ರಾಜ್ಯಮಟ್ಟ ಯಕ್ಷಗಾನ ಸಮ್ಮೇಳನದಲ್ಲಿ 75 ಹಿರಿಯ ಕಲಾವಿದರಿಗೆ ಸನ್ಮಾನ
► ಫೆ.11 ಮತ್ತು 12ಕ್ಕೆ ಸಮ್ಮೇಳನ ►27ಯಕ್ಷಗಾನ ತಂಡಗಳಿಂದ ಪ್ರದರ್ಶನ
ಉಡುಪಿ: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ಇದೇ ಮೊದಲ ಬಾರಿ ನಡೆಯುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023 ಫೆ.11 ಮತ್ತು 12ರಂದು ಉಡುಪಿ ಎಂಜಿಎಂ ಕಾಲೇಜಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿ ದ್ದಾರೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ, ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ರಾಜ್ಯದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸಲು ಸರಕಾರ ನಿರ್ಧರಿಸಿದ್ದು, ಎರಡು ಕೋಟಿ ರೂ. ಅನುದಾನವನ್ನು ಇಲಾಖೆಯ ಮೂಲಕ ಬಿಡುಗಡೆ ಮಾಡಿದೆ ಎಂದರು.
ಪ್ರಥಮ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ ರಂಗದ ಹಿರಿಯ ವಿದ್ವಾಂಸ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಎಂ.ಪ್ರಭಾಕರ ಜೋಶಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಮ್ಮೇಳನವನ್ನು ಫೆ.11 ರಂದು ಬೆಳಗ್ಗೆ 10:30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭಕ್ಕೆ ಪ್ರಕಟಗೊಳ್ಳುವ ಯಕ್ಷಗಾನ ಸಮ್ಮೇಳನಕ್ಕೆ ಸಂಬಂಧಿಸಿದ 14 ಪುಸ್ತಕಗಳನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಡುಗಡೆಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವರಾದ ಎಸ್.ಅಂಗಾರ, ವಿ.ಸುನಿಲ್ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿ ರುವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಜನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.
ಫೆ.12ರ ಸಂಜೆ 5:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾಸರಗೋಡಿನ ಶ್ರೀಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಆರ್ಶೀಚನ ನೀಡಲಿದ್ದಾರೆ. ಶಾಸಕ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಶುಭಾಶಂಸನೆ ಮಾಡಿದರೆ, ಸಚಿವ ಸುನಿಲ್ಕುಮಾರ್ ಅಭಿನಂದನಾ ಭಾಷಣ ಮಾಡುವರು.
ಯಕ್ಷಗಾನದ ದಿಗ್ಗಜ ಕಲಾವಿದರಾದ ಮಲ್ಪೆ ಶಂಕರನಾರಾಯಣ ಸಾಮಗ, ಕೆರೆಮನೆ ಶಿವರಾಮ ಹೆಗಡೆ ಹಾಗೂ ಅಳಿಕೆ ರಾಮಯ್ಯ ರೈ ಹೆಸರಿನಲ್ಲಿ ನಿರ್ಮಾಣಗೊಳ್ಳುವ ಮೂರು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಸಮ್ಮೇಳನದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ 75 ಹಿರಿಯ ಕಲಾವಿದರನ್ನು ಹಾಗೂ ಸಂಸ್ಥೆಗಳನ್ನು ಸನ್ಮಾನಿಸಲಾಗು ವುದು ಎಂದರು.
ಆರು ಗೋಷ್ಠಿಗಳು: ಸಮ್ಮೇಳನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು ಆರು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು 18 ಮಂದಿ ವಿವಿಧ ವಿಷಯಗಳನ್ನು ಲೇಖನ ಮಂಡಿಸಲಿದ್ದು, 200 ಮಂದಿ ವಿಶೇಷ ಆಹ್ವಾನಿತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಒಂದು ಗೋಷ್ಠಿ ಮೂಡಲಪಾಯದ ಕುರಿತಂತೆ ಇರುತ್ತದೆ ಎಂದರು.
27 ತಂಡಗಳ ಪ್ರದರ್ಶನ: ಈಗಾಗಲೇ ಅಗಲಿರುವ 200 ಮಂದಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಕುರಿತು ಕಿರು ಪರಿಚಯದೊಂದಿಗೆ ಭಾವಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.ಸಮ್ಮೇಳನದ ವೇಳೆ ಹೊರದೇಶ, ಹೊರರಾಜ್ಯಗಳು ಸೇರಿದಂತೆ ಒಟ್ಟು 27ತಂಡಗಳು ಯಕ್ಷಗಾನ ಪ್ರದರ್ಶನ ನೀಡಲಿವೆ.ಇವುಗಳಲ್ಲಿ ಎರಡು ಗೊಂಬೆಯಾಟ ಹಾಗೂ ಎರಡು ಹರಿಕಥೆಗಳೂ ಸೇರಿವೆ. ಇದರೊಂದಿಗೆ ತುಳು ಯಕ್ಷಗಾನ ಪ್ರದರ್ಶನ, ಘಟ್ಟದ ಕೋರೆ, ಕೇಳಿಕೆ, ಮೂಡಲಪಾಯ ಯಕ್ಷಗಾನದ ಪ್ರದರ್ಶನವೂ ಇರುತ್ತದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಪ್ರಧಾನ ಸಂಚಾಲಕರಾದ ಪಿ.ಕಿಶನ್ ಹೆಗ್ಡೆ, ಸಂಚಾಲಕ ಮುರಲಿ ಕಡೆಕಾರ್, ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.
ಯಕ್ಷಗಾನಕ್ಕೂ ರೋಹಿತ್ ಚಕ್ರತೀರ್ಥರಿಗೂ ಏನು ಸಂಬಂಧ ?
ಪ್ರಥಮ ಬಾರಿಗೆ ನಡೆಯುವ ಯಕ್ಷಗಾನ ಸಮ್ಮೇಳನದಲ್ಲಿ ಗೋಷ್ಠಿಗಳ ಉದ್ಘಾಟನೆಗೆ ಹಾಗೂ ದಿಕ್ಸೂಚಿ ಭಾಷಣಕ್ಕೆ ನಿಯುಕ್ತಿಗೊಂಡಿರುವ ರೋಹಿತ್ ಚಕ್ರತೀರ್ಥರಿಗೂ, ಯಕ್ಷಗಾನಕ್ಕೂ ಏನು ಸಂಬಂಧ? ಕರಾವಳಿಯಲ್ಲಿ ಯಕ್ಷಗಾನ ವಿದ್ವಾಂಸರಿಗೆ ಹಾಗೂ ಹಿರಿಯ ಕಲಾವಿದರಿಗೆ ಕೊರತೆ ಇದೆಯೇ ಎಂದು ರಘುಪತಿ ಭಟ್ ಹಾಗೂ ಡಾ.ಜಿ.ಎಲ್.ಹೆಗಡೆ ಅವರನ್ನು ಪ್ರಶ್ನಿಸಿದಾಗ ಇಬ್ಬರೂ ಸಮರ್ಪಕ ಉತ್ತರ ನೀಡದೇ ನುಣುಚಿಕೊಂಡರು.
ರೋಹಿತ್ ಚಕ್ರತೀರ್ಥ ಉಡುಪಿಯವರು. ಅವರು ಯಕ್ಷಗಾನದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅವರ ಮನೆಯ ಸಮೀಪವೇ ಸಮ್ಮೇಳನ ನಡೆಯುತ್ತಿದೆ. ಅಲ್ಲದೇ ಚಕ್ರತೀರ್ಥರನ್ನು ಆಹ್ವಾನಿಸಿ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ. ಒಳ್ಳೆಯ ಕೆಲಸದ ವೇಳೆ ಅಪಸ್ವರಗಳು ಇದ್ದೇ ಇರುತ್ತವೆ ಎಂದು ರಘುಪತಿ ಭಟ್ ಉತ್ತರಿಸಿದರು.
ಇದು ಪ್ರಥಮ ಸಮ್ಮೇಳನ. ಎಲ್ಲವನ್ನೂ ಒಮ್ಮೆಲೇ ಮಾಡಲಾಗುವುದಿಲ್ಲ. ಹೆಚ್ಚಿನ ಕಲಾವಿದರು ಹಾಗೂ ವಿದ್ವಾಂಸರಿಗೆ ಬೇರೆ ಬೇರೆ ಕಡೆಗಳಲ್ಲಿ ಅವಕಾಶ ನೀಡಲಾಗಿದೆ ಎಂದು ಡಾ.ಹೆಗಡೆ ಉತ್ತರಿಸಿದರು.
ಕೋಳ್ಯೂರು ರಾಮಚಂದ್ರ ರಾವ್ರಂಥ ಹಿರಿಯ ಕಲಾವಿದರು, ಎಚ್.ಶ್ರೀಧರ ಹಂದೆ, ಎಂ.ಎಲ್.ಸಾಮಗರಂಥ ಹಿರಿಯ ವಿದ್ವಾಂಸರನ್ನು ಕಡೆಗಣಿಸಿ ಯಾಕೆ ಚಕ್ರತೀರ್ಥರಿಗೆ ಮಣೆ ಎಂದು ಪ್ರಶ್ನಿಸಿದರೆ, ಯುವ ಜನರನ್ನು ಯಕ್ಷಗಾನದತ್ತ ಆಕರ್ಷಿಸಬೇಕೆಂಬುದು ನಮ್ಮ ಮುಖ್ಯ ಉದ್ದೇಶ. ಅದಕ್ಕಾಗಿ ರೋಹಿತ್ರಂಥವರಿಗೆ ಅವಕಾಶ ನೀಡಿದ್ದೇವೆ ಎಂದು ಶಾಸಕ ಭಟ್ ನುಡಿದರು.