ಮಲಿನಗೊಂಡ ಜೀವನದಿಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದ ಪ್ರಮುಖ ಜೀವನದಿಗಳಾದ ಕಾವೇರಿ, ಕೃಷ್ಣಾ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಕಾರಂಜಾ ಸೇರಿದಂತೆ ಹದಿನೇಳು ನದಿಗಳ ನೀರು ಕುಡಿಯಲು ಯೋಗ್ಯವಲ್ಲ. ಸಂಸ್ಕರಿಸದೆ ಈ ನದಿಗಳ ನೀರನ್ನು ಕುಡಿಯುವಂತಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇತ್ತೀಚಿನ ವರದಿ ತಿಳಿಸಿದೆ. ರಾಜ್ಯದ ಜಲಮೂಲಗಳ ತಪಾಸಣಾ ಕೇಂದ್ರಗಳಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಕಳೆದ 2022ರ ಭಾರೀ ಮಳೆಗಾಲ ಮತ್ತು ಪ್ರವಾಹದ ನಂತರ ಮಾಲಿನ್ಯದ ಪ್ರಮಾಣ ಕಡಿಮೆಯಾಗಬೇಕಾಗಿತ್ತು. ತದ್ವಿರುದ್ಧವಾಗಿ ಹೆಚ್ಚಾಗಿದೆ. ನದಿಗಳು ಈ ರೀತಿ ಮಲಿನಗೊಂಡು ಕುಡಿಯುವ ನೀರು ಪ್ರಾಣ ಘಾತುಕವಾಗುತ್ತಿರುವಾಗ ಅದನ್ನು ನಿಯಂತ್ರಿಸಲಾಗದ ಸರಕಾರ ಹರಿಹರದ ಬಳಿ ಉತ್ತರ ಭಾರತದ ಗಂಗಾರತಿ ಮಾದರಿಯಲ್ಲಿ ತುಂಗಾರತಿ ಮಾಡಿ ತನ್ನ ಅಜೆಂಡಾ ಮೂಲಕ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ನದಿ ನೀರಿನಲ್ಲಿ ಆಮ್ಲಜನಕದ ಕೊರತೆ ಎಷ್ಟಿದೆಯೆಂಬುದನ್ನು ಮಾತ್ರ ಹೇಳಿದೆ. ಆದರೆ ಕಂಟಕಕಾರಿಯಾದ ಕೀಟ ನಾಶಕ ಅಂಶಗಳು, ನೈಟ್ರೇಟ್ ಲವಣಗಳು, ಆ್ಯಂಟಿ ಬಯಾಟಿಕ್ ದ್ರಾವಣದ ಮಾಹಿತಿ ಇದರಲ್ಲಿ ಇಲ್ಲ. ಮುಖ್ಯವಾಗಿ ಪ್ಲಾಸ್ಟಿಕ್ ಮಾಲಿನ್ಯದ ಉಲ್ಲೇಖವಿಲ್ಲ. ಮಲಿನಗೊಂಡ ನದಿ ನೀರಿನಲ್ಲಿ ಜಲಚರಗಳು ಹೇಗೆ ಬದುಕುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಇಂತಹ ವರದಿಯನ್ನು ನೀಡುವ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಮುಖವನ್ನು ತಾನೇ ತೋರಿಸಿಕೊಂಡಿದೆ.ಮಾಲಿನ್ಯ ನಿಯಂತ್ರಣ ಮಂಡಳಿ ಇರುವುದು ನದಿಗಳಲ್ಲಿ ಕೊಳೆ, ಕಸ, ಕಾರ್ಖಾನೆಗಳ ತ್ಯಾಜ್ಯವನ್ನು ಚೆಲ್ಲುವವರ ಮೇಲೆ ನಿಗಾ ಇಡಲು, ತಪ್ಪುಮಾಡಿದವರನ್ನು ಶಿಕ್ಷಿಸಲು. ತನ್ನ ಕೆಲಸವನ್ನು ತಾನು ಸರಿಯಾಗಿ ಮಾಡದ ಈ ಮಂಡಳಿ ಅಸ್ತಿತ್ವದಲ್ಲಿರುವುದು ಮಾಲಿನ್ಯ ಮಾಡುವ ಉದ್ದಿಮೆಗಳಿಗೆ ನಿರಾಕ್ಷೇಪಣಾ ಪತ್ರ ಕೊಡಲೆಂಬಂತಾಗಿದೆ.
