varthabharthi


ಸಂಪಾದಕೀಯ

ದಲಿತರ ಮನೆಯಲ್ಲಿ ರಾಜಕಾರಣಿಗಳ ಉಪಾಹಾರ: ಜಾತಿ ನಿಂದನೆಯ ಹೊಸ ರೂಪ!

ವಾರ್ತಾ ಭಾರತಿ : 6 Feb, 2023

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಚಿಕ್ಕಮಗಳೂರಿನಲ್ಲಿ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ ಕಂದಾಯ ಸಚಿವ ಆರ್. ಅಶೋಕ್, ದಲಿತರೊಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ‘ದಲಿತರ ಮನೆಯಲ್ಲಿ ಉಪಾಹಾರ’ ಪ್ರಹಸನವನ್ನು ಹಮ್ಮಿ ಕೊಳ್ಳುವುದು ಸುದ್ದಿಯಾಗುವುದಕ್ಕೆ ಇರುವ ಸುಲಭ ದಾರಿ ಎನ್ನುವುದನು ರಾಜಕಾರಣಿಗಳು ಕಂಡುಕೊಂಡಂತಿದೆ. ದಲಿತರ ಮನೆಯಲ್ಲಿ ಉಪಾಹಾರ ಸೇವಿಸುವುದೇ ಬಹುದೊಡ್ಡ ತ್ಯಾಗ ಮತ್ತು ದಲಿತರಿಗೆ ನೀಡುವ ನೆರವು ಎನ್ನುವ ರೀತಿಯಲ್ಲಿ ಮೇಲ್‌ಜಾತಿಗೆ ಸೇರಿದ ರಾಜಕಾರಣಿಗಳು ಮಾಧ್ಯಮಗಳಲ್ಲಿ ಬಿಂಬಿಸುತ್ತಿದ್ದಾರೆ. ಸಮಾಜದಲ್ಲಿ ಇತರ ಯಾವುದೇ ಮೇಲ್ ಜಾತಿಗಳ ಮನೆಯಲ್ಲಿ ರಾಜಕಾರಣಿಗಳು ಉಪಾಹಾರ ಸೇವಿಸುವುದು ಸುದ್ದಿಯಾಗುವುದಿಲ್ಲ ಎಂದಾದರೆ, ದಲಿತರ ಮನೆಯಲ್ಲಿ ಉಪಾಹಾರ ಸೇವಿಸುವುದು ಯಾಕೆ ಸುದ್ದಿಯಾಗಬೇಕು? ಮಹಾತ್ಮಾ ಗಾಂಧೀಜಿಯವರು ದಲಿತರನ್ನು ‘ಹರಿಜನರು’ ಎಂದು ಕರೆದಾಗ ಇದೇ ಕಾರಣಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರು ವಿರೋಧಿಸಿದ್ದರು. ‘ದಲಿತರು ಹರಿಯ ಮಕ್ಕಳಾದರೆ, ಉಳಿದವರೆಲ್ಲ ದೆವ್ವದ ಮಕ್ಕಳೆ?’ ಎಂದು ಅವರು ಆಕ್ರೋಶಿತರಾಗಿ ಕೇಳಿದ್ದರು. ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದಂತೆ ನಟಿಸುವುದು ಪರೋಕ್ಷವಾಗಿ ಅವರ ಜಾತಿಯನ್ನು ಉಲ್ಲೇಖಿಸಿ ಅವರನ್ನು ಅಣಕಿಸಿದಂತೆಯೇ ಹೊರತು, ಅದರಿಂದ ದಲಿತರಿಗೆ ಇನ್ನಾವ ಲಾಭವೂ ಆಗುವುದಿಲ್ಲ. ರಾಜಕಾರಣಿಗಳು ‘ಹೊಟೇಲಿನಿಂದ ತಂದ’ ಉಪಾಹಾರವನ್ನು ದಲಿತರ ಮನೆಯಲ್ಲಿ ಸೇವಿಸಿದಾಕ್ಷಣ ಆ ಊರಿನ ಜನರೆಲ್ಲ ಜಾತಿ ಭೇದವನ್ನು ಮರೆತು ಆ ಮನೆಯಜೊತೆಗೆ ಬಾಂಧವ್ಯವನ್ನು ಬೆಸೆಯುವುದಿಲ್ಲ. ರಾಜಕಾರಣಿಗಳು ಉಪಾಹಾರ ಸೇವಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಆ ಮನೆಗೆ ಊರಿನ ದೇವಸ್ಥಾನದೊಳಗೆ ಪ್ರವೇಶವೂ ಸಿಗುವುದಿಲ್ಲ.

