ಇನ್ನಷ್ಟು ದಪ್ಪಗಾಗುತ್ತಿರುವ ಭಾರತೀಯರು, ಶ್ರೀಮಂತ ಮಹಿಳೆಯರಲ್ಲೇ ಹೆಚ್ಚು ಬೊಜ್ಜಿನ ಸಮಸ್ಯೆ: ವರದಿ
ಹೊಸದಿಲ್ಲಿ: ಭಾರತದಲ್ಲಿ ಪ್ರತಿ 16 ಮಹಿಳೆಯರಲ್ಲಿ ಒಬ್ಬರು ಮತ್ತು ಪ್ರತಿ 25 ಪುರುಷರಲ್ಲಿ ಒಬ್ಬರು ಬೊಜ್ಜು ಹೊಂದಿದ್ದಾರೆ ಮತ್ತು ಭಾರತೀಯರು ಕಳೆದ 15 ವರ್ಷಗಳಿಂದ ದಪ್ಪಗಾಗುತ್ತಲೇ ಇದ್ದಾರೆ ಎನ್ನುವುದನ್ನು ಇತ್ತೀಚಿನ ಮತ್ತು ಐದನೇ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)ಯ ಡೇಟಾ ತೋರಿಸಿದೆ.
ThePrint ಕೈಗೊಂಡ ಎನ್ಎಫ್ಎಚ್ಎಸ್ ಅಂಕಿಅಂಶಗಳ ವಿವರವಾದ ವಿಶ್ಲೇಷಣೆಯು ಬೊಜ್ಜು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಕಾಡುತ್ತಿದೆ ಮತ್ತು ತುಲನಾತ್ಮಕವಾಗಿ ಶ್ರೀಮಂತರಲ್ಲಿ (ವಿಶೇಷವಾಗಿ ಮತ್ತೆ ಮಹಿಳೆಯರು) ಕಂಡು ಬರುತ್ತಿದೆ. ಮಧ್ಯವಯಸ್ಕರಲ್ಲಿಯೂ ಬೊಜ್ಜು ಸಾಮಾನ್ಯವಾಗುತ್ತಿದೆ.
2019 ಮತ್ತು 2021ರ ನಡುವೆ ನಡೆಸಲಾದ ಐದನೇ ಸುತ್ತಿನ ಎನ್ಎಫ್ಎಚ್ಎಸ್ ಸಮೀಕ್ಷೆಯಂತೆ 15ರಿಂದ 49 ವರ್ಷ ವಯೋಮಾನದ ಸುಮಾರು ಶೇ.6.4ರಷ್ಟು ಮಹಿಳೆಯರು ಮತ್ತು ಶೇ.4ರಷ್ಟು ಮಹಿಳೆಯರು ಸ್ಥೂಲಕಾಯವನ್ನು ಹೊಂದಿದ್ದಾರೆ. ಇದೇ ವಯೋಗುಂಪಿನಲ್ಲಿ ಶೇ.17.6ರಷ್ಟು ಮಹಿಳೆಯರು ಮತ್ತು ಶೇ.18.9ರಷ್ಟು ಪುರುಷರು ಅಧಿಕ ತೂಕವನ್ನು ಹೊಂದಿದ್ದಾರೆ. ಅಂದರೆ ಭಾರತದಲ್ಲಿ ಸುಮಾರು ಕಾಲು ಭಾಗದಷ್ಟು ಯುವಮಹಿಳೆಯರು ಮತ್ತು ಸುಮಾರು ಐದನೇ ಒಂದರಷ್ಟು ಪುರುಷರು ಅಧಿಕ ತೂಕದವರಾಗಿದ್ದಾರೆ.
ವ್ಯಕ್ತಿಯ ಬಯೊಮಾಸ್ ಇಂಡೆಕ್ಸ್ (BMI) 30ಕ್ಕಿಂತ ಹೆಚ್ಚಿದ್ದರೆ ಆ ವ್ಯಕ್ತಿ ಬೊಜ್ಜು ಹೊಂದಿರುವುದಾಗಿ ಹಾಗೂ ಬಿಎಂಐ 25 ಮತ್ತು 30ರ ನಡುವೆಯಿದ್ದರೆ ಬೊಜ್ಜನ್ನು ಹೊಂದಿಲ್ಲ,ಆದರೆ ಅಧಿಕ ತೂಕವನ್ನು ಹೊಂದಿರುವುದಾಗಿ ಪರಿಗಣಿಸಲಾಗುತ್ತದೆ.
ಪ್ರಾದೇಶಿಕ ವ್ಯತ್ಯಾಸಗಳೂ ಇವೆ,ಕೆಲವು ಸ್ಥಳಗಳಲ್ಲಿ ಮಹಿಳೆಯರು ಪುರುಷರಿಗಿಂತ ಬಹಳಷ್ಟು ಹೆಚ್ಚು ಬೊಜ್ಜು ಹೊಂದಿರುವ ಸಾಧ್ಯತೆಗಳಿವೆ. ಉದಾಹರಣೆಗೆ ದಿಲ್ಲಿಯಲ್ಲಿ ಶೇ.14.2ರಷ್ಟು ಮಹಿಳೆಯರು ಬೊಜ್ಜು ಹೊಂದಿದ್ದರೆ ಕೇವಲ ಶೇ.7ರಷ್ಟು ಪುರುಷರು ಈ ವರ್ಗಕ್ಕೆ ಸೇರಿದ್ದಾರೆ ಎನ್ನುವುದನ್ನು ಸಮೀಕ್ಷೆಯು ತೋರಿಸಿದೆ.
ಪುರುಷರಿಗಿಂತ ಮಹಿಳೆಯರು ಹೆಚ್ಚು ಬೊಜ್ಜು ಹೊಂದಿರುವುದಕ್ಕೆ ಸಂಭಾವ್ಯ ಕಾರಣಗಳನ್ನು ವಿವರಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ಅಂಗಸಂಸ್ಥೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ನ ನಿರ್ದೇಶಕಿ ಡಾ.ಹೇಮಲತಾ ಆರ್.ಅವರು,ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಮೆಟಾಬಾಲಿಸಂ ಅಥವಾ ಚಯಾಪಚಯ ದರವನ್ನು ಹೊಂದಿದ್ದಾರೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅಲ್ಲದೆ ಒಂದೇ ರೀತಿಯ ದೈಹಿಕ ಚಟುವಟಿಕೆಗಾಗಿ ಮಹಿಳೆಯರು ವ್ಯಯಿಸುವ ಶಕ್ತಿಯ ಪ್ರಮಾಣವು ಪುರುಷರಿಗಿಂತ ಕಡಿಮೆಯಾಗಿರುತ್ತದೆ. ಶರೀರದ ಸಂಯೋಜನೆ, ಹಾರ್ಮೋನ್ಗಳಲ್ಲಿಯ ವ್ಯತ್ಯಾಸಗಳೂ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದರು.
ಬೊಜ್ಜು ಮತ್ತು ಶ್ರೀಮಂತಿಕೆ ಸಂಗಾತಿಗಳಾಗಿವೆ ಎನ್ನುವುದನ್ನು ಎನ್ಎಫ್ಎಚ್ಎಸ್ ಡಾಟಾ ಸೂಚಿಸಿದೆ. ಶ್ರೀಮಂತ ಮಹಿಳೆಯರನ್ನೇ ಬೊಜ್ಜು ಹೆಚ್ಚಾಗಿ ಕಾಡುತ್ತದೆ.
