ಪ. ಮಲ್ಲೇಶ್ ಎಂದೂ ಬತ್ತದ ತೊರೆ
ಅಂಥ ಬಿರುಗಾಳಿಯೇನೂ ಇರಲಿಲ್ಲ. ನಿತ್ಯದ ಗಾಳಿಯೂ ರಭಸದಿಂದ ಬೀಸಿರಲಿಲ್ಲ. ಆದರೂ ಮಲ್ಲೇಶ್ ಎಂಬ ಸೊಡರು ಥಟ್ಟನೆ ಆರಿಹೋಯಿತು.
ಮತ್ತೂ ನೋಡಿದರೆ ಎಣ್ಣೆಯೂ ಇತ್ತು; ಬತ್ತಿಯೂ ಇತ್ತು. ಪ್ರಜ್ವಲಿಸುತ್ತಿದ್ದ ಪ್ರಣತಿ ಅದೇಕೆ ಏಕಾಏಕಿ ತೀರಿಹೋಯಿತು? ಕಳೆದ ಆರೇಳು ತಿಂಗಳಿಂದ ನಡೆಯಲು ಸ್ವಲ್ಪ ತೊಂದರೆ ಅನುಭವಿಸುತ್ತಿದ್ದರೆಂಬುದನ್ನು ಬಿಟ್ಟರೆ ಮಲ್ಲೇಶ್ ಅವರು ಆರೋಗ್ಯವಾಗಿಯೇ ಇದ್ದರು; ಸದಾ ಚೈತನ್ಯಶೀಲರಾಗಿಯೂ ಇದ್ದರು.
ಪಾದಯಾತ್ರೆ, ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹ, ಧರಣಿ, ಚಳವಳಿ, ಪ್ರದರ್ಶನ ಹೀಗೆ ಯಾವುದೇ ಹೋರಾಟವಾದರೂ ಸರಿ, ಮಲ್ಲೇಶ್ ಸಿದ್ಧವಾಗಿಯೇ ಇರುತ್ತಿದ್ದರು. ಸರಿಯಾದ ಸಮಯಕ್ಕೆ ಬಂದು ಕಾರ್ಯಕ್ರಮ ಮುಗಿಯುವವರೆಗೂ ಇದ್ದು ಹೋಗುತ್ತಿದ್ದರು. ಬಂದು ಹೋಗುವುದಕ್ಕೆ ಅವರು ಯಾರ ಮೇಲೂ ಅವಲಂಬಿತವಾಗಿರುತ್ತಿರಲಿಲ್ಲ. ತಮ್ಮ ಕಾರನ್ನು ಅವರೇ ಓಡಿಸಿಕೊಂಡು ಬರುತ್ತಿದ್ದರು. ಯುವಕರನ್ನು ನಾಚಿಸುವಂತೆ ಅವರು ಮುನ್ನುಗ್ಗುತ್ತಿದ್ದರು. ‘ಯಾರ್ರೀ ತಡೀತಾರೆ, ನಾವು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡ್ತೀವಿ. ಪ್ರತಿಭಟನೆ ನಮ್ಮ ಹಕ್ಕು. ನುಗ್ರೀ’ ಎಂದು ಅವರು ಮುಂದೆ ನುಗ್ಗಿದರೆ ಪ್ರತಿಭಟನಕಾರರಿಗೆ ಪ್ರಚಂಡ ಹುರುಪು. ಇಂಥ ಚೈತನ್ಯ ಏಕಾಏಕಿ ಮುಗಿದುಬಿಡುತ್ತದೆ, ತೀರಿಬಿಡುತ್ತದೆ ಎಂದರೆ ಏನಿದರ ಅರ್ಥ?
ತೀರಿಹೋಗುವುದರ ನಿಗೂಢ ಎಲ್ಲ ಜೀವಿಗಳಿಗೂ ಬಿಡಿಸಲಾಗದ ಒಗಟು. ಅದೊಂದು ಮಹಾನ್ ನಿಗೂಢ. ಆದರೆ ಸಮಾಜವಾದಿ ಹೋರಾಟಗಾರರಾದ ಪ.ಮಲ್ಲೇಶ್ ಅವರ ಬದುಕು ನಿಗೂಢವಾಗೇನೂ ಇರಲಿಲ್ಲ. ಅದೊಂದು ತೆರೆದ ಪುಸ್ತಕ. ಆಸಕ್ತಿ ಇದ್ದ ಯಾರೂ ಎಲ್ಲಿ ಬೇಕಾದರೂ ಈ ಪುಸ್ತಕವನ್ನು ತೆರೆದು ನೋಡಬಹುದಾಗಿತ್ತು. ಎಲ್ಲವೂ ಖುಲ್ಲಂ ಖುಲ್ಲ.
ಅವರ ಉಡುಗೆ ಶುಭ್ರ; ಬೆಳ್ಳಾನೆ ಬಿಳುಪು. ಅವರ ಬದುಕಿನಲ್ಲಿ, ನಡೆ-ನುಡಿಯಲ್ಲಿ ಈ ಶುಭ್ರತೆ ಇತ್ತು. ಯಾವ ಕಳಂಕದ ಕಪ್ಪನ್ನೂ ಅವರ ಬಿಳಿಬಟ್ಟೆ ಎಂದೂ ಅಂಟಿಸಿ ಕೊಂಡಿರಲಿಲ್ಲ. ಅವರು ಅಂಟಿಸಿಕೊಂಡದ್ದು, ತಲೆತುಂಬ ತುಂಬಿಸಿಕೊಂಡದ್ದು- ಬುದ್ಧ, ಗಾಂಧಿ, ವಿನೋಬಾ, ಲೋಹಿಯಾ, ಜೆಪಿ, ಬಸವಣ್ಣ, ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು; ತತ್ವಾದರ್ಶಗಳನ್ನು. ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲೂ ಈ ಸಿದ್ಧಾಂತಗಳನ್ನು ತರಲು ಅವರು ತಮ್ಮ ೮೯ ವರ್ಷಗಳ ಸುದೀರ್ಘ ಬದುಕಿನಲ್ಲಿ ಹೆಣಗಿದರು. ದಿನದ 24 ಗಂಟೆಗಳೂ (24x7) ಹೋರಾಟಗಾರರಾಗಿಯೇ ಇರುತ್ತಿದ್ದ, ಸವಾಲುಗಳನ್ನು ಎದುರಿಸುತ್ತಲೇ ಇರುತ್ತಿದ್ದ ಮಲ್ಲೇಶ್ ಅವರ ಕುಟುಂಬ ಹೇಗೆ ಸಾಗುತ್ತಿತ್ತು, ಎಷ್ಟು ಸಮಯವನ್ನು ಕುಟುಂಬ ನಿರ್ವಹಣೆಗೆ ಬಳಸುತ್ತಿದ್ದರು ಎಂಬುದು ತಿಳಿಯದಷ್ಟು ಅವರು ಸಾರ್ವಜನಿಕವಾಗಿರುತ್ತಿದ್ದರು.
ಒಂದು ಕಾಲದಲ್ಲಿ ಅವರು ಜೀವನ ನಿರ್ವಹಣೆಗೆ ಸ್ಥಾಪಿಸಿದ್ದ ‘ಮಯೂರ’ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್ ಸ್ಥಳ ಎಲ್ಲ ಸಮಾಜವಾದಿಗಳ, ಹೋರಾಟಗಾರರ, ಚಿಂತಕರ ಚಾವಡಿಯಾಗಿಯೇ ಇತ್ತು. ಈಗಿನ ಚಾವಡಿ ಎಂದರೆ ಅವರೇ ಕಟ್ಟಿದ್ದ ‘ನೃಪತುಂಗ ಕನ್ನಡ ಶಾಲೆ.’ ಮಲ್ಲೇಶ್ ಅವರ ಬದುಕಿನ, ತತ್ವ ಸಿದ್ಧಾಂತಗಳ, ಹೋರಾಟದ, ಚಿಂತನೆಯ ಬದ್ಧತೆಯ ಕೇಂದ್ರಗಳಾಗಿಯೂ ಇವು ಕಾಣಿಸುತ್ತಿದ್ದವು. ಎಂ.ಎ. ಪದವಿ ಮತ್ತು ಡಾಕ್ಟರೇಟ್‌ಗಳ ಹಿನ್ನೆಲೆಯಲ್ಲಿ ಕೈತುಂಬ ವೇತನ ತರುವ ಉದ್ಯೋಗಾವಕಾಶಕ್ಕೆ ಅವಕಾಶವಿದ್ದರೂ, ಅದನ್ನು ನಿರಾಕರಿಸಿ, ಕೃಷಿ, ಪಶುಸಂಗೋಪನೆ, ಕೋಳಿಸಾಕಣೆ, ರೇಷ್ಮೆ ಕೃಷಿ, ಮುದ್ರಣ ಹೀಗೆ ಅನೇಕ ಪ್ರಯೋಗಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಮಲ್ಲೇಶ್ ಹೋರಾಡಿದರು ಎಂಬುದು ಬಹಳ ಜನರಿಗೆ ತಿಳಿಯದ ಸಂಗತಿ.
ಕರ್ನಾಟಕದ ಬಹುಪಾಲು ಚಳವಳಿಗಳ ಹೋರಾಟಗಾರರು ಮತ್ತು ಪ್ರಗತಿಪರ ಚಿಂತಕರೆಲ್ಲ ಮಲ್ಲೇಶ್ ಅವರ ಒಡನಾಡಿಗಳು. ಕೆಲವರನ್ನು ಕೈಹಿಡಿದು ಈ ಚಳವಳಿಗಳಿಗೆ ನಡೆಸಿದವರೂ ಅವರೇ. ಅವರಿಗೆ ಎಲ್ಲರೊಂದಿಗೆ ತೀರ ಸಲಿಗೆ, ಸ್ನೇಹ, ಆತ್ಮೀಯ ಒಡನಾಟ. ಮುಂಚೂಣಿಯಲ್ಲಿ ನಿಂತು ಯಾರನ್ನಾದರೂ ಯಾವುದೇ ಹೋರಾಟಕ್ಕೆ ಕರೆಯಬಲ್ಲ ಶಕ್ತಿ ಮಲ್ಲೇಶ್ ಅವರಿಗಿತ್ತು. ಅವರ ಕರೆಯನ್ನು ನಿರಾಕರಿಸುವುದು ಸಾಧ್ಯವಾಗದಷ್ಟು ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಮಲ್ಲೇಶ್ ಪಡೆದವರಾಗಿದ್ದರು. ಹೀಗಾಗಿಯೇ ಅವರು ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್, ಸಿದ್ಧರಾಮಯ್ಯ ಮೊದಲಾದವರನ್ನು ಏಕವಚನದಲ್ಲಿ ಕರೆದು ಮಾತನಾಡಿಸಬಲ್ಲ, ನ್ಯಾಯಬದ್ಧ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಹೇಳಿ ಮಾಡಿಸಬಲ್ಲ, ಅವರನ್ನು ಟೀಕಿಸಬಲ್ಲ, ಮೆಚ್ಚಬಲ್ಲ, ಸ್ನೇಹವನ್ನು ತೋರಬಲ್ಲ ವ್ಯಕ್ತಿಯಾಗಿದ್ದರು. ಇಂಥ ಸ್ನೇಹಿತರು ಕರ್ನಾಟಕದ ಎಲ್ಲ ಭಾಗಗಳಲ್ಲೂ ಮಲ್ಲೇಶ್ ಅವರಿಗೆ ಇದ್ದರು; ಎಲ್ಲ ಸಂಘಟನೆಯಲ್ಲಿಯೂ ಇದ್ದರು.
ಥಟ್ಟನೆ ಅನಿಸಿದ್ದನ್ನು ನೇರವಾಗಿ ಹೇಳಬಲ್ಲ, ಟೀಕಿಸಬಲ್ಲ ಮಲ್ಲೇಶ್ ಅವರ ಮಾತುಗಳು ಒರಟು; ಯಾವ ಮುಲಾಜೂ ಇಲ್ಲದೆ ಮಾತನಾಡಬಲ್ಲವರಾಗಿದ್ದ ಅವರು ಮಹಾ ಮುಂಗೋಪಿಯೂ ಹೌದು.‘ಬರೀ ಮಾತಾಡ್ತೀರಾ, ಯಾವ ಹೋರಾಟಕ್ಕೂ ಬರುವುದಿಲ್ಲ’ ಎಂದು ನೇರವಾಗಿಯೇ ಹಲವರಿಗೆ ಅವರು ಹೇಳಿದ್ದೂ ಉಂಟು. ಇಷ್ಟಾಗಿಯೂ ಅವರ ಹೋರಾಟಕ್ಕೆ ಕಾರ್ಯಕರ್ತರು ಯಾಕಾಗಿ ಬರುತ್ತಿದ್ದರೆಂದರೆ, ಮಲ್ಲೇಶ್ ಪ್ರಾಮಾಣಿಕರು, ಸ್ವಾರ್ಥವಿಲ್ಲದೆ ಸಾರ್ವಜನಿಕ ಹಿತಕ್ಕಾಗಿ ದುಡಿಯುವವರು ಎಂಬುದು ಹೋರಾಟಗಾರರಿಗೆ ತಿಳಿದಿತ್ತು.
ಹೊರಗೆ ಒರಟರಂತೆ ಕಾಣಿಸಿದರೂ, ಒಳಗೆ ಅವರದು ತಾಯಿ ಹೃದಯ. ಯಾವುದೇ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಅವರು ಅನ್ಯಾಯಕ್ಕೊಳಗಾದವರನ್ನು ಕಂಡು ಮರುಗುತ್ತಿದ್ದರು. ಅಂಥವರಿಗೆ ನ್ಯಾಯ ಸಿಕ್ಕಬೇಕೆಂದು ಯಾವುದೇ ಹೋರಾಟಕ್ಕೂ ಸಿದ್ಧವಾ ಗುತ್ತಿದ್ದರು. ಇಂಥ ಹೋರಾಟಗಳಿಗಾಗಿ ತಮ್ಮ ಜೇಬಿಂದಲೇ ಎಷ್ಟೋ ಹಣವನ್ನು ಅವರು ಹಾಕಿದ್ದಾರೆ. ಅದನ್ನೆಂದೂ ಅವರು ಹೇಳಿಕೊಂಡಿಲ್ಲ. ನ್ಯಾಯಬದ್ಧ ಹೋರಾಟಗಳಿಗಾಗಿ ಅವರು ತಮ್ಮ ಕಾರನ್ನು ನೂರಾರು ಕಿಲೋ ಮೀಟರ್ ಓಡಿಸಿರುವುದೂ ಉಂಟು.
ಸಮಾಜವಾದಿ ಚಳವಳಿ, ನವನಿರ್ಮಾಣ ಕ್ರಾಂತಿ, ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಚಟುವಟಿಕೆಗಳು, ಗೋಕಾಕ್ ಚಳವಳಿ, ರೈತ ಹೋರಾಟ, ಕಾವೇರಿ ಚಳವಳಿ, ದ್ವೇಷಬಿಟ್ಟು ದೇಶಕಟ್ಟು ಹೋರಾಟ, ಕಾರ್ಮಿಕರ ಹೋರಾಟಗಳು ಎಷ್ಟೊಂದು ಚಳವಳಿಗಳು; ಎಂಥ ಸುದೀರ್ಘ ಕಾಲಾವಧಿ. ಮಲ್ಲೇಶ್ ಉದ್ದಕ್ಕೂ ಕ್ರಿಯಾಶೀಲರಾಗಿದ್ದರಲ್ಲ. ಅವರ ಉಮೇದು ಎಂದೂ ಬತ್ತದ ತೊರೆ.
ಗೋಕಾಕ್ ಚಳವಳಿಯಲ್ಲಿ ಭಾಗವಹಿಸುವುದಷ್ಟೆ ಕನ್ನಡಪರ ಕೆಲಸ ಎಂದು ಮಲ್ಲೇಶ್ ಅವರು ತಿಳಿದಿದ್ದರೆ ‘ನೃಪತುಂಗ ಕನ್ನಡ ಶಾಲೆ’ ತಲೆ ಎತ್ತುತ್ತಲೇ ಇರಲಿಲ್ಲ. ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಸಾಧ್ಯಮಾಡಬೇಕೆಂಬ ಛಲ ಮಲ್ಲೇಶ್ ಅವರಲ್ಲಿತ್ತು. ಕರ್ನಾಟಕದಲ್ಲಿ ಕನ್ನಡವೇ ಎಲ್ಲ ರಂಗದಲ್ಲಿಯೂ ಪ್ರಧಾನ ಭಾಷೆಯಾಗಬೇಕೆಂದು ಕನಸು ಕಟ್ಟಿದ್ದವರನ್ನೆಲ್ಲ ಒಟ್ಟುಗೂಡಿಸಿ ಮಲ್ಲೇಶ್ ಅವರು ಗೋಕಾಕ್ ಚಳವಳಿಯ ನಂತರ ಮೈಸೂರಿನಲ್ಲಿ ಕಟ್ಟಿದ ಕನ್ನಡ ಶಾಲೆ ಎಂಥ ಮಹತ್ವದ ಸಾಧನೆ ಎಂಬುದು ತಿಳಿಯಬೇಕಾದರೆ ಈ ಶಾಲೆಯಲ್ಲಿ ಅರಳುತ್ತಿರುವ ಮಕ್ಕಳನ್ನು ನೋಡಬೇಕು. ಇಲ್ಲಿಗೆ ಬರುವವರೆಲ್ಲ ಕಾರ್ಮಿಕರ ಮಕ್ಕಳು, ದಿನಗೂಲಿಯವರ ಮಕ್ಕಳು; ವಿವಿಧ ಕಸುಬುಗಳಲ್ಲಿ ತೊಡಗಿ ಅವತ್ತಿನ ಅನ್ನವನ್ನು ಅವತ್ತೇ ಗಳಿಸಬೇಕಾದ ಸ್ಥಿತಿಯಲ್ಲಿ ಬದುಕುತ್ತಿರುವ ನೂರಾರು ಕುಟುಂಬಗಳ ಮಕ್ಕಳು; ಕೊಳೆಗೇರಿಗಳಲ್ಲಿ ಬದುಕುತ್ತಿರುವವರ ಮಕ್ಕಳು.
ಪ್ರವೇಶ ಶುಲ್ಕ, ಇನ್ನಿತರ ಯಾವುದೇ ರೀತಿಯ ಶುಲ್ಕಗಳ ಹೊರೆ ಈ ಮಕ್ಕಳ ಮೇಲೆ ಇರದಂತೆ ಈ ಶಾಲೆ ನೋಡಿಕೊಳ್ಳುತ್ತಿದೆ. ಜೊತೆಗೆ ಈ ಮಕ್ಕಳ ಓಡಾಟಕ್ಕೆ ವಾಹನ ಒದಗಿಸಿ, ಸಮವಸ್ತ್ರ ಪುಸ್ತಕ ಇತ್ಯಾದಿ ಅಗತ್ಯಗಳನ್ನು ಪೂರೈಸಿ ಮಕ್ಕಳು ನೆಮ್ಮದಿಯಿಂದ ಕಲಿಯುವಂತೆ ಮಾಡಿದ ಕೀರ್ತಿಯೂ ಈ ಕನ್ನಡ ಶಾಲೆಗಿದೆ. ಶಿಕ್ಷಣ ಎಂಬುದು ವ್ಯಾಪಾರ ಎಂಬ ಭಾವನೆ ಬೆಳೆಯುತ್ತಿದ್ದ ದಿನಗಳಲ್ಲಿ ಮಲ್ಲೇಶ್ ಕನ್ನಡಪರ ಮನಸ್ಸುಗಳನ್ನೆಲ್ಲ ಒಗ್ಗೂಡಿಸಿ, ‘ಶಿಕ್ಷಣವೆನ್ನುವುದು ಅರಿವಿನ ದಾರಿ. ಅವಕಾಶ ವಂಚಿತ ಮಕ್ಕಳನ್ನೆಲ್ಲ ಈ ದಾರಿಯಲ್ಲಿ ನಡೆಸಬೇಕು’ ಎಂಬುದನ್ನು ತೋರಿಸಿಕೊಟ್ಟರು.
