಿಯಾದುದು 'ಮೋದಿ ನಿರಪರಾಧಿ' ಎಂದು ಭಾರತ ಒಪ್ಪಿಕೊಂಡ ಕಾರಣಕ್ಕಲ್ಲ. ಬದಲಿಗೆ, ಗುಜರಾತ್ ಹತ್ಯಾಕಾಂಡ ಮೋದಿಯಿಂದ ಸಾಧ್ಯವಾಯಿತು ಎನ್ನುವ ಕಾರಣಕ್ಕಾಗಿ. ಗುಜರಾತ್‌ನಲ್ಲಿ ಹತ್ಯಾಕಾಂಡ ನಡೆಯುವುದಕ್ಕೆ ಬೇಕಾದ ವಾತಾವರಣವನ್ನು ಮೋದಿಯವರು ನಿರ್ಮಿಸಿಕೊಟ್ಟರು ಎನ್ನುವ ಕಾರಣಕ್ಕಾಗಿ. ಇದನ್ನು ಈಗಾಗಲೇ ಹಲವು ಮಾಧ್ಯಮಗಳು ಬರೆದಿವೆ, ವಿಶ್ಲೇಷಿಸಿವೆ. ಹೀಗಿರುವಾಗ, ಬಿಬಿಸಿ ಸಾಕ್ಷಚಿತ್ರದಿಂದ ವಿಶೇಷವಾದುದು ಏನೂ ಭಾರತದಲ್ಲಿ ಸಂಭವಿಸುವುದಿಲ್ಲ.
ಆದರೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಬಿಬಿಸಿ ಸಾಕ್ಷಚಿತ್ರದಿಂದ ಪ್ರಧಾನಿ ಮೋದಿಯವರಿಗೆ ಭಾರೀ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರನ್ನು ವಿಶ್ವನಾಯಕನನ್ನಾಗಿಸುವ ಮಾಧ್ಯಮಗಳ ಪ್ರಯತ್ನಕ್ಕೂ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಈ ಸಾಕ್ಷ ಚಿತ್ರವನ್ನು 'ಭಾರತದ ವಿರುದ್ಧ ವಸಾಹತು ಶಾಹಿ ಸಂಚು' ಎಂದು ಕೇಂದ್ರ ಸರಕಾರ ಬಣ್ಣಿಸಿದೆ. ಆದರೆ, ಭಾರತವೆಂದರೆ ಮೋದಿ ಮಾತ್ರವಲ್ಲ. ಮೋದಿಯವರ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸಿದರೆ, ಅದರಿಂದ ಮೋದಿಗೂ ಅವರು ನೇತೃತ್ವವನ್ನು ವಹಿಸಿರುವ ಬಿಜೆಪಿಗೂ ಕಳಂಕ. ಗುಜರಾತ್ ಹತ್ಯಾಕಾಂಡದ ಬಗ್ಗೆ ಪ್ರಧಾನಿ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ ಭಾರತದ ನ್ಯಾಯ ವ್ಯವಸ್ಥೆಯನ್ನು ಕೂಡ ಪರೋಕ್ಷವಾಗಿ ಈ ಸಾಕ್ಷಚಿತ್ರ ಪ್ರಶ್ನಿಸಿದಂತಾಗಿದೆ. ಇದೇ ಸಂದರ್ಭದಲ್ಲಿ ಸಾಕ್ಷ ಚಿತ್ರಕ್ಕೆ ನಿರ್ಬಂಧ ಹೇರುವ ಮೂಲಕ, ಕುಂಬಳಕಾಯಿ ಕಳ್ಳನಂತೆ ಸರಕಾರವೇ ಹೆಗಲು ಮುಟ್ಟಿನೋಡಿಕೊಂಡಿದೆ. ಈ ಹಿಂದೆ, ಸಿಖ್ ಹತ್ಯಾಕಾಂಡ ನಡೆದಾಗಲೂ, ಅಂದಿನ ಸರಕಾರದ ಪಾತ್ರದ ಕುರಿತಂತೆ ಬಿಬಿಸಿ ಸಾಕ್ಷಚಿತ್ರವನ್ನು ಮಾಡಿತ್ತು. ಕಾಂಗ್ರೆಸ್ ಸರಕಾರ ಅದನ್ನು ನಿರ್ಬಂಧಿಸುವ ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ. ಆದರೆ ಮೋದಿ ನೇತೃತ್ವದ ಸರಕಾರ ಸಾಕ್ಷಚಿತ್ರಕ್ಕೆ ನಿರ್ಬಂಧ ವಿಧಿಸಿ, ಭಾರತದಲ್ಲಿ ಎಂತಹ ಸರಕಾರ ಅಸ್ತಿತ್ವದಲ್ಲಿದೆ ಎನ್ನುವುದನ್ನು ಇಡೀ ಜಗತ್ತಿಗೆ ಸಾಬೀತುಪಡಿಸಿದೆ.