ರಾಜ್ಯದ ನದಿಗಳಿಗೆ 106 ಕೋಟಿ ಲೀಟರ್‌ಗಳಷ್ಟು ಕೊಳಚೆ ನೀರು ಸೇರುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2021ರ ಡಿಸೆಂಬರ್‌ನಲ್ಲಿ ವರದಿ ನೀಡಿತ್ತು. ಈಗ ಈ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು. ಹರಿಹರದ ಬಳಿ ಹರಿಯುವ ತುಂಗಭದ್ರಾ ನದಿ ಸೇರಿದಂತೆ ಬಹುತೇಕ ನದಿಗಳಿಗೆ ಅತ್ಯಂತ ಅಪಾಯಕಾರಿಯಾದ ಕಾರ್ಖಾನೆಗಳ ತ್ಯಾಜ್ಯ ಸೇರ್ಪಡೆಯಾಗುತ್ತದೆ. ಇದನ್ನು ನಿಯಂತ್ರಿಸಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲಗೊಂಡಿದೆ. ನದಿಗಳ ಅಂಚಿನ ನಗರ, ಪಟ್ಟಣಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶುದ್ಧೀಕರಣ ಘಟಕಗಳಿಲ್ಲ. ನದಿಗಳ ಶುದ್ಧೀಕರಣಕ್ಕಾಗಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಈ ಮಂಡಳಿ ರೂಪಿಸಿಲ್ಲ. ಅಟಲ್ ಮಿಷನ್, ಸ್ಮಾರ್ಟ್ ಸಿಟೀಸ್ ಮಿಷನ್ ಹೆಸರಿನಲ್ಲಿ ಕೇಂದ್ರ ಜಲಶಕ್ತಿ ಇಲಾಖೆ ವ್ಯಯಿಸುವ ಹಣ ವ್ಯರ್ಥವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆಗಾಗ ನೀಡುವ ಎಚ್ಚರಿಕೆ ಅರಣ್ಯ ರೋದನವಾಗಿದೆ
ಎಲ್ಲವನ್ನೂ ಪೂಜಿಸುವ ನಾವು ನದಿಗಳಿಗೂ ಪವಿತ್ರ ಸ್ಥಾನಮಾನ ನೀಡಿ ಪ್ರಾಣ ಪೋಷಿಣಿ, ಜೀವದಾಯಿನಿ ಎಂದು ಕರೆಯುತ್ತೇವೆ. ನಮ್ಮ ರಾಜಕಾರಣಿಗಳು ತಮ್ಮಿಂದಲೇ ಮಳೆ ಸುರಿದು ನದಿಗಳು ತುಂಬಿವೆ ಎಂಬಂತೆ ವರ್ಷಕ್ಕೊಮ್ಮೆ ನದಿಗಳಿಗೆ ಬಾಗಿನ ಅರ್ಪಿಸುವ ನಾಟಕ ಮಾಡುತ್ತಾರೆ. ಆದರೆ ಲಂಗು ಲಗಾಮಿಲ್ಲದ ಅಭಿವೃದ್ಧಿಯ ಅವಿವೇಕದಲ್ಲಿ ಪ್ರಮುಖ ನದಿಗಳಾದ ಯಮುನಾ, ಗಂಗಾ, ಕೋಲ್ಕತಾದ ಹೂಗ್ಲಿ, ಬೆಂಗಳೂರಿನ ವೃಷಭಾವತಿ ಮುಂತಾವು ಸರ್ವನಾಶದ ಅಂಚಿಗೆ ಬಂದು ನಿಂತಿವೆ. ಸ್ವಚ್ಛ ಭಾರತ ಅಭಿಯಾನ ಕೂಡ ಹೆಸರಿಗೆ ಮತ್ತು ಪ್ರಚಾರಕ್ಕೆ ಮಾತ್ರ ನಡೆದಿರುವುದು ಸುಳ್ಳಲ್ಲ. ಭಾರತದ ನೀರು, ಗಾಳಿ, ಮಣ್ಣು ಎಲ್ಲವೂ ವಿಷಮಯವಾಗುತ್ತಿದೆ. ಒಂದೆಡೆ ಗಂಗಾರತಿ, ತುಂಗಾರತಿ ಮಾಡುತ್ತಾ ಇನ್ನೊಂದು ಕಡೆ ಜೀವದಾಯಿ ನದಿಗಳನ್ನು ನಾಶ ಮಾಡುವ ಅಪಾಯಕಾರಿ ಔದ್ಯಮಿಕ ಚಟುವಟಿಕೆಗಳಿಗೆ ಸರಕಾರ ಅವಕಾಶ ನೀಡಿದೆ.
ಜಗತ್ತಿನ 180 ದೇಶಗಳ ಪರಿಸರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಅಮೆರಿಕದ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕಳೆದ ವರ್ಷ ಭಾರತಕ್ಕೆ ಅತ್ಯಂತ ಕೊನೆಯ 180ನೇ ಶ್ರೇಯಾಂಕವನ್ನು ಕೊಟ್ಟಿದ್ದರು. ಕೋವಿಡ್ ಕಾಲದ ದೀರ್ಘಾವಧಿಯ ಲಾಕ್‌ಡೌನ್ ಅವಧಿಯಲ್ಲಿ ಮಾತ್ರ ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರು ಶುದ್ಧವಾಗಿದ್ದುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಅಂದರೆ ನಾವು ಭಾರತೀಯರು ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಗೃಹ ಬಂಧನದಲ್ಲಿ ಇದ್ದರೆ ಮಾತ್ರ ಶುದ್ಧ ಗಾಳಿ ಮತ್ತು ನೀರು ಲಭ್ಯವಾಗುತ್ತದೆ ಎಂಬುದು ಸ್ಪಷ್ಟವಾದಂತಾಗಿದೆ.
