ಉಡುಪಿ: ನಾಗಬನದಲ್ಲಿನ ಶ್ರೀಗಂಧ ಮರ ಕಳವು: ಆರೋಪಿ ಬಂಧನ
ಉಡುಪಿ: ಅಂಬಲಪಾಡಿ ಶ್ಯಾಮಲಿ ಸಭಾಭವನದ ಹಿಂಬದಿ ಸಿಪಿಸಿ ಲೇಔಟ್ ಎಂಬಲ್ಲಿನ ನಾಗಬನದಲ್ಲಿದ್ದ ಶ್ರೀಗಂಧ ಮರ ಕಡಿಯುತ್ತಿದ್ದ ವ್ಯಕ್ತಿ ಯೊಬ್ಬನನ್ನು ಉಡುಪಿ ಅರಣ್ಯ ಇಲಾಖೆಯವರು ಜ.25ರಂದು ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಡುಬೆಳ್ಳೆ ನಿವಾಸಿ ಅಶೋಕ ಬಂಧಿತ ಆರೋಪಿ. ನಾಗಬನದಲ್ಲಿನ ಶ್ರೀಗಂಧದ ಮರ ಕಡಿಯುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಉಡುಪಿ ವಲಯದ ಪ್ರಭಾರ ಉಪ ವಲಯ ಅರಣ್ಯ ಅಧಿಕಾರಿ ಕೇಶವ ಪೂಜಾರಿ ಎಂ. ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕರಾದ ಎಚ್.ದೇವರಾಜ ಪಾಣ, ಅಭಿಲಾಷ್ ಎಸ್.ಬಿ. ಮತ್ತು ವಿತೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯಿಂದ ಸುಮಾರು 43 ಕೆ.ಜಿ. ಹಸಿ ಶ್ರೀಗಂಧವನ್ನು ದಸ್ತಗಿರಿ ಮಾಡಲಾಗಿದೆ. ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ ಮಾರ್ಗದರ್ಶನದಂತೆ ಉಡುಪಿ ವಲಯದ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ ಆಚಾರ್ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ಘಟಕದ ಉಪ ವಲಯ ಅರಣ್ಯಾಧಿ ಕಾರಿ ಸುರೇಶ್ ಗಾಣಿಗ, ಪಡುಬಿದ್ರೆ ಘಟಕದ ಉಪ ವಲಯ ಅರಣ್ಯ ಅಧಿಕಾರಿ ಜೀವನದಾಸ ಶೆಟ್ಟಿ, ಕಾವು ಗಸ್ತು ಅರಣ್ಯ ಪಾಲಕರಾದ ಮಂಜುನಾಥ ಬಿ. ನಾಯ್ಕ, ವಾಹನ ಚಾಲಕ ಜೋಯಿ ಪಾಲ್ಗೊಂಡಿದ್ದರು.