ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ: ದ.ಕ. ಜಿಲ್ಲೆಯ ಮೂವರು ಯುವಕರು ಮೃತ್ಯು
ಮಂಗಳೂರು: ಸೌದಿ ಅರೇಬಿಯಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಹಳೆಯಂಗಡಿ ಕದಿಕೆ ಜುಮಾ ಮಸೀದಿ ಬಳಿಯ ನಿವಾಸಿ ಬದ್ರುದ್ದೀನ್ ಎಂಬವರ ಪುತ್ರ ರಿಝ್ವಾನ್, ಮಂಗಳೂರು ಬೋಳಾರ ನಿವಾಸಿ ಅಖೀಲ್ ಹಾಗೂ ಬಂಟ್ವಾಳ ತಾಲೂಕಿನ ಪರ್ಲಿಯ ನಿವಾಸಿ ಸಿದ್ದೀಕ್ ಎಂಬವರ ಪುತ್ರ ಮುಹಮ್ಮದ್ ನಾಸಿರ್(23) ಮತ್ತು ಬಾಂಗ್ಲಾದೇಶದ ಶಿಹಾಬ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ 21-24ರೊಳಗಿನ ವಯಸ್ಸಿನವರೆಂದು ತಿಳಿದುಬಂದಿದೆ.
ಈ ನಾಲ್ವರು ರಿಯಾದ್ ಹೊರ ವಲಯದ ಅಲ್ ಖರ್ಜ್‌ನ ಅರಾದ್ ಎಂಬಲ್ಲಿ SAQCO ಎಂಬ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ರಾತ್ರಿ ಕೆಲಸ ಮುಗಿಸಿಕೊಂಡು ಕ್ಯಾಂಪ್‌ಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ರಸ್ತೆಯಲ್ಲಿ ಏಕಾಏಕಿ ಒಂಟೆಯೊಂದು ಅಡ್ಡ ಬಂದಿದೆ ಎನ್ನಲಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಒಂಟೆಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರೆಲ್ಲರೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರಾಗಿದ್ದರು. ಶುಕ್ರವಾರ ಕಂಪೆನಿಗೆ ವಾರದ ರಜೆ ಇದ್ದ ಕಾರಣ ಸ್ನೇಹಿತೆರೆಲ್ಲರೂ ಅಲ್‌ಖರ್ಜ್‌ನಿಂದ ಅಲ್ ಖೋಬರ್‌ನಲ್ಲಿರುವ ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ತೆರಳಿದ್ದರು. ಅಲ್ಲಿಂದ ಅಲ್‌ಖರ್ಜ್‌ಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೃತದೇಹಗಳನ್ನು ಅಲ್ ಹಸ್ಸಾ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ. ಮೃತದೇಹಗಳನ್ನು ತವರಿಗೆ ತರುವ ಕುರಿತು ಮೃತ ಯುವಕರೊಂದಿಗೆ ಕೆಲಸ ಮಾಡುತ್ತಿರುವ ಮಂಗಳೂರಿನ ಯುವಕರ ತಂಡ ಕಾರ್ಯನಿರತವಾಗಿದ್ದು, ಸರಕಾರ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕುಟುಂಬದ ಆಧಾರಸ್ತಂಭವಾಗಿದ್ದ ರಿಝ್ವಾನ್
ಮೃತರ ಪೈಕಿ ರಿಝ್ವಾನ್ ಹಳೆಯಂಗಡಿ ಕದಿಕೆ ಜುಮಾ ಮಸೀದಿ ಬಳಿಯ ನಿವಾಸಿಯಾಗಿದ್ದು, ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ಪುತ್ರ. ಉಳಿದ ಮೂವರು ಪುತ್ರಿಯರಾಗಿದ್ದಾರೆ.
SAQCO ಕಂಪೆನಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ ರಿಝ್ವಾನ್ ಸಹೋದರಿಯೊಬ್ಬಳ ಅನಾರೋಗ್ಯದ ಕಾರಣ ಆಗಮಿಸಿದ್ದರು. ಬಳಿಕ ನಾಲ್ಕು ತಿಂಗಳ ಹಿಂದೆಯಷ್ಟೇ ಸೌದಿ ಅರೆಬಿಯಾಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.
ಬದ್ರುದ್ದೀನ್ ಪಾರ್ಶ್ವವಾಯು ಪೀಡಿತರಾಗಿದ್ದು, ರಿಝ್ವಾನ್ ಮನೆಯ ಆಧಾರ ಸ್ಥಂಭವಾಗಿದ್ದ. ಸದ್ಯ ಆತನನ್ನೂ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.