varthabharthi


ಓ ಮೆಣಸೇ

ಓ ಮೆಣಸೇ....

ವಾರ್ತಾ ಭಾರತಿ : 30 Jan, 2023
ಪಿ.ಎ. ರೈ

ಕಾಂಗ್ರೆಸ್‌ನಿಂದ ಗೆದ್ದು ಅಧಿಕಾರಕ್ಕಾಗಿ ಬಿಜೆಪಿಗೆ ಹೋಗುವಂತಹ ಅನುಮಾನಾಸ್ಪದ ವ್ಯಕ್ತಿಗಳಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ವಂಚಿಸುವುದು ನಂಬಿಗಸ್ಥರೇ ಹೊರತು ಅನುಮಾನಿತರಲ್ಲ. ಆದ್ದರಿಂದ ನಿಮ್ಮ ಧೋರಣೆಯನ್ನು ಮರು ಪರಿಶೀಲಿಸಿ.

ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ನಿರ್ನಾಮವಾಗಲಿದೆ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಅದೇನೇ ಇರಲಿ, ನಿಮ್ಮಿಂದಾಗಿ ಯಡಿಯೂರಪ್ಪನವರು ದಿಕ್ಕಿಲ್ಲದಾಗಿ ಬಿಟ್ಟಿದ್ದನ್ನು ಜನತೆ ಕಣ್ಣಾರೆ ಕಾಣುತ್ತಿದ್ದಾರೆ.

ಭಾರತ ಈಗ ಬೇಡುವ ರಾಷ್ಟ್ರವಲ್ಲ, ದಾನ ನೀಡುವ ರಾಷ್ಟ್ರ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ದಾನವನ್ನೆಲ್ಲಾ ನೀವು ಅದಾನಿ, ಅಂಬಾನಿಗಳಿಗೆ ನೀಡುತ್ತಿರುವುದರಿಂದ ಕೋಟ್ಯಂತರ ಬಡ ಭಾರತೀಯರು ಭಿಕ್ಷೆ ಬೇಡುವ ಸ್ಥಿತಿಯಲ್ಲಿದ್ದಾರೆ.

ಬಿಜೆಪಿ ನನ್ನನ್ನು ರಾಜ್ಯ, ಕೇಂದ್ರ ಮಟ್ಟದಲ್ಲಿ ತುಂಬಾ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ - ಯಡಿಯೂರಪ್ಪ, ಮಾಜಿ ಸಿಎಂ
ಅಂತಿಮಯಾತ್ರೆಯ ವೇಳೆ ಶತ್ರುವಿಗೂ ಒಂದಷ್ಟು ಗೌರವ ಸಲ್ಲುತ್ತದೆ.

ಬಿಜೆಪಿ ರಾಜ್ಯಾಧ್ಯಕ್ಷರ ನಾಲಿಗೆಯಲ್ಲಿ ಮೂಳೆ ಮಾತ್ರವಲ್ಲ, ನಿಯಂತ್ರಣವೂ ಇಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ತಲೆಯ ಸ್ಥಿತಿ ಸರಿ ಇದ್ದರೆ ಇತರ ಅವಯವಗಳ ಅಸ್ವಸ್ಥತೆಯನ್ನು ಕಡೆಗಣಿಸಬಹುದಿತ್ತು.

ಹದಿಮೂರು ಬಜೆಟ್ ಮಂಡಿಸಿದವರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಇನ್ನೂ ಒಂದು ಕ್ಷೇತ್ರ ಸಿಗುತ್ತಿಲ್ಲ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಅವರು ನಿಮ್ಮಹಾಗೆ ಸಿಕ್ಕ ಅವಕಾಶಗಳನ್ನೆಲ್ಲಾ ದರೋಡೆಗೆ ಬಳಸಿಲ್ಲವಾದ್ದರಿಂದ, ಹಲವು ಕ್ಷೇತ್ರಗಳು ಅವರನ್ನು ಕರೆಯುತ್ತಿವೆ. ಯಾವುದನ್ನು ಆರಿಸಬೇಕೆಂಬ ಧರ್ಮ ಸಂಕಟದಲ್ಲಿದ್ದಾರೆ.

