ಬಿಬಿಸಿ ಸರಣಿ ನಿರ್ಬಂಧ ವಿರುದ್ಧದ ಮೇಲ್ಮನವಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಎರಡು ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಸಾಕ್ಷ್ಯಚಿತ್ರವನ್ನು ಸಾರ್ವಜನಿಕ ಡೊಮೇನ್ನಿಂದ ತೆಗೆದು ಹಾಕುವ ಆದೇಶದ ಮೂಲ ದಾಖಲೆಯನ್ನು ಕೇಳಿದೆ.
ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಲು ಹಾಗೂ ಸಾಮಾಜಿಕ ಮಾಧ್ಯಮದಿಂದ ಲಿಂಕ್ಗಳನ್ನು ತೆಗೆದು ಹಾಕುವ ತುರ್ತು ಅಧಿಕಾರಗಳ ಬಳಕೆಯನ್ನು ಅರ್ಜಿಗಳು ಪ್ರಶ್ನಿಸಿವೆ.
ನಿರ್ಬಂಧದ ಆದೇಶವನ್ನು ಕೇಂದ್ರ ಸರಕಾರವು ಔಪಚಾರಿಕವಾಗಿ ಪ್ರಕಟಿಸಿಲ್ಲ ಎಂದಿರುವ ವಕೀಲ ಎಂಎಲ್ ಶರ್ಮಾ ಅವರು ಎರಡು ಭಾಗಗಳನ್ನು ಹೊಂದಿರುವ ಸಾಕ್ಷ್ಯಚಿತ್ರದ ಮೇಲಿನ ನಿಷೇಧವನ್ನು "ದುಷ್ಕೃತ್ಯ, ಅನಿಯಂತ್ರಿತ ಹಾಗೂ ಅಸಂವಿಧಾನಿಕ" ಎಂದು ಕರೆದರು.
ಹಿರಿಯ ಪತ್ರಕರ್ತ ಎನ್. ರಾಮ್, ಸಾಮಾಜಿಕ ಹೋರಾಟಗಾರ-ವಕೀಲ ಪ್ರಶಾಂತ್ ಭೂಷಣ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
ಜನವರಿ 21 ರಂದು ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ತುರ್ತು ನಿಬಂಧನೆಗಳನ್ನು ಬಳಸಿಕೊಂಡು ಕೇಂದ್ರ ಸರಕಾರವು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ "India: The Modi Question"ಗೆ ಲಿಂಕ್ಗಳನ್ನು ಹಂಚಿಕೊಳ್ಳುವ ಹಲವು ಯೂಟ್ಯೂಬ್ ವೀಡಿಯೊಗಳು ಹಾಗೂ ಟ್ವಿಟರ್ ಪೋಸ್ಟ್ಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ.