ಮಹಾಬಲ ದೇವಾಡಿಗರಿಗೆ ಗುರು ವೀರಭದ್ರ ನಾಯಕ ಪ್ರಶಸ್ತಿ ಪ್ರದಾನ
ಉಡುಪಿ: ಉಡುಪಿಯ ಯಕ್ಷಗಾನ ಕೇಂದ್ರವು ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನೀಡುವ ಪ್ರಥಮ ಗುರು ವೀರಭದ್ರ ನಾಯಕ ಯಕ್ಷಗಾನ ಪ್ರಶಸ್ತಿಯನ್ನು ಬಡಗುತಿಟ್ಟಿನ ಮೇರು ಕಲಾವಿದರಾದ ಮಹಾಬಲ ದೇವಾಡಿಗ ಕಮಲಶಿಲೆ ಇವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಸಂಜೆ ನಡೆದ ಯಕ್ಷಗಾನ ಕೇಂದ್ರದ 50ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಬಡಗುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದರೂ ಯಕ್ಷಗಾನ ಕೇಂದ್ರದ ಗುರುಗಳೂ ಆಗಿದ್ದ ಮಟಪಾಡಿ ವೀರಭದ್ರ ನಾಯಕರ ನೆನಪಿನಲ್ಲಿ ಪ್ರಥಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಈ ಪ್ರಶಸ್ತಿ ಗುರು ವೀರಭದ್ರ ನಾಯಕರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳಲು ನಮಗಿರುವ ಅವಕಾಶ. ಅವರು ಯಕ್ಷಗಾನದ ಕೊಡುಗೆಗಾಗಿ ದಶಾವತಾರಿ ಎಂಬ ಬಿರುದನ್ನು ಹೊಂದಿದ್ದರು. ನಮ್ಮ ಯಕ್ಷಗಾನ ಕೇಂದ್ರಕ್ಕೆ ಅವರ ಕೊಡುಗೆಯನ್ನು ಯಾರೂ ಮರೆಯಲಸಾಧ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ವಹಿಸಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಡಾ.ಪಿ.ಎಲ್.ಎನ್. ರಾವ್ ಉಪಸ್ಥಿತರಿದ್ದರು.
ಸಲಹಾ ಸಮಿತಿಯ ಪ್ರಸಕ್ತ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಸದಸ್ಯರಾದ ಪ್ರೊ. ಎಸ್.ಉದಯ ಕುಮಾರ್ ಶೆಟ್ಟಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ವಂದಿಸಿ, ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು.