ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಆ್ಯಂಟನಿ ಫೆರ್ನಾಂಡಿಸ್ ನಿಧನ
ಮಂಗಳೂರು: ಉತ್ತರ ಪ್ರದೇಶದ ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಉಡುಪಿ ಮೂಲದ ಆ್ಯಂಟನಿ ಫೆ ರ್ನಾಂಡಿಸ್ ಅವರು ಅನಾರೋಗ್ಯದಿಂದ ಫೆಬ್ರುವರಿ 3 ರಂದು ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
1936 ರಲ್ಲಿ ಉಡುಪಿ ಜಿಲ್ಲೆಯ ಕಳತ್ತೂರಿನಲ್ಲಿ ಜನಿಸಿದ ಅವರು ಶಿರ್ವ ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ವಾರಣಾಸಿ ಧರ್ಮ ಪ್ರಾಂತ್ಯಕ್ಕೆ ಸೇರ್ಪಡೆ ಹೊಂದಿದ್ದರು. ಲಕ್ನೋದಲ್ಲಿರುವ ಸೈಂಟ್ ಪಾವ್ಲ್ ಸೆಮಿನರಿ ಮತ್ತು ಅಲಹಾಬಾದ್ ನ ಸೈಂಟ್ ಜೋಸೆಫ್ ರೀಜನಲ್ ಸೇಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪೂರೈಸಿದ ಬಳಿಕ 1964 ಡಿಸೆಂಬರ್ 2 ರಂದು ಮುಂಬಯಿ ನಲ್ಲಿ ಪೋಪ್ ಅವರು ಭಾಗವಹಿಸಿದ್ದ ಯೂಕರಿಸ್ತಿಕ್ ಸಮಾವೇಶದಲ್ಲಿ ಗುರು ದೀಕ್ಷೆ ಪಡೆದಿದ್ದರು. 26 ವರ್ಷಗಳ ಕಾಲ ಧರ್ಮ ಗುರುಗಳಾಗಿ ವಾರಣಾಸಿ ಮತ್ತು ಗೋರಖ್ ಪುರ್ ನಲ್ಲಿ ಸೇವೆ ಸಲ್ಲಿಸಿದ್ದರು.
ವಿಕಾರ್ ಜನರಲ್ ಆಗಿ ವಾರಣಾಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 1989 ಜನವರಿ 19 ರಂದು ಬರೇಲಿಯ ಪ್ರಥಮ ಬಿಷಪ್ ಆಗಿ ನೇಮಗೊಂಡಿದ್ದರು. ಅದೇ ವರ್ಷ ಮಾರ್ಚ್ 29 ರಂದು ಸೈಂಟ್ ಅಲ್ಫೋನ್ಸಸ್ ಕಥೆಡ್ರಲ್ ನಲ್ಲಿ ಬಿಷಪ್ ದೀಕ್ಷೆ ಪಡೆದು ಅಧಿಕಾರ ವಹಿಸಿಕೊಂಡಿದ್ದರು. 2014 ನವೆಂಬರ್ ನಲ್ಲಿ ಅವರು ಬಿಷಪ್ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.