'ಪಠಾಣ್' ಚಿತ್ರದ ಕುರಿತು ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು ಹೀಗೆ...
ಮುಂಬೈ: ಶಾರೂಖ್ ಖಾನ್ (Shah Rukh Khan) ನಾಯಕತ್ವದ 'ಪಠಾಣ್' (Pathaan) ಚಿತ್ರ ಜನವರಿ 25ರಂದು ದೇಶಾದ್ಯಂತ ಬಿಡುಗಡೆಯಾಗಿದ್ದು, ಶಾರೂಖ್ ಖಾನ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಂತು ಟಿಕೆಟ್ ಖರೀದಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. 'ಪಠಾಣ್' ಚಿತ್ರದ ಕುರಿತು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಕೂಡಾ 'ಪಠಾಣ್' ಚಿತ್ರವನ್ನು ಬೆಂಬಲಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ ಎಂದು hindustantimes.com ವರದಿ ಮಾಡಿದೆ.
ತಮ್ಮ ಮುಂಬರುವ 'ಎಮರ್ಜೆನ್ಸಿ' ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡ ಅಂಗವಾಗಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕಂಗನಾ ರಣಾವತ್, "ಪಠಾಣ್ ಚೆನ್ನಾಗಿ ಓಡುತ್ತಿದೆ. ಇಂತಹ ಚಿತ್ರಗಳು ಓಡಬೇಕು ಮತ್ತು ನನಗನ್ನಿಸುವಂತೆ ಹಿಂದಿ ಚಿತ್ರರಂಗ ಹಿಂದೆ ಬಿದ್ದಿದೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನ ನಡೆಸುತ್ತಿದ್ದಾರೆ (ಪಠಾಣ್ ಅಚ್ಛಾ ಕರ್ ರಹಾ ಹೈ. ಐಸಿ ಫಿಲ್ಮ್ಸ್ ಚಲ್ನಿ ಚಾಹಿಯೆ ಔರ್ ಐ ಫೀಲ್ ಹಮಾರೆ ಹಿಂದಿ ಸಿನಿಮಾ ವಾಲೆ ಪೀಛೆ ರೆಹ್ ಗಯೆ ಹೈಂ, ಹರ್ ಇನ್ಸಾನ್ ಅಪ್ನೆ ಲೆವೆಲ್ ಸೆ ಕೋಶಿಶ್ ಕರ್ ರಹಾ ಹೈ)" ಎಂದು ಹೇಳಿದ್ದಾರೆ. ಅಲ್ಲಿಯೇ ಉಪಸ್ಥಿತರಿದ್ದ ನಟ ಅನುಪಮ್ ಖೇರ್ ಕೂಡಾ, "ಅದು ಬಹು ದೊಡ್ಡ ಬಜೆಟ್ನಲ್ಲಿ ತಯಾರಿಸಲಾಗಿರುವ ಬಹು ದೊಡ್ಡ ಸಿನಿಮಾ" ಎಂದು ಶ್ಲಾಘಿಸಿದ್ದಾರೆ.
ಕಂಗನಾ ರಣಾವತ್ ಅವರೊಂದಿಗೆ ಸಹ ನಟರಾದ ಅನುಪಮ್ ಖೇರ್ ಮತ್ತು ಸತೀಶ್ ಕೌಶಿಕ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಪಠಾಣ್ ಚಿತ್ರಕ್ಕೆ ವೀಕ್ಷಕರಿಲ್ಲ ಎಂದು ಹೇಳಿ ನಗೆಪಾಟಲಿಗೀಡಾದ ಸುದರ್ಶನ್ ಟಿವಿ ವರದಿಗಾರ