ಭಾರತದಲ್ಲಿ ಸಿರಿವಂತಿಕೆಯ ಪಿರಮಿಡ್ನ ತುದಿಯಲ್ಲಿರುವ ಅತ್ಯಂತ ಶ್ರೀಮಂತ ಶೇ.20ರಷ್ಟು ಜನಸಂಖ್ಯೆ ಗುಂಪಿನಲ್ಲಿ ಶೇ.12.6ರಷ್ಟು (ಪ್ರತಿ ಎಂಟರಲ್ಲಿ ಓರ್ವರು) ಮಹಿಳೆಯರು ಬೊಜ್ಜು ದೇಹದವರಾಗಿದ್ದಾರೆ. ಇದೇ ವೇಳೆ ಪಿರಮಿಡ್ನ ತಳದಲ್ಲಿರುವ ಶೇ.20ರಷ್ಟು ಜನಸಂಖ್ಯೆಯ ಗುಂಪಿನಲ್ಲಿ ಕೇವಲ ಶೇ.1.6ರಷ್ಟು ಮಹಿಳೆಯರು ಬೊಜ್ಜು ಹೊಂದಿದ್ದಾರೆ. ಇದು ಪುರುಷರಲ್ಲಿ ಅನುಕ್ರಮವಾಗಿ ಶೇ.8 ಮತ್ತು ಶೇ.1.2 ಆಗಿದೆ. ಹಿಂದಿನ ವರ್ಷಗಳ ಪ್ರವೃತ್ತಿಯು ಎಲ್ಲ ಆದಾಯ ಗುಂಪುಗಳಲ್ಲಿ ಬೊಜ್ಜು ಹೆಚ್ಚಾಗಿದೆ ಎನ್ನುವುದನ್ನು ತೋರಿಸಿದೆ. ಮಧ್ಯಮ ಅಥವಾ ಅತ್ಯಂತ ಹೆಚ್ಚು ಶ್ರೀಮಂತರ ಗುಂಪುಗಳಲ್ಲಿ ಬೊಜ್ಜಿನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ ಎನ್ನುವುದನ್ನು ವಿಶ್ಲೇಷಣೆಯು ತೋರಿಸಿದೆ.
ಶ್ರೀಮಂತರಲ್ಲಿ ಬೊಜ್ಜು ಏಕೆ ಹೆಚ್ಚು ಎನ್ನುವುದಕ್ಕೆ ಕಾರಣಗಳನ್ನು ವಿವರಿಸಿದ ಡಾ.ಹೇಮಲತಾ ಆರ್.,ಶ್ರೀಮಂತರಿಗೆ ಹೆಚ್ಚು ಖರೀದಿ ಶಕ್ತಿ ಇರುತ್ತದೆಯಾದರೂ,ಅವರು ಆರೋಗ್ಯಕರ ಆಹಾರಗಳಿಗಾಗಿ ವೆಚ್ಚ ಮಾಡುತ್ತಾರೆ ಎನ್ನುವುದು ಖಚಿತವಿಲ್ಲ. ಸಂಸ್ಕರಿತ ಆಹಾರ ಮತ್ತು ಸಕ್ಕರೆಯನ್ನು ಒಳಗೊಂಡ ಖಾದ್ಯಗಳ ಬಳಕೆ ಹೆಚ್ಚುತ್ತಿದ್ದು, ಇವು ಅತಿಯಾದ ಕ್ಯಾಲರಿಗಳು,ಸಕ್ಕರೆ ಮತ್ತು ಕಳಪೆ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತವೆ. ಶ್ರೀಮಂತರಿಗೆ ಇಂತಹ ಆಹಾರ ಸೇವನೆಯು ಗೀಳಾಗಿ ಪರಿಣಮಿಸಬಹುದು. ಜೀವನ ಶೈಲಿಯಲ್ಲಿ ಬದಲಾವಣೆಯೊಂದಿಗೆ ಕಡಿಮೆ ದೈಹಿಕ ಚಟುವಟಿಕೆಗಳು ಮತ್ತು ಇಂತಹ ಆಹಾರಗಳ ಸೇವನೆಯು ಬೊಜ್ಜನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಕೃಪೆ: ThePrint