ಕ್ಯಾಮರಾ ಮುಂದೆ ಕರಡಿ ಸೆಲ್ಫಿ
ಜಗದಗಲ
► ಕ್ಯಾಮರಾ ಮುಂದೆ ಕರಡಿ ಸೆಲ್ಫಿ
ಕ್ಯಾಮರಾ ಕಂಡರೆ ಸಾಕು ಪೋಸು ಕೊಡುವ ಕರಡಿಯೊಂದು ಕೊಲೊರಾಡೋದಲ್ಲಿ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಮುದ್ದುಮುದ್ದಾಗಿರುವ ಅದರ ಚಿತ್ರಗಳು ಎಲ್ಲರನ್ನೂ ಆಕರ್ಷಿಸುತ್ತಿವೆ, ನಗಿಸುತ್ತಿವೆ.
ಕೊಲೊರಾಡೋದಲ್ಲಿನ ಓಪನ್ ಸ್ಪೇಸ್ ಮತ್ತು ಮೌಂಟೇನ್ ಪಾರ್ಕ್ಸ್(ಒಎಸ್‌ಎಮ್‌ಪಿ)ನಲ್ಲಿ ಇಡಲಾಗಿರುವ ಮೋಷನ್ ಡಿಟೆಕ್ಟಿಂಗ್ ಕ್ಯಾಮರಾ ಕಣ್ಣಿಗೆ ಬಿದ್ದರೆ ಸಾಕು, ಎದುರು ನಿಂತು ಪೋಸು ಕೊಡುವ ಈ ಕಪ್ಪುಕರಡಿ ಸೆಲ್ಫಿ ಪ್ರಿಯ ಕರಡಿಯೆಂದೇ ಕರೆಸಿಕೊಂಡಿದೆ. ಒಂದು ಕ್ಯಾಮರಾದಲ್ಲಂತೂ, 580ರಲ್ಲಿ ಸುಮಾರು 400 ಚಿತ್ರಗಳು ಇದೊಂದರವೇ ಆಗಿವೆ ಎಂದಿದ್ದಾರೆ ಒಎಸ್‌ಎಮ್‌ಪಿ ವಕ್ತಾರರು.
ಒಎಸ್‌ಎಮ್‌ಪಿಯಲ್ಲಿರುವ ಹೆಚ್ಚಿನ ಇತರ ಪ್ರಾಣಿಗಳು ಆಹಾರ ಅಥವಾ ವಿಶ್ರಾಂತಿ ಸ್ಥಳಗಳನ್ನು ಹುಡುಕುತ್ತಾ ತಮ್ಮ ಪಾಡಿಗೆ ತಾವಿದ್ದರೆ ಈ ಕರಡಿ ಮಾತ್ರ ತನ್ನ ಸೆಲ್ಫಿ ಆಸಕ್ತಿಯಿಂದಲೇ ಗಮನ ಸೆಳೆದಿದೆ. ಅದು ಕೊಡುವ ಪೋಸುಗಳನ್ನು ನೋಡಿಯೇ ನಗು ಉಕ್ಕುತ್ತದೆ. ನೋಡಿದ ಇತರರಿಗೂ ನಗು ಬಾರದೇ ಇರಲು ಸಾಧ್ಯವೇ ಇಲ್ಲ ಎಂಬುದು ಒಎಸ್‌ಎಮ್‌ಪಿಯವರ ಅಭಿಪ್ರಾಯ.
ಒಎಸ್‌ಎಮ್‌ಪಿ ಕೆಲವು ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಅವು ಬಹಳಷ್ಟು ನೆಟ್ಟಿಗರನ್ನು ಆಕರ್ಷಿಸಿವೆ. ಉದ್ಯಾನವನದ 46,000 ಎಕರೆಗಳಲ್ಲಿ 9 ಮೋಷನ್ ಡಿಟೆಕ್ಟಿಂಗ್ ಕ್ಯಾಮರಾಗಳನ್ನು ಇರಿಸಲಾಗಿದೆ. ಪ್ರಾಣಿಗಳು ಎದುರು ನಡೆದುಹೋಗುವಾಗ ಸಕ್ರಿಯಗೊಳ್ಳುವ ಕ್ಯಾಮರಾಗಳು, ಎದುರಲ್ಲಿ ಪ್ರಾಣಿ ಇರುವವರೆಗೂ ಸ್ಥಿರ ಛಾಯಾಚಿತ್ರಗಳು ಅಥವಾ ಕಿರು ವೀಡಿಯೊಗಳನ್ನು ಸೆರೆಹಿಡಿಯುತ್ತವೆ.
ಈ ಕ್ಯಾಮರಾಗಳಲ್ಲಿ ಅಲ್ಲಿನ ಪ್ರಾಣಿ ಪಕ್ಷಿಗಳ ಚಲನವಲನದ ಕ್ಷಣಗಳು ಸಿಗುವುದರಿಂದ, ಅವೆಲ್ಲವೂ ಈ ಪರಿಸರದಲ್ಲಿ ತೋರಿಸುವ ಪ್ರವೃತ್ತಿಯನ್ನು ಕಾಣಬಹುದಾಗಿದೆ ಎನ್ನುತ್ತಾರೆ ವನ್ಯಜೀವಿ ಪರಿಸರಶಾಸ್ತ್ರಜ್ಞರು.
► ಅತಿ ಹಳೆಯ ಮಮ್ಮಿ
ಈಜಿಪ್ಟಿನ ಪ್ರಾಚ್ಯಶಾಸ್ತ್ರಜ್ಞರು ರಾಜಧಾನಿ ಕೈರೋ ಬಳಿ ಫರೋನಿಕ್ ಸಮಾಧಿಯನ್ನು ಕಂಡುಹಿಡಿದಿದ್ದಾರೆ. ಇದು ದೇಶದಲ್ಲಿ ಇನ್ನೂ ಪತ್ತೆಯಾಗದ ಅತ್ಯಂತ ಹಳೆಯ ಮತ್ತು ಸಂಪೂರ್ಣ ಮಮ್ಮಿಯಾಗಿರಬಹುದು ಎಂದು ಉತ್ಖನನ ತಂಡ ಹೇಳಿದೆ.
4,300 ವರ್ಷಗಳಷ್ಟು ಹಳೆಯದಾದ ಮಮ್ಮಿಯು ಇತ್ತೀಚೆಗೆ ಪತ್ತೆಯಾಗಿರುವ ಐದನೇ ಮತ್ತು ಆರನೇ ರಾಜವಂಶದ ಸಮಾಧಿಗಳ ಗುಂಪಿನಲ್ಲಿ ಪತ್ತೆಯಾಗಿದೆ. ಹೆಕಾಶೆಪೆಸ್ ಎಂಬ ವ್ಯಕ್ತಿಯ ಮಮ್ಮಿ, ಗಾರೆಯಲ್ಲಿ ಮುಚ್ಚಿದ ಸುಣ್ಣದಕಲ್ಲಿನ ಶವಪೆಟ್ಟಿಗೆಯಲ್ಲಿತ್ತು ಎನ್ನುತ್ತದೆ ವರದಿ.
ಐದನೇ ರಾಜವಂಶದ ಕೊನೆಯ ಫೇರೋ ಉನಾಸ್‌ನ ಆಳ್ವಿಕೆಯಲ್ಲಿ ಗಣ್ಯರ ಮೇಲ್ವಿಚಾರಕ ಮತ್ತು ಪಾದ್ರಿಯಾದ ಖ್ನುಮ್ಜೆಡೆಫ್‌ಗೆ ಸೇರಿದ ಇತರ ಸಮಾಧಿಗಳು ಕಂಡುಬಂದಿವೆ. ಇವು ದೈನಂದಿನ ಜೀವನದ ದೃಶ್ಯಗಳಿಂದ ಅಲಂಕರಿಸಲ್ಪಟ್ಟಿದೆ. ಮತ್ತೊಂದು ಸಮಾಧಿಯು ಅರಮನೆಯ ಮಹಾನ್ ನಾಯಕನ ಸಹಾಯಕಿ ಮತ್ತು ರಹಸ್ಯಪಾಲಕಿಯಾಗಿದ್ದ ಮೇರಿ ಎಂಬವಳಿಗೆ ಸೇರಿದ್ದು ಎಂಬುದನ್ನು ಪತ್ತೆಹಚ್ಚಿದ್ದಾರೆ ಸಂಶೋಧಕರು. ಸಮಾಧಿಗಳ ನಡುವೆ ಹಲವಾರು ಪ್ರತಿಮೆಗಳೂ ಕಂಡುಬಂದಿವೆ.
► ತಳಿಶಾಸ್ತ್ರದ ಮಹಿಮೆ
ಡಿಎನ್‌ಎ ಪರೀಕ್ಷೆಯಿಂದ ಪತ್ತೆದಾರರಿಗೆ 50 ವರ್ಷಗಳಷ್ಟು ಹಿಂದೆ ಕೊಲೆಯಾದ ಮಹಿಳೆಯನ್ನು ಗುರುತಿಸಲು ಸಾಧ್ಯವಾಗಿದೆ. ಅರಿರೆನಾದ ಮೊಹಾವೆ ಕೌಂಟಿಯಲ್ಲಿ ಕೊಲೆಯಾದ ಮಹಿಳೆಯ ದೇಹದ ಅವಶೇಷಗಳನ್ನು ಕ್ಯಾನ್ವಾಸ್ ಚೀಲದಲ್ಲಿ ತುಂಬಿ ಅರಿಜೋನಾ ಮರುಭೂಮಿಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಹಿಂದೆ ಎಸೆಯಲಾಗಿತ್ತು.
