ಕೌಲಾಲಂಪುರ: ಅಂತಾರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಭಾಗವಹಿಸಿದ ಕಾಸರಗೋಡಿನ ವಹೀದುಝ್ಝಮಾನ್
ಮಂಗಳೂರು, ಜ.29: ನ್ಯೂಯಾರ್ಕ್ ಮೂಲದ ಬೆಸ್ಟ್ ಡಿಪ್ಲೊಮಾಟ್ಸ್ ಎಂಬ ರಾಜತಾಂತ್ರಿಕ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಮಲೇಷ್ಯದ ಕೌಲಾಲಂಪುರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಯುವ ರಾಜತಾಂತ್ರಿಕ ಸಮ್ಮೇಳನದಲ್ಲಿ ಭಾರತೀಯ ಪ್ರತಿನಿಧಿಯಾಗಿ ಕಾಸರಗೋಡಿನ ವಿದ್ಯಾರ್ಥಿ ಹಾಫಿಝ್ ವಹೀದುಝ್ಝಮಾನ್(19) ಭಾಗವಹಿಸಿದ್ದಾರೆ. ಈ ಸಮ್ಮೇಳನವು ಶುಕ್ರವಾರ ಆರಂಭಗೊಂಡಿದೆ.
'ಪರಮಾಣು ಯುದ್ಧದ ಸಂದರ್ಭದಲ್ಲಿ ನಿಶ್ಯಸ್ತ್ರೀಕರಣದ ಭವಿಷ್ಯ' ಎಂಬ ವಿಷಯದ ಕುರಿತು ಕೌಲಾಲಂಪುರದ ಸನ್ ವೇ ಪುತ್ರ ಪಂಚತಾರಾ ಹೋಟೆಲ್‌ನಲ್ಲಿ ಜ.30ರವರೆಗೆ ನಡೆಯುವ ಈ ಯುವ ಸಮ್ಮೇಳನದಲ್ಲಿ ಹಾಫಿಝ್ ವಹೀದುಝ್ಝಮಾನ್ ವಿವಿಧ ಅಧಿವೇಶನಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
80 ದೇಶಗಳ 150ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಸಮ್ಮೇಳನದ ಮಹಾನಿರ್ದೇಶಕ ಎ.ಎಂ.ಬಿ.ಫವಾದ್ ಅಲಿ ಲಂಗಾಹ್ ಪ್ರತಿನಿಧಿಗಳನ್ನು ಸ್ವಾಗತಿಸಿದರು.
ಈ ಸಮ್ಮೇಳನದಲ್ಲಿ ಭಾರತೀಯ ಪ್ರತಿನಿಧಿಗಳಾಗಿ ಚಂಡೀಗಢದ ಜುಫೀರ್ ಸಿಂಗ್ ಕಪೂರ್ ಮತ್ತು ಮುಂಬೈಯ ಸುಭಮ್ ಮೋರ್ ಭಾಗವಹಿಸುತ್ತಿದ್ದಾರೆ. ಕಪೂರ್ ಬೇರೆ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಭಾರತವನ್ನು ಪ್ರತಿನಿಧಿಸುತ್ತಿರುವ ವಹೀದುಝ್ಝಮಾನ್ ಕಾಸರಗೋಡು ಹಸನತುಜ್ಜಾರಿಯಾ ಮಸೀದಿಯ ಖತೀಬ್ ಮತ್ತು ದಾರುಲ್ ಹಿಕ್ಮಾದ ನಿರ್ದೇಶಕ ಅತೀಕುರ್ರಹ್ಮಾನ್ ಅಲ್ ಫೈಝಿ ಮತ್ತು ಝಹ್ರಾ ಬಾನು ದಂಪತಿಯ ಪುತ್ರ. ವಹೀದುಝ್ಝಮಾನ್ ಅವರು ದಾರುಲ್ ಹಿಕ್ಮಾದಲ್ಲಿ ಹಿಫ್ಝ್ (ಕುರ್‌ಆನ್ ಕಂಠಪಾಠ) ಮುಗಿಸಿದ್ದು, ಮದೀನಾದ ತೈಬಾ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸುತ್ತಿದ್ದಾರೆ.
"ಈ ಯುವ ಸಮ್ಮೇಳನದಲ್ಲಿ ಪ್ರತಿನಿಧಿಯಾಗಲು ದೇವರ ಅನುಗ್ರಹ, ತಂದೆಯ ಪ್ರೇರಣೆ ಹಾಗೂ ಪ್ರೋತ್ಸಾಹವೇ ಕಾರಣ" ಎಂದು ವಹೀದುಝ್ಝಮಾನ್ ಹೇಳಿದ್ದಾರೆ.