ಜಾಮೀನು ಸಿಕ್ಕಿದ್ದರೂ ಇನ್ನೂ ಜೈಲಲ್ಲಿರುವ ಸಿದ್ದೀಕ್ ಕಪ್ಪನ್: ಈ ವಾರ ಬಿಡುಗಡೆಯ ನಿರೀಕ್ಷೆ
ಲಕ್ನೋ, ಜ.30: ಜಾರಿ ನಿರ್ದೇಶನಾಲಯ (ಈ.ಡಿ.)ವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯಡಿ ದಾಖಲಿಸಿರುವ ಪ್ರಕರಣದಲ್ಲಿ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಜಾಮೀನು ಮಂಜೂರು ಮಾಡಿದೆಯಾದರೂ ಅವರಿನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ. 2022,ಡಿ.23ರಂದೇ ಜಾಮೀನು ಆದೇಶ ಹೊರಬಿದ್ದಿದ್ದರೂ,ಅವರ ಒಂದು ಜಾಮೀನು ಭದ್ರತೆಯನ್ನು ಈವರೆಗೆ ಪರಿಶೀಲಿಸಲಾಗಿಲ್ಲ. ಕಪ್ಪನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ದಾಖಲಾಗಿರುವ ಇನ್ನೊಂದು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು 2022, ಸೆಪ್ಟಂಬರ್ನಲ್ಲಿ ಜಾಮೀನು ಮಂಜೂರು ಮಾಡಿತ್ತು.
‘ಪಿಎಂಎಲ್ಎ ಪ್ರಕರಣದಲ್ಲಿ ಜಾಮೀನು ಭದ್ರತೆಗಳನ್ನು ನಾವೀಗಾಗಲೇ ನ್ಯಾಯಾಲಯದ ಮುಂದೆ ಸಲ್ಲಿಸಿದ್ದೇವೆ ಮತ್ತು ಪರಿಶೀಲನೆಗಾಗಿ ಕಾಯುತ್ತಿದ್ದೇವೆ. ಸ್ಥಳೀಯ ಅಧಿಕಾರಿಗಳು ಅದನ್ನು ಪರಿಶೀಲಿಸಬೇಕು ಮತ್ತು ಅದಕ್ಕೆ ಸಾಮಾನ್ಯವಾಗಿ ಕೊಂಚ ಸಮಯ ಹಿಡಿಯುತ್ತದೆ. ಜಾಮೀನು ಷರತ್ತುಗಳನ್ನು ನಿಗದಿಗೊಳಿಸುವಾಗ, ಯುಎಪಿಎ ಪ್ರಕರಣಗಳಲ್ಲಿ ಜಾಮೀನು ಭದ್ರತೆಗಳ ಪರಿಶೀಲನೆಗೆ ಮೂರು ತಿಂಗಳಷ್ಟು ಅತಿಯಾದ ವಿಳಂಬವಾಗುತ್ತಿದೆ ಎಂದು ನಾವು ನ್ಯಾಯಾಲಯಕ್ಕೆ ನೆನಪಿಸಿದ್ದೆವು.
ಇನ್ನೊಂದು ಪ್ರಕರಣದಲ್ಲಿಯ ವಿಳಂಬವನ್ನು ಗಮನಕ್ಕೆ ತೆಗೆದುಕೊಂಡಿದ್ದ ನ್ಯಾಯಾಲಯವು ಶೀಘ್ರವೇ ಪರಿಶೀಲನೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಪ್ರಕ್ರಿಯೆಯಲ್ಲಿ ಹಲವಾರು ಅಧಿಕಾರಿಗಳ ಪಾತ್ರವಿರುವುದರಿಂದ ಮತ್ತು ಅದರ ಮೇಲೆ ನ್ಯಾಯಾಲಯದ ನಿಯಂತ್ರಣವಿಲ್ಲದ್ದರಿಂದ ಭದ್ರತೆಯ ಪರಿಶೀಲನೆಯನ್ನು ಪೂರ್ಣಗೊಳಿಸಲು ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಒಂದೆರಡು ದಿನಗಳಲ್ಲಿ ಅದು ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಬಳಿಕ ಜಾಮೀನು ಬಾಂಡ್ ಮತ್ತು ಬಿಡುಗಡೆ ಆದೇಶವನ್ನು ಹೊರಡಿಸಲಾಗುತ್ತದೆ. ಈ ವಾರದಲ್ಲಿ ಕಪ್ಪನ್ ಜೈಲಿನಿಂದ ಹೊರಬರುತ್ತಾರೆ ಎಂದು ಆಶಿಸಿದ್ದೇವೆ’ ಎಂದು ಕಪ್ಪನ್ ಪರ ವಕೀಲರಲ್ಲೋರ್ವರಾದ ಮುಹಮ್ಮದ್ ದಾನಿಷ್ ಕೆ.ಎಸ್. ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಯುಎಪಿಎ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಾಗ ತಲಾ ಒಂದು ಲ.ರೂ.ಗಳ ಭದ್ರತೆಗಳನ್ನು ಮತ್ತು ಅಷ್ಟೇ ಮೊತ್ತದ ಪರ್ಸನಲ್ ಬಾಂಡ್ನ್ನು ಒದಗಿಸುವಂತೆ ಕಪ್ಪನ್ಗೆ ಸೂಚಿಸಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿಯೂ ಇವೇ ಜಾಮೀನು ಷರತ್ತುಗಳನ್ನು ವಿಧಿಸಲಾಗಿದೆ.
ಕಪ್ಪನ್ 2020 ಅಕ್ಟೋಬರ್ನಲ್ಲಿ ಉ.ಪ್ರದೇಶದ ಹಥರಾಸ್ನಲ್ಲಿ ದಲಿತ ಮಹಿಳೆಯ ಅತ್ಯಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ತೆರಳುತ್ತಿದ್ದಾಗ ಮಥುರಾ ಬಳಿ ಇತರ ನಾಲ್ವರೊಂದಿಗೆ ಅವರನ್ನು ಬಂಧಿಸಲಾಗಿತ್ತು.