ಕುಂದಾಪುರ | ಬಸ್ಸಿನಿಂದ ಬಿದ್ದು ಮೃತಪಟ್ಟ ವಿದ್ಯಾರ್ಥಿಯ ನೇತ್ರದಾನ ಮಾಡಿದ ಹೆತ್ತವರು
ಕುಂದಾಪುರ, ಜ.28: ಶನಿವಾರ ಬೆಳಗ್ಗೆ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ವೇಳೆ ಬಸ್ಸಿನಿಂದ ಆಯತಪ್ಪಿ ಬಸ್ ಚಕ್ರದಡಿಗೆ ಬಿದ್ದು ಮೃತಪಟ್ಟ ಕಾಲೇಜು ವಿದ್ಯಾರ್ಥಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಆತನ ಪೋಷಕರು ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿಗಳಾದ ನಾಗಪ್ಪ ಪೂಜಾರಿ ಮತ್ತು ಜಲಜಾ ದಂಪತಿಯ ಪುತ್ರ ಸುದೀಪ್ ಪೂಜಾರಿ(20)ಯ ನೇತ್ರದಾನ ಮಾಡಲಾಗಿದೆ.
ಇಂದು ಬೆಳಗ್ಗೆ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಕಟ್ ಬೆಲ್ತೂರಿನಿಂದ ಸುದೀಪ್ ಸಂಚರಿಸುತ್ತಿದ್ದಾಗ ಹೆಮ್ಮಾಡಿ ಜಂಕ್ಷನ್ ಬಳಿ ಆಯತಪ್ಪಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಬಸ್ಸಿನ ಚಕ್ರದಡಿಗೆ ಸಿಲುಕಿದ ಆತ ಗಂಭೀರ ಗಾಯಗೊಂಡಿದ್ದರು. ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಈ ವೇಳೆ ಆಸ್ಪತ್ರೆಯ ನೇತ್ರ ತಜ್ಞೆ ಡಾ.ವಿಜಯಲಕ್ಷ್ಮೀ ನೇತ್ರದಾನದ ಮಹತ್ವದ ಬಗ್ಗೆ ಮೃತ ಸುದೀಪ್ ಪೂಜಾರಿ ಪೋಷಕರ ಮನವರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಸುದೀಪ್ ನೇತ್ರದಾನಕ್ಕೆ ಸಮ್ಮತಿಸಿದ್ದು, ಮಣಿಪಾಲದ ವೈದ್ಯರ ತಂಡ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆ ನಡೆಸಿದ್ದಾರೆ ಎಂದು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ತಿಳಿಸಿದ್ದಾರೆ.
ಮೃತ ಸುದೀಪ್ ಪೂಜಾರಿ ಆರ್ಥಿಕವಾಗಿ ಬಡ ಕುಟುಂಬದವರಾಗಿದ್ದಾರೆ. ತಂದೆ-ತಾಯಿ ಜೊತೆ ಮನೆಯಲ್ಲಿದ್ದು ಕೋಟೇಶ್ವರ ಕಾಗೇರಿಯಲ್ಲಿರುವ ಕಾಳಾವಾರ ವರದರಾಜ ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಿರಿಯ ಸೋದರ ಹಾಗೂ ಸೋದರಿ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿ ಉದ್ಯೋಗಿಗಳಾಗಿದ್ದಾರೆ.
ಇದನ್ನೂ ಓದಿ: ಕುಂದಾಪುರ | ಬಸ್ಸಿನಿಂದ ಬಿದ್ದು ಪದವಿ ಕಾಲೇಜು ವಿದ್ಯಾರ್ಥಿ ಮೃತ್ಯು