ಈಗ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಗೆ ಚುನಾವಣೆಯ ವರ್ಷ. ಮತ ಕೇಳಲು ಮನೆ ಬಾಗಿಲಿಗೆ ಬರುವ ರಾಜಕಾರಣಿಗಳು ಅವರು ಯಾವುದೇ ಪಕ್ಷದವರಾಗಿರಲಿ ಅವರನ್ನು ನಾವು ಪ್ರಶ್ನಿಸಬೇಕಾಗಿದೆ. ನಿಮ್ಮ ಟೊಳ್ಳು ಭರವಸೆಗಳು ಬೇಡ, ನಮಗೆ ಶುದ್ಧ ಗಾಳಿ ಮತ್ತು ನೀರನ್ನು ಯಾವಾಗ ನೀಡುತ್ತೀರಿ ಎಂದು ಕೇಳಬೇಕಾಗಿದೆ. ಈಗಂತೂ ಬಹುತೇಕ ರಾಜಕಾರಣಿಗಳು ಮಾರಕ ಉದ್ಯಮಗಳ ಮಾಲಕರು, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆಯವರು ನೇರವಾಗಿ ಚುನಾವಣಾ ಕಣಕ್ಕೆ ಇಳಿಯುತ್ತಿರುವುದರಿಂದ ಅವರು ಈ ಪ್ರಶ್ನೆಗಳಿಗೆ ಉತ್ತರ ನೀಡಲು ಹೇಗೆ ಸಾಧ್ಯ? ಇಂತಹ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲಾಗದ ಈ ರಾಜಕಾರಣಿಗಳು ಮತದಾರರಿಗೆ ನಾನಾ ತರದ ಆಮಿಷಗಳನ್ನು ನೀಡಿ ದಾರಿ ತಪ್ಪಿಸಲು ಯತ್ನಿಸುತ್ತಾರೆ. ಈಗಾಗಲೇ ರಾಷ್ಟ್ರ ಭಕ್ತಿಯ ಗುತ್ತಿಗೆ ಹಿಡಿದ ಪಕ್ಷದ ಕೆಲವು ಶಾಸಕರು ಮತದಾರರನ್ನು ತಮ್ಮ ಖರ್ಚಿನಲ್ಲಿ ತೀರ್ಥಯಾತ್ರೆಗೆ ಕಳಿಸುತ್ತಿದ್ದಾರೆ.
ನದಿಗಳು ಮಾತ್ರವಲ್ಲ ಕೆರೆಗಳ ನೀರು ಕೂಡ ಕುಡಿಯಲು ಸುರಕ್ಷಿತವಾಗಿ ಉಳಿದಿಲ್ಲ. ಬೆಂಗಳೂರು ನಗರದ 106 ಕೆರೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದಾಗ 66ರ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಮತ್ತು ಮೀನುಗಾರಿಕೆಗೆ ಯೋಗ್ಯವಾಗಿದೆ. ಉಳಿದ ಕೆರೆಗಳಲ್ಲಿ ಲೋಹ, ಒಳಚರಂಡಿ ತ್ಯಾಜ್ಯ ಸೇರಿಕೊಂಡು ನೀರು ಕಲ್ಮಶವಾಗಿದೆ ಎಂದು ಖಚಿತವಾಗಿ ತಿಳಿದುಬಂದಿದೆ. ಕೆರೆಗಳು ಈ ರೀತಿ ಕಲ್ಮಶವಾಗಲು ಯಾರು ಕಾರಣ?. ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನು ನಿಭಾಯಿಸಲು ಸರಕಾರದ ಬಳಿ ಇರುವ ಯೋಜನೆ ಅಥವಾ ಕಾರ್ಯಕ್ರಮ ಏನು?
ರಾಜ್ಯದ ಬಹುತೇಕ ನಗರ ಹಾಗೂ ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದಾಗಿ ಚರಂಡಿಯ ಕೊಳಚೆ ನೀರು ಜಲಮೂಲಗಳನ್ನು ಸೇರಿ ಕಲುಷಿತಗೊಳಿಸುತ್ತಿದೆ. ಜಲಮೂಲಗಳನ್ನು ಕಾಪಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಂಭೀರವಾಗಿ ಯೋಚಿಸುವುದಿಲ್ಲ. ಚರಂಡಿ ನೀರನ್ನು ಶುದ್ಧೀಕರಣ ಮಾಡಿ ಮರು ಬಳಕೆ ಮಾಡಿ ಜಲ ಮಾಲಿನ್ಯ ನಿಯಂತ್ರಿಸುವ ಕಾರ್ಯ ಚುರುಕಾಗಿ ನಡೆದಿಲ್ಲ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. ಕೊಳಚೆ ನೀರು ಜಲಮೂಲಗಳನ್ನು ಸೇರುವ ವಿಷಯದಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇದನ್ನು ಸರಿಪಡಿಸುವುದು ಹೇಗೆ? ಮತ ಕೇಳಲು ಬರುವ ರಾಜಕಾರಣಿಗಳು ಉತ್ತರಿಸಲಿ.