varthabharthi


ಬೆಂಗಳೂರು

ಗಣರಾಜ್ಯೋತ್ಸವ ಆಚರಣೆಗೆ ಮಾಣಿಕ್ ಶಾ ಪರೇಡ್ ಮೈದಾನ ಸಜ್ಜು: 750 ಶಾಲಾ ಮಕ್ಕಳಿಂದ ‘ಮಹಾನಾಯಕ ಅಂಬೇಡ್ಕರ್’ ಗೀತೆ

ವಾರ್ತಾ ಭಾರತಿ : 25 Jan, 2023

ಬೆಂಗಳೂರು, ಜ.25: 74ನೇ ಗಣರಾಜ್ಯೋತ್ಸವ ಅದ್ದೂರಿ ಆಚರಣೆಗೆ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನ ಸಂಪೂರ್ಣ ಸಜ್ಜಾಗಿದ್ದು, ಈ ಬಾರಿ 750 ಶಾಲಾ ಮಕ್ಕಳಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಮಹಾನಾಯಕ ಗೀತೆ ಹಾಗೂ ನಾಟಕ ಮೂಡಿಬರುತ್ತಿರುವುದು ವಿಶೇಷ.

ಮಂಗಳವಾರ ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಆಯುಕ್ತರು ಹಾಗೂ ನಗರ ಜಿಲ್ಲಾಧಿಕಾರಿಗಳನ್ನು ಸೇರಿದಂತೆ ಸೇನಾ ಪಡೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 38 ತುಕಡಿಗಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಅಂತಿಮ ಹಂತದ ತಾಲೀಮು ನಡೆಯಿತು.

ಈ ಕುರಿತು ಮಾಣಿಕ್ ಶಾ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಇಲ್ಲಿನ ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಒಟ್ಟು 750 ಶಾಲಾ ಮಕ್ಕಳು ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಮಹಾನಾಯಕ ಗೀತೆ ಹಾಡಲಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಗುರುವಾರ ಬೆಳಗ್ಗೆ 9ಕ್ಕೆ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಪರೇಡ್ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಸಿಎಂ ಭಾಷಣ ಮಾಡಲಿದ್ದಾರೆ ಎಂದರು.

ಸಾರ್ವಜನಿಕರಿಗಾಗಿ 3ಸಾವಿರ ಆಸನಗಳು, ಅತಿಗಣ್ಯರಿಗೆ 2ಸಾವಿರ ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ 750 ಆಸನಗಳು, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗಾಗಿ 2ಸಾವಿರ ಆಸನಗಳು ಸೇರಿದಂತೆ ಒಟ್ಟು ಎಂಟು ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಮಾಣಿಕ್ ಶಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. ಮೈದಾನದ ಸಮೀಪದಲ್ಲಿರುವ ಎತ್ತರದ ಕಟ್ಟಡಗಳು, ಕಾಮಗಾರಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ ನಗರದ 108 ಪೊಲೀಸ್ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯಲ್ಲಿನ ರೈಲ್ವೆ ನಿಲ್ದಾಣ, ಹೋಟೆಲ್‍ಗಳು ಸೇರಿದಂತೆ ಎಲ್ಲೆಡೆಯೂ ಪರಿಶೀಲನೆ ನಡೆಸಲಾಗಿದೆ ಎಂದು ವಿವರಿಸಿದರು.

ಮೈದಾನದ ನಾಲ್ಕೂ ದ್ವಾರಗಳಲ್ಲೂ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಲಿದ್ದು, ಮೈದಾನದ ಒಳಗೆ ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು, ವ್ಯಕ್ತಿ ಕಂಡು ಬಂದರೆ ಹತ್ತಿರದ ಪೊಲೀಸ್ ಸಿಬ್ಬಂದಿಗೆ ತಿಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಮೈದಾನದಲ್ಲಿ ಹೆಚ್ಚಿನ ಭದ್ರತೆ: ಮೇಲಧಿಕಾರಿಗಳಿಂದ ಈ ಬಾರಿ ಹೆಚ್ಚಿನ ಭದ್ರತೆ ಒದಗಿಸಲು ಸೂಚನೆ ಬಂದಿತ್ತು. ಅಹಿತಕರ ಘಟನೆ ನಡೆಯಂತೆ ಎಚ್ಚರ ವಹಿಸಲು ಮೈದಾನದಲ್ಲಿ 1,694 ಮಂದಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, 100ಕ್ಕೂ ಹೆಚ್ಚು ಸಿಸಿ ಟಿವಿಗಳು, ನಾಲ್ಕು ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗಿದೆ ಎಂದು ಹೇಳಿದರು.

ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 12 ಡಿಸಿಪಿ, 22 ಎಸಿಪಿ, 65 ಪಿಐ, 101 ಪಿಎಸ್ಸೈ, ಮಹಿಳಾ ಪಿಎಸ್ಸೈ 46, 194 ಎಎಸ್ಸೈ, 1005 ಪೇದೆಗಳು, 77 ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಗೂ 172 ಕ್ಕೂ ಹೆಚ್ಚು ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಮೈದಾನದ ಬಂದೋಬಸ್ತ್ ಗೆ 10 ಕೆಎಸ್‍ಆರ್‍ಪಿ ಹಾಗೂ ಸಿಎಆರ್ ತುಕಡಿಗಳು ಕಾರ್ಯಚರಣೆ ನಡೆಸಲಿವೆ. ತುರ್ತು ಸೇವೆಗೆ ಅಗ್ನಿ ಶಾಮಕ ವಾಹನ, ಆಂಬುಲೆನ್ಸ್, ಗರುಡ ಫೋರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ ಎಂದು ಪೆÇಲೀಸ್ ಆಯುಕ್ತರು ತಿಳಿಸಿದರು.

ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಎಂ.ಎ.ಸಲೀಂ ಮಾತನಾಡಿ, ವಾಹನ ನಿಲುಗಡೆಗೆ ನಾಲ್ಕು ಬಣ್ಣದ ಪಾಸ್‍ಗಳನ್ನು ಮಾಡಲಾಗಿದ್ದು, ಅವುಗಳಲ್ಲಿ ಯಾವ ದ್ವಾರದಿಂದ ಮೈದಾನಕ್ಕೆ ಬರಬೇಕು, ವಾಹನಗಳನ್ನು ಎಲ್ಲಿ ನಿಲುಗಡೆ ಮಾಡಬೇಕು ಎಂದು ತಿಳಿಸಲಾಗಿದೆ.

ಮೈದಾನ ಸುತ್ತಮುತ್ತ ಯಾವುದೇ ವಾಹನಗಳಿಗೆ ನಿಲ್ಲಿಸುವಂತಿಲ್ಲ, ಬೆಳಗ್ಗೆ 8 ರಿಂದ 11 ಗಂಟೆಯ ವರೆಗೂ ಕಬ್ಬನ್ ರಸ್ತೆಯ ಬಿಆರ್‍ವಿ ಜಂನಕ್ಷನ್‍ನಿಂದ ಕಾಮರಾಜ ರಸ್ತೆಯ ಜಂಕ್ಷನ್‍ವರೆಗೂ ವಾಹನ ಸಂಚಾರ ನಿಷೇಧವಿರುತ್ತದೆ. ಪೆÇಲೀಸ್ ಸಿಬ್ಬಂದಿಗಳು ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.

ನಿಷೇಧಿಸಿರುವ ವಸ್ತುಗಳು: ‘ಹೆಲ್ಮೆಟ್, ಕರಪತ್ರಗಳು, ಎಲ್ಲ ವಿಧದ ಕ್ಯಾಮರಾಗಳು, ನೀರಿನ ಬಾಟಲ್, ಸಿಗರೇಟ್, ಬೆಂಕಿಪೊಟ್ಟಣ, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತುಗಳು, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮಧ್ಯದ ಬಾಟಲ್, ಬಾವುಟಗಳು, ಪಟಾಕಿ ಮತ್ತು ನ್ಪೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ’ ಎಂದು ಸಲೀಂ ನುಡಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು:-

ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣವರೆಗೆ.

-ಕಬ್ಬನ್ ರಸ್ತೆ, ಸಿಟಿಒ ವೃತ್ತ, ಕೆ.ಆರ್.ರಸ್ತೆ.

-ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ.

► ಸಾಂಸ್ಕೃತಿಕ ಕಾರ್ಯಕ್ರಮ

-ನಾಡಗೀತೆ ಮತ್ತು ರೈತಗೀತೆ-ಸುನೀತಾ ತಂಡವರದಿಂದ

-ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಗೀತೆ, ನಾಟಕ-750 ಮಕ್ಕಳು, ಕರ್ನಾಟಕ ಪಬ್ಲಿಕ್ ಶಾಲೆ, ಉತ್ತರಹಳ್ಳಿ

-ನಮ್ಮ ಭಾರತ ಭಾಗ್ಯವಿಧಾತ ರೈತ-ಮಾಗಡಿ ಬಿಬಿಎಂಪಿ ಪ್ರೌಢಶಾಲೆ, ವಿಜಯನಗರ ಬಿಬಿಎಂಪಿ ಪ್ರೌಢಶಾಲೆ-650 ಮಕ್ಕಳಿಂದ
-ಭಾರತಾಂಬೆ ನಿನ್ನ ಜನ್ಮ ದಿನ-ಸಿರಿಶಾಲೆ ಲಗ್ಗೆರೆ, ವಿಷ್ಣು ಇಂಟರ್ ನ್ಯಾಶನಲ್ ಶಾಲೆ ಲಗ್ಗೆರೆ-600 ಮಕ್ಕಳು

- ಕಲರಿ ಪೈಟು-ಎಂಇಜಿ ಸೆಂಟರ್

-ಮೋಟರ್ ಸೈಕಲ್ ಡಿಸ್ಟಲೇ- ದಿ ಆರ್ಮಿ ಸರ್ವೀಸ್ ಕಾಪ್ರ್ಸ್ ಬೆಂಗಳೂರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)