ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಸಾನಿಯಾ ಮಿರ್ಝಾ-ರೋಹನ್ ಬೋಪಣ್ಣ ಫೈನಲ್‌ಗೆ
ಮೆಲ್ಬೋರ್ನ್, ಜ.25: ವೃತ್ತಿಜೀವನದಲ್ಲಿ ತನ್ನ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಿ ಆಡುತ್ತಿರುವ ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಝಾ ಸಹ ಆಟಗಾರ ರೋಹನ್ ಬೋಪಣ್ಣರ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಏಳನೇ ಬಾರಿ ಪ್ರಮುಖ ಪ್ರಶಸ್ತಿ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.
ಬುಧವಾರ ಒಂದು ಗಂಟೆ, 52 ನಿಮಿಷಗಳ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಭಾರತದ ಜೋಡಿ ಮೂರನೇ ಶ್ರೇಯಾಂಕದ ಕ್ರಾವ್‌ಝಿಕ್ ಹಾಗೂ ನೀಲ್ ಸ್ಕುಪ್‌ಸ್ಕಿ ಅವರನ್ನು 7-6(5), 6-7(5), 10-6 ಸೆಟ್‌ಗಳ ಅಂತರದಿಂದ ಸೋಲಿಸಿತು.
ಸಾನಿಯಾ ಅವರು ವೃತ್ತಿಬದುಕಿನಲ್ಲಿ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಈ ತನಕ ಮೂರು ಮಹಿಳಾ ಡಬಲ್ಸ್ ಹಾಗೂ ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಬೋಪಣ್ಣ ಒಂದು ಬಾರಿ ಮಿಶ್ರ ಡಬಲ್ಸ್ ಗೆದ್ದಿದ್ದಾರೆ.
ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯಲಿರುವ ಡಬ್ಲುಟಿಎ ಸ್ಪರ್ಧೆಯ ವೇಳೆ ಟೆನಿಸ್‌ನಿಂದ ನಿವೃತ್ತಿಯಾಗಲಿದ್ದೇನೆ ಎಂದು ಸಾನಿಯಾ ಮಿರ್ಝಾ ಘೋಷಿಸಿದ್ದಾರೆ.