 ರಾಜಕಾರಣಿಗಳಿಗೆ ಜಾತಿ ಅಸ್ಪಶ್ಯತೆ ಸದಾ ಅಸ್ತಿತ್ವದಲ್ಲಿರಬೇಕು. ಇವು ಇಲ್ಲದೇ ಇದ್ದರೆ ಉಪಾಹಾರ ಸೇವಿಸಿ, ‘ಚುನಾವಣಾ ಕಾಲದ ಕ್ರಾಂತಿ’ಯನ್ನು ಮೆರೆಯಲು ಅವರಿಗೆ ಮನೆ ಎಲ್ಲಿದೆ? ಜಾತಿಯನ್ನು ಮುರಿಯಲು ಈ ಹಿಂದೆಯೂ ಮಹಾನ್ ನಾಯಕರು ಬಹಳಷ್ಟು ಕ್ರಾಂತಿಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದರು. ಬಾಲಗಂಗಾಧರ ತಿಲಕ್ ಪ್ರಖರ ಜಾತಿವಾದಿಯಾಗಿದ್ದರು. ಆದರೆ ಅವರ ಪುತ್ರ ಶ್ರೀಧರ ಪಂತ ತಿಲಕ್ ಅವರು ಅಂಬೇಡ್ಕರ್ ಸಹಿತ ಅವರೆಲ್ಲ ಅನುಯಾಯಿಗಳನ್ನು ತಮ್ಮ ಮನೆಗೆ ಕರೆಯಿಸಿ ಚಹಾಕೂಟವನ್ನು ಏರ್ಪಡಿಸಿದ್ದರು. ಡಾ. ಬಿ. ಆರ್. ಅಂಬೇಡ್ಕರ್ ದಲಿತರನ್ನು ಒಟ್ಟು ಸೇರಿಸಿ ಸಾರ್ವಜನಿಕ ಕೆರೆಯ ನೀರನ್ನು ಕುಡಿಸುವ ಮೂಲಕ ಅಸ್ಪಶ್ಯತೆಯನ್ನು ವಿರೋಧಿಸಿದ್ದರು. ಈಗಲೂ ಸಾರ್ವಜನಿಕ ನೀರನ್ನು ಸೇವಿಸುವ ಅಧಿಕಾರ ದಲಿತರಿಗಿಲ್ಲ. ಬಿಜೆಪಿಯ ನಾಯಕರಿಗೆ ನಿಜಕ್ಕೂ ಜಾತಿಯ ಕುರಿತಂತೆ ನಂಬಿಕೆಯಿಲ್ಲ ಎಂದಾದರೆ, ದಲಿತರೂ ಇತರ ಹಿಂದೂಗಳಂತೆ ಸಮಾನರು ಎನ್ನುವುದನ್ನು ಪ್ರತಿಪಾದಿಸುವ ಉದ್ದೇಶವನ್ನು ಹೊಂದಿದ್ದರೆ, ತಮ್ಮ ನೇತೃತ್ವದಲ್ಲಿ ದಲಿತರನ್ನು ಕರೆದುಕೊಂಡು ಹತ್ತಿರದ ದೇವಸ್ಥಾನವನ್ನು ಪ್ರವೇಶಿಸಬೇಕು. ಅಂತಹ ಪ್ರಯತ್ನಗಳಿಂದ ಮಾತ್ರ ದಲಿತರು ಆ ಸಮಾಜದಲ್ಲಿ ಸಮಾನತೆಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯ. ಆದರೆ ಆ ಪ್ರಯತ್ನವನ್ನು ಯಾವುದೇ ರಾಜಕಾರಣಿಗಳು ಈವರೆಗೆ ಮಾಡಿಲ್ಲ. ಉಡುಪಿಯ ಕೃಷ್ಣ ಮಠದಲ್ಲಿ ದಲಿತರ ಜೊತೆಗೆ ಸಮಾನ ಪಂಕ್ತಿಯಲ್ಲಿ ಕುಳಿತು ಈ ರಾಜಕಾರಣಿಗಳು ಊಟವನ್ನು ಮಾಡಲಿ. ದಲಿತರಿಗೆ ಸಮಾನ ಪಂಕ್ತಿಯನ್ನು ಒದಗಿಸಲು ಅಲ್ಲಿನ ಸ್ವಾಮೀಜಿಯ ಜೊತೆಗೆ ಕನಿಷ್ಠ ಮಾತುಕತೆ ನಡೆಸುವ ಪ್ರಯತ್ನವನ್ನೂ ಈ ನಾಯಕರು ಮಾಡಿಲ್ಲ. ಇಂತಹ ನಾಯಕರು, ದಲಿತರ ಮನೆಯಲ್ಲಿ ಉಪಾಹಾರ ಮಾಡಿ ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸುವುದೆಂದರೆ, ಪರೋಕ್ಷವಾಗಿ ದಲಿತರ ‘ಜಾತಿ’ಯನ್ನು ಅಣಕಿಸುವುದೇ ಆಗಿದೆ.

ಕರ್ನಾಟಕದಲ್ಲಿ ನಿರಂತರವಾಗಿ ಜಾತಿ ದೌರ್ಜನ್ಯಗಳು ನಡೆಯುತ್ತಿವೆ. ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕೆ, ದೇವರ ಕಂಬವನ್ನು ಮುಟ್ಟಿದ್ದಕ್ಕೆ ಅವರ ಮೇಲೆ ಹಲ್ಲೆಗಳು ನಡೆದಿವೆ. ಇಂತಹ ಸಂದರ್ಭಗಳಲ್ಲಿ ಕನಿಷ್ಠ ಒಂದು ಖಂಡನೆಯನ್ನು ವ್ಯಕ್ತಪಡಿಸುವ ಧೈರ್ಯವನ್ನೂ ಬಿಜೆಪಿಯ ನಾಯಕರು ಪ್ರದರ್ಶಿಸಿಲ್ಲ. ಜಾತಿ ದೌರ್ಜನ್ಯ ಎಸಗಿದ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ನೀಡಲಿಲ್ಲ. ಎಲ್ಲಿ ಜಾತಿ ಕಾರಣದಿಂದ ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆಯೋ ಆ ಸ್ಥಳಕ್ಕೆ ತಕ್ಷಣವೇ ತೆರಳಿ ದಲಿತರ ಜೊತೆಗೆ ನಿಂತು ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ರಾಜಕೀಯ ನಾಯಕರು ಮಾಡಬೇಕು. ‘ಹಿಂದೂಗಳೆಲ್ಲ ಒಂದು’ ಎಂದು ಪದೇ ಪದೇ ಸಾರ್ವಜನಿಕ ವೇದಿಕೆಗಳಲ್ಲಿ ಘೋಷಿಸುವ ಬಿಜೆಪಿ ನಾಯಕರು ಜಾತಿ ದೌರ್ಜನ್ಯದ ವಿರುದ್ಧ ಮುಂಚೂಣಿಯಲ್ಲಿ ನಿಂತು ಧ್ವನಿಯೆತ್ತಬೇಕು. ಆದರೆ ಇಂತಹ ಸಂದರ್ಭಗಳಲ್ಲಿ ಒಳಗೊಳಗೆ ಮೇಲ್‌ಜಾತಿಯ ಜನರ ಜೊತೆಗೆ ಕೈ ಜೋಡಿಸುವ ನಾಯಕರು ಚುನಾವಣೆಯ ಹೊತ್ತಿಗೆ ದಲಿತರ ಮನೆಯಲ್ಲಿ ಉಪಾಹಾರದ ನಾಟಕವಾಡುವುದು ನಾಚಿಗೆಗೇಡಿನ ಸಂಗತಿಯಾಗಿದೆ. ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ದಲಿತರ ಬದುಕನ್ನು ಹಸನುಗೊಳಿಸುವುದೇ ಸಮಾಜದಲ್ಲಿ ದಲಿತರನ್ನು ಮೇಲೆತ್ತಲು ಇರುವ ಏಕೈಕ ದಾರಿ.