ಅಂದು ಕೊಲೆಯಾದ ಆ ಮಹಿಳೆ ಕೊಲೀನ್ ಆಡ್ರೆ ರೈಸ್ ಎಂದು ಪತ್ತೆದಾರರು ಗುರುತಿಸಿದ್ದಾರೆ. ಅವರು 1931ರಲ್ಲಿ ಓಹಿಯೋದಲ್ಲಿ ಜನಿಸಿದರು ಮತ್ತು ಕೊಲೆಯಾದ ಸಂದರ್ಭದಲ್ಲಿ ಆಕೆಗೆ ಸುಮಾರು 39 ವರ್ಷ ವಯಸ್ಸಾಗಿತ್ತು.
ಸುಧಾರಿತ ಡಿಎನ್‌ಎ ಪರೀಕ್ಷೆ ಮತ್ತು ಫೋರೆನ್ಸಿಕ್ ಮಟ್ಟದ ಜೀನೋಮ್ ಸೀಕ್ವೆನ್ಸಿಂಗ್ ಈ ಮಹಿಳೆಯ ಗುರುತು ಮತ್ತು ಆಕೆಯ ಅಕಾಲಿಕ ಮರಣದ ಸುತ್ತಲಿನ ಸಂದರ್ಭಗಳ ಬಗ್ಗೆ ಒಳನೋಟವನ್ನು ನೀಡಲು ಸಹಾಯ ಮಾಡಿದೆ ಎನ್ನುತ್ತಾರೆ ಪರಿಣಿತರು. ಆಕೆಗೆ ಮದುವೆಯಾಗಿತ್ತು ಮತ್ತು ಅವರು ಕುಟುಂಬದಿಂದ ದೂರವಾಗಿದ್ದರು ಎಂಬುದನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಇದು ನೆರವಾಗಿದೆ.
ಫೋರೆನ್ಸಿಕ್ ಜೆನೆಟಿಕ್ ವಂಶಾವಳಿ ಬಳಕೆಯ ಮೂಲಕ, ಬಲಿಪಶುವಿನ ಗುರುತು ಪತ್ತೆ ಮಾಡಲಾಯಿತು. ಸಂಬಂಧಿಯೊಬ್ಬಳ ಡಿಎನ್‌ಎ ಪರೀಕ್ಷೆಯು ಆಕೆಯ ವಂಶವೃಕ್ಷ ಮತ್ತು ದೂರದ ಕುಟುಂಬದ ಸಂಬಂಧಿಗಳೊಂದಿಗಿನ ಸಂಪರ್ಕದ ಬಗ್ಗೆ ಹಲವು ತಾಸುಗಳ ನಿರಂತರ ತನಿಖೆಯು ದೃಢಪಡಿಸಿದೆ.
ಡಿಎನ್‌ಎ ತಂತ್ರಜ್ಞಾನದಲ್ಲಿನ ಪ್ರಗತಿಯು ಪ್ರಕರಣವೊಂದರ ಬಗೆಗಿನ ಐದು ದಶಕಗಳ ಹತಾಶೆಯ ನಂತರ ಸತ್ಯವನ್ನು ಪತ್ತೆಹಚ್ಚಲು ಒದಗಿತೆಂದು ವರದಿ ಹೇಳಿದೆ. ಆಕೆಯ ಸಾವಿಗೆ ಯಾರು ಕಾರಣರು ಎಂಬುದರ ಕುರಿತು ತನಿಖೆ ಈಗ ನಡೆಯುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಬಲಿಪಶುಗಳು ಮತ್ತು ಶಂಕಿತರನ್ನು ಗುರುತಿಸಲು ತಳಿಶಾಸ್ತ್ರವನ್ನು ಹೆಚ್ಚು ಅವಲಂಬಿಸಲಾಗುತ್ತಿದೆ. ಇದಾಹೊದಲ್ಲಿನ ಪೊಲೀಸರು ಈ ತಿಂಗಳ ಆರಂಭದಲ್ಲಿ ನಾಲ್ಕು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಕೊಲೆಗಳಲ್ಲಿ ಶಂಕಿತ ವ್ಯಕ್ತಿಯನ್ನು ಗುರುತಿಸಲು ಕೂಡ ಇದೇ ಹಾದಿಯನ್ನು ಅನುಸರಿಸಿದ್ದರು.