ಮುಸ್ಲಿಮ್ ದ್ವೇಷ ಬಿಟ್ಟರೆ ಬಿಜೆಪಿಗೆ ಅಸ್ತಿತ್ವವೇ ಇಲ್ಲ - ರಮಾನಾಥ ರೈ, ಮಾಜಿ ಸಚಿವ
ಮುಸ್ಲಿಮರಿಗೆ ಭಾಷಣದ ಹೊರತು ಬೇರೇನನ್ನೂ ನೀಡದ ನಿಮ್ಮ ಪಕ್ಷದ ಧೋರಣೆ ಹೀಗೆಯೇ ಮುಂದುವರಿದರೆ ನಿಮ್ಮ ಪಕ್ಷದ ಅಸ್ತಿತ್ವವೂ ಉಳಿಯದು.

ಪ್ರಧಾನಿ ಮೋದಿ ಅಧ್ಯಾತ್ಮದ ಪ್ರಭಾವಕ್ಕೆ ಒಳಗಾಗಿ ಒಮ್ಮೆ ಸನ್ಯಾಸಿಯಾಗಲು ಹೊರಟ್ಟಿದ್ದರು - ಬಿ.ಎಲ್.ಸಂತೋಷ್, ಬಿಜೆಪಿ ಸಂ. ಕಾರ್ಯದರ್ಶಿ
ದೇಶದ ದೌರ್ಭಾಗ್ಯ ನೋಡಿ. ಅವರು ತಾನು ಸನ್ಯಾಸಿಯಾಗುವ ನಿರ್ಧಾರ ಕೈಬಿಟ್ಟು ದೇಶವನ್ನು ಸನ್ಯಾಸಿಯಾಗಿಸಲು ಹೊರಟರು.

ದೇಶದಲ್ಲಿ ವಿಪಕ್ಷದ ಕೆಲಸ ಮಾಡುವುದಕ್ಕೂ ಕಾಂಗ್ರೆಸ್ ಯೋಗ್ಯತೆ ಉಳಿಸಿಕೊಂಡಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ
ಎಷ್ಟೇ ಅಯೋಗ್ಯರಾದರೂ ಕಾಂಗ್ರೆಸ್ ನವರು ನಿಮಗಿಂತ ಸಾವಿರ ಪಾಲು ವಾಸಿ ಎಂಬ ನಂಬಿಕೆ ನಿಮ್ಮನ್ನು ಕಂಡವರಲ್ಲಿ ಮೂಡಿದೆ.

ನನ್ನ ಬರವಣಿಗೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನಾನೇ ಹಕ್ಕುದಾರಳು -ಡಾ.ಸುಧಾಮೂರ್ತಿ, ಇನ್ಫೋಸಿಸ್ ಅಧ್ಯಕ್ಷೆ
ಅದಕ್ಕೆಲ್ಲ ನಿಮ್ಮ ಹೊರತು ಬೇರೆ ಓದುಗರೂ ಇದ್ದಾರೆಯೇ?

ನಮ್ಮ ಬದುಕಿನಲ್ಲಿ ವೈವಿಧ್ಯವಿದ್ದರೂ ಇಲ್ಲಿ ಏಕತೆ ಇದೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಸಾವಿರಾರು ಬಗೆಯ ಭ್ರಷ್ಟಾಚಾರ, ಸ್ವಾರ್ಥ, ಅನಾಚಾರ...ಇದನ್ನೇ ನೀವು ವೈವಿಧ್ಯ ಎಂದು ನಂಬಿದ್ದೀರಿ - ಇದರಲ್ಲೇ ಪರಸ್ಪರ ಏಕತೆಯನ್ನು ಕಾಣುತ್ತೀರಿ.

ನರೇಂದ್ರ ಮೋದಿ ಎಂಬ ಮಂತ್ರ ಈಗ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಕೇಳಿ ಬರುತ್ತಿದೆ - ಯೋಗಿ ಆದಿತ್ಯನಾಥ್, ಉ.ಪ್ರ.ಸಿಎಂ
ಹೌದು. ಎರಡೇ ವರ್ಷಗಳ ಹಿಂದೆ ದೇಶ ವಿದೇಶಗಳಲ್ಲಿ, ಕೋವಿಡ್, ಕೋವಿಡ್ ಎಂಬ ಮಂತ್ರ ಮಾತ್ರ ಕೇಳಿಸುತ್ತಿತ್ತು. ಕಾಲ ಬದಲಾಗುತ್ತಿರುತ್ತದೆ.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಗೆಲ್ಲ ಬಲ್ಲ ಬಿಲ್ಲವ ಅಭ್ಯರ್ಥಿಯನ್ನು ಗುರುತಿಸಿ ಅವಕಾಶ ನೀಡಬೇಕು - ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ
ಗೆಲ್ಲ ಬಲ್ಲ ಎಂಬ ಶರತ್ತೇಕೆ?

ದೇವೇಗೌಡರ ಕುಟುಂಬದಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು ಎಲ್ಲರೂ ದೋಚಲು ಶುರುಮಾಡಿದ್ದಾರೆ - ಜೆ.ಸಿ.ಮಾಧುಸ್ವಾಮಿ, ಸಚಿವ
ಈ ಮೂಲಕ ಅವರು, ರಾಜಕೀಯದಲ್ಲಿರುವ ಇತರ ಕುಟುಂಬಗಳ ಜೊತೆ ಭಾವೈಕ್ಯ ಮೆರೆಯಲು ಹೊರಟಿರಬೇಕು.

ಬಿಜೆಪಿಯ ದುರುದ್ದೇಶ ಪೂರಿತ ಹಿಂದುತ್ವಕ್ಕೆ ಕರಾವಳಿಯ ಯುವಕರು ಬಲಿಯಾಗುತ್ತಿದ್ದಾರೆ - ಸಿದ್ದರಾಮಯ್ಯ, ಮಾಜಿ ಸಿಎಂ
ಅದನ್ನು ಇಲ್ಲಿಯ ಜನ ಬಹುಕಾಲದಿಂದ ಗಮನಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ನಿಮ್ಮಂಥವರು ಕೇವಲ ಸಮಸ್ಯೆಯನ್ನು ಪ್ರಸ್ತಾಪಿಸಿ ಹೊರಟು ಹೋದರೆ ಹೇಗೆ?

ವೌಲ್ಯಾಧಾರಿತ ಸಮಾಜ ನಿರ್ಮಾಣ ಮಾಡಲು ನೈತಿಕ ಶಿಕ್ಷಣ, ಧ್ಯಾನ, ಯೋಗದ ಅವಶ್ಯಕತೆ ಇದೆ - ಬಿ.ಸಿ.ನಾಗೇಶ್, ಸಚಿವ
ವೌಲ್ಯವನ್ನು ನಲವತ್ತು ಪರ್ಸೆಂಟ್ ಗಿಂತ ಕೆಳಗೆ ಇಳಿಸಲು ಇದು ಪರಿಣಾಮಕಾರಿಯಾದೀತೇ?

ಪ್ರಧಾನಿ ಮೋದಿ ವಿರುದ್ಧದ ಬಿಬಿಸಿ ಸಾಕ್ಷ ಚಿತ್ರದ ಹಿಂದೆ ತುಕ್ಡೇ ತುಕ್ಡೇ ಗ್ಯಾಂಗ್‌ನ ಕೈವಾಡವಿದೆ -ಕಿರಣ್ ರಿಜಿಜು, ಕೇಂದ್ರ ಸಚಿವ
ದೇಶದ ಕೆಲವೆಡೆ ಭಾರೀ ಪ್ರಮಾಣದ ಭೂಕುಸಿತ ನಡೆಯುತ್ತಿರುವುದಕ್ಕೂ ಅವರೇ ಕಾರಣ ಎನ್ನುತ್ತಾರಲ್ಲಾ?

ನಮ್ಮದು ಹೊಟ್ಟೆಪಾಡಿನ ರಾಜಕಾರಣ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಎಲ್ಲ ಪುಢಾರಿಗಳೂ ರಾಜಕಾರಣದಲ್ಲಿರುವುದು ಹೊಟ್ಟೆಪಾಡಿಗಾಗಿ ಎಂಬುದರಲ್ಲಿ ಸಂದೇಹವಿಲ್ಲ. ಕುತೂಹಲ ಇರುವುದು ಯಾರ ಹೊಟ್ಟೆ ಎಷ್ಟು ದೊಡ್ಡದು ಎಂಬ ಬಗ್ಗೆ ಮಾತ್ರ.

ಕರ್ನಾಟಕದಿಂದ ಕಾಂಗ್ರೆಸನ್ನು ತೊಲಗಿಸಿದರೆ ಇಲ್ಲಿನ ರಾಜಕಾರಣ ಸ್ವಚ್ಛವಾಗುತ್ತದೆ - ಸಿ.ಟಿ.ರವಿ, ಶಾಸಕ
ದೇಶದಿಂದ ಬಿಜೆಪಿ ಪರಿವಾರವನ್ನು ಅಳಿಸಿ ಬಿಟ್ಟರೆ ದೇಶ ಶುದ್ಧವಾಗುತ್ತದೆ ಎಂದು ನಂಬಿರುವವರೂ ದೇಶದಲ್ಲಿದ್ದಾರೆ.

ಮುಂದಿನ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಿದ ದಿನವೇ ಕಾಂಗ್ರೆಸ್ ಹಾಗೂ ಬಿಜೆಪಿ ಒಡೆದು ಹೋಗುತ್ತದೆ -ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಒಡೆದ ಬಿಜೆಪಿಯಲ್ಲಿ ನೀವು ಯಾವ ಬಣವನ್ನು ಆರಿಸಿಕೊಳ್ಳುತ್ತೀರಿ?

ಪ್ರತೀ ದಿನ ಬೆಳಗ್ಗೆ ಎದ್ದ ತಕ್ಷಣ ಕಾಫಿ ಜೊತೆಗೆ ಎರಡು ಪತ್ರಿಕೆ ಓದದಿದ್ದರೆ ಆ ದಿನ ಪೂರ್ತಿ ಚಟುವಟಿಕೆಯಿಂದಿರಲು ಸಾಧ್ಯವಾಗುವುದಿಲ್ಲ - ಆರ್.ಅಶೋಕ್, ಸಚಿವ
ನಿಮ್ಮ ಚಟುವಟಿಕೆಗಳನ್ನು ನೋಡಿದರೆ, ನೀವು ಬೆಳ ಗ್ಗೆ ಕಾಫಿ ಕುಡಿಯದೇ ಕೆಲವಾರು ವರ್ಷಗಳಾದಂತಿದೆಯಲ್ಲಾ?

ನ್ಯಾಯಮೂರ್ತಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗದು - ಕಿರಣ್ ರಿಜಿಜು, ಕೇಂದ್ರ ಸಚಿವ
ಸಾಧ್ಯವಾಗಿದ್ದಿದ್ದರೆ ಆಪರೇಷನ್ ಕಮಲ ಮಾಡಬಹುದಿತ್ತು ಎನ್ನುವ ಆಸೆಯೇನೋ.

ಬಿಜೆಪಿಯವರು ನನ್ನನ್ನು ಯಾಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಸಂಸ್ಥಾಪಕ
ಉಂಡು ಎಸೆದ ಬಾಳೆ ಎಲೆ ಎನ್ನುವುದು ನಿಮಗೆ ಅರ್ಥವಾದ ದಿನ ಎಲ್ಲವೂ ಅರ್ಥವಾಗುವುದು.

ಆರೆಸ್ಸೆಸ್ -ಬೋಸ್ ದಾರಿಗಳು ಬೇರೆಯಾಗಿರಬಹುದು ಆದರೆ ಗುರಿಮಾತ್ರ ಒಂದೇ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ದಾರಿ ಬೇರೆ ಎಂಬುದನ್ನೊಪ್ಪಲು ಇಷ್ಟು ವರ್ಷ ಬೇಕಾಯಿತು. ಗುರಿ ಬೇರೆ ಎಂಬುದನ್ನು ಒಪ್ಪಲು ಇನ್ನೆಷ್ಟು ಕಾಲ ಬೇಕು?

ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಬಿಡಾಡಿ ದನಗಳನ್ನು ಪಕ್ಕದ ಗೋ ಶಾಲೆಗಳಿಗೆ ತಂದು ಬಿಡಿ - ಪ್ರಭು ಚವ್ಹಾಣ್, ಸಚಿವ
ಗೋಶಾಲೆಗಳಿಂದಲೇ ಹೊರಬಿಟ್ಟ ದನಗಳವು. ಸೌಂದರ್ಯ ಬಹಳ ಕಾಲ ಉಳಿಯುವುದಿಲ್ಲ,

ಬಹಳ ಕಾಲ ಉಳಿಯುವುದು ಸುಂದರವಾಗಿ ಇರುವುದಿಲ್ಲ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಸೌಂದರ್ಯ ಮಾಸಿದ ಹಲವರು ತಮ್ಮ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿರುವುದು ಯಾಕೆ ಎನ್ನುವುದು ಅರ್ಥವಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು