varthabharthi


ಕರ್ನಾಟಕ

ಈ ಸರಕಾರದ ಆಯಸ್ಸು ಇನ್ನು 40 ದಿನ ಮಾತ್ರ, ಸಿಎಂ, ಸಚಿವರು ಗಂಟುಮೂಟೆ ಕಟ್ಟಿಕೊಂಡು ಹೊರಡಲಿ: ಡಿಕೆಶಿ

ವಾರ್ತಾ ಭಾರತಿ : 25 Jan, 2023

ಬೆಂಗಳೂರು, ಜ. 24: ‘ಬಿಜೆಪಿ ಸರಕಾರ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಮಂತ್ರಿಗಳು ವಿಧಾನಸೌಧದಿಂದ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೊರಡಲಿ, ನಾವು ಗಂಜಲ ತಂದು ವಿಧಾನಸೌಧವನ್ನು ಶುದ್ಧ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಎರಡು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, 200 ಯುನಿಟ್ ಉಚಿತ, 2ಸಾವಿರ ರೂ.ಪ್ರೋತ್ಸಾಹ ಧನ ನೀಡುವುದು ಖಚಿತ ಎಂದು ಘೋಷಿಸಿದ ನಂತರ ಬಿಜೆಪಿಯವರ ತಲೆ ಕೆಟ್ಟು ಹೋಗಿದೆ ಎಂದು ಟೀಕಿಸಿದರು.

ಈ ಸರಕಾರದ ಆಯಸ್ಸು ಇನ್ನು 40 ದಿನ ಇದೆ. ನೀವು ಇನ್ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೋ ಅದನ್ನು ಮಾಡಿಕೊಂಡು ನಿಮ್ಮ ಟೆಂಟ್ ಖಾಲಿ ಮಾಡಿ. ನಾವು ಬಂದು ವಿಧಾನಸೌಧ ಸ್ವಚ್ಛ ಮಾಡುತ್ತೇವೆ. ಈ ಸರಕಾರವನ್ನು ಜನರೇ ಓಡಿಸುತ್ತಾರೆ. ಬಿಜೆಪಿ ಸರಕಾರಕ್ಕೆ ಶೇ.40 ಕಮಿಷನ್ ಸರಕಾರ ಎಂಬ ಬ್ರ್ಯಾಂಡ್ ಬಂದಿದ್ದು, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಕಾಲದಲ್ಲಿ 35ಸಾವಿರ ಕೋಟಿ ರೂ. ಅಕ್ರಮವಾಗಿದ್ದರೆ ಮೂರುವರೆ ವರ್ಷಗಳಿಂದ ಕಡಲೇಕಾಯಿ ತಿನ್ನುತ್ತಿದ್ದರಾ? ನಿಮಗೆ ಅಧಿಕಾರ ಇದ್ದಾಗ ತನಿಖೆ ಮಾಡದಂತೆ ತಡೆದಿದ್ದವರು ಯಾರು?’ ಎಂದು ಶಿವಕುಮಾರ್ ಪ್ರಶ್ನಿಸಿದರು.

ಜನರ ಮನದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಮೂಡಿದೆ. ಬಿಜೆಪಿಯವರು, ಖಾಸಗಿ ಸಂಸ್ಥೆಗಳು, ಮಾಧ್ಯಮಗಳ ಸಮೀಕ್ಷೆಯಲ್ಲಿ ಬಿಜೆಪಿ ಸಂಖ್ಯಾಬಲ 60ರ ಮೇಲೆ ದಾಟುತ್ತಿಲ್ಲ. ನಮ್ಮದು 120-130 ಕ್ಷೇತ್ರಗಳು ಬರುತ್ತಿವೆ. ಇವು ನಿಜವಾಗುತ್ತದೋ ಸುಳ್ಳಾಗುತ್ತದೋ ಮುಂದಿನ ವಿಚಾರ. ಆದರೆ ಬಿಜೆಪಿಯಲ್ಲಿ ಯಡಿಯೂರಪ್ಪ-ಬೊಮ್ಮಾಯಿ, ಯತ್ನಾಳ್-ನಿರಾಣಿ, ಯೋಗೇಶ್ವರ್, ಅಶೋಕ್, ಅಶ್ವತ್ಥ ನಾರಾಯಣ ಹೀಗೆ ಬೇರೆ ಬೇರೆ ನಾಯಕರ ನಡುವೆ ಆಂತರಿಕ ಜಗಳ ಹೆಚ್ಚಾಗುತ್ತಿದೆ. ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುತ್ತೀರಲ್ಲ, ಬಿಜೆಪಿ ಪಕ್ಷದಲ್ಲಿ 32 ಗುಂಪುಗಳಿವೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರಕಾರ ಸುಮ್ಮನೆ ಬಜೆಟ್ ಮಂಡಿಸುವ ಪ್ರಯತ್ನ ಮಾಡುತ್ತಿದೆ. ಅವರು ಕಳೆದ ವರ್ಷಗಳಲ್ಲಿ ಮಂಡಿಸಿದ ಬಜೆಟ್‍ನಲ್ಲಿ ಅರ್ಧದಷ್ಟು ಹಣ ವೆಚ್ಚ ಮಾಡಿಲ್ಲ. 26 ಸಂಸದರನ್ನು ಇಟ್ಟುಕೊಂಡು ಅವರನ್ನು ಕರೆದುಕೊಂಡು ಹೋಗಿ ಪ್ರಧಾನಿಗೆ ಭೇಟಿ ನೀಡಿ ರಾಜ್ಯಕ್ಕೆ ಒಂದು ಯೋಜನೆ ಘೋಷಣೆ ಮಾಡಲು ಈ ಸಾಧ್ಯವಾಗಿಲ್ಲ. ಇಷ್ಟು ದಿನ ಮಾಡಲಾಗದಿದ್ದವರು ಈಗ ಏನು ಮಾಡಲು ಸಾಧ್ಯ? ನೆರೆ ಬಂದಾಗ ಸತ್ತವರಿಗೆ ಪರಿಹಾರ ನೀಡಲಿಲ್ಲ ಎಂದು ಅವರು ದೂರಿದರು.

ನಾವು ಸುಧಾಕರ್ ಅವರನ್ನೇನು ಪಕ್ಷಕ್ಕೆ ತೆಗೆದುಕೊಳ್ಳಲು ಹೋಗುವುದಿಲ್ಲ. ಅವರಿಗೆ ನಮ್ಮ ಬಸ್‍ನಲ್ಲಿ ಜಾಗ ಇಲ್ಲ. ಹೀಗಾಗಿ ನೀವು ತಲೆ ಕೆಡಿಸಿಕೊಳ್ಳದೇ ನಿಮ್ಮ ಮೂಲ ಬಿಜೆಪಿಗರಿಂದ ಮಾತನಾಡಿಸಿ. ನಿಮ್ಮ ಮೂಲ ಬಿಜೆಪಿಗರ ವಿರುದ್ಧ ಯಾವುದೇ ಪ್ರಕರಣ ದಾಖಲಾದರೆ ಕೇವಲ 3 ತಿಂಗಳಲ್ಲಿ ‘ಬಿ’ ರಿಪೋರ್ಟ್ ಹಾಕುತ್ತಾರೆ. ಇದು ‘ಬಿ’ ರಿಪೋರ್ಟ್ ಸರಕಾರ. ಈ ಸರಕಾರ ರಾಜ್ಯಕ್ಕೆ ಕಳಂಕ ತಂದಿದೆ’ ಎಂದು ಅವರು ಟೀಕಿಸಿದರು.

‘ಸಚಿವ ಸುಧಾಕರ್ ತಲೆ ಮೇಲೆ ಭ್ರಷ್ಟಾಚಾರದ ಆರೋಪಗಳ ಪರ್ವತವೇ ಇದೆ. ಆದರೂ ಮಾಧುಸ್ವಾಮಿ, ಸಿಎಂ ಯಾಕೆ ಮಾತನಾಡುತ್ತಿಲ್ಲ? ಸಿಎಂ ಅಥವಾ ಬಿಜೆಪಿಯ ಇತರ ಮುತ್ತುರತ್ನಗಳು ಕಾರಜೋಳ ಈ ವಿಚಾರವಾಗಿ ಪತ್ರಿಕಾಗೋಷ್ಠಿ ಮಾಡದೆ, ಸುಧಾಕರ್‍ರಿಂದಲೇ ಮಾಡಿಸಿದ್ದು ಏಕೆ? ಕೇವಲ ಆಪರೇಷನ್ ಕಮಲದಿಂದ ಬಂದವರಿಂದಲೇ ಮಾತನಾಡಿಸುತ್ತಿರುವುದೇಕೆ?’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)