‘ನಮ್ಮ ಮಗುವೊಂದನ್ನು ದತ್ತು ತೆಗೆದುಕೊಳ್ಳಿ, ಈ ಮಗುವಿನ ವರ್ಷದ ಖರ್ಚನ್ನು ನೋಡಿಕೊಳ್ಳಿ. ಈ ಮಗುವಿಗೆ ಅದು ತಿಳಿಯಲೇ ಬಾರದು. ಹಾಗೆ ನಡೆದುಕೊಳ್ಳೋಣ’ ಎಂದು ಉದಾರಿಗಳನ್ನೆಲ್ಲ ಹತ್ತಿರ ಕರೆದರು. ಇಲ್ಲಿ ಕಲಿಯುತ್ತಿರುವ ನೂರಾರು ಮಕ್ಕಳ ಬೆನ್ನಿಗೆ ಎಷ್ಟೊಂದು ಜನ ಉದಾರಿಗಳು ನಿಂತಿದ್ದಾರೆ. ಇದೆಲ್ಲ ಸಾಧ್ಯ ಎಂದು ತೋರಿಸಿಕೊಟ್ಟವರು ಮಲ್ಲೇಶ್. ಇದನ್ನೆಂದೂ ಅವರು ಪ್ರಚಾರಕ್ಕೆ ಬಳಸಿಕೊಂಡಿಲ್ಲ.
ಪ್ರಾಥಮಿಕ ಹಂತದಿಂದ ಪಿಯುಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಸಾವಿರಾರು ಮಕ್ಕಳು ಇಲ್ಲಿ ಓದಿದ್ದಾರೆ. ನೂರಾರು ಮಕ್ಕಳು ಈಗಲೂ ಓದುತ್ತಿದ್ದಾರೆ. ಇದೆಂಥ ಸಾಹಸ! ‘ನಮ್ಮದೆಲ್ಲ ಮುಗಿಯಿತು. ನಾಳಿನ ಮಕ್ಕಳಿಗೆ ನಾವೇನು ಬಿಟ್ಟು ಹೋಗುತ್ತಿದ್ದೇವೆ, ಸ್ವಲ್ಪ ಯೋಚಿಸಿ ನೋಡಿ’ ಎಂದು ಸದಾ ಹೇಳುತ್ತಿದ್ದ ಮಲ್ಲೇಶ್ ಅವರ ಮಾತಿನಲ್ಲಿ ಎಂಥ ಕಾಳಜಿ ಅಡಗಿತ್ತು!
ಸಿಡುಕುವ, ಬೈಯ್ಯುವ, ಸ್ಫೋಟಿಸುವ, ಪ್ರೀತಿಸುವ, ಪ್ರತಿಭಟಿಸುವ, ಚೈತನ್ಯ ತುಂಬುವ,ಇಡೀ ಸಮಾಜವನ್ನು-ವಿಶೇಷವಾಗಿ ಹಿಂದುಳಿದ ಸಮುದಾಯಗಳನ್ನು ತಮ್ಮ ಬಾಹುಗಳಲ್ಲಿ ತಬ್ಬಿಕೊಂಡ ಮಲ್ಲೇಶ್ ತೀರಿ ಹೋಗಿದ್ದಾರೆ,ನಿಜ. ಆದರೆ ಅವರ ಚೈತನ್ಯ ಸಾವಿರಾರು ಹೃದಯಗಳಲ್ಲಿ ಈಗಲೂ ಹರಿಯುತ್ತಿದೆ, ಪುಟಿಯುತ್ತಿದೆ. ಅದು ಎಂದೂ ಬತ್ತದ ಚೇತನ. ಇದೇ ನಮ್ಮಂಥವರಿಗೆ ಇರುವ ಸಮಾಧಾನ.