ಮೀಸಲಾತಿ ಜಾರಿಗೊಂಡು ಹಲವು ದಶಕಗಳು ಕಳೆದಿವೆಯಾದರೂ, ಇಂದಿಗೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಇದೀಗ ಮೇಲ್‌ಜಾತಿಯ ಜನರಿಗೆ ಶೇ. 10 ಮೀಸಲಾತಿಯನ್ನು ನೀಡುವ ಮೂಲಕ, ದಲಿತರ ಶೋಷಕರನ್ನು ಇನ್ನಷ್ಟು ಸಬಲರನ್ನಾಗಿಸಿ ದಲಿತರನ್ನು ಕೆಳಗೆ ತುಳಿಯುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನಕ್ಕೆ ಬಿಜೆಪಿ, ಕಾಂಗ್ರೆಸ್‌ನೊಳಗಿರುವ ನಾಯಕರು ಬಹಿರಂಗ ಬೆಂಬಲವನ್ನು ನೀಡುತ್ತಿದ್ದಾರೆ. ಒಂದೆಡೆ ಬೇರೆ ಬೇರೆ ತಂತ್ರಗಳ ಮೂಲಕ ದಲಿತರ ಮೀಸಲಾತಿಯನ್ನು ಸಂಕುಚಿತಗೊಳಿಸಿ, ಮೇಲ್‌ಜಾತಿಗಳಿಗೆ ಮೀಸಲಾತಿ ಸೌಲಭ್ಯಗಳನ್ನು ವಿಶಾಲಗೊಳಿಸಿರುವ ರಾಜಕೀಯ ನಾಯಕರು, ದಲಿತರ ಮನೆ ವಾಸ್ತವ್ಯದ ಪ್ರಹಸನ ನಡೆಸುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳ ಪಾಲಿನ ಸ್ಕಾಲರ್ ಶಿಪ್‌ಗಳನ್ನು ಸರಕಾರ ಹಂತ ಹಂತವಾಗಿ ಕಿತ್ತುಕೊಳ್ಳುತ್ತಿದೆ. ದಲಿತ ರ ಶಿಕ್ಷಣಕ್ಕಾಗಿ ನೀಡುವ ಅನುದಾನಗಳಲ್ಲಿ ಇಳಿಕೆಯಾಗಿದೆ. ಬ್ಯಾಕ್‌ಲಾಕ್ ಹುದ್ದೆಗಳನ್ನು ತುಂಬದೆ, ಆ ಜಾಗದಲ್ಲಿ ಮೇಲ್‌ಜಾತಿಯ ಅಭ್ಯರ್ಥಿಗಳನ್ನು ಅನಧಿಕೃತವಾಗಿ ಮುಂದುವರಿಸಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ದಲಿತರಿಗೆ ಅನ್ಯಾಯಗಳೇ ಆಗುತ್ತಿವೆ. ಹೀಗಿರುವಾಗ, ದಲಿತರ ಮನೆಯಲ್ಲಿ ರಾಜಕೀಯ ನಾಯಕರ ಉಪಾಹಾರ ಸೇವನೆಯನ್ನು, ದಲಿತ ಜಾತಿಯ ಅಣಕವೆಂದಲ್ಲದೆ ಇನ್ನೇನೆಂದು ಕರೆಯೋಣ? ರಾಜಕಾರಣಿಗಳು ದಲಿತರ ಮನೆಯಲ್ಲಿ ಉಪಾಹಾರ ಸೇವನೆಯ ಬಗ್ಗೆ ಹೇಳಿಕೆ ನೀಡಿದರೆ ಅವರ ಮೇಲೆ ಜಾತಿ ನಿಂದನೆಯ ಪ್ರಕರಣವನ್ನು ದಾಖಲಿಸುವುದೊಂದೇ ದಲಿತರ ಮುಂದಿರುವ